ಪುತ್ತೂರು: ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರನ್ನು ವ್ಯಾಪಾರ ಮಾಡದಂತೆ ಜೋರು ಮಾಡಿ ಓಡಿಸಲಾಗುತ್ತಿದೆ. ಈ ಬಗ್ಗೆ ಬೀದಿ ಬದಿ ವ್ಯಾಪಾರಿಗಳನ್ನು ಕೇಳಿದರೆ ನಮ್ಮನ್ನು ಪಂಚಾಯತ್‌ನವರು ವ್ಯಾಪಾರ ಮಾಡದಂತೆ ಹೇಳಿ ಓಡಿಸುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಅವರ ಹೊಟ್ಟೆಪಾಡಿಗಾಗಿ ವ್ಯಾಪಾರ ಮಾಡುತ್ತಾರೆ ಅವರನ್ನು ಓಡಿಸುವುದು ಸರಿಯಲ್ಲ, ಪಂಚಾಯತ್ ಅವರಿಗೆ ಇಂತಿಷ್ಟು ತೆರಿಗೆ ಹಾಕಲಿ. ಅದು ಬಿಟ್ಟು ಅವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುವುದು ಸರಿಯಲ್ಲ ಎಂದು ಒಳಮೊಗ್ರು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಫೆ.15ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ಇತರ ವಿಷಯಗಳ ಚರ್ಚೆ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಸಿದ್ದಿಕ್ ಕುಂಬ್ರರವರು, ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಅವರನ್ನು ಓಡಿಸುವ ಕ್ರಮ ಸರಿಯಲ್ಲ. ಅವರು ಹೊಟ್ಟೆ ಪಾಡಿಗಾಗಿ ವ್ಯಾಪಾರ ಮಾಡುತ್ತಿದ್ದಾರೆ. ಕೇಂದ್ರ ಸರಕಾರವೇ ಬೀದಿ ಬದಿ ವ್ಯಾಪಾರಿಗಳಿಗೆ ವಿವಿಧ ಸೌಲಭ್ಯಗಳನ್ನು, ಸಹಕಾರವನ್ನು ನೀಡುತ್ತಿದೆ. ಬೇಕಿದ್ದರೆ ಅವರಿಗೆ ಪಂಚಾಯತ್ ಇಂತಿಷ್ಟು ತೆರಿಗೆ ವಿಧಿಸುವ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು. ಇದಕ್ಕೆ ಗ್ರಾಮಸ್ಥರಾದ ಮಹಮ್ಮದ್ ಬೊಳ್ಳಾಡಿಯವರು ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್‌ರವರು ನಾವು ಕುಂಬ್ರ ಕಟ್ಟೆಯ ಸರಹದ್ದಿನಲ್ಲಿ ಪಾದಚಾರಿಗಳಿಗೆ ತೊಂದರೆ ಆಗುವ ಜಾಗದಲ್ಲಿ ವ್ಯಾಪಾರ ಮಾಡುವವರನ್ನು ಅಲ್ಲಿಂದ ತೆರವುಗೊಳಿಸಲು ತಿಳಿಸಿದ್ದೇವೆ. ಅದು ಬಿಟ್ಟು ಅವರನ್ನು ಓಡಿಸುವ ಕೆಲಸ ಮಾಡಿಲ್ಲ. ಸಾರ್ವಜನಿಕರು ನಡೆದಾಡುವ ಜಾಗದಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.
ಮದುವೆ ಹಾಲ್‌ನಿಂದ ಸಾರ್ವಜನಿಕರಿಗೆ ತೊಂದರೆ
ಕೊಯಿಲತ್ತಡ್ಕದಲ್ಲಿರುವ ಅಬ್ರಾಡ್ ಮದುವೆ ಹಾಲ್‌ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರಾದ ಸಿದ್ದಿಕ್ ಕುಂಬ್ರರವರು ಸಭೆಗೆ ತಿಳಿಸಿದರು. ಹಾಲ್ ಅಂಗಳದಿಂದ ಮಳೆನೀರನ್ನು ಕೊಯಿಲತ್ತಡ್ಕ-ಮಗಿರೆ ರಸ್ತೆಗೆ ಬಿಡಲಾಗುತ್ತಿದೆ. ಮಳೆನೀರು ಬಂದು ರಸ್ತೆ ಹಾಳಾಗುತ್ತಿದೆ. ಈ ಬಾರಿ ಮುಳಿಯ ಸಂಸ್ಥೆಯವರು ಪ್ರವೇಶ ರಸ್ತೆಯನ್ನು ಲಕ್ಷಾಂತರ ರೂ.ವೆಚ್ಚ ಮಾಡಿ ಡಾಂಬರೀಕರಣ ಮಾಡಿದ್ದಾರೆ. ಈ ರಸ್ತೆಗೆ ಹಾಲ್ ಕಡೆಯಿಂದ ಮಳೆನೀರು ಹರಿದು ರಸ್ತೆ ಹಾಳಾಗುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕು, ರಸ್ತೆಗೆ ನೀರು ಬರದಂತೆ ಚರಂಡಿ ನಿರ್ಮಾಣ ಕಾರ್ಯ ಮಾಡಬೇಕು. ಕಳೆದ 8 ವರ್ಷಗಳಿಂದ ಇಲ್ಲಿ ಇದೇ ಸಮಸ್ಯೆ ಇದ್ದು ಮಳೆನೀರು ಮುಖ್ಯರಸ್ತೆಗೂ ಹರಿದು ವಾಹನ ಸಂಚಾರಕ್ಕೆ ಪಾದಚಾರಿಗಳಿಗೆ ನಿರಂತರ ತೊಂದರೆಯಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಹಾಲ್‌ನಲ್ಲಿ ಶುಭಕಾರ್ಯ ನಡೆದರೆ ನೀರಿನ ಬಾಟಲಿಗಳು ರಸ್ತೆಯುದ್ಧಕ್ಕೂ ಎಸೆಯಲಾಗುತ್ತಿದೆ ಹಾಗೂ ಮಳೆಗಾಲದಲ್ಲಿ ಕೊಳಚೆ ನೀರನ್ನು ಮುಖ್ಯರಸ್ತೆಯ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ಪರಿಸರ ಮಳೆಗಾಲದಲ್ಲಿ ಗಬ್ಬೆದ್ದು ವಾಸನೆ ಬರುತ್ತಿದೆ. ಶುಚಿತ್ವ ಕಾಪಾಡದ ಹಾಲ್ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನೀರು ಹರಿದು ಸೂಕ್ತ ವ್ಯವಸ್ಥೆ ಮಾಡದೇ ಇದ್ದರೆ ಗ್ರಾಪಂ ವತಿಯಿಂದ ಚರಂಡಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಹಾಲ್ ಮಾಲೀಕರಿಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಮಾಡದೇ ಇರುವ ಬಗ್ಗೆ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒರವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮಳೆನೀರು ರಸ್ತೆಗೆ ಬಿಡದಂತೆ ಹಾಲ್ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಆದಾಗ್ಯೂ ಸೂಕ್ತ ವ್ಯವಸ್ಥೆ ಮಾಡದಿದ್ದರೆ ಪಂಚಾಯತ್ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು, ತ್ಯಾಜ್ಯ ಎಸೆಯುವುದು ಮತ್ತು ಕೊಳಚೆ ನೀರನ್ನು ರಸ್ತೆಗೆ ಬಿಡುವ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾಡುಪ್ರಾಣಿಗಳಿಂದ ಕೃಷಿ ಹಾನಿಯಾದರೆ ಪರಿಹಾರ
ಕಾಡು ಪ್ರಾಣಿಗಳಿಂದ ಕೃಷಿಗೆ ಹಾನಿಯುಂಟಾದರೆ ಸರಕಾರದಿಂದ ಪರಿಹಾರ ಸಿಗುತ್ತೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ಲಿಂಗರಾಜು ಸಭೆಗೆ ತಿಳಿಸಿದರು. ಕಾಡು ಪ್ರಾಣಿಗಳಿಂದ ಹಾನಿಗೊಳಗಾದ ಕೃಷಿಯ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ. ಅಧಿಕಾರಿಗಳು ಸ್ಥಳಕ್ಕೆ ಬಂದು ಹಾನಿಗೊಳಗಾದ ಕೃಷಿಯ ಜಿಪಿಎಸ್ ಫೋಟೋ ದಾಖಲಿಸಿ ಕೃಷಿಕನಿಂದ ಮಾಹಿತಿ ಹಾಗೂ ಸೂಕ್ತ ದಾಖಲೆಗಳನ್ನು ಪಡೆದು ಸರಕಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಹಾನಿಯುಂಟಾದ ಕೃಷಿಯ ಜಾಗವನ್ನು ಅಧಿಕಾರಿಗಳು ಪರಿಶೀಲನೆ ಮಾಡದೇ ಆ ಜಾಗದಲ್ಲಿ ಹೊಸ ಕೃಷಿಯನ್ನು ಮಾಡುವಂತಿಲ್ಲ. ಒಂದು ವೇಳೆ ಅಧಿಕಾರಿಗಳು ಬರುವಾಗ ಹಾನಿಯಾದ ಜಾಗದಲ್ಲಿ ಹೊಸ ಕೃಷಿಯನ್ನು ಅಥವಾ ಹೊಸ ಗಿಡಗಳನ್ನು ಹಾಕಿದ್ದರೆ ಆಗ ಯಾವುದೇ ಪರಿಹಾರ ಸಿಗುವುದಿಲ್ಲ ಎಂದು ತಿಳಿಸಿದರು. ಕಾಡುಪ್ರಾಣಿಗಳಲ್ಲಿ ಮಂಗನಿಂದ ಕೃಷಿಗೆ ಹಾನಿಯಾದರೆ ಮಾತ್ರ ಯಾವುದೇ ಪರಿಹಾರ ಸಿಗುವುದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮಸ್ಥರು ಈಗಾಗಲೇ ಕಾಪಿಕಾಡ್ ಎಂಬಲ್ಲಿರುವ ಓರ್ವ ಕೃಷಿಕರು ಅರ್ಜಿ ಹಾಕಿ ವರ್ಷವಾದರೂ ಇನ್ನೂ ಪರಿಹಾರ ಹಣ ಬಂದಿಲ್ಲ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಅರಣ್ಯ ಅಧಿಕಾರಿ ಲಿಂಗರಾಜುರವರು, ಪರಿಹಾರದ ಹಣ ಬರುವಾಗ ಸ್ವಲ್ಪ ತಡವಾಗಬಹುದು ಅದು ಬಿಟ್ಟರೆ ಪರಿಹಾರ ಹಣ ಖಂಡಿತ ಬರುತ್ತದೆ ಎಂದು ಹೇಳಿದರು.
ಅವೈಜ್ಞಾನಿಕ ಕಟ್ಟಡ
ಕೈಕಾರದಲ್ಲಿರುವ ಆರೋಗ್ಯ ಉಪಕೇಂದ್ರಕ್ಕೆ ತಾಗಿಕೊಂಡು ನಿರ್ಮಾಣವಾದ ಯೋಗಕೇಂದ್ರವು ಅವೈಜ್ಞಾನಿಕವಾಗಿದೆ. ಇದರ ಮಾಡಿಗೆ ಹಾಕಲಾದ ಶೀಟುಗಳು ಹೊರಕ್ಕೆ ಕೇವಲ ಅರ್ಧ ಫೀಟ್ ಮಾತ್ರವೇ ಇದ್ದು ಮಳೆಗಾಲದಲ್ಲಿ ನೀರು ಕಟ್ಟಡದ ಒಳಗೆ ಬೀಳುವ ಸಂಭವ ಇದೆ ಎಂದು ಶಶಿಕಿರಣ್ ರೈ ತಿಳಿಸಿದರು. ಈ ಬಗ್ಗೆ ಉತ್ತರಿಸಿದ ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯರವರು, ಇದು ಸರಕಾರ ಮಟ್ಟದ ಇಂಜಿನಿಯರ್‌ಗಳಿಂದಲೇ ನಿರ್ಮಾಣಗೊಂಡ ಕಟ್ಟಡವಾಗಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಭಿವೃದ್ಧಿ ಅಧಿಕಾರಿ ಅವಿನಾಶ್.ಬಿ.ಆರ್.ರವರು ಇದು ಸರಕಾರದ ಮಟ್ಟದಿಂದಲೇ ನಿರ್ಮಾಣಗೊಂಡಿರುವ ಕಟ್ಟಡವಾಗಿರುವುದರಿಂದ ಬದಲಾವಣೆ ಮಾಡಲು ನಮ್ಮಿಂದಲೂ ಸಾಧ್ಯವಾಗಲಿಲ್ಲ, ಕಟ್ಟಡದಲ್ಲಿ ಏನಾದರೂ ತೊಂದರೆಗಳಿದ್ದರೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಬರೆದುಕೊಳ್ಳುವ ಎಂದು ತಿಳಿಸಿದರು.
ಮೆಸ್ಕಾಂ ಜೆಇಗಳಿಗೆ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರು
ಮೆಸ್ಕಾಂನ ಕುಂಬ್ರ ಜೆಇ ರವೀಂದ್ರರವರು ಹಾಗೂ ಬೆಟ್ಟಂಪಾಡಿ ಜೆಇ ಪುತ್ತುರವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳನ್ನು ಹೇಳಿದ ತಕ್ಷಣ ಸ್ಪಂದಿಸಿ ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಾರೆ ಎಂದು ಗ್ರಾಮಸ್ಥರಾದ ಶಶಿಕಿರಣ್ ರೈ ಮತ್ತು ರಾಜೇಶ್ ರೈ ಪರ್ಪುಂಜರವರು ಅಭಿನಂದನೆ ಸಲ್ಲಿಸಿದರು.
ಕುಂಬ್ರಕ್ಕೆ ಸಿಟಿ ಬಸ್ಸು ಬೇಕು
ಬೆಳೆಯುತ್ತಿರುವ ಕುಂಬ್ರ ಪೇಟೆಗೆ ಬೆಳಗ್ಗಿನ ಜಾವ ಸಿಟಿ ಬಸ್ಸಿನ ಅವಶ್ಯಕತೆ ಇದೆ. ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬೆಳಗ್ಗಿನ ಜಾವ ಸರಿಯಾಗಿ ಬಸ್ಸು ಇಲ್ಲದೆ ತೊಂದರೆಯಾಗುತ್ತಿದೆ. ಆದ್ದರಿಂದ ಕುಂಬ್ರ, ಕುಟ್ಟಿನೋಪಿನಡ್ಕವಾಗಿ ಪುತ್ತೂರಿಗೆ ಸಂಚರಿಸುವ ಸಿಟಿ ಬಸ್ಸಿನ ಅವಶ್ಯಕತೆ ಇದೆ ಹಾಗೇ ಪರ್ಪುಂಜದಲ್ಲಿ ಸಾರ್ವಜನಿಕರಿಗೆ ನಿಲ್ಲಲು ಬಸ್ಸು ತಂಗುದಾಣದ ಅವಶ್ಯಕತೆ ಇದೆ ಎಂದು ಕೆ.ಎ ಮಹಮ್ಮದ್ ಕುಟ್ಟಿನೋಪಿನಡ್ಕ ಹೇಳಿದರು. ಇದಲ್ಲದೆ ಒಳಮೊಗ್ರು ಗ್ರಾಮಕ್ಕೆ ಆರೋಗ್ಯ ಕೇಂದ್ರದ ಅವಶ್ಯಕತೆಯೂ ಇದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದರು. ಪಂಚಾಯತ್ ವ್ಯಾಪ್ತಿಯ ಅಂಗಡಿ ಕೋಣೆಗಳ ಏಲಂ ಅವಧಿ ಮುಗಿದಿದ್ದರೂ ಏಲಂ ಮಾಡಿಲ್ಲ ಈ ಕೂಡಲೇ ಏಲಂ ಪ್ರಕ್ರಿಯೆ ಮಾಡಬೇಕು ಎಂದು ಮಹಮ್ಮದ್ ಆಗ್ರಹಿಸಿದರು.
ಎಸ್.ಸಿ/ಎಸ್.ಟಿ ಫಲಾನುಭವಿಗಳಿಗೆ ಸಹಾಯಧನ
ಗ್ರಾಪಂನ ಶೇ.25 ನಿಧಿಯಿಂದ ಎಸ್.ಸಿ ಮತ್ತು ಎಸ್.ಟಿ ಪಂಗಡದ ಒಟ್ಟು 12 ಮಂದಿ ಫಲಾನುಭವಿಗಳಿಗೆ ವಿದ್ಯಾಭ್ಯಾಸ, ವೈದ್ಯಕೀಯ, ಮನೆ ದುರಸ್ತಿ ಇತ್ಯಾದಿ ವಿವಿಧ ಕಾರ್ಯಗಳಿಗೆ ಸಹಾಯಧನ ನೀಡಲಾಯಿತು. ಇದೇ ಸಂದರ್ಭದಲ್ಲಿ ಮನೆ ಮಂಜೂರಾತಿ ಪತ್ರ ವಿತರಿಸಲಾಯಿತು. ಗ್ರಾಮದಲ್ಲಿ 58 ವಸತಿ ರಹಿತರು ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಈಗಾಗಲೇ 18 ಮಂದಿಗೆ ಮನೆ ಮಂಜೂರು ಮಾಡಲಾಗಿದೆ ಎಂದು ಪಿಡಿಒ ತಿಳಿಸಿದರು.
ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಲತೀಪ್ ಕುಂಬ್ರ, ಸಿರಾಜುದ್ದೀನ್, ಪ್ರದೀಪ್, ಮಹೇಶ್ ರೈ ಕೇರಿ, ಚಿತ್ರಾ ಬಿ.ಸಿ, ಶಾರದಾ, ನಿಮಿತಾ ರೈ, ನಳಿನಾಕ್ಷಿ, ರೇಖಾ, ವನಿತಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಗ್ರಾಪಂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯದರ್ಶಿ ಜಯಂತಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಕೇಶವ, ಜಾನಕಿ, ಗುಲಾಬಿ, ಗ್ರಂಥಪಾಲಕಿ ಸಿರಿನಾ, ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತ ಮೋಹನ್ ಸಹಕರಿಸಿದ್ದರು.
ಅವೈಜ್ಞಾನಿಕ ವಾಹನ ತಿರುವು-ಅಪಘಾತ ಹೆಚ್ಚಳ
ಕುಂಬ್ರ ಸುಳ್ಯ ರಸ್ತೆಯಲ್ಲಿ ಸುಳ್ಯ ಕಡೆಯಿಂದ ಬರುವ ವಾಹನ ಚಾಲಕರು ಬೆಳ್ಳಾರೆ ರಸ್ತೆಗೆ ಎಂಟ್ರಿ ತೆಗೆದುಕೊಳ್ಳುವಾಗ ಕುಂಬ್ರ ಕಟ್ಟೆಗೆ ಸರ್ಕಲ್ ಹೊಡೆದು ತಿರುವು ಪಡೆದುಕೊಳ್ಳದೇ ರಿಕ್ಷಾ ಪಾಕಿಂಗ್ ಜಾಗದ ಮೂಲಕ ಎಂಟ್ರಿ ಪಡೆದುಕೊಳ್ಳುತ್ತಿರುವುದರಿಂದ ಮತ್ತು ಬೆಳ್ಳಾರೆ ರಸ್ತೆಯಿಂದ ಬರುವ ವಾಹನ ಚಾಲಕರು ಕೂಡ ಕುಂಬ್ರ ಕಟ್ಟೆಗೆ ಸರ್ಕಲ್ ಹೊಡೆಯದೆ ರಿಕ್ಷಾ ಪಾರ್ಕಿಂಗ್ ಜಾಗದ ಮೂಲಕ ಸುಳ್ಯ ರಸ್ತೆಗೆ ತಿರುವು ಪಡೆದುಕೊಳ್ಳುತ್ತಿರುವುದು ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಒಂದೇ ದಿನ 3 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದೂ ಇದೆ. ಆದ್ದರಿಂದ ಸುಳ್ಯ ರಸ್ತೆಯ ಭಾಗದಿಂದ ಯಾವುದೇ ವಾಹನಗಳು ಬೆಳ್ಳಾರೆ ರಸ್ತೆಗೆ ರಿಕ್ಷಾ ಪಾರ್ಕಿಂಗ್ ಜಾಗದ ಮೂಲಕ ಎಂಟ್ರಿ ತೆಗೆದುಕೊಳ್ಳದಂತೆ ತಡೆ ಕಂಬಗಳನ್ನು ಹಾಕುವ ಮೂಲಕ ಪ್ರವೇಶ ಬಂದ್ ಮಾಡಬೇಕು ಎಂದು ಮಹಮ್ಮದ್ ಬೊಳ್ಳಾರೆ, ರಾಜೇಶ್ ರೈ ಪರ್ಪುಂಜ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್.ರವರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ರಿಕ್ಷಾ ಪಾರ್ಕಿಂಗ್‌ನ ಒಂದು ಬದಿಯಿಂದ ಸಂಪೂರ್ಣ ಬಂದ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಹೆಣ್ಣು ಮಕ್ಕಳ ದಾಖಲಾತಿ: ಶಾಲೆ, ಅಂಗನವಾಡಿಗೆ ಪ್ರಶಸ್ತಿ
ಶಾಲೆ ಮತ್ತು ಅಂಗನವಾಡಿಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಗ್ರಾಪಂ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು ಗ್ರಾಮದ ಶಾಲೆ ಮತ್ತು ಅಂಗನವಾಡಿಗಳಲ್ಲಿ 2022-23 ನೇ ಸಾಲಿನಲ್ಲಿ ಅತೀ ಹೆಚ್ಚು ಹೆಣ್ಣು ಮಕ್ಕಳ ದಾಖಲಾತಿ ಇರುವ ದರ್ಬೆತ್ತಡ್ಕ ಸರಕಾರಿ ಶಾಲೆ ಹಾಗೂ ಕುಟ್ಟಿನೋಪಿನಡ್ಕ ಅಂಗನವಾಡಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.