5ನೇ ಕೃಷಿ ಯಂತ್ರ ಮೇಳದ ಮಳಿಗೆಗಳ ಉದ್ಘಾಟನೆ

0

ಪುತ್ತೂರು: ಪ್ರತಿಷ್ಟಿತ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆವರಣದಲ್ಲಿ 3 ದಿನಗಳ ಕಾಲ ನಡೆಯಲಿರುವ 5 ನೇ ಬೃಹತ್ ಕೃಷಿಯಂತ್ರ ಮೇಳದಲ್ಲಿ ಮಳಿಗೆಗಳ ಉದ್ಘಾಟನೆ ನಡೆಯಿತು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಸಾವಯವ ಸಿರಿ ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಕ್ಯಾಂಪ್ಕೋ ಸಂಸ್ಥೆ ನಡೆದು ಬಂದ ಹಾದಿಯ ವಿಶೇಷ ಮಳಿಗೆಗಳನ್ನು ಅತಿಥಿಗಳು ವೀಕ್ಷಿಸಿದರು. ಕನಸಿನ ಮನೆ ಮಳಿಗೆಗಳಿಗೆ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್‌ ಭಟ್‌ ಕಲ್ಲಡ್ಕ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಡ್ಗಿ, ಶಾಸಕ ಸಂಜೀವ ಮಠಂದೂರು, ‌ಮಂಗಳೂರು ವಿವಿ ಉಪಕುಲಪತಿ ಡಾ. ಪಿ.ಎಸ್. ಸುಬ್ರಹ್ಮಣ್ಯ ಯಡಪಡಿತ್ತಾಯ, ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ಉಪಸ್ಥಿತರಿದ್ದರು.

ಇಲ್ಲಿ ಯಂತ್ರ ಮೇಳಕ್ಕೆ ಸಂಬಂಧಿಸಿದಂತೆ 140 ಮಳಿಗೆಗಳು ಮತ್ತು ಕನಸಿನ ಮನೆಗೆ ಸಂಬಂಧಪಟ್ಟ 83 ಮಳಿಗೆಗಳಿವೆ. ಇದಲ್ಲದೆ 10 ಅಟೋಮೊಬೈಲ್, 4 ನರ್ಸರಿ, 20 ಆಹಾರ ಮಳಿಗೆಗಳು ಮತ್ತು 20 ವ್ಯಾಪಾರ ಮಳಿಗೆಗಳಿವೆ. ಕ್ಯಾಂಪ್ಕೋ ಸಂಸ್ಥೆಯು ನಡೆದು ಬಂದ ದಾರಿಯನ್ನು ಪ್ರತಿಬಿಂಬಿಸುವ ವಿಶೇಷ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಕೃಷಿ ಇಲಾಖೆ ಹಾಗೂ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ಇದರ ಸಂಯುಕ್ತಾಶ್ರಯದಲ್ಲಿ 20 ಸಾವಯವ ಸಿರಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಮತ್ತು ವಿಚಾರ ಸಂಕಿರಣಗಳೂ ನಡೆಯುತ್ತವೆ. ಬ್ಯಾಂಕ್ ಸಾಲಸೌಲಭ್ಯಗಳ ಮಾಹಿತಿಗೆ ಬ್ಯಾಂಕಿಂಗ್ ಮಳಿಗೆಗಳನ್ನೂ ತೆರೆಯಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳ ಬಗ್ಗೆ ಮಾಹಿತಿ ನೀಡುವ ಮಳಿಗೆಗಳು ಇಲ್ಲಿವೆ.. ವೀಕ್ಷಕರಿಗೆ ಅನುಕೂಲವಾಗುವಂತೆ ಮಳಿಗೆಗಳನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

LEAVE A REPLY

Please enter your comment!
Please enter your name here