ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಅಡಿಕೆ ಬೆಳೆಗಾರರ ಕಾವಲುಗಾರ ‘ಕ್ಯಾಂಪ್ಕೊ’

0

ನ್ಯಾಯಯುತ ವ್ಯವಹಾರ(Fair Deal)ಎಂಬ ಘೋಷವಾಕ್ಯ ಇಟ್ಟುಕೊಂಡು ಕರ್ನಾಟಕ ಮತ್ತು ಕೇರಳ ಅಡಿಕೆ ಬೆಳೆಗಾರರಿಗೆ ಅವರ ಸಂಕಷ್ಟದ ಕಾಲದಲ್ಲಿ ಆಶಾಕಿರಣವಾಗಿ ಮೂಡಿಬಂದ ಬಹುರಾಜ್ಯ ಸಹಕಾರಿ ಸಂಸ್ಥೆಯೇ ನಮ್ಮ ಹೆಮ್ಮೆಯ ಕ್ಯಾಂಪ್ಕೋ. 1973ರ ಜುಲೈ 11 ರಂದು ಸಹಕಾರಿ ರತ್ನ ಸನ್ಮಾನ್ಯ ದಿವಂಗತ ಸುಬ್ರಾಯ ಭಟ್ಟರು ನೆಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದಿದೆ. ಅಡಿಕೆ ಬೆಳೆಗಾರರ ಹಿತ ರಕ್ಷಣೆಯೇ ಕ್ಯಾಂಪ್ಕೋದ ಮುಖ್ಯ ಉದ್ದೇಶ, ಅದಕ್ಕಾಗಿಯೇ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವನ್ನು ಸ್ಥಾಪಿಸಿ ಅಡಿಕೆಯ ಪರ್ಯಾಯ ಉಪಯೋಗದ ಅನ್ವೇಷನೆಗೆ ಶ್ರಮಿಸುತ್ತಿದೆ. ಕೊಕ್ಕೊ ಖರೀದಿಯನ್ನು ಬಹುರಾಷ್ಟ್ರೀಯ ಕಂಪೆನಿಗಳು ನಿಲ್ಲಿಸಿದಾಗ ಕ್ಯಾಂಪ್ಕೋ ಕೊಕ್ಕೊ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು 1979ರಲ್ಲಿ ಕೊಕ್ಕೊ ಖರೀದಿ ಪ್ರಾರಂಭಿಸಿತು. ಮುಂದೆ 1986ರಲ್ಲಿ ಪುತ್ತೂರಿನಲ್ಲಿ ಚಾಕಲೇಟ್ ಕಾರ್ಖಾನೆಯನ್ನು ಸ್ಥಾಪಿಸಿ ಕೊಕ್ಕೊ ಬೆಳೆಗಾರರ ಹಿತ ರಕ್ಷಣೆ ಮಾಡುವುದರ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳ ಏಕಸೌಮ್ಯಕ್ಕೆ ಬಲವಾದ ಪೆಟ್ಟು ನೀಡಿದೆ .2010ರಲ್ಲಿ ರಬ್ಬರ್ ಬೆಳೆಗಾರರಿಗಾಗಿ ರಬ್ಬರ್ ಖರೀದಿ ಪ್ರಾರಂಭಿಸಿ ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಶ್ರಮಿಸುತ್ತಿದೆ. 2016 ರಲ್ಲಿ ಕಾಳುಮೆಣಸು ಖರೀದಿ ಮತ್ತು ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ ತೆಂಗಿನಕಾಯಿ ಎಣ್ಣೆಯ ಉತ್ಪಾದನೆಯನ್ನು ಪ್ರಾರಂಭ ಮಾಡಿದೆ. ಹೀಗೆ ತನ್ನ ಕೊಂಬೆಗಳನ್ನು ವಿವಿಧ ಮಗ್ಗುಲಗಳಿಗೆ ವಿಸ್ತರಿಸುವ ಮೂಲಕ ರೈತರ ಬಾಳಿನ ಕಲ್ಪವೃಕ್ಷವಾಗಿ ಅವರ ಹಿತವನ್ನು ಕಾಪಾಡುವಲ್ಲಿ ಯಶಸ್ಸು ಕಂಡಿದೆ. ಅಡಿಕೆ ಬೆಳೆಗಾರರನ್ನು ಮಿಶ್ರಬೆಳೆ ಕೃಷಿಯಲ್ಲಿ ತೊಡಗಿಸಲು ಪ್ರೇರಣೆ ನೀಡುವುದರ ಮೂಲಕ ರೈತರನ್ನು ಆರ್ಥಿಕ ಸದೃಢರನ್ನಾಗಿಸಿದೆ. 2005ರಲ್ಲಿ ಸರಕಾರದ ಷೇರನ್ನು ಹಿಂತಿರುಗಿಸಿದ ನಂತರ ಸದೃಢವಾಗಿ ಬೆಳೆಯುತ್ತಿರುವ ಸಂಸ್ಥೆ ಸುಮಾರು 1.32 ಲಕ್ಷ ಸದಸ್ಯರ ಹಿತ ಕಾಯುವ ಕಾವಲುಗಾರ.

ಪ್ರಾರಂಭದಲ್ಲಿ ಮಂಗಳೂರಿನಲ್ಲಿ ಖರೀದಿ ಕೇಂದ್ರ ಆರಂಭಿಸಿದ ಸಂಸ್ಥೆ, ಇಂದು ಕರ್ನಾಟಕ ಮತ್ತು ಕೇರಳದಲ್ಲಿ 100ಕ್ಕಿಂತಲೂ ಹೆಚ್ಚು ಶಾಖೆಗಳನ್ನು ತೆರದು ಅಡಿಕೆ,ಕೊಕ್ಕೊ,ರಬ್ಬರ್ ಮತ್ತು ಕಾಳು ಮೆಣಸು ಖರೀದಿಸುತ್ತಿದೆ. ಉತ್ತರ ಭಾರತದಲ್ಲಿ 16 ಮಾರಾಟ ಮಳಿಗೆಗಳನ್ನು ನಡೆಸುತ್ತಿರುವ ಮೂಲಕ ರೈತರು ಮತ್ತು ಗ್ರಾಹಕರ ಮಧ್ಯೆ ಬೆಸುಗೆಯನ್ನು ಬೆಸೆದು ಇಬ್ಬರಿಗೂ ದರ ಮತ್ತು ಗುಣಮಟ್ಟದಲ್ಲಿ ಭರವಸೆಯ ಭಾವ ಮೂಡಿಸಿದ. ಉತ್ತಮ ಗುಣಮಟ್ಟದ ಕೊಕ್ಕೊ ಉತ್ಪನ್ನಗಳನ್ನು ತಯಾರಿಸಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಅದಕ್ಕಾಗಿ ಹತ್ತು ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿದ ಸಂಸ್ಥೆ ಸ್ಥಳೀಯ ಯುವಕರಿಗೆ ಉದ್ಯೋಗವನ್ನು ನೀಡಿ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.ಉತ್ತರ ಕರ್ನಾಟಕಲ್ಲಿ ಪವನಯಂತ್ರ ಮತ್ತು ಪುತ್ತೂರಿನಲ್ಲಿ ಸೌರ ಶಕ್ತಿಯ ಮೂಲಕ ಗ್ರೀನ್ ಎನರ್ಜಿಗೆ ಒತ್ತು ನೀಡಿದೆ. ಕಾರ್ಖಾನೆಗೆ ಬೇಕಾದ ವಿದ್ಯತ್ ಉತ್ಪಾದನೆಯಲ್ಲಿ ಸ್ವಾವಾಲಂಬನೆ ಸಾಧಿಸಿದ ಕ್ಯಾಂಪ್ಕೋ ಪರಸರ ಸ್ನೇಹಿ ಸಂಸ್ಥೆ. ಬಹುಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟ ಆಡಳಿತ ಕಚೇರಿಯನ್ನು ಹೊಂದಿರುವ ಚಾಕಲೇಟ್ ಕಾರ್ಖಾನೆ, ಬಹುರಾಷ್ಟ್ರೀಯ ಕಂಪೆನಿ ಶೈಲಿಯಲ್ಲಿ ಕಾರ್ಯನಿರ್ವಹಿಸುವ ರೈತರಿಂದ ಸ್ಥಳೀಯವಾಗಿ ಪ್ರಾರಂಭವಾದ ಒಂದು ಹೆಮ್ಮೆಯ ಸ್ವದೇಶಿ ಸಹಕಾರಿ ಸಂಸ್ಥೆ. ಪ್ರಸ್ತುತ ಕಾರ್ಖಾನೆ ಪ್ರಾರಂಭದ ದಿನಗಳಲ್ಲಿ ನಿಯೋಜಿಸಿರುವ ಯಂತ್ರಗಳಿಂದಲೇ ಉತ್ಪನ್ನಗಳ ಉತ್ಪಾದನೆಯನ್ನು ನಡೆಸುತ್ತಿದೆ. ಸ್ಥಾಪಕ ಅಧ್ಯಕ್ಷರು ತುಂಬಾ ಗುಣಮಟ್ಟದ ಯಂತ್ರಗಳನ್ನು ವಿದೇಶದಿಂದ ಆಮದು ಮಾಡಿ ನಿಯೋಜನೆ ಮಾಡಲಾಗಿತ್ತು.ಆದ್ದರಿಂದಲೇ ಮಾನ್ಯತೆ ಸಮಯ ಮೀರಿದರೂ ಯಾವುದೇ ತಾಂತ್ರಿಕ ತೊಂದರೆ ಇಲ್ಲದೆ ಅದು ಕಾರ್ಯನಿರ್ವಹಿಸುತ್ತಿದೆ.ಮುಂದಿನ 5 ವರ್ಷಗಳಲ್ಲಿ ಸುಮಾರು 100 ಕೋಟಿಗಳಷ್ಟು ಹಣ ಹೂಡಿಕೆ ಮಾಡಿ ಹಳೆಯ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗಳನ್ನು ನಿಯೋಜಿಸುವ ಕ್ರಾಂತಿಕಾರಕ ಯೋಜನೆಯನ್ನು ಆಡಳಿತ ಮಂಡಳಿ ಕೈಗೆತ್ತಿಕೊಂಡಿದೆ.ಅಡಿಕೆ ಮತ್ತು ಕಾಳುಮೆಣಸುಗಳ ಶೇಖರಣೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಪುತ್ತೂರಿನ ಕಾವು, ಸಾಗರ ಮತ್ತು ಭದ್ರಾವತಿಗಳಲ್ಲಿ ಬಹು ಉದ್ದೇಶ ಮತ್ತು ಬಹು ಸೌಲಭ್ಯಗಳುಳ್ಳ ಸರ್ವ ಋತುಗಳಲ್ಲೂ ಕಾರ್ಯನಿರ್ವಹಿಸಲು ಯೋಗ್ಯವಾದ ಗೋದಾಮ್ ಗಳನ್ನು ನಿರ್ಮಾಣ ಮಾಡಲಾಗಿದೆ.
‘ಕ್ಯಾಂಪ್ಕೋದ ಚಿತ್ತ ಸದಸ್ಯರ ಆರೋಗ್ಯದತ್ತ’ ಯೋಜನೆಯಲ್ಲಿ ಅನಾರೋಗ್ಯ ಪೀಡಿತ ಸಕ್ರಿಯ ಸದಸ್ಯರ ಚಿಕಿತ್ಸಗೆ ಧನ ಸಹಾಯ ಹಾಗೂ ಮೃತ ಸದಸ್ಯ ಮತ್ತು ಕೂಲಿಗಾರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ರೈತ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡುತ್ತಿದೆ. ಕ್ಯಾಂಪ್ಕೋ ಓನ್ ವಲ್ ಮೂಲಕ ಮನೆ ಮನೆಯಿಂದ ಅಡಿಕೆ ಖರೀದಿಸುವ ಯೋಜನೆ,ಸಬ್ಸಿಡಿ ದರದಲ್ಲಿ ಮೈಲುತುತ್ತು ವಿತರಣೆ,ಕೌಶಲ್ಯ ತರಬೇತಿ ಕಾರ್ಯಾಗಾರದ ಮೂಲಕ ರೈತರ ತಾಂತ್ರಿಕ ಉನ್ನತೀಕರಣ,ಕೃಷಿ ಯಂತ್ರಮೇಳದ ಮೂಲಕ ಯಾಂತ್ರೀಕರಣಕ್ಕೆ ಉತ್ತೇಜನ,ಅಡಿಕೆಯ ಪರ್ಯಾಯ ಉಪಯೋಗದ ಸಂಶೋಧನೆಗೆ ಪ್ರೋತ್ಸಾಹ,ಗಳಿಸಿದ ಲಾಭದ ವಿತರಣೆ ಮತ್ತು ಮಾರಾಟ ಮಾಡಿದ ಉತ್ಪನ್ನಕ್ಕೆ ಪ್ರೋತ್ಸಾಹ ಧನದ ಘೋಷಣೆ ಮೂಲಕ ರೈತರಿಗೆ ಉತ್ತಮ ಸೇವೆ ನೀಡುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ.ಉದ್ಯೋಗಿಗಳಿಗೆ ಉತ್ತಮವಾದ ಬೋನಸ್ ಘೋಷಣೆ ಮಾಡುವ ಮೂಲಕ ಸಂಸ್ಥೆಯ ಬೆಳವಣಿಗೆಯಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಪ್ರೋತ್ಸಾಹಿಸಿದೆ.ಕೊರೋನಾ ಮತ್ತು ಇತರ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಕ್ಯಾಂಪ್ಕೋ ಸರಕಾರದ ಸೇವಾ ಕಾರ್ಯಕ್ರಮಗಳಲ್ಲಿ ಕೈಜೋಡಿಸುವ ಮೂಲಕ ತನ್ನ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ಕೊಳೆರೋಗ, ಹಳದಿ ಎಲೆ ರೋಗದ ಸಮಸ್ಯೆ,ಎಲೆಚುಕ್ಕಿ ರೋಗ ಮುಂತಾದ ಹತ್ತು ಹಲವು ಸಮಸ್ಯೆಗಳು ಅಡಿಕೆ ಕೃಷಿ ಮತ್ತು ಕೃಷಿಕರನ್ನು ಬಾಧಿಸುತ್ತಿದೆ. ಮಾರುಕಟ್ಟೆಗೆ ಸಂಬಂಧಿಸಿದಂತೆ ಬೆಲೆಯ ಏರಿಳಿತ,ವಿದೇಶಿ ಅಡಿಕೆಯ ಆಮದು,ಅಡಿಕೆ ವಿರುದ್ಧದ ಕಪೋಲ ಕಲ್ಪಿತ ಲೇಖನಗಳು ,ಕಾಳಸಂತೆ ದಂಧೆ,ಪಾನ್ ಮಸಾಲೆ ನಿಷೇಧದ ಭೀತಿ ಮುಂತಾದ ಸಮಸ್ಯೆಗಳನ್ನು ಎದುರಿಸುವ ಜೊತೆಗೆ ಕಾನೂನಾತ್ಮಕ ಹೋರಾಟ ನಡೆಸಿ ರೈತರನ್ನು ಕಾಪಾಡುವ ಮಹತ್ತರ ಜವಾಬ್ಧಾರಿ ಕ್ಯಾಂಪ್ಕೋದ ಮೇಲಿದೆ.

ಸುವರ್ಣ ಮಹೋತ್ಸವ ಸಂಭ್ರಮ: ಕ್ಯಾಂಪ್ಕೋ ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಸ್ಥಾಪನೆಯಿಂದ ಸುವರ್ಣ ಸಂಭ್ರಮದವರೆಗೆ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಎಲ್ಲಾ ಹಿರಿಯ ಸಹಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ.ಸುವರ್ಣ ಸಂಭ್ರಮದ ಸುಸಂದರ್ಭದಲ್ಲಿ ಸಂಸ್ಥೆ ’ಡೈರಿ ಡ್ರೀಮ್’ ಹೆಸರಿನ ಎರಡು ಮಿಲ್ಕ್ ಚಾಕಲೇಟ್ ಗಳು,’ಕಕಾವೋ’ ಎಂಬ ಡಾರ್ಕ್ ಚಾಕಲೇಟ್,ಶೇಂಗ ಮಿಶ್ರಿತ ’ಕ್ರಮ್ಸ್’ ಮತ್ತು ’ಫೀಯೆಸ್ಟ’ ಎಂಬ ಕೊಬ್ಬರಿ ಮಿಶ್ರಿತ ವೈಟ್ ಚಾಕಲೇಟ್,ಹೀಗೆ 5 ವಿಧದ ಚಾಕಲೇಟ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ .ಅಡಿಕೆಯ ಸಿದ್ಧ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ’ಸೌಗಂಧ್’ ಎಂಬ ಅಡಿಕೆ ಮತ್ತು ಗೋಡಂಬಿ ಮಿಶ್ರೀತ ಉತ್ಪನ್ನವನ್ನು ಪ್ರಾರಂಭಿಸಲಾಗಿದೆ.ರೈತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ,ಕ್ಯಾಂಪ್ಕೋ ’ಕಲ್ಪ ’ಎಂಬ ಪರಿಶುದ್ಧ ತೆಂಗಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಸುವರ್ಣ ಮಹೋತ್ಸವವನ್ನು ಸ್ಮರಣೀಯಗೊಳಿಸಿದೆ.ಮುಂದಿನ ವರ್ಷ,ಉದ್ಯಮ ಸಂಪನ್ಮೂಲ ಯೋಜನೆ, Enterpre Reource Plannng(ERP)ಯನ್ನು ಜಾರಿಗೆ ತಂದು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ ಸಂಸ್ಥೆಯಲ್ಲಿ ಅಂತರ್ರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು.ಇದು ರೈತರಿಗೆ ಉತ್ತಮ ಮತ್ತು ತ್ವರಿತ ಸೇವೆ ನೀಡಲು ಸಹಾಯಕಾರಿಯಾಗಲಿದೆ.

ರೈತರ ಸಹಕಾರ ಮತ್ತು ಪ್ರೋತ್ಸಾಹದಿಂದ ಕಳೆದ ವರ್ಷ ಸುಮಾರು 2778 ಕೋಟಿ ರೂಪಾಯಿಗಳ ದಾಖಲೆಯ ವಹಿವಾಟು ನಡೆಸಿ 74.40 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. 2025ನೇ ವರ್ಷಕ್ಕೆ ಕ್ಯಾಂಪ್ಕೋ 5000 ಕೋಟಿಯ ವಹಿವಾಟು ನಡೆಸುವ ಗುರಿ ಇಟ್ಟುಕೊಂಡಿದೆ. ಕಳೆದ ಐದು ದಶಕಗಳಿಂದ ರೈತರಿಗೆ ಸಂಕಷ್ಟಗಳು ಎದುರಾದಾಗ ಕ್ಯಾಂಪ್ಕೋ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುವ ಮೂಲಕ ಹಿರಿಯ ಸಹಕಾರಿಗಳ ಆಶಯವನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಇದರ ಪ್ರಯತ್ನವಾಗಿ ಕನಿಷ್ಟ ಆಮದು ಬೆಲೆಯು ಕಾಲ ಕಾಲಕ್ಕೆ ಪರಿಷ್ಕರಣೆಯಾಗುವ ಮೂಲಕ ರೈತರ ಹಿತ ಕಾಪಾಡಲು ಸಾಧ್ಯವಾಗಿದೆ. ಭವಿಷ್ಯದಲ್ಲೂ ಅಡಿಕೆ ಬೆಳಗಾರರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ಕ್ಯಾಂಪ್ಕೋ ಕಟಿಬದ್ಧವಾಗಿದೆ. ಸಂಸ್ಥೆಯನ್ನು ಪೋಷಿಸುವ ಸದಸ್ಯ ಬೆಳೆಗಾರರು,ಪ್ರಾಮಾಣಿಕ ಹಾಗೂ ಸಮರ್ಪಣಾ ಮನೋಭಾವದ ಸಿಬ್ಬಂದಿ ವರ್ಗ ಮತ್ತು ಸೃಜನಶೀಲ ಆಡಳಿತ ಮಂಡಳಿ ಕ್ಯಾಂಪ್ಕೋ ಸಂಸ್ಥೆಯ ಆಸ್ತಿ.ಇವರೆಲ್ಲರ ಸಹಕಾರ ಮತ್ತು ಸಹಯೋಗದಲ್ಲಿ ಕ್ಯಾಂಪ್ಕೋ ಭವಿಷ್ಯದಲ್ಲಿ ದೇಶದಲ್ಲೇ ಮಾದರಿ ಸಹಕಾರಿ ಸಂಸ್ಥೆಯಾಗಿ ಮೂಡಿಬರಲಿದೆ.

LEAVE A REPLY

Please enter your comment!
Please enter your name here