ನೆಲ್ಯಾಡಿ: ಗ್ರಾಮಸಭೆಗೆ ನಿಯೋಜನೆಗೊಂಡಿದ್ದ ಮಾರ್ಗದರ್ಶಿ ಅಧಿಕಾರಿ ಹಾಗೂ ಮಾಹಿತಿ ನೀಡಬೇಕಾದ ಪ್ರಮುಖ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಹಿನ್ನೆಲೆಯಲ್ಲಿ ಶಿರಾಡಿ ಗ್ರಾ.ಪಂ.ಗ್ರಾಮಸಭೆ ಮುಂದೂಡಿಕೆಯಾಗಿದೆ.
ಶಿರಾಡಿ ಗ್ರಾ.ಪಂ.ನ 2022-23ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಫೆ.10ರಂದು ಬೆಳಿಗ್ಗೆ 11ಕ್ಕೆ ಅಡ್ಡಹೊಳೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಿಗದಿಯಾಗಿತ್ತು. ಲೋಕೋಪಯೋಗಿ ಇಲಾಖೆ ಕುಕ್ಕೆಸುಬ್ರಹ್ಮಣ್ಯ ವಿಶೇಷ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಮಾರ್ಗದರ್ಶಿ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ನಿಗದಿಯಂತೆ ಬೆಳಿಗ್ಗೆ 11.15ರ ವೇಳೆಗೆ ಗ್ರಾ.ಪಂ.ಅಧ್ಯಕ್ಷೆ ವಿನೀತಾ ಎಂ.ಬಿ.ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ಈ ವೇಳೆ ಸಭೆಯಲ್ಲಿ ನೋಡೆಲ್ ಅಧಿಕಾರಿಯವರ ಗೈರು ಹಾಜರಿಯನ್ನು ಪ್ರಸ್ತಾಪಿಸಿ ಸಭೆ ನಡೆಸುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಮಹೇಶ್ ಜಿ.ಎನ್.ಅವರು, ತಾ.ಪಂ.ಇಒ ಅವರು ಲೋಕೋಪಯೋಗಿ ಇಲಾಖೆಯ ಕುಕ್ಕೆ ಸುಬ್ರಹ್ಮಣ್ಯ ವಿಶೇಷ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರನ್ನು ಮಾರ್ಗದರ್ಶಿ ಅಧಿಕಾರಿಯಾಗಿ ನೇಮಕಗೊಳಿಸಿದ್ದಾರೆ. ಅವರು ಚುನಾವಣಾ ಕೆಲಸ ಇರುವುದರಿಂದ ಗ್ರಾಮಸಭೆ ಬರಲು ಆಗುವುದಿಲ್ಲ ಎಂದು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಮಾರ್ಗದರ್ಶಿ ಅಧಿಕಾರಿಯಾಗಿ ಗ್ರಾಮಸಭೆ ನಡೆಸುವಂತೆ ಸೂಚಿಸಿದ್ದಾರೆ. ವಲಯ ಅರಣ್ಯಾಧಿಕಾರಿಯವರು ಸಭೆಗೆ ಬರುವುದಾಗಿ ತಿಳಿಸಿದ್ದಾರೆ. ಆದರೆ ಈ ತನಕ ಬಂದಿಲ್ಲ. ಈ ವಿಚಾರವನ್ನು ತಾ.ಪಂ.ಇಒ ಅವರ ಗಮನಕ್ಕೆ ತಂದಿದ್ದೇನೆ. ಗ್ರಾ.ಪಂ.ಅಧ್ಯಕ್ಷರನ್ನೇ ನೋಡೆಲ್ ಅಧಿಕಾರಿಯಾಗಿ ನೇಮಿಸಿ ಸಭೆ ನಡೆಸುವಂತೆ ಸೂಚಿಸಿದ್ದಾರೆ ಎಂದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಅಧಿಕಾರಿಗಳಿಗೆ ಇಚ್ಛಾಶಕ್ತಿಯೇ ಇಲ್ಲ. ಸಭೆ ನಡೆಸಬೇಕಾಗಿದ್ದ ಮಾರ್ಗದರ್ಶಿ ಅಧಿಕಾರಿಯೇ ಸಭೆಗೆ ಬಂದಿಲ್ಲ. ಹೀಗಾದಲ್ಲಿ ಗ್ರಾಮಸಭೆ ನಡೆಸುವ ಔಚಿತ್ಯವಾದರೂ ಏನು. ಸಭೆ ಮುಂದೂಡಿ ಎಂದು ಆಗ್ರಹಿಸಿದರು.
ಇಲಾಖಾಧಿಕಾರಿಗಳೂ ಗೈರು;
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಜಿ.ಪಂ., ರಾಷ್ಟ್ರೀಯ ಹೆದ್ದಾರಿ, ಅರಣ್ಯ ಸೇರಿದಂತೆ ಪ್ರಮುಖ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆಯೂ ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಮಹೇಶ್ ಜಿ.ಎನ್.ಅವರು, ಎಲ್ಲಾ ಇಲಾಖೆಯವರಿಗೆ ನೋಟಿಸ್ ನೀಡಲಾಗಿದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆಯವರು ಯಂತ್ರ ಪ್ರದರ್ಶನ ಮೇಳದಲ್ಲಿರುವುದರಿಂದ ಸಭೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು. ಮಾರ್ಗದರ್ಶಿ ಅಧಿಕಾರಿ, ಇಲಾಖಾಧಿಕಾರಿಗಳ ಗೈರು ಹಾಜರಿ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದರು. ಕೊನೆಗೂ ಗ್ರಾಮಸ್ಥರ ಆಗ್ರಹದಂತೆ ಸಭೆ ಮುಂದೂಡುವುದಾಗಿ ಅಧ್ಯಕ್ಷೆ ವಿನೀತಾ ಎಂ.ಬಿ.ಅವರು ಘೋಷಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸಿಆರ್‌ಪಿ ಪ್ರಕಾಶ್ ಬಾಕಿಲ, ಮೆಸ್ಕಾಂ ನೆಲ್ಯಾಡಿ ಶಾಖಾಧಿಕಾರಿ ರಮೇಶ್, ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ವನಿತ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯ ಮೇಲ್ವಿಚಾರಕ ವಿಠಲ್, ಹಿರಿಯ ಪಶುವೈದ್ಯ ಪರೀಕ್ಷಕ ರವೀಂದ್ರ, ಗ್ರಾಮಕರಣಿಕ ಸಂತೋಷ್ ಉಪಸ್ಥಿತರಿದ್ದರು. ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಸಣ್ಣಿಜಾನ್, ಎಂ.ಕೆ.ಪೌಲೋಸ್, ಲಕ್ಷ್ಮಣ ಗೌಡ, ರಾಧಾ ತಂಗಪ್ಪನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಾರದಾ ಸ್ವಾಗತಿಸಿದರು.
ಪ್ರಥಮ ಸುತ್ತಿನ ಗ್ರಾಮಸಭೆಯೂ ನಡೆದಿಲ್ಲ…!
ಶಿರಾಡಿ ಗ್ರಾ.ಪಂ.ನ 2022-23ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯೂ ನಡೆದಿಲ್ಲ. ಪ್ರಥಮ ಸುತ್ತಿನ ಗ್ರಾಮಸಭೆಯು ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭ 144 ಸೆಕ್ಷನ್ ಜಾರಿಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆದರೆ ಮುಂದೂಡಿದ್ದ ಗ್ರಾಮಸಭೆ ಮತ್ತೆ ನಡೆದಿಲ್ಲ. ಇದೀಗ 2ನೇ ಸುತ್ತಿನ ಗ್ರಾಮಸಭೆಯೂ ಮಾರ್ಗದರ್ಶಿ ಅಧಿಕಾರಿ ಹಾಗೂ ಇಲಾಖಾಧಿಕಾರಿಗಳ ಗೈರು ಹಾಜರಿಯಿಂದಾಗಿ ಮುಂದೂಡಬೇಕಾಯಿತು. ಇನ್ನು ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದಲ್ಲಿ ಮುಂದೂಡಿಕೆಯಾಗಿರುವ 2ನೇ ಸುತ್ತಿನ ಗ್ರಾಮಸಭೆ ನಡೆಯುವುದೂ ಅನುಮಾನ. ಈ ರೀತಿಯಾದಲ್ಲಿ ಇದಕ್ಕೆ ಯಾರು ಹೊಣೆ ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದರು.