ಉಪ್ಪಿನಂಗಡಿ: ಇಲ್ಲಿನ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಮಾ.11 ಮತ್ತು 12ರಂದು ನಡೆಯಲಿರುವ 37ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆಯನ್ನು ಹಳೆಗೇಟುವಿನ ನೇತ್ರಾವತಿ ನದಿ ಕಿನಾರೆಯಲ್ಲಿರುವ ಕಂಬಳ ಕರೆಯ ಬಳಿ ಭಾನುವಾರ ಸಂಜೆ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೆ.ಎಸ್., ಮಾ.11ರಂದು ಬೆಳಗ್ಗೆ 8ರಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಿಂದ ಕಂಬಳದ ಕೋಣಗಳ ವೈಭವದ ಮೆರವಣಿಗೆ ನಡೆಯಲಿದ್ದು, ಬಳಿಕ 9.31ಕ್ಕೆ ಕಂಬಳ ಕರೆಯ ಬಳಿ ಕಂಬಳದ ಉದ್ಘಾಟನೆ ನಡೆದು, 37ನೇ ವರ್ಷದ ಹೊನಲು ಬೆಳಕಿನ ಈ ಕಂಬಳಕ್ಕೆ ಚಾಲನೆ ದೊರೆಯಲಿದೆ.
ಕರೆ ನಿರ್ಮಾಣ ಸೇರಿದಂತೆ ಕಂಬಳಕ್ಕೆ ಬೇಕಾದ ಕೆಲಸ ಕಾರ್ಯಗಳು ಈಗಾಗಲೇ ಆರಂಭಗೊಂಡಿವೆ. ತುಳುನಾಡ ಜನಪದ ಕ್ರೀಡೆಯಾದ ಕಂಬಳವನ್ನು ಉಳಿಸಿ- ಬೆಳೆಸಲು ಎಲ್ಲರೂ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದರು.
ಸಭೆಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ರಾಮಚಂದ್ರ ಮಣಿಯಾಣಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜೊತೆಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ಕಂಗ್ವೆ, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಬೊಳ್ಳಾವು, ವಿಜಯ ಪೂಜಾರಿ ಚೀಮುಳ್ಳು, ಸಹ ಸಂಚಾಲಕ ಜಯಪ್ರಕಾಶ್ ಬದಿನಾರು, ಪದಾಧಿಕಾರಿಗಳಾದ ದಿಲೀಪ್ ಶೆಟ್ಟಿ ಕರಾಯ, ಶಿವರಾಮ ಶೆಟ್ಟಿ ಗೋಳ್ತಮಜಲು, ನಿಹಾಲ್ ಶೆಟ್ಟಿ, ಜಯಾನಂದ ಪಿಲಿಗುಂಡ, ಕಬೀರ್ ಕರ್ವೇಲು, ಕೃಷ್ಣಪ್ಪ ಪೂಜಾರಿ, ಉಮ್ಮರ್, ಅದ್ವಿಕಾ ಡಿ. ಶೆಟ್ಟಿ, ಹರೀಶ್ ಕರಾಯ, ಜಗದೀಶ್ ಕುಮಾರ್ ಪರಕಜೆ ಮತ್ತಿತರರು ಉಪಸ್ಥಿತರಿದ್ದರು.