ಪುತ್ತೂರು:ಫೋರ್ಡ್ ಕಾರೊಂದು ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ತೋಟಕ್ಕೆ ಬಿದ್ದ ಅವಘಡದಲ್ಲಿ ಕಾರಲ್ಲಿದ್ದ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಮೃತಪಟ್ಟು ಇತರ ಮೂವರು ಗಾಯಗೊಂಡಿರುವ ಘಟನೆ ಫೆ.14ರಂದು ರಾತ್ರಿ ನಡೆದಿದೆ.
ನಿವೃತ್ತ ಮುಖ್ಯಶಿಕ್ಷಕ ನಿಡ್ಪಳ್ಳಿ ಗ್ರಾಮದ ಮುಂಡೂರು ದಿ.ಶ್ರೀಧರ್ ಭಟ್ ಅವರ ಮಗ, ನಿಡ್ಪಳ್ಳಿ ಗ್ರಾಮ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಮುರಳೀಕೃಷ್ಣ ಭಟ್(38ವ.)ಮೃತಪಟ್ಟವರು.ಕಾರು ಚಾಲಕ ಇರ್ದೆ ಗ್ರಾಮದ ದೂಮಡ್ಕ ಘಾಟೆ ಜಯರಾಮ ಭಟ್ರವರ ಪುತ್ರ ನವನೀತ್, ಕಾರಲ್ಲಿದ್ದ ಬೆಟ್ಟಂಪಾಡಿ ಗ್ರಾಮದ ಗುಂಡ್ಯಡ್ಕ ಗೋಪಾಲಕೃಷ್ಣರವರ ಮಗ ದಿಲೀಪ್ ಮತ್ತು ಇರ್ದೆ ಕಟೀಲ್ತಡ್ಕ ನಿವಾಸಿ, ಗುತ್ತಿಗೆದಾರ ಅಪ್ಪಣ್ಣ ನಾಯ್ಕ್ರವರ ಪುತ್ರ ಶಶಿ ಗಾಯಗೊಂಡಿದ್ದಾರೆ.ಈ ಪೈಕಿ ನವನೀತ್ ಮತ್ತು ದಿಲೀಪ್ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಪುತ್ತೂರುನಿಂದ ಬೆಟ್ಟಂಪಾಡಿ ಕಡೆಗೆ ಹೋಗುತ್ತಿದ್ದ ಫೋರ್ಡ್ ಫಿಗೋ ಕಾರು (ಕೆ.ಎ.೨೧-ಪಿ.೫೦೪೯) ಪುತ್ತೂರು ಪಾಣಾಜೆ ರಸ್ತೆಯಲ್ಲಿ ಸಂಟ್ಯಾರ್ ಸಮೀಪದ ಬಳಕ್ಕ ಎಂಬಲ್ಲಿ ರಸ್ತೆ ಬದಿಯ ಎರಡು ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ರಸ್ತೆ ಬದಿಯಲ್ಲಿರುವ ನಿವೃತ್ತ ಎಸ್.ಐ.ದೇವೋಜಿ ರಾವ್ ಅವರ ತೋಟಕ್ಕೆ ಬಿದ್ದಿದೆ.ಕಾರಲ್ಲಿದ್ದ ನಾಲ್ವರೂ ಪುತ್ತೂರು ಹೋಗಿದ್ದವರು ರಾತ್ರಿ ಹಿಂತಿರುಗಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.ಚಾಲಕ ನವನೀತ್ ಜೊತೆಗೆ ಮುರಳೀಕೃಷ್ಣ ಭಟ್ ಅವರು ಎದುರು ಸೀಟಿನಲ್ಲಿ ಕುಳಿತುಕೊಂಡಿದ್ದರೆ, ಇತರ ಇಬ್ಬರು ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು.ಅವಿವಾಹಿತರಾಗಿದ್ದ ಮೃತ ಮುರಳಿ ಭಟ್ ಅವರು ಪಾಣಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾಗಿರುವ ಸಹೋದರ ಕೃಷ್ಣಕುಮಾರ್ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್,ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಸಹಿತ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.