ಪುತ್ತೂರು: ರಸ್ತೆ ದುರಸ್ಥಿ ಮತ್ತು ಅಗಲೀಕರಣಕ್ಕೆ ಸಂಬಂಧಿಸಿ ಯಾರೂ ಕೂಡಾ ಸ್ಪಂದಿಸಿಲ್ಲ ಎಂದು ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ನೆಲ್ಲಿಗುಂಡಿ ರಸ್ತೆಯ ಫಲಾನುಭವಿಗಳ ಬೇಡಿಕೆ ಈಡೇರಿಸವ ನಿಟ್ಟಿನಲ್ಲಿ ರಸ್ತೆ ಅಗಲೀಕರಣಕ್ಕೆ ಭೂ ಒತ್ತುವರಿ ಮಾಡಲು ಈಗಾಗಲೇ ಜಿಲ್ಲಾಧಿಕಾರಿಯಿಂದ ಸರಕಾರಕ್ಕೆ ಪ್ರಸ್ತಾಪ ಹೋಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ನಗರಸಭೆ ಆಡಳಿತ ಅಧಿಕಾರ ಸ್ವೀಕರಿಸುವ ಮುಂದೆಯೇ ಆ ರಸ್ತೆ ಡಾಮರೀಕರಣಕ್ಕೆ ಟೆಂಡರ್ ಆಗಿತ್ತು. ಆದರೆ ರಸ್ತೆಗೆ ಸಂಬಂಧಿಸಿ ಇಬ್ಬರು ಅಕ್ಷೇಪ ಸಲ್ಲಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ನಗರಸಭೆ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ರಸ್ತೆ ಅಗಲೀಕರಣಕ್ಕೆ ಭೂ ಒತ್ತುವರಿಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. ಈ ಕುರಿತು ಜಿಲ್ಲಾಧಿಕಾರಿ ಆದೇಶದಂತೆ ಜಂಟಿ ಸರ್ವೆಯೂ ನಡೆದಿತ್ತು. ಅದಾದ ಬಳಿಕ ಹಿಂದಿದ್ದ ಡಾಮರೀಕರಣಕ್ಕೆ ಮರು ಡಾಮರೀಕಣ ಮಾಡಲೆಂದು ಮತ್ತೆ ಟೆಂಡರ್ ಆಗಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಮತ್ತೆ ಸ್ಥಳೀಯರಿಬ್ಬರಿಂದ ಆಕ್ಷೇಪ ಮತ್ತು ಅವರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮತ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಈ ನಡುವೆ ನಗರಸಭೆ ಭೂ ಒತ್ತುವರಿಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪ್ರಸ್ತಾವನೆಯನ್ನು ಜ.18ಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ ಸರಕಾರಕ್ಕೆ ಸಲ್ಲಿಸಿದ್ದಾರೆ. ಮುಂದೆ ಅತಿ ಶೀಘ್ರದಲ್ಲಿ ಭೂ ಒತ್ತುವರಿ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಭೂ ಒತ್ತುವರಿ ಸರಕಾರದ ಹಂತದಲ್ಲಿದೆ
ನಮ್ಮ ಆಡಳಿತ ಅಧಿಕಾರಕ್ಕೆ ಬಂದಿರುವ ಮುಂದೆ ನೆಲ್ಲಿಗುಂಡಿ ರಸ್ತೆ ಡಾಮೀಕರಣಕ್ಕೆ ಕಿಟ್ಟಣ್ಣ ಗೌಡ ಮತ್ತು ಪುರಂದರ ಗೌಡ ಎಂಬವರು ಆಕ್ಷೇಪ ಸಲ್ಲಿಸಿದ್ದರು. ನಮ್ಮ ಆಡಳಿತ ಬಂದ ಬಳಿಕ ನೆಲ್ಲಿಗುಂಡಿ ರಸ್ತೆಯಾಗಿ ಸುಮಾರು 30 ಮನೆಗಳಿಗೆ ರಸ್ತೆ, ದಫನ ಭೂಮಿ, ಸುಮಾರು 6 ಎಕ್ರೆ ಸರಕಾರಿ ಸ್ಥಳಕ್ಕೆ ಹೋಗಲು ರಸ್ತೆಗಾಗಿ ಭೂ ಒತ್ತುವರಿಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿದ್ದೆವು. ಭೂ ಒತ್ತುವರಿಗೆ ಪ್ರತಿ ವರ್ಷ ಬಜೆಟ್‌ನಲ್ಲಿ ಹಣವೂ ಇರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಯವರ ಪ್ರಶ್ನೆಗೆ ಮಾಹಿತಿಯನ್ನೂ ನೀಡಿದ್ದೆವೆ. ಈ ನಿಟ್ಟಿನಲ್ಲಿ ಅವರು ಅಲ್ಲಿ ಜಂಟಿ ಸರ್ವೆ ಆದೇಶ ಮಾಡಿದ್ದರು. ಜಂಟಿ ಸರ್ವೆಯಲ್ಲಿ ಕಿಟ್ಟಣ್ಣ ಗೌಡ, ಪುರಂದರ ಗೌಡ, ರಾಜರಾಜೇಶ್ವರಿ, ಸುರೇಶ್ ಎಂಬವರ ಜಮೀನು ಇರುವುದನ್ನು ಗುರುತಿಸಲಾಗಿತ್ತು. ಈ ನಡುವೆ ನಗರಸಭೆಯಿಂದ ಈಗಿರುವ ರಸ್ತೆಗೆ ಮರಡಾಮರೀಕರಣಕ್ಕೆ ಮುಂದಾದಾಗ ಕಿಟ್ಟಣ್ಣ ಗೌಡ ಮತ್ತು ಪುರಂದ ಗೌಡ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಇದೀಗ ಜ.18ಕ್ಕೆ ಜಿಲ್ಲಾಧಿಕಾರಿಗಳು ನೆಲ್ಲಿಗುಂಡಿ ರಸ್ತೆ ಭೂ ಒತ್ತುವರಿಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.
ಕೆ.ಜೀವಂಧರ್ ಜೈನ್, ಅಧ್ಯಕ್ಷರು ನಗರಸಭೆ ಪುತ್ತೂರು