ಪುತ್ತೂರು: ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14 ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ ರೂ.5 ಲಕ್ಷಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2021-22ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.
ಸುದ್ದಿ ಜನಾಂದೋಲನ ಟ್ರಸ್ಟ್ ಹಮ್ಮಿಕೊಂಡಿದ್ದ ಲಂಚ, ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಪ್ರೋತ್ಸಾಹ ನೀಡಿದ್ದ ಒಳಮೊಗ್ರು ಗ್ರಾಮ ಪಂಚಾಯತ್ ತಮ್ಮ ಸಾಮಾನ್ಯ ಸಭೆಯಲ್ಲಿ ಲಂಚ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ನಿರ್ಣಯ ಕೈಗೊಂಡಿತ್ತು. ಆ ಮೂಲಕ ತಾಲೂಕಿನಲ್ಲೇ ಹೊಸ ಸಂಚಲನ ಮೂಡಿಸಿತ್ತು. ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಸ್ವಚ್ಛತೆಗೆ ಸಂಬಂಧಿಸಿದಂತೆ ಸ್ಲೋಗನ್ ಬರಹ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಗ್ರಾಪಂ ಪ್ರಥಮ ಬಹುಮಾನ ಪಡೆದುಕೊಂಡಿತ್ತು. ಇದಲ್ಲದೆ ಸ್ವಚ್ಛತೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಾಣವಾಗಿದ್ದು ಒಣ ಕಸ ಸಂಗ್ರಹ ಕಾರ್ಯ ನಡೆಯುತ್ತಿದೆ. ಗ್ರಾಮ ಪಂಚಾಯತ್‌ಗೆ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು ಸದ್ಯದಲ್ಲೇ ಉದ್ಘಾಟನೆ ನಡೆಯಲಿದೆ. ಇದೀಗ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು ಗ್ರಾಮಸ್ಥರಲ್ಲಿ ಸಂಭ್ರಮ ತಂದಿದೆ.
‘ ಗ್ರಾಪಂ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಸಹಕಾರದಿಂದ ನಮ್ಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಅಗತ್ಯ. ಗ್ರಾಮಸ್ಥರ ಸಹಕಾರವಿಲ್ಲದೆ ಯಾವುದೂ ಸಾಧ್ಯವಿಲ್ಲ. ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇವೆ.’
ಅವಿನಾಶ್ ಬಿ.ಆರ್ ಅಭಿವೃದ್ಧಿ ಅಧಿಕಾರಿ, ಒಳಮೊಗ್ರು ಗ್ರಾಪಂ
‘ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತಿದೆ. ನಮ್ಮ ಪಂಚಾಯತ್ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ. ಗ್ರಾಮಸ್ಥರಿಗೆ ಹಾಗೂ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುತ್ತೇವೆ.’
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು, ಒಳಮೊಗ್ರು ಗ್ರಾಪಂ