ಮೊಟ್ಟೆತ್ತಡ್ಕ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕಚ್ಚಾಗೇರು ಬೀಜದ ಸಂಸ್ಕರಣೆ, ಗೇರುಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ತರಬೇತಿ

0

ಪುತ್ತೂರು: ಪುತ್ತೂರು ಐಸಿಏಆರ್ ಗೇರು ಸಂಶೋಧನಾ ನಿರ್ದೇಶನಲಾಯದಲ್ಲಿ ಕಚ್ಚಾ ಗೇರು ಬೀಜದ ಸಂಸ್ಕರಣೆ ಮತ್ತು ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು 5 ದಿನಗಳ ತರಬೇತಿ ಕಾರ್ಯಕ್ರಮ ಮೇಘಾಲಯ ರಾಜ್ಯದ ರೈತರು ಮತ್ತು ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿತ್ತು. ಮೇಘಾಲಯ ಬೇಸಿನ್ ಮ್ಯಾನೇಜ್‌ಮೆಂಟ್ ಏಜೆನ್ಸಿ ವತಿಯಿಂದ ಈ ತರಬೇತಿ ಕಾರ್ಯಕ್ರಮ ಪ್ರಾಯೋಜಿಸಲಾಗಿತ್ತು.

ಸಂಸ್ಥೆಯ ನಿರ್ದೇಶಕ ಡಾ.ಜೆ.ದಿನಕರ ಅಡಿಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗೇರಿನಲ್ಲಿ ಸಂಶೋಧನೆ ಹಾಗೂ ತಂತ್ರಜ್ಞಾನ ಅಳವಡಿಕೆಯ ಅಂತರವನ್ನು ತಿಳಿಸಿದರು. ಬೆಳೆ ಸುಧಾರಣೆ, ಬೆಳೆ ನಿರ್ವಹಣೆ, ಕೃಷಿ ಯಾಂತ್ರೀಕರಣ, ಬೆಳೆ ರಕ್ಷಣೆ, ಸುಗ್ಗಿಯ ನಂತರದ ತಂತ್ರಜ್ಞಾನ ಮತ್ತು ಐಸಿಟಿ ಉಪಕ್ರಮಗಳು ಸೇರಿದಂತೆ ತಂತ್ರಜ್ಞಾನದ ವರ್ಗಾವಣೆಗೆ ಸಂಬಂಧಿಸಿದಂತೆ ಸಂಶೋಧನೆಯಲ್ಲಿ ಮಾಡಿದ ಸಾಧನೆಗಳ ಅವಲೋಕನ ನೀಡಿದರು. ಗೇರು ಬೆಳೆಯೊಂದಿಗೆ ಶುಂಠಿ ಮತ್ತು ಕಾಳುಮೆಣಸಿನಂತಹ ಅಂತರ ಬೆಳೆಗಳನ್ನು ಸೇರಿಸುವ ನಿರೀಕ್ಷೆಗಳನ್ನು ತಿಳಿಸಿದರು. ಎಲ್.ಆ.ಎಂ.ಪಿ. ಪ್ರಾಜೆಕ್ಟ್, ಮೇಘಾಲಯದ ಸೀನಿಯರ್ ಮ್ಯಾನೇಜರ್ ಸೌರಭ್ ಬೋಸ್ ಮೇಘಾಲಯರವರು ಮಾತನಾಡಿ ಲೈವ್ಲಿಹುಡ್ ಅಕ್ಸೆಸ್ ಟು ಮಾರ್ಕೆಟ್ ಪ್ರಾಜೆಕ್ಟ್‌ನ ಚಟುವಟಿಕೆಗಳನ್ನು ವಿವರಿಸಿದರು. ಅವರು ಸುಸ್ಥಿರ ಜೀವನೋಪಾಯದ ಅವಕಾಶಗಳ ಮೂಲಕ ಮೇಘಾಲಯದ ಗ್ರಾಮೀಣ ಜನತೆಯ ಕುಟುಂಬದ ಆದಾಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ವಿವಿಧ ಧನಸಹಾಯ ಏಜೆನ್ಸಿಗಳ ಮೂಲಕ ರೈತರಿಗಾಗಿ ಕಚ್ಚಾ ಗೋಡಂಬಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ತಿಳಿಸಿದರು. ತರಬೇತಿಯ ಸಂಯೋಜಕ ಡಾ. ಡಿ. ಬಾಲಸುಬ್ರಮಣ್ಯಂ ತರಬೇತಿ ಕಾರ್ಯಕ್ರಮದ ವಿಷಯ ವಿವರಿಸಿದರು ಮತ್ತು ಕಚ್ಚಾ ಗೇರು ಬೀಜದ ಸಂಸ್ಕರಣೆ ಮತ್ತು ಗೇರುಹಣ್ಣಿನ ಮೌಲ್ಯವರ್ದಿತ ಉತ್ಪನ್ನಗಳು, ಇತ್ತೀಚಿನ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ತರಬೇತಿ ವಿನ್ಯಾಸಗೊಳಿಸಲಾಗಿತ್ತು ಎಂದು ಹೇಳಿದರು.

ಮೇಘಾಲಯದ ಸುಮಾರು 17 ರೈತರು ಮತ್ತು ಅಧಿಕಾರಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಜ್ಞಾನಿ ಡಾ. ವೀಣಾ ಜಿ.ಲ್ ಸ್ವಾಗತಿಸಿ ಡಾ. ತೊಂಡೈಮಾನ್ ವಂದಿಸಿದರು.

LEAVE A REPLY

Please enter your comment!
Please enter your name here