ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ರವರ ‘ಚಪಡ’ ಕಾದಂಬರಿಗೆ ‘ವಸುದೇವ ಭೂಪಾಲಂ’ ದತ್ತಿ ಪ್ರಶಸ್ತಿ

0

ಪುತ್ತೂರು: ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪರೀಕ್ಷಾಂಗ ಕುಲಸಚಿವ ಡಾ.ಶ್ರೀಧರ ಎಚ್.ಜಿ ಅವರ ಚಪಡ ಕಾದಂಬರಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳ ಆಯ್ಕೆಯಲ್ಲಿ ಪುತ್ತೂರಿನ ಡಾ.ಶ್ರೀಧರ ಎಚ್.ಜಿ‌ ಅವರು ರಚಿಸಿದ ‘ಚಪಡ’ ಕಾದಂಬರಿಯು “ವಸುದೇವ ಭೂಪಾಲಂ” ಎನ್ನುವ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ 5000 ನಗದು ಹಣವನ್ನು ಪ್ರಶಸ್ತಿಯು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಾರ್ಚ್ 12 ರ ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಶ್ರೀಧರ ಎಚ್.ಜಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಂಡಿಗೆಹಳ್ಳದವರಾಗಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಸುಮಾರು ಮೂವತ್ತು ವರ್ಷಗಳಿಂದ ಪ್ರಾಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಗೈದಿದ್ದಾರೆ. ಹಲವಾರು ನಾಟಕ, ವಿಮರ್ಶೆ, ಸಂಶೋಧನಾ ಕೃತಿಗಳನ್ನು ರಚಿಸಿರುವ ಇವರಿಗೆ ‘ಮಲ್ಲೇಪುರಂ ಪ್ರಶಸ್ತಿ’, ‘ಸಹೃದಯ ಪ್ರಾಧ್ಯಾಪಕ’ ಪ್ರಶಸ್ತಿ, ‘ಚಡಗ ಕಾದಂಬರಿ’ ಪ್ರಶಸ್ತಿಗಳೂ ಲಭಿಸಿದೆ.

ಅಂತೆಯೇ ಇವರ ಚಪಡ ಕೃತಿ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಲಂ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಬಂಧುಗಳು ಶುಭಾಶಯ ವ್ಯಕ್ತಪಡಿಸಿದ್ದಾರೆ.‌

LEAVE A REPLY

Please enter your comment!
Please enter your name here