ನೆಲ್ಯಾಡಿ: ವೇತನ ಪರಿಷ್ಕರಣೆ ಸೇರಿದಂತೆ ಪ್ರಮುಖ ಮೂರು ಬೇಡಿಕೆ ಈಡೇರಿಕೆ ಭರವಸೆ ಹಿನ್ನೆಲೆಯಲ್ಲಿ, ಕಳೆದ ಮೂರು ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗ್ರಾಮ ಪಂಚಾಯತ್ ನೌಕರರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಫೆ.9ರಂದು ಅಂತ್ಯಗೊಳಿಸಿದ್ದಾರೆ.
ಗ್ರಾ.ಪಂ.ನೌಕರರಿಗೆ ಸಿ ಮತ್ತು ಡಿ ದರ್ಜೆ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಗ್ರಾಮ ಪಂಚಾಯತ್ ನೌಕರರು ಫೆ.6೬ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದರು. ಫೆ.9ರಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಕಾರ್ಯದರ್ಶಿ ಎಲ್.ಕೆ.ಅತೀಕ್ರವರು ಶಾಸಕರ ಭವನದಲ್ಲಿ ಪ್ರತಿಭಟನೆ ನಿರತ ನೌಕರರೊಂದಿಗೆ ಚರ್ಚಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಗ್ರಾ.ಪಂ.ನೌಕರರ ಜೊತೆ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ನೌಕರರ ವೇತನ ಪರಿಷ್ಕರಣೆ ಹಾಗೂ ಇಎಸ್ಐ, ಪಿಎಫ್ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಕಾರ್ಯದರ್ಶಿ ಎಲ್.ಕೆ.ಅತೀಕ್ರವರಿಗೆ ಸೂಚನೆ ನೀಡಿದ್ದಾರೆ. ಗ್ರಾಮ ಪಂಚಾಯತ್ ನೌಕರರು ಹೋರಾಟ ಕೈಬಿಡಬೇಕು, ಸರಕಾರ ಗ್ರಾಮ ಪಂಚಾಯತ್ ನೌಕರರಿಗೆ ನ್ಯಾಯ ಒದಗಿಸಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಪ್ರತಿಭಟನೆ ನಿರತ ಗ್ರಾಮ ಪಂಚಾಯತ್ ನೌಕರರಿಗೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ನೌಕರರು ತಮ್ಮ ಅನಿರ್ದಿಷ್ಟಾವಧಿ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ಗ್ರಾಮ ಪಂಚಾಯತ್ ನೌಕರರೂ ಭಾಗಿಯಾಗಿದ್ದರಿಂದ ಗ್ರಾಮ ಪಂಚಾಯತ್ನಲ್ಲಿ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿತ್ತು. ಪ್ರತಿಭಟನೆ ಅಂತ್ಯಗೊಂಡ ಹಿನ್ನಲೆಯಲ್ಲಿ ಫೆ.10ರಂದು ಗ್ರಾಮ ಪಂಚಾಯತ್ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರು.