ಅಮೀತ್‌ಶಾಜೀ ಬಂದು ಬಿಜೆಪಿಗೆ, ಕ್ಯಾಂಪ್ಕೋಗೆ, ಸಹಕಾರಿ ಕ್ಷೇತ್ರಕ್ಕೆ ಅಪಾರ ಲಾಭವಾಗಿದೆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ ಏಕಾಏಕಿ ರೋಡ್‌ಗಳ ರಿಪೇರಿ, ಸ್ವಚ್ಛತೆಯೂ ಆಗಿದೆ

0

ಅದು ನಮಗಾಗಿ ಆಗಿದ್ದರೆ ಅದು ಸ್ವಾತಂತ್ರ್ಯ. ಶಾರವರ ಶೋಗಾಗಿ ಆಗಿದ್ದರೆ ಅದು ಗುಲಾಮಗಿರಿ

ಕೇಂದ್ರ ಗೃಹ ಸಚಿವರು, ಸಹಕಾರಿ ಸಚಿವರು ಆಗಿರುವ ಅಮೀತ್‌ಶಾರವರ ಈಶ್ವರಮಂಗಲದ ಹನುಮಗಿರಿ ಭೇಟಿ ಅಮರಗಿರಿ ಉದ್ಘಾಟನೆ, ಮೊಟ್ಟೆತ್ತಡ್ಕದಲ್ಲಿ ಹೆಲಿಪ್ಯಾಡ್ ರಚನೆ, ಪುತ್ತೂರು ಕ್ಯಾಂಪ್ಕೋದ 50ನೇ ವರ್ಷದ ಕಾರ್ಯಕ್ರಮಕ್ಕೆ ಭೇಟಿ, ಹಲವು ಯೋಜನೆಗಳಿಗೆ ಚಾಲನೆ ಪುತ್ತೂರಿಗೆ ಮಹತ್ವದ ವಿಷಯವೇ ಸರಿ. ಬಿಜೆಪಿ ಪಕ್ಷಕ್ಕೆ ಮತ್ತು ಅದರ ಕಾರ್ಯಕರ್ತರಿಗೆ ಈ ಚುನಾವಣಾ ವರ್ಷದಲ್ಲಿ ಅದು ಹೊಸ ಹುರುಪನ್ನು ನೀಡಿದೆ. ಅವರ ಭೇಟಿಯಿಂದಾಗಿ ಕ್ಯಾಂಪ್ಕೋದ ಸಾಧನೆ ದೇಶಕ್ಕೆ ಮುಟ್ಟಿದೆ. ಸಹಕಾರಿ ಕ್ಷೇತ್ರಕ್ಕೆ ಹೊಸ ಆಯಾಮವನ್ನು, ಗೌರವವನ್ನು ಕೊಟ್ಟಿದೆ. ಈ ಎಲ್ಲಾ ವಿಚಾರಗಳು ಸುದ್ದಿ ಪತ್ರಿಕೆಯಲ್ಲಿ, ಚಾನೆಲ್‌ನಲ್ಲಿ ವಿವರವಾಗಿ ಬಂದಿದೆ. ಸುದ್ದಿ ಪುತ್ತೂರು ಚಾನೆಲ್‌ನಲ್ಲಿ ಆ ಎಲ್ಲಾ ಕಾರ್ಯಕ್ರಮದ ನೇರ ಪ್ರಸಾರ ನಡೆದು ಲಕ್ಷಾಂತರ ಜನರು ರಾಜ್ಯ, ದೇಶ, ವಿದೇಶದಿಂದಲೂ ನೋಡಿದ್ದಾರೆ. ಇನ್ನೂ ನೋಡುತ್ತಲೂ ಇದ್ದಾರೆ. ಆ ಎಲ್ಲಾ ವಿಷಯಗಳು, ಭಾಷಣಗಳು ಶಾಶ್ವತವಾಗಿ ದಾಖಲೆಯಾಗಲಿದೆ. ಸುದ್ದಿ ಪತ್ರಿಕೆ, ಚಾನೆಲ್ ಘಟನೆಯ ವರದಿಗಳನ್ನು ನೇರಪ್ರಸಾರ ಮಾಡುವ ವರದಿ ಮತ್ತು ಜಾಹೀರಾತು ನಿಭಾಯಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಿದ್ದಾರೆ. ಹನುಮಗಿರಿಯಲ್ಲಿಯ ನೇರಪ್ರಸಾರ ಅದಕ್ಕೆ ಪೂರ್ವ ತಯಾರಿಯಾಗಿ ನಡೆಯುವ ಸೆಕ್ಯೂರಿಟಿ ಹೊಸ ಅನುಭವ ನೀಡಿದೆ.

ಅಮೀತ್‌ಶಾರವರ ಭೇಟಿ ಕಾರ್ಯಕ್ರಮ ಅಮೋಘವಾಗಿ, ಯಶಸ್ವಿಯಾಗಿ ನಡೆದಿದೆ. ಲಕ್ಷಾಂತರ ಜನರು ಸೇರಿದ್ದಾರೆ. ಅಲ್ಲಿಗೆ ಬರುವವರಿಗೆ, ಹೋಗುವವರಿಗೆ ಎಲ್ಲರಿಗೂ ಉತ್ತಮ ವ್ಯವಸ್ಥೆ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಊಟದ ವ್ಯವಸ್ಥೆ, ಬಾಯಾರಿಕೆಯ ವ್ಯವಸ್ಥೆಯೂ ಇತ್ತು. ಜರ್ಮನ್ ಪೆಂಡಲ್‌ನ ವಿಶೇಷ ಚಪ್ಪರ ವ್ಯವಸ್ಥೆ ಏರ್ಪಡಿಸಿ ಅಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉತ್ತಮ ವ್ಯವಸ್ಥೆ ಏರ್ಪಡಿಸಲಾಗಿತ್ತು. ವಾಹನ ಸಂಚಾರದ ವಿಷಯದಲ್ಲಿ, ಸೆಕ್ಯೂರಿಟಿ ವಿಷಯದಲ್ಲೂ ಯಾವುದೇ ಕುಂದುಕೊರತೆ, ಕಿರಿ ಕಿರಿ ಆಗದಂತೆ ನಮ್ಮ ಶಾಸಕರು, ಜನನಾಯಕರು, ಆಡಳಿತ ವ್ಯವಸ್ಥೆ, ಕ್ಯಾಂಪ್ಕೋದವರು, ಪೊಲೀಸ್‌ನವರು ನೋಡಿಕೊಂಡಿದ್ದಾರೆ. ಆ ವಿಷಯದಲ್ಲಿ ಅವರಿಗೆಲ್ಲಾ ಶಹಭಾಸ್‌ಗಿರಿ ನೀಡಲೇ ಬೇಕು. ಅವೆಲ್ಲವುಗಳನ್ನೆಲ್ಲಾ ಹೇಳುವಾಗ, ವರದಿ ಮಾಡುವಾಗ ಇಲ್ಲಿಯ ಸಣ್ಣ ವಿಷಯವನ್ನು ಹೇಳಲೇ ಬೇಕು. ಅದನ್ನು ಇವತ್ತಿನ ಕಾರ್ಯಕ್ರಮಕ್ಕಾಗಿ ಅಲ್ಲ. ಶಾಶ್ವತವಾದ ಯೋಚನೆಗಾಗಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ, ಬಹಳ ಮುಖ್ಯ ಸಂದೇಶ ನೀಡಲಿಕ್ಕಾಗಿ ಈ ಕೆಳಗೆ ಪ್ರಸ್ತಾಪ ಮಾಡುತ್ತಿದ್ದೇನೆ.
ಅಮೀತ್‌ಶಾರವರ ಭೇಟಿಯಿಂದ ಆಗಿರುವ ಎಲ್ಲಾ ವಿಷಯಗಳನ್ನು ವರದಿ ಮಾಡಿರುವಾಗ ಆ ಸಂದರ್ಭದಲ್ಲಿ ನಮ್ಮೂರಿನ ಆಡಳಿತ ವ್ಯವಸ್ಥೆಯ ಬಗ್ಗೆ ಒಂದೆರಡು ವಿಷಯ ಪ್ರಸ್ತಾಪ ಮಾಡಲೇ ಬೇಕು. ನಮ್ಮೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಕೆಲಸಗಳೂ ಆಗಿವೆ. ಆದರೆ ನಮ್ಮೂರಿನ ರಸ್ತೆಗಳು, ಚರಂಡಿಗಳು ಪೂರ್ಣ ಪ್ರಮಾಣದಲ್ಲಿ ಸಮರ್ಪಕವಾಗಿಲ್ಲ. ಸ್ವಚ್ಛತೆಯ ಕಸದ ರಾಶಿಯ ಬಗ್ಗೆ ಹೇಳಬೇಕಾಗಿಲ್ಲ. ಅದನ್ನು ನಾವು ನಿತ್ಯ ಅನುಭವಿಸುತ್ತಾ ಬಂದಿದ್ದೇವೆ. ಹೀಗಿರುವಾಗ ಅಮೀತ್‌ಶಾಜೀ ಬರುತ್ತಾರೆ ಎಂದು ಏಕಾಏಕಿ ಡಾಂಬರು ಬೀಳುತ್ತದೆ, ಗುಂಡಿಗಳು ಮುಚ್ಚಲ್ಪಡುತ್ತದೆ, ರಸ್ತೆಗಳು ಸ್ವಚ್ಛವಾಗುತ್ತದೆ ಎಂದರೆ ಅದು ಯಾರಿಗಾಗಿ ಹೇಗೆ ಆಗಿದೆ?. ಅಮೀತ್ ಶಾರವರ ಕಣ್ಣಿಗೆ ಬೀಳದಂತೆ ಅವರಿಗೆ ನಮ್ಮ ಕೊರತೆಗಳು ಕಾಣದಂತೆ ಮಾಡಲು ಆ ಕೆಲಸ ನಡೆಯುವುದಾದರೆ ಅದು ನಮ್ಮ ಗುಲಾಮಗಿರಿಯ ಸಂಸ್ಕೃತಿ. ಅದು ಇನ್ನೊಂದೆರಡು ವಾರದಲ್ಲಿ ಹಿಂದಿನ ಪರಿಸ್ಥಿತಿಗೆ ಮರುಳುವುದಾದರೆ ಅದಕ್ಕೆ ಹೊಣೆ ಯಾರು?. ಪ್ರಧಾನಿ ಮೋದೀಜಿಯವರ ಬೆಂಗಳೂರು, ಮೈಸೂರು ಭೇಟಿಯ ಸಂದರ್ಭದಲ್ಲಿ ಕೂಡ ಅಲ್ಲಿ ತರಾತುರಿಯಲ್ಲಿ ಇಂತಹ ಕೆಲಸಗಳು ನಡೆದಿದೆ. ಅವರು ವಾಪಾಸು ಹೋದಾಗ ಅಲ್ಲಿ ಹಾಕಿದ ಡಾಂಬರು ಕೂಡ ಎದ್ದು ಹೋಗಿದೆ ಎಂದು ವರದಿಗಳನ್ನು ನಾವು ಕೇಳಿದ್ದೇವೆ. ಅಂತಹ ಕೆಲಸಗಳನ್ನು ಮಾಡುವುದಾಗಿದ್ದರೂ ಅದನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಕಷ್ಟು ಸಮಯ ತೆಗೆದುಕೊಂಡು ಮಾಡಬಹುದಿತ್ತಲ್ಲಾ?. ತರಾತುರಿಯಲ್ಲಿ ಮಾಡಿ ಕೆಲಸವನ್ನು, ಹಣವನ್ನೂ ಹಾಳು ಮಾಡುವುದು ಯಾಕೆ? ಎಂಬ ಅಭಿಪ್ರಾಯವೂ ಜನರಲ್ಲಿದೆ.

ಇದು ನಮ್ಮದೇ ಆಡಳಿತ, ನಮಗಾಗಿ, ನಮ್ಮವರಿಂದ ಆಡಳಿತ ಎಂಬುವುದನ್ನು ನಾವು ಹೇಳಿಕೊಂಡು, ಆಚರಿಸಿಕೊಂಡು ಬರುತ್ತಿದ್ದೇವೆ. ಯಾವುದೇ ದೇಶ, ಊರು ಕೇರಿ ಮತ್ತು ಇಲ್ಲಿಯ ವ್ಯವಸ್ಥೆಗಳೆಲ್ಲಾ ನಮಗಾಗಿ ಎಂದಾದರೆ ಮಾತ್ರ ಅದು ಶಾಶ್ವತ ಮತ್ತು ಸ್ವಾತಂತ್ರ್ಯದ ಸಂಕೇತ. ಅದು ಇತರರಿಗಾಗಿ ಆದರೆ ಅದು ತಾತ್ಕಾಲಿಕ ಮತ್ತು ಗುಲಾಮಗಿರಿಯ ಸಂಸ್ಕೃತಿ ಎಂಬುವುದನ್ನು ನೆನಪಿಸುತ್ತಾ ಅದಕ್ಕಾಗಿಯೇ ನಮಗೆ ನಮ್ಮದೇ ಆದ ಪ್ರತಿನಿಽಗಳನ್ನು ಆಯ್ಕೆ ಮಾಡುವ ಮತದಾನದ ಹಕ್ಕನ್ನು ನೀಡಲಾಗಿದೆ ಎಂಬುವುದನ್ನು ನೆನಪಿಸಲು ಬಯಸುತ್ತೇನೆ.

LEAVE A REPLY

Please enter your comment!
Please enter your name here