ಹನುಮಗಿರಿಗೆ ಅಮಿತ್ ಶಾ – ಈಶ್ವರಮಂಗಲದಲ್ಲಿ ಪೊಲೀಸ್ ಬಿಗಿ ಭದ್ರತೆ

0

ಪುತ್ತೂರು: ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರ, ಶ್ರೀ ಕೋದಂಡರಾಮನ ಸನ್ನಿಧಿಯಾಗಿರುವ ಹನುಮಗಿರಿಯ ಅಮರಗಿರಿಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಭಾರತಿ ಅಮರಜ್ಯೋತಿ ಮಂದಿರ ಥೀಮ್ ಪಾರ್ಕ್ ಅನ್ನು ಲೋಕಾರ್ಪಣೆ ಮಾಡಲು ಕೇಂದ್ರ ಗೃಹಮಂತ್ರಿ ಅಮಿತ್ ಶಾ.ರವರು ಫೆ.11 ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈಶ್ವರಮಂಗಲ ಹಾಗೂ ಹನುಮಗಿರಿ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಮಿತ್ ಶಾ.ರವರು ಕಣ್ಣೂರಿನಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿ ಮಧ್ಯಾಹ್ನ 1.30 ಕ್ಕೆ ಹನುಮಗಿರಿಯ ಶ್ರೀ ಗಜಾನನ ವಿದ್ಯಾಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಲ್ಯಾಂಡ್ ಆಗಲಿದ್ದಾರೆ. ಬಳಿಕ ಅವರು ಕಾರಿನಲ್ಲಿ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ಕ್ಷೇತ್ರದ ದ್ವಾರದ ತನಕ ಆಗಮಿಸಿ ಅಲ್ಲಿಂದ ಬ್ಯಾಂಡ್ ವಾಲಗ, ಜಾಗಣೆಯ ವೇದ ಘೋಷಗಳೊಂದಿಗೆ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ದರ್ಶನ ಮಾಡಲಿದ್ದಾರೆ. ಅಲ್ಲಿಂದ ಕಾರಿನಲ್ಲಿ ಅಮರಗಿರಿಗೆ ಆಗಮಿಸಲಿದ್ದು ಶ್ರೀ ಭಾರತಿ ಅಮರಜ್ಯೋತಿ ಮಂದಿರದ ಲೋಕಾರ್ಪಣೆ ಮಾಡುವ ಮೂಲಕ ಶುಭ ಸಂದೇಶ ನೀಡಿ ಅಲ್ಲಿಂದ ಮತ್ತೆ ಕಾರಿನಲ್ಲಿ ಹೆಲಿಪ್ಯಾಡ್‌ಗೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಆಗಮಿಸಲಿದ್ದಾರೆ.

ಪೊಲೀಸ್ ಬಿಗಿ ಭದ್ರತೆ
ಅಮಿತ್ ಶಾ.ಭೇಟಿ ಹಿನ್ನೆಲೆಯಲ್ಲಿ ಈಶ್ವರಮಂಗಲ, ಹನುಮಗಿರಿ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಹನುಮಗಿರಿಗೆ ಹೋಗುವ ಧ್ವಾರದಿಂದಲೇ ಬ್ಯಾರಿಕೇಡ್ ಅಳವಡಿಸಲಾಗಿದ್ದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಈಗಾಗಲೇ ಸ್ಥಳಕ್ಕೆ ಎಸ್.ಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಬಂದೋಬಸ್ತ್ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಓರ್ವ ಎಸ್.ಪಿ, ಐವರು ಡಿವೈಎಸ್‌ಪಿ, 10 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

ಭಕ್ತಾದಿಗಳಿಗೆ ಸೂಚನೆ
ಅಮಿತ್ ಶಾ ಭೇಟಿಯ ದಿನ ಹನುಮಗಿರಿ ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಯಾವುದೇ ಸೇವೆಗಳು ಇರುವುದಿಲ್ಲ. ಬೆಳಿಗ್ಗೆ 11 ಗಂಟೆಯ ಬಳಿಕ ಭಕ್ತಾದಿಗಳಿಗೆ ಕ್ಷೇತ್ರಕ್ಕೆ ಪ್ರವೇಶ ನಿಷೇಧಿಸಲಾಗಿದೆ. ವಿಶೇಷ ಪಾಸ್ ಪಡೆದವರಿಗೆ ಮಾತ್ರ ಕ್ಷೇತ್ರಕ್ಕೆ ಪ್ರವೇಶ ನೀಡಲಾಗಿದೆ. ಸಂಜೆ 3 ಗಂಟೆಯ ನಂತರ ಎಂದಿನಂತೆ ಕ್ಷೇತ್ರದಲ್ಲಿ ಸೇವೆಗಳು ಲಭ್ಯವಿದ್ದು ಭಕ್ತಾದಿಗಳಿಗೆ ಎಂದಿನಂತೆ ಪ್ರವೇಶ ನೀಡಲಾಗಿದೆ. ಭಕ್ತಾದಿಗಳು ಸಹಕರಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here