ಬನ್ನೂರು ಚರ್ಚ್ ಪಾಲನಾ ಸಮಿತಿಯಿಂದ ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರಿಗೆ ವಿದಾಯದ ಸನ್ಮಾನ

0

ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿ ವತಿಯಿಂದ ಚರ್ಚ್ನಲ್ಲಿ ಕಳೆದ ಆರು ವರ್ಷಗಳಿಂದ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ಸೈಂಟ್ ಆಂಟನಿ ಫ್ರಾಯರಿ ಚರ್ಚ್ ಗೆ ಪದೋನ್ನತಿಯೊಂದಿಗೆ ವರ್ಗಾವಣೆಗೊಳ್ಳುತ್ತಿರುವ ವಂ|ಪ್ರಶಾಂತ್ ಫೆರ್ನಾಂಡೀಸ್‌ರವರಿಗೆ ವಿದಾಯದ ಸನ್ಮಾನ ಕಾರ್ಯಕ್ರಮ ಫೆ.12 ರಂದು ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆ ನೆರವೇರಿತು.

ಬನ್ನೂರು ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಇನಾಸ್ ಗೊನ್ಸಾಲ್ವಿಸ್ ಮಾತನಾಡಿ, ಓರ್ವ ವ್ಯಕ್ತಿಯು ಅವರಷ್ಟಕ್ಕೆ ಪರಿಪೂರ್ಣರೆನಿಸುವುದಿಲ್ಲ. ಆದರೆ ಆ ವ್ಯಕ್ತಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆತು, ಎಲ್ಲರೂ ತನ್ನವರೆಂದು ತಿಳಿದು ಪ್ರೀತಿಯಿಂದ ಕಂಡಾಗ ಮಾತ್ರ ಪರಿಪೂರ್ಣನೆನೆಸಿಕೊಳ್ಳಲು ಸಾಧ್ಯ. ಈ ಮಾತು ಖಂಡಿತಾ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್‌ರವರಿಗೆ ಒಪ್ಪುತ್ತದೆ. ಹಿರಿಯರಾಗಲಿ, ಕಿರಿಯರಾಗಲಿ, ಎಲ್ಲ ಜನರೊಂದಿಗೆ ಹೊಂದಾಣಿಕೆಯ ನಾಯಕತ್ವ ಗುಣವಿದ್ರೆ ಮಾತ್ರ ಸೇವೆಯು ಸಲೀಸು ಆಗುತ್ತದೆ. ಉನ್ನತ ಪ್ರೊವಿನ್ಸಿಯಲ್ ಹುದ್ದೆಯನ್ನು ಅಲಂಕರಿಸಿದ ಧರ್ಮಗುರುಗಳೂ ಆಮೇಲೆ ಚರ್ಚ್‌ ನಲ್ಲಿ ಸಾಮಾನ್ಯ ಧರ್ಮಗುರು ಸೇವೆ ನೀಡಬಲ್ಲಂತಹ ಸಭೆಯೇ ಸಂತ ಫ್ರಾನ್ಸಿಸ್ಕನ್ ಸಭೆಯಾಗಿದೆ. ಅದರಂತೆ ವಂ|ಪ್ರಶಾಂತ್‌ರವರು ನಮ್ಮ ಚರ್ಚ್ ಕುಟುಂಬದ ಪ್ರತಿ ಭಕ್ತನ ಮನಸ್ಸನ್ನೂ ಗೆದ್ದಿದ್ದು ಅವರ ಮುಂದಿನ ಧಾರ್ಮಿಕ ಜೀವನವು ಯಶಸ್ವಿಪಥದಲ್ಲಿ ಸಾಗಲು ಸಂತ ಅಂತೋನಿಯವರು ಆಶೀರ್ವದಿಸಲಿ ಎಂದರು.

ಚರ್ಚ್ ಐಸಿವೈಎಂ ಸದಸ್ಯೆ ಜೋನಿಟಾ ಡಿ’ಸೋಜಾರವರು ಮಾತನಾಡಿ, ಸದಾ ಹಸನ್ಮುಖಿಯಾಗಿರುವ ವಂ|ಪ್ರಶಾಂತ್‌ರವರು ಕಳೆದ ಆರು ವರ್ಷಗಳಿಂದ ಚರ್ಚ್‌ ನ ಐಸಿವೈಎಂ ಘಟಕದ ಪ್ರಗತಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. ಘಟಕದ ಯಾವುದೇ ಕಾರ್ಯಕ್ರಮವಿರಲಿ, ಅವರು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸದೆ ತಾನೇ ಮುಂಚೂಣಿಯಲ್ಲಿ ನಿಂತು ನಮ್ಮನ್ನು ಹುರಿದುಂಬಿಸುತ್ತಾ ಬೆನ್ನೆಲುಬಾಗಿ ನಿಲ್ಲುವ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಇದೀಗ ಅವರು ತಮ್ಮ ಮುಂದಿನ ಸೇವೆಗೆ ಬೆಂಗಳೂರಿಗೆ ಪಯಣಿಸಲಿದ್ದು ಅವರ ಧಾರ್ಮಿಕ ಸೇವೆಗೆ ದೇವರು ಹಾರೈಸಲಿ ಜೊತೆಗೆ ಸದಾ ಆಯುರಾರೋಗ್ಯದಿಂದ ಕೂಡಿರಲಿ ಎಂಬುದಾಗಿ ಐಸಿವೈಎಂ ಪರವಾಗಿ ಶುಭ ಹಾರೈಸುತ್ತಿದ್ದೇವೆ ಎಂದು ಹೇಳಿ ಐಸಿವೈಎಂ ಪರ ವಂ|ಪ್ರಶಾಂತ್ ಫೆರ್ನಾಂಡೀಸ್‌ರವರನ್ನು ಸನ್ಮಾನಿಸಲಾಯಿತು.

ವಂ|ಪ್ರಶಾಂತ್ ಫೆರ್ನಾಂಡೀಸ್‌ರವರ ವಿದಾಯದ ಸನ್ಮಾನ ಸಂದರ್ಭದಲ್ಲಿ ವಂ|ಪ್ರಶಾಂತ್‌ರವರ ಹೆತ್ತವರಾದ ಬೆನೆಡಿಕ್ಟ್ ಫೆರ್ನಾಂಡೀಸ್ ಹಾಗೂ ಪ್ರೆಸಿಲ್ಲ ಫೆರ್ನಾಂಡೀಸ್‌ರವರು ಉಪಸ್ಥಿತರಿದ್ದರು. ಚರ್ಚ್ ಗಾಯನ ಮಂಡಳಿ ಚರ್ಚ್ ಪ್ರಜೆಗಳ ಪರವಾಗಿ ಶುಭ ವಿದಾಯದ ಗೀತೆಯನ್ನಾಡಿದರು. ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಹಾಗೂ ಪ್ರಸ್ತುತ ಚರ್ಚ್ 21 ಆಯೋಗಗಳ ಸಂಚಾಲಕ ಜೆರೋಮ್ ಪಾಯಿಸ್‌ರವರು ವರ್ಗಾವಣೆಗೊಳ್ಳುತ್ತಿರುವ ವಂ|ಪ್ರಶಾಂತ್ ಫೆರ್ನಾಂಡೀಸ್‌ರವರ ವಿದಾಯ ಸನ್ಮಾನ ಪತ್ರ ವಾಚಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್ ಸ್ವಾಗತಿಸಿ, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ವಂದಿಸಿದರು. ಚರ್ಚ್ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ಇನಾಸ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು.

ಚರ್ಚ್ ಹಣದ ಕೇಂದ್ರವಾಗದೆ ಪ್ರೀತಿಯ, ಒಗ್ಗಟ್ಟಿನ ಕೇಂದ್ರವಾಗಬೇಕು…

ಧರ್ಮಗುರುಗಳು ಕೂಡ ಮನುಷ್ಯರೇ. ಎಲ್ಲರ ಧನಾತ್ಮಕ ಸಹಕಾರ, ಪ್ರೋತ್ಸಾಹ ಸಿಕ್ಕರೆ ಮಾತ್ರ ಧರ್ಮಗುರುವಿಗೆ ಮುಂದೆ ಹೆಜ್ಜೆಯಿಡಲು ಸಾಧ್ಯವಾಗುತ್ತದೆ. ಫ್ರಾನ್ಸಿಸ್ಕನ್ ಸಭೆಯ ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಈ ಬನ್ನೂರು ಚರ್ಚ್‌ ಗೆ ಕಳುಹಿಸಿಕೊಟ್ಟಿರುತ್ತಾರೆ. ಅದರಂತೆ ತಾನು ಹಿರಿಯ-ಕಿರಿಯ ಎಂಬ ಬೇಧಭಾವ ಮಾಡದೆ ಎಲ್ಲರನ್ನೂ ಸಮನಾಗಿ ಕಾಣುತ್ತಾ ಚರ್ಚ್ ಅನ್ನು ಮುನ್ನೆಡೆಸಿರುವೆನು ಎಂಬ ಆತ್ಮತೃಪ್ತಿ ನನಗಿದೆ. ಚರ್ಚ್ ಎಂಬುದು ಹಣವೆಂಬ ವ್ಯಾವಹಾರಿಕ ಕೇಂದ್ರವಾಗದೆ ಪ್ರೀತಿ ಹಾಗೂ ಒಗ್ಗಟ್ಟಿನ ಕೇಂದ್ರವಾಗಬೇಕಿದೆ. ಮಕ್ಕಳಲ್ಲೂ ಕೂಡ ಹಣವೇ ಮುಖ್ಯ ಎಂದು ತಿಳಿಸದೆ ಅವರಲ್ಲಿ ಪ್ರೀತಿ ಹಾಗೂ ಪ್ರಾರ್ಥನೆಯ ಮೌಲ್ಯವನ್ನು ಕಲಿಸುವಂತಾಗಬೇಕು. ಚರ್ಚ್ ಗೆ ಆಗಮಿಸಿದ ಬಳಿಕ ಭಕ್ತರಿಗೆ ಯಾವುದೇ ಬೇಸರ ತರಿಸುವ ಹಾಗೆ ನಡೆದುಕೊಂಡಿಲ್ಲ, ಯಾರಿಗಾದರೂ ನೋವುಂಟಾದರೆ ಕ್ಷಮೆಯಿರಲಿ. ನಾನು ಎಲ್ಲೇ ಹೋದರೂ ನಿಮ್ಮ ಸಹಕಾರವನ್ನು ನಾನು ಕೃತಜ್ಞತಾಭಾವದಿಂದ ಸ್ಮರಿಸಿಕೊಳ್ಳುತ್ತೇನೆ.

-ವಂ|ಪ್ರಶಾಂತ್ ಫೆರ್ನಾಂಡೀಸ್, ನಿರ್ಗಮಿತ ಪ್ರಧಾನ ಧರ್ಮಗುರು, ಬನ್ನೂರು ಚರ್ಚ್

LEAVE A REPLY

Please enter your comment!
Please enter your name here