ಶೌಚಾಲಯಕ್ಕೆಂದು ಹೋಗಿದ್ದವರು ನಾಪತ್ತೆ
ತಲಶ್ಚೇರಿ ಧರ್ಮಡಮ್ ಹಳಿಯಲ್ಲಿ ಮೃತದೇಹ ಪತ್ತೆ
ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿರುವ ಶಂಕೆ
ವಕೀಲರ ಸಂಘದಲ್ಲಿ ಶ್ರದ್ಧಾಂಜಲಿ ಸಭೆ
ಪುತ್ತೂರು:ಪುತ್ತೂರಿನ ಹಿರಿಯ ನ್ಯಾಯವಾದಿ, ಎಪಿಎಂಸಿ ರಸ್ತೆ ನೆಲ್ಲಿಕಟ್ಟೆ ನಿವಾಸಿಯಾಗಿದ್ದ ಕೆ.ಪಿ. ಜೇಮ್ಸ್(68ವ)ಎಂಬವರು ತಿರುವನಂತಪುರ ಕಡೆ ಚಲಿಸುತ್ತಿದ್ದ ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿ ಫೆ.15ರ ತಡ ರಾತ್ರಿ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಕೆ.ಪಿ.ಜೇಮ್ಸ್ ಮತ್ತು ಅವರ ಪತ್ನಿ ಮೇರಿ ಜೇಮ್ಸ್ ಫೆ.೧೫ರಂದು ಸಂಜೆ ಮಂಗಳೂರಿನಿಂದ ಚೆಂಗಣ್ಣೂರು ಬಳಿಯ ಧಾರ್ಮಿಕ ಕ್ಷೇತ್ರವಾದ ಮಾರಾಮಣ್ ಕನ್ವೆನ್ಶನ್ಗೆ ಮಲಬಾರ್ ಎಕ್ಸ್ಪ್ರೆಸ್ ರೈಲಿನಲ್ಲಿ ಹವಾನಿಯಂತ್ರಿತ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು.ರಾತ್ರಿ ವೇಳೆ ಕೆ.ಪಿ.ಜೇಮ್ಸ್ ಅವರು ಶೌಚಾಲಯಕ್ಕೆಂದು ಹೋದವರು ಹೃದಯಾಘಾತಕ್ಕೊಳಗಾಗಿ ರೈಲಿನಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಕಣ್ಣೂರು ಮತ್ತು ಕ್ಯಾಲಿಕಟ್ ಮಧ್ಯೆ ಅವರು ಕುಸಿದು ಬಿದ್ದು ರೈಲಿನಿಂದ ಹೊರ ಬಿದ್ದಿದ್ದರೆನ್ನಲಾಗಿದೆ.
ರೈಲಿನೊಳಗೆ ಶೌಚಾಲಯಕ್ಕೆಂದು ಹೋಗಿದ್ದ ಪತಿ ಇನ್ನೂ ಬಂದಿಲ್ಲ ಎಂದು ಮೇರಿ ಜೇಮ್ಸ್ ಅವರು ನೋಡಲೆಂದು ಹೋದಾಗ ಗಂಡ ನಾಪತ್ತೆಯಾಗಿರುವುದು ಗಮನಕ್ಕೆ ಬಂತು.ತಕ್ಷಣ ಅವರು ಕಿರುಚಾಡಿದರು.ಈ ವೇಳೆ, ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದಿದ್ದಾರೆ ಎನ್ನುವುದು ರೈಲಿನಲ್ಲಿದ್ದ ಇತರರ ಗಮನಕ್ಕೆ ಬಂದಿದೆ.ಮೇರಿ ಜೇಮ್ಸ್ ಅವರು ಪತಿ ರೈಲಿನಲ್ಲಿ ನಾಪತ್ತೆಯಾಗಿದ್ದ ಘಟನೆ ಕುರಿತು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದರು.
ಮೃತದೇಹ ಪತ್ತೆ:
ಮತ್ತೊಂದೆಡೆ ತಲೆಶ್ಚೇರಿ ಬಳಿಯ ಧರ್ಮಡಮ್ ಎಂಬಲ್ಲಿ ರೈಲ್ವೇ ಹಳಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಬಿದ್ದಿರುವುದನ್ನು ಪತ್ತೆ ಮಾಡಿದ್ದ ರೈಲ್ವೇ ಪೊಲೀಸರು ಮೃತದೇಹವನ್ನು ತಲೆಶ್ಚೇರಿಯ ಆಸ್ಪತ್ರೆಯ ಶವಾಗಾರ ಕೊಠಡಿಯಲ್ಲಿ ಇರಿಸಿದ್ದರು.ಕೆ.ಪಿ.ಜೇಮ್ಸ್ ಅವರ ಪತ್ನಿ ಮೇರಿ ಜೇಮ್ಸ್ ಅವರು ತಲೆಶ್ಚೇರಿಯಲ್ಲಿ ರೈಲ್ವೇ ಪೊಲೀಸರಿಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರು ತಲಶ್ಚೇರಿಯಲ್ಲಿ ಪತ್ತೆಯಾಗಿದ್ದ ಮೃತ ದೇಹವನ್ನು ಪರಿಶೀಲಿಸಿದಾಗ ಮೃತ ದೇಹದ ಜೊತೆಯಲ್ಲಿದ್ದ ವಕೀಲರ ಸದಸ್ಯತ್ವದ ಗುರುತುಚೀಟಿ ಮತ್ತು ಭಾವಚಿತ್ರದ ಆಧಾರದಲ್ಲಿ ಮೃತದೇಹ ಕೆ.ಪಿ.ಜೇಮ್ಸ್ ಅವರದ್ದು ಎಂದು ಖಚಿತಪಡಿಸಿಕೊಂಡರು.
ಸಹಕರಿಸಿದ ಲಾವತ್ತಡ್ಕದ ಅಬ್ರಾಹಂ ತೋಮಸ್:
ಕೆ.ಪಿ.ಜೇಮ್ಸ್ ದಂಪತಿ ಪ್ರಯಾಣಿಸುತ್ತಿದ್ದ ರೈಲಿನಲ್ಲಿಯೇ ಲಾವತ್ತಡ್ಕದ ಅಬ್ರಾಹಂ ತೋಮಸ್ ಎಂಬವರು ಕೂಡಾ ಇದ್ದರು.ರಾತ್ರಿ ವೇಳೆ ಮಹಿಳೆಯೊಬ್ಬರು ಕಿರುಚಾಡಿದ್ದನ್ನು ಗಮನಿಸಿದ್ದ ಅವರು ವಿಚಾರಿಸಿದ ವೇಳೆ ಮಹಿಳೆ ಪುತ್ತೂರು ಮೂಲದವರೆಂದು ತಿಳಿದು ಬಳಿಕ ಕ್ಯಾಲಿಕಟ್ನಲ್ಲಿ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿ ಕೆ.ಪಿ.ಜೇಮ್ಸ್ ಅವರ ಪತ್ನಿ ಮೇರಿ ಜೇಮ್ಸ್ ಅವರನ್ನು ರೈಲಿನಿಂದ ಇಳಿಸಿ ಅವರ ಸಂಬಂಧಿಕರ ಮನೆಗೆ ಕಳುಹಿಸಿದ್ದರು.ಬಳಿಕ ಧರ್ಮಡಮ್ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದ ಮೃತ ವ್ಯಕ್ತಿಯ ಶರ್ಟ್ನ ಕಿಸೆಯಲ್ಲಿದ್ದ ಡೈರಿಯಲ್ಲಿ ಕೆ.ಪಿ.ಜೇಮ್ಸ್ ಎಂಬ ಹೆಸರಿರುವ ಕುರಿತು ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದರು.ಪತಿ ರೈಲಿನಲ್ಲಿ ನಾಪತ್ತೆಯಾಗಿರುವ ಕುರಿತು ಮೇರಿ ಜೇಮ್ಸ್ ಅವರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರಿಂದ ರೈಲ್ವೇ ಪೊಲೀಸರು ಮೃತದೇಹವನ್ನು ಪರಿಶೀಲಿಸಿ ಅದು ಕೆ.ಪಿ.ಜೇಮ್ಸ್ ಅವರದ್ದು ಎಂದು ಖಚಿತಪಡಿಸಿದ್ದಾರೆ.ಕೆ.ಪಿ.ಜೇಮ್ಸ್ ಅವರ ಸಂಬಂಧಿಕರು ಕೂಡಾ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ. ರೈಲಿನಲ್ಲಿದ್ದ ಲಾವತ್ತಡ್ಕದ ಅಬ್ರಾಹಂ ತೋಮಸ್ ಅವರು ತನ್ನ ಸಹೋದರ ಸಿಬಿ ವರ್ಗೀಸ್ ಲಾವತ್ತಡ್ಕರವರಿಗೆ ಘಟನೆ ಕುರಿತು ಮಾಹಿತಿ ತಿಳಿಸಿದ್ದರು.ಅವರು ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರಿಗೆ ಮಾಹಿತಿ ನೀಡಿದ್ದರು.
ಪುತ್ತೂರಿನಲ್ಲಿ ಕಚೇರಿ ಹೊಂದಿದ್ದ ಜೇಮ್ಸ್:
ಕೆ.ಪಿ.ಜೇಮ್ಸ್ ಅವರು ೧೯೮೪ರಲ್ಲಿ ಹಿರಿಯ ನ್ಯಾಯವಾದಿ ಯು.ಪಿ.ಶಿವರಾಮ ಅವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಸೇರಿದ್ದರು.ಸುಮಾರು ೧೫ ವರ್ಷಗಳ ಕಾಲ ಯು.ಪಿ.ಶಿವರಾಮ ಅವರ ಕಚೇರಿಯಲ್ಲಿದ್ದ ಜೇಮ್ಸ್ ಅವರು ೧೯೯೬ರಲ್ಲಿ ಪುತ್ತೂರು ಕೋರ್ಟ್ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್ನಲ್ಲಿ ಸ್ವಂತ ಕಚೇರಿ ಆರಂಭಿಸಿದ್ದರು.ಇದರ ಜೊತೆಗೆ ಬೋಳಂತಕೋಡಿ ಈಶ್ವರ ಭಟ್ ಅವರ ನಂತರದಿಂದ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ವಾಣಿಜ್ಯ ಕಾನೂನು ಉಪನ್ಯಾಸಕರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ್ದರು.ಮೃತರು ಪತ್ನಿ ಮೇರಿ ಜೇಮ್ಸ್, ಪುತ್ರಿಯರಾದ ನಿರ್ಮಲ ಜೇಮ್ಸ್, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ವೈದ್ಯೆಯರಾಗಿರುವ ಡಾ.ನಿಕಿತಾ ಜೇಮ್ಸ್, ಡಾ.ನಿಯಾ ಜೇಮ್ಸ್, ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡುತ್ತಿರುವ ನೇಹಾ ಜೇಮ್ಸ್ ಅವರನ್ನು ಅಗಲಿದ್ದಾರೆ.
ವಕೀಲರ ಸಂಘದಿಂದ ಶ್ರದ್ದಾಂಜಲಿ:
ಹಿರಿಯ ನ್ಯಾಯವಾದಿ ಕೆ.ಪಿ.ಜೇಮ್ಸ್ ಅವರು ನಿಧನದ ಹಿನ್ನೆಲೆಯಲ್ಲಿ ಪುತ್ತೂರು ವಕೀಲರ ಸಂಘದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನ್ಯಾಯಾಲಯದಲ್ಲಿರುವ ಪರಾಶರ ಹಾಲ್ನಲ್ಲಿ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಅವರ ಅಧ್ಯಕ್ಷತೆಯಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಯಿತು.ಹಿರಿಯ ವಕೀಲರಾದ ರಾಮಮೋಹನ್ ರಾವ್, ಬಾಬು ಗೌಡ, ಬೆಟ್ಟ ಈಶ್ವರ ಭಟ್, ಅರಂತನಡ್ಕ ಬಾಲಕೃಷ್ಣ ರೈ, ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗೌಡ ಆರ್.ಪಿ ನುಡಿನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಲಯಾದ ಪ್ರಿಯಾ ಜೋವಲೆಕರ್, ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್ಎಫ್ಸಿ ಅರ್ಚನಾ, ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್ಎಫ್ಸಿ ಶಿವಣ್ಣ ಹೆಚ್.ಆರ್.ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ, ಉಪಾಧ್ಯಕ್ಷ ಕೃಷ್ಣಪ್ಪ ಗೌಡ ಕಕ್ವೆ, ಕೋಶಾಧಿಕಾರಿ ಶ್ಯಾಮಪ್ರಸಾದ್ ಕೈಲಾರ್, ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ಸಹಿತ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇಂದು ಅಂತ್ಯಕ್ರೀಯೆ
ಕೆ.ಪಿ.ಜೇಮ್ಸ್ ಅವರ ಮೃತ ದೇಹವನ್ನು ಫೆ.೧೬ರಂದು ರಾತ್ರಿ ವೇಳೆ ಪುತ್ತೂರು ಎಪಿಎಂಸಿ ರಸ್ತೆ ನೆಲ್ಲಿಕಟ್ಟೆಯಲ್ಲಿರುವ ಅವರ ಮನೆಗೆ ತಂದು ಅಲ್ಲಿ ಗೌರವ ಕಾರ್ಯಕ್ರಮ ನಡೆಸಿ ಬಳಿಕ ಮೂಲ ಊರಾಗಿರುವ ಉದನೆಗೆ ಕೊಂಡೊಯ್ಯಲಾಯಿತು.ಫೆ.೧೭ರಂದು ಸಂಜೆ ಉದನೆ ಮನೆಯಿಂದ ಅಂತ್ಯ ಸಂಸ್ಕಾರ ಮೆರವಣಿಗೆ ನಡೆಯಲಿದ್ದು ಉದನೆ ಸಂತ ಥೋಮಸ್ ಚರ್ಚ್ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.