ಆರ್ಯಾಪು, ಕುಟ್ರುಪ್ಪಾಡಿ ಗ್ರಾ.ಪಂಗೆ ಉಪಚುನಾವಣೆ: ಆರ್ಯಾಪುನಲ್ಲಿ 5, ಕುಟ್ರುಪ್ಪಾಡಿಯಲ್ಲಿ 4 ನಾಮಪತ್ರ ಸಲ್ಲಿಕೆ

0

ಪುತ್ತೂರು: ಪುತ್ತೂರು ತಾಲೂಕಿನ ಆರ್ಯಾಪು ಹಾಗೂ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ.ನ ಸದಸ್ಯರಿಬ್ಬರ ಮರಣದಿಂದಾಗಿ ತೆರವಾದ ಸದಸ್ಯ ಸ್ಥಾನಗಳಿಗೆ ಹಾಗೂ ಬಂಟ್ವಾಳದ ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂ. 2 ಸ್ಥಾನಗಳಿಗೆ ಫೆ.25ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿ ನಾಮಪತ್ರ ಸಲ್ಲಿಸಲು ಫೆ.14 ಅಂತಿಮ ದಿನವಾಗಿದ್ದು ಆರ್ಯಾಪು ಗ್ರಾ.ಪಂನಲ್ಲಿ 5 ಹಾಗೂ ಕುಟ್ರುಪ್ಪಾಡಿ ಗ್ರಾ.ಪಂನಲ್ಲಿ 4 ನಾಮಪತ್ರ ಸಲ್ಲಿಕೆಯಾಗಿದೆ. ಬಂಟ್ವಾಳ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್‌ನ ಎರಡು ಸ್ಥಾನಗಳಿಗೆ 4 ನಾಮಪತ್ರಗಳು ಸಲ್ಲಿಕೆಯಾಗಿವೆ.


ಆರ್ಯಾಪು ಗ್ರಾ.ಪಂನ 4ನೇ ವಾರ್ಡ್‌ನ ಸಾಮಾನ್ಯ ಸ್ಥಾನಕ್ಕೆ ಯತೀಶ್ ಡಿ., ಶಶಿಧರ್ ಗೌಡ ಮರಿಕೆ, ಆರ್ಯಾಪು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ, ಮಾಜಿ ಸದಸ್ಯರಾದ ಸದಾನಂದ ಶೆಟ್ಟಿ ಕೂರೇಲು ಹಾಗೂ ವಿಶ್ವನಾಥ ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಕುಟ್ರುಪ್ಪಾಡಿಯ ಹಿಂದುಳಿದ ವರ್ಗ `ಎ’ಗೆ ಮೀಸಲಾದ ಸ್ಥಾನಕ್ಕೆ ಕರುಣಾಕರ ಮತ್ರಾಡಿ, ಸುಧಾಕರ ಬಿ. ಬಾರಿಕೆ, ಸುದೇಶ್ ಬೀರುಕ್ಕು ಹಾಗೂ ಚಂದ್ರಹಾಸ್ ಗೋವಿಂದಕಟ್ಟೆ ನಾಮಪತ್ರ ಸಲ್ಲಿಸಿದ್ದಾರೆ.


ಅನಂತಾಡಿ,ನೆಟ್ಲಮುಡ್ನೂರು ನಾಲ್ಕು ನಾಮಪತ್ರ:

ವಿಟ್ಲ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಾಡಿ ಹಾಗೂ ನೆಟ್ಲಮುಡ್ನೂರು ಗ್ರಾಮ ಪಂಚಾಯತ್‌ಗಳಲ್ಲಿ ತೆರವಾಗಿರುವ ಎರಡು ಸ್ಥಾನಗಳಿಗೆ ನಾಲ್ಕು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಅನಂತಾಡಿ ಗ್ರಾಮ ಪಂಚಾಯತ್‌ನಿಂದ ಗೀತಾ ಚಂದ್ರಶೇಖರ ಹಾಗೂ ಶಶಿಕಲಾ ಹರಿಣಾಕ್ಷ ಪೂಜಾರಿರವರು ನಾಮಪತ್ರ ಸಲ್ಲಿಸಿದ್ದಾರೆ.ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್‌ನಿಂದ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿ ಹಾಗೂ ಹರಿಣಾಕ್ಷಿ ಹರೀಶ್ ಪೂಜಾರಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅನಂತಾಡಿ ಗ್ರಾಮ ಪಂಚಾಯತ್ ಸದಸ್ಯೆ ಮಮಿತಾರವರು ಸರಕಾರಿ ಉದ್ಯೋಗಕ್ಕಾಗಿ ತೆರಳಿದ ಕಾರಣಕ್ಕಾಗಿ ಇವರ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ನೆಟ್ಲಮುಡ್ನೂರು ಗ್ರಾಮಪಂಚಾಯತ್‌ನಲ್ಲಿ ಸದಸ್ಯರಾಗಿದ್ದ ರೇಖಾರವರು ಅಕಾಲಿಕವಾಗಿ ಮರಣ ಹೊಂದಿದ ಕಾರಣಕ್ಕಾಗಿ ಇಲ್ಲಿ ಉಪಚುನಾವಣೆ ನಡೆಯಲಿದೆ.ಈ ಎರಡೂ ಸ್ಥಾನಗಳು ಹಿಂದುಳಿದ ವರ್ಗ ಎ ಮಹಿಳೆ ಮೀಸಲಾಗಿದೆ.


ಇಂದು (ಫೆ.15) ನಾಮಪತ್ರ ಪರಿಶೀಲನೆ

ಫೆ.15ರಂದು ನಾಮಪತ್ರಗಳ ಪರಿಶೀಲನೆ ನಡದು ಫೆ.17ರಂದು ಅಭ್ಯರ್ಥಿಗಳು ಉಮೇದುವಾರಿಕೆ ಹಿಂತೆಗೆದುಕೊಳ್ಳುವ ಕೊನೆ ದಿನವಾಗಿರುತ್ತದೆ. ಎರಡೂ ಗ್ರಾ.ಪಂಗಳಲ್ಲೂ ಫೆ. 25ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನವು ಆಯಾ ಪಂಚಾಯತ್ ಕಚೇರಿಯಲ್ಲಿಯೇ ನಡೆಯಲಿದೆ. ಆವಶ್ಯವಿದ್ದರೆ ಫೆ.27 ರಂದು ಮರು ಮತದಾನ ನಡೆದು ಫೆ.28ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.

LEAVE A REPLY

Please enter your comment!
Please enter your name here