ಪುಲ್ವಾಮಾ ದಾಳಿಯ ನೆಲೆಯಲ್ಲಿ ತನ್ನ ಹುಟ್ಟುಹಬ್ಬ ನಿರಾಕರಿಸಿದ ವಿದ್ಯಾರ್ಥಿನಿ

0

ದೇಶಪ್ರೇಮ ಮೆರೆದು ಮಾದರಿಯಾದ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ತನ್ವಿ


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿನಿ ತನ್ವಿ ವಿ. ತನ್ನ ದಿಟ್ಟ ನಿರ್ಧಾರದಿಂದಾಗಿ ಮಾದರಿ ಎನಿಸಿದ್ದಾಳೆ. ಫೆಬ್ರವರಿ 14 ಆಕೆಯ ಜನ್ಮದಿನ. ಆದರೆ ನಾಲ್ಕು ವರ್ಷದ ಹಿಂದೆ ಅದೇ ದಿನದಂದು ಪುಲ್ವಾಮಾ ದಾಳಿಯಲ್ಲಿ ದೇಶದ ವೀರಯೋಧರು ಮರಣಿಸಿದ್ದು ಈಕೆಯ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಭಾವನೆ ಆಕೆ ದೊಡ್ಡವಳಾದಂತೆ ಮತ್ತಷ್ಟು ಗಾಢವಾಗಿದೆ. ಹಾಗಾಗಿ ಫೆಬ್ರವರಿ 14ರಂದು ತನಗೆ ಯಾವುದೇ ಸಂಭ್ರಮ ಇಲ್ಲ ಎಂದು ಆಕೆ ನಿರ್ಧರಿಸಿದ್ದಾಳೆ.


ತಮ್ಮ ಹುಟ್ಟುಹಬ್ಬದ ದಿನದಂದು ಆಯಾ ಮಕ್ಕಳು ಸಮವಸ್ತ್ರದ ಹೊರತಾಗಿ ಬಣ್ಣದ ವಸ್ತ್ರ ಧರಿಸಿ ಶಾಲೆಗೆ ಬರಬಹುದೆಂಬ ನಿಯಮವನ್ನು ಸಂಸ್ಥೆ ರೂಪಿಸಿದೆ. ಅದರನ್ವಯ ಹುಟ್ಟುಹಬ್ಬದ ದಿನ ಆಯಾ ಮಕ್ಕಳು ಮಾತ್ರ ವರ್ಣಮಯ ವಸ್ತ್ರದೊಂದಿಗೆ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ ತನ್ವಿ ತನ್ನ ಹುಟ್ಟುಹಬ್ಬದಂದು ಸಮವಸ್ತ್ರದಲ್ಲೇ ಶಾಲೆಗೆ ಬಂದಿದ್ದಾಳೆ. ಈ ಬಗ್ಗೆ ಆಕೆಯಲ್ಲಿ ವಿಚಾರಿಸಿದಾಗ ಆಕೆಯ ಈ ನಿರ್ಧಾರ ಹೊರಬಿದ್ದಿದೆ. ಎಳೆಯ ಮಗುವಿನ ಬಾಯಿಯಲ್ಲಿ ದೇಶಪ್ರೇಮದ ನುಡಿಗಳನ್ನು ಕೇಳಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಬಾವುಕರಾಗಿದ್ದಾರೆ.


‘ದೇಶಕ್ಕಾಗಿ ನಮ್ಮ ಸೈನಿಕರು ತಮ್ಮ ಪ್ರಾಣಕೊಟ್ಟಿದ್ದಾರೆ. ಹಾಗಾಗಿ ಜನ್ಮದಿನದ ಆಚರಣೆ ಮಾಡಿಕೊಳ್ಳುವುದಿಲ್ಲ. ಮನೆಯಲ್ಲಿ ನನ್ನ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ. ನಿನಗೆ ಹೇಗೆ ತೋಚುತ್ತದೋ ಹಾಗೆ ಮಾಡು ಎಂದು ಹೇಳಿದ್ದಾರೆ’ ಎನ್ನುವುದು ತನ್ವಿ ಮಾತು. ಈಕೆ ಪುತ್ತೂರಿನ ಕೃಷ್ಣನಗರದ ವೆಂಕಟೇಶ್ ನಾಯಕ್ ಹಾಗೂ ಲವೀನಾ ಕೆ.ಬಿ ದಂಪತಿ ಪುತ್ರಿ
‘ಮಕ್ಕಳು ತಮ್ಮ ಹುಟ್ಟುಹಬ್ಬವನ್ನು ವೈಭವದಿಂದ ಆಚರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ತನ್ವಿ ಅದಕ್ಕೆ ವಿರುದ್ಧವಾಗಿ ದೇಶದ ಬಗೆಗೆ ಆಲೋಚಿಸಿದ್ದಾಳೆ. ಈ ಮಗುವಿಗೆ ಇಂತಹ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಮನೆಯ ಮತ್ತು ಶಾಲೆಯ ವಾತಾವರಣ ಕಾರಣವಾಗಿದೆ. ನಮ್ಮ ಸಂಸ್ಥೆ ಇಂತಹ ಮಕ್ಕಳನ್ನು ರೂಪಿಸುತ್ತಿರುವ ಬಗೆಗೆ ಹೆಮ್ಮೆ ಇದೆ’

ಸುಬ್ರಹ್ಮಣ್ಯ ನಟ್ಟೋಜ, ಕಾರ್ಯದರ್ಶಿಗಳು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು, ಪುತ್ತೂರು

LEAVE A REPLY

Please enter your comment!
Please enter your name here