ಬೆಂಕಿಯುಗುಳುವ ವಿದ್ಯುತ್ ಪರಿವರ್ತಕ್ಕೆ ಮುಕ್ತಿ ನೀಡಿ :ಪೆರ್ನೆ ಗ್ರಾ.ಪಂ. ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಆಗ್ರಹ

0

ಉಪ್ಪಿನಂಗಡಿ: ಚರಂಡಿಯಲ್ಲಿ ತುಂಬಿದ ಡ್ರೈನೇಜ್ ಸಮಸ್ಯೆ, ವಿದ್ಯುತ್ ಪರಿವರ್ತಕದಿಂದ ಬೆಂಕಿ ಬೀಳುವುದರಿಂದ ಆಗುವ ಸಮಸ್ಯೆ, ಸರಕಾರಿ ಶಾಲೆಯಲ್ಲಿ ಕೊಠಡಿ ಸಮಸ್ಯೆ ಹೀಗೆ ಹಲವು ಸಮಸ್ಯೆಗಳು ಪೆರ್ನೆ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಪ್ರತಿಧ್ವನಿಸಿತು.


ಪೆರ್ನೆ ಗ್ರಾ.ಪಂ. ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೋ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಕಚೇರಿಯ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಅವಲತ್ತುಕೊಂಡ ಗ್ರಾಮಸ್ಥರೋರ್ವರು, ಪೆರ್ನೆ ಗ್ರಾ.ಪಂ. ಕಚೇರಿ ಬಳಿಯಲ್ಲಿಯೇ ಇರುವ ವಿದ್ಯುತ್ ಪರಿವರ್ತಕದಲ್ಲಿ ಆಗಾಗ ಬೆಂಕಿ ಅವಘಡ ಉಂಟಾಗುತ್ತದೆ. ಅದರ ಬಳಿಯೇ ನನ್ನ ಮನೆಯಿದ್ದು, ತೋಟ ಇದೆ. ಅದಕ್ಕೆಲ್ಲಾ ಬೆಂಕಿ ಹತ್ತಿದರೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಭಯದಲ್ಲೇ ಬದುಕಬೇಕಾದ ಸ್ಥಿತಿ ನನ್ನದಾಗಿದೆ ಎಂದು ಗ್ರಾಮಸ್ಥರೋರ್ವರು ಅವಲತ್ತುಕೊಂಡರು.

ಆಗ ಮೆಸ್ಕಾಂನ ಮಾಣಿ ಉಪವಿಭಾಗದ ಶಾಖಾಧಿಕಾರಿ ದಿನೇಶ್ ಕೆ. ಮಾತನಾಡಿ, ಆ ವಿದ್ಯುತ್ ಪರಿವರ್ತಕ ಸಾರ್ವಜನಿಕ ಸ್ಥಳದಲ್ಲಿದೆ. ಸಾರ್ವಜನಿಕ ಸ್ಥಳದಲ್ಲಿ ಇಲಾಖೆಯು ಕಾಮಗಾರಿ ನಡೆಸುವಾಗ ಅಡ್ಡ ಬರುವುದು ಸರಿಯಲ್ಲ. ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಬೀಳುವುದು ಮಾಮೂಲಿ ಪ್ರಕ್ರಿಯೆ. ಅಂತಹ ಸಮಯದಲ್ಲಿ ಸಾರ್ವಜನಿಕರು ಬೆಂಕಿ ನಂದಿಸಲು ಮುಂದಾಗಬೇಡಿ. ಪವರ್ ಮ್ಯಾನ್‌ಗಳಿಗೆ ತಿಳಿಸಿ ಎಂದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಇದು ಗಂಭೀರವಾದ ಪ್ರಕರಣ. ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಉಂಟಾಗಲು ಕಾರಣವೇನೆಂದು ಮೊದಲು ತಿಳಿದು, ಅದರ ಸಮಸ್ಯೆಗೆ ಪ್ರಯತ್ನಿಸಿ. ರಸ್ತೆ ಬದಿಯಲ್ಲಿಯೇ ಈ ವಿದ್ಯುತ್ ಪರಿವರ್ತಕವಿದ್ದು, ಇಲ್ಲಿ ಯಾವುದೇ ಸುರಕ್ಷತಾ ಕ್ರಮವನ್ನು ಅಳವಡಿಸಿಲ್ಲ. ಹಾಗೆ ಬೆಂಕಿ ಬೀಳುವುದಾದರೆ ಅದು ಹರಡದಂತೆ ಪರಿವರ್ತಕದ ಕೆಳಗೆ ಜಲ್ಲಿ, ಮರಳನ್ನು ಹಾಕಿ. ಸುತ್ತಲೂ ಬೇಲಿ ನಿರ್ಮಿಸಿ ಸುರಕ್ಷತಾ ಕ್ರಮವನ್ನು ಅಳವಡಿಸಿ. ಪವರ್‌ಮ್ಯಾನ್‌ಗಳು ಎಲ್ಲೋ ಅವರ ಕೆಲಸದಲ್ಲಿರುತ್ತಾರೆ. ಹಾಗಾಗಿ ಬೆಂಕಿ ನಂದಿಸಲು ಅವರನ್ನೇ ಕಾಯಬೇಕು ಎಂದಾದರೆ ಅವರು ಇಲ್ಲಿ ಬರುವಾಗ ಎಲ್ಲಾ ಬೆಂಕಿಗೆ ಆಹುತಿಯಾಗಬಹುದು ಎಂದರು. ಆಗ ದಿನೇಶ್ ಕೆ. ಮಾತನಾಡಿ, ಇಂತಹ ಅವಘಡಗಳು ಸಂಭವಿಸಿದಾಗ ಪವರ್‌ಮ್ಯಾನ್‌ಗಳು ಸೇರಿದಂತೆ ಮೆಸ್ಕಾಂ ಸಿಬ್ಬಂದಿಗೆ ಲೈನ್ ಆಫ್ ಮಾಡುತ್ತಾರೆ. ಅದಕ್ಕೆ ನಾನು ಹಾಗೆ ಹೇಳಿದ್ದು, ನೀವು ವಿದ್ಯುತ್ ವಯರ್‌ಗಳನ್ನು ಮುಟ್ಟಲು ಹೋಗುವುದು. ಅದಕ್ಕೆ ನೀರು ಹಾಕಲು ಹೋಗುವುದು ಸರಿಯಲ್ಲ. ಅದು ಅಪಾಯಕ್ಕೆ ಕಾರಣವಾಗಬಹುದು ಎಂದರು. ಈ ಸಂದರ್ಭ ನೋಡಲ್ ಅಧಿಕಾರಿಯಾಗಿ ತಾರನಾಥ ಸಾಲ್ಯಾನ್ ಮಧ್ಯಪ್ರವೇಶಿಸಿ, ವಿದ್ಯುತ್ ಪರಿವರ್ತಕದಲ್ಲಿ ಯಾವ ಸಮಸ್ಯೆಯಿಂದ ಬೆಂಕಿ ಬೀಳುತ್ತದೆ ಅಂತ ನೋಡಿ ಮೊದಲು ಅದಕ್ಕೊಂದು ಪರಿಹಾರ ಕಂಡುಕೊಳ್ಳಿ ಎಂದು ಹೇಳಿ ಚರ್ಚೆಯನ್ನು ಮುಗಿಸಿದರು.


ಪೆರ್ನೆಯಲ್ಲಿ ಚರಂಡಿಗಳಲ್ಲಿ ಡ್ರೈನೇಜ್ ತುಂಬಿ ಹೋಗಿದ್ದು, ಅದನ್ನು ಗ್ರಾ.ಪಂ. ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿ ಬಂತು. ಆಗ ನೋಡಲ್ ಅಧಿಕಾರಿ ತಾರನಾಥ ಸಾಲ್ಯಾನ್, ಕೊಳಚೆ ನೀರನ್ನು ಹೊರಗಡೆ ಬಿಡಲು ಯಾರಿಗೂ ಅವಕಾಶ ಇಲ್ಲ. ಪ್ರತಿಯೋರ್ವರು ಇಂಗುಗುಂಡಿ ಮಾಡಲಿ. ಇದಕ್ಕೆ ವಿನಾಯಿತಿ ಕೊಡಬೇಡಿ. ಇಂಗುಗುಂಡಿ ಮಾಡದವರ ಪರವಾನಿಗೆಯನ್ನು ನವೀಕರಿಸಬೇಡಿ ಪಿಡಿಒಗೆ ತಿಳಿಸಿದರು.


ಕರುವೇಲು ಸರಕಾರಿ ಶಾಲೆಯಲ್ಲಿ 1ರಿಂದ ಎಂಟನೇ ತರಗತಿ ತನಕ ತರಗತಿಗಳು ಇವೆ. ಇದರ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದ ಕಾರಣ ಅದನ್ನು ತೆರವುಮಾಡಿ ವರ್ಷವಾಯಿತು. ಆದರೆ ಹೊಸ ಕೊಠಡಿ ನಿರ್ಮಾಣಕ್ಕೆ ಈಗಲೂ ಅನುದಾನ ಸಿಕ್ಕಿಲ್ಲ. ಆದ್ದರಿಂದ ಮಕ್ಕಳಿಗೆ ಕೊಠಡಿಯ ಸಮಸ್ಯೆ ಇದೆ. ಹೊರಗೆ ಕುಳಿತು ಪಾಠ ಕೇಳಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ತಿಳಿಸಿದರು. ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಅನುದಾನ ಬಂದಿಲ್ಲ ಎಂಬ ಉತ್ತರ ಆಗ ಅಧಿಕಾರಿಗಳಿಂದ ಬಂತು. ಸರಕಾರಿ ಶಾಲೆಗಳಲ್ಲಿ ಹಲವು ಕೊರತೆಗಳಿದ್ದು, ಇದರಿಂದ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಎಂದ ಗ್ರಾಮಸ್ಥರು, ಕೊಠಡಿ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ನಿರ್ಣಯ ಕೈಗೊಂಡು ಸಂಬಂಧಪಟ್ಟವರಿಗೆ ಕಳಿಸಿ ಎಂದರು. ಅದರಂತೆ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ಬೆಳೆ ವಿಮೆ ವ್ಯಾಪ್ತಿಗೆ ರಬ್ಬರ್ ಕೃಷಿಯನ್ನೂ ಸೇರಿಸಬೇಕೆಂಬ ಒತ್ತಾಯ ಈ ಸಂದರ್ಭ ಕೇಳಿ ಬಂತು.


ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಶಾರದಾ, ಭಾರತಿ, ಶ್ರೀಮತಿ ವಿಜಯ, ಮುತ್ತಪ್ಪ, ತನಿಯಪ್ಪ ಪೂಜಾರಿ, ಮುಹಮ್ಮದ್ ಫಾರೂಕ್, ಕೇಶವ ಸುಣ್ಣಾನ, ಸುಮತಿ, ಪ್ರಕಾಶ್ ನಾಯಕ್, ನವೀನ್ ಕುಮಾರ್ ಪದೆಬರಿ ಉಪಸ್ಥಿತರಿದ್ದರು. ದ.ಕ. ಜಿ.ಪಂ. ಎಂಜಿನಿಯರಿಂಗ್ ಬಂಟ್ವಾಳ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಾರನಾಥ ಸಾಲ್ಯಾನ್ ಪಿ. ನೋಡಲ್ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಗ್ರಾಮಸ್ಥರಾದ ಅಬ್ದುಲ್ಲಾ, ಕಮಲಾಕ್ಷ, ಗಿರಿಧರ ರೈ, ಶರೀಫ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪಿಡಿಒ ಸಂಜೀವ ನಾಯ್ಕ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ವಂದಿಸಿದರು.

LEAVE A REPLY

Please enter your comment!
Please enter your name here