ನೆಲ್ಯಾಡಿ: ಶಿರಾಡಿ ಗ್ರಾ.ಪಂ.ನಲ್ಲಿ ಪಿಡಿಒ ಆಗಿದ್ದ ವೇಳೆ ಪಿ.ವೆಂಕಟೇಶ್ ಅವರನ್ನು ಅಮಾನತುಗೊಳಿಸಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ಅವರು 2022ರ ಜೂ.7ರಂದು ನೀಡಿದ್ದ ಆದೇಶ ವಜಾಗೊಳಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ(ಕೆಎಟಿ) ಅಂತಿಮ ತೀರ್ಪು ನೀಡಿದೆ.
ಪ್ರಸ್ತುತ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ.ವೆಂಕಟೇಶ್ ಅವರು ಶಿರಾಡಿ ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದ ವೇಳೆ ಗ್ರಾಮ ಪಂಚಾಯಿತಿ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ, ಶಿಷ್ಟಾಚಾರ ಪಾಲಿಸದಿರುವುದು ಮತ್ತು ಕರ್ತವ್ಯ ಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ಅವರು 2022ರ ಜೂ.7ರಂದು ಆದೇಶ ನೀಡಿದ್ದರು. ಇದನ್ನು ಪ್ರಶ್ನಿಸಿ ಪಿ.ವೆಂಕಟೇಶ್ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಕೆಎಟಿ ಅಮಾನತು ಆದೇಶಕ್ಕೆ ಮಧ್ಯಂತರ ತಡೆ ನೀಡಿ ಶಿರಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾಗಿ ಮುಂದುವರಿಯಲು ವೆಂಕಟೇಶ್ ಅವರಿಗೆ ಅನುಮತಿ ನೀಡಿ ಜು.4ರಂದು ಮಧ್ಯಂತರ ಆದೇಶ ನೀಡಿತ್ತು. ಅದರಂತೆ ಡಾ.ಕುಮಾರ್ ಅವರು ಶಿರಾಡಿ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯಾಗಿ ಮುಂದುವರಿಯಲು ಪಿ.ವೆಂಕಟೇಶ್ ಅವರಿಗೆ ಅನುಮತಿ ನೀಡಿ ಜು.16ರಂದು ಆದೇಶಿಸಿದ್ದರು. ಈ ಆದೇಶದಂತೆ ಪಿ.ವೆಂಕಟೇಶ್ ಅವರು ಶಿರಾಡಿ ಗ್ರಾ.ಪಂ.ನಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆ ಬಳಿಕ ಅವರು ಬಂಟ್ವಾಳ ತಾಲೂಕಿಗೆ ವರ್ಗಾವಣೆಗೊಂಡಿದ್ದರು. ಇದೀಗ ಕೆಎಟಿಯು ಅಂತಿಮ ತೀರ್ಪು ನೀಡಿದ್ದು, ಡಾ.ಕುಮಾರ್ ಅವರು ನೀಡಿದ್ದ ಅಮಾನತು ಆದೇಶ ವಜಾಗೊಳಿಸಿದೆ.
ರಾಜ್ಯ ಪ್ರಶಸ್ತಿ ಬಂದಿತ್ತು
ಪಿ.ವೆಂಕಟೇಶ್ ಅವರು ಶಿರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ವೇಳೆ ಗೋಳಿತ್ತೊಟ್ಟು ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಶಿರಾಡಿ ಗ್ರಾಮ ಪಂಚಾಯತ್ನಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಅತ್ಯಧಿಕ ಮಾನವ ದಿನ ಸೃಜನೆ ಹಾಗೂ ದ.ಕ.ಜಿಲ್ಲೆಯಲ್ಲಿ ಗುರಿ ಮೀರಿದ ಸಾಧನೆಗಾಗಿ ಪಿ.ವೆಂಕಟೇಶ್ ಅವರು ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದರು.