ಯಾವುದೇ ವಸ್ತುವನ್ನು ಅಲ್ಲಾಹನು ಅನಗತ್ಯವಾಗಿ ಭೂಮಿಯಲ್ಲಿ ಸೃಷ್ಟಿಸಿಲ್ಲ: ವಹ್ಹಾಬ್ ನಈಮಿ ಕೊಲ್ಲಂ
ಅಲ್ಲಾಹನ ಇಷ್ಟದಾಸರನ್ನು ಎಲ್ಲರೂ ಗೌರವಿಸುತ್ತಾರೆ: ಅಯ್ಯೂಬ್ ವಹಬಿ
ಪುತ್ತೂರು: ಈ ಭೂಮಿಯಲ್ಲಿರುವ ಪ್ರತೀಯೊಂದು ವಸ್ತುಗಳು, ಜೀವಿಗಳೂ ಅಲ್ಲಾಹನ ಸೃಷ್ಟಿಯಾಗಿದೆ, ಅಲ್ಲಾಹನ ಸೃಷ್ಟಿಗಳ ಪೈಕಿ ಮಾನವನಿಗೆ ಮತ್ರ ಅವನು ಬುದ್ದಿಶಕ್ತಿಯನ್ನು ಕರುಣಿಸಿದ. ಈ ಭೂಮಿಯಲ್ಲಿರುವ ಪ್ರತೀಯೊಂದು ವಸ್ತು, ಜೀವಿಗಳನ್ನು ಅಲ್ಲಾಹನು ಅನಗತ್ಯವಾಗಿ ಸೃಷ್ಟಿಸಿಲ್ಲ ಅವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಫಲವನ್ನು ನೀಡುತ್ತದೆ ಎಂದು ಕರುನಾಗಪಳ್ಳಿ ಜಾಮಿಯಾ ಬಯ್ಯಿನತ್ ನಿರ್ದೇಶಕರಾದ ಅಬ್ದುಲ್ ವಹ್ಹಾಬ್ ನಈಮಿ ಕೊಲ್ಲಂ ಹೇಳಿದರು.
ಅವರು ಫೆ.19ರಂದು ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ಉರೂಸ್ ಮುಬಾರಕ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು. ಅಸ್ಸಯ್ಯಿದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲರವರು ದುವಾ ನೆರವೇರಿಸಿದರು.
ಪ್ರತಿಯೊಂದು ಜೀವಿಗೂ ಯುವತ್ವ ಎಂಬುದು ಇದೆ. ಯುವತ್ವದಲ್ಲಿ ಎಲ್ಲವೂ ಸುಂದರವಾಗಿಯೇ ಇರುತ್ತದೆ. ಯುವತ್ವ ಕಳೆದರೆ ಮತ್ತೆ ವಾರ್ಧಕ್ಯವಾಗುತ್ತದೆ. ಯುವ ಪ್ರಾಯದಲ್ಲಿ ಮಾಡಿದ ಆರಾಧನೆಗೆ ಅಲ್ಲಾಹನ ಬಳಿ ಹೆಚ್ಚು ಗೌರವ ಇದೆ. ಯುವ ಸಮೂಹ ತನ್ನ ಯುವತ್ವವನ್ನು ಹೇಗೆ ಕಳೆಯಬೇಕು, ಯಾವ ರೀತಿ ಅದನ್ನು ಅರಾಧನೆಗೆ ಬಳಸಬೇಕು ಎಂಬುದನ್ನು ಪ್ರವಾದಿಯವರು ನಮಗೆ ಕಲಿಸಿದ್ದು ಅದರ ಪ್ರಕಾರ ನಾವು ನಮ್ಮ ಯೌವ್ವನವನ್ನು ಕಳೆಯಬೇಕು ಎಂದು ಹೇಳಿದರು. ಅಲ್ಲಾಹನು ಅತ್ಯಂತ ಕಾರುಣ್ಯ ಉಳ್ಳವನಾಗಿದ್ದಾನೆ, ನಿತ್ಯವೂ ಅಲ್ಲಾಹನಲ್ಲಿ ನಾವು ಪ್ರಾರ್ಥಿಸುವವರಾಗಬೇಕು, ಪ್ರಾರ್ಥಿಸುವ ಹೃದಯ ಕಲ್ಮಶ ರಹಿತವಾಗಿರಬೇಕು, ನಾವು ಅಲ್ಲಾಹನನ್ನು ಅರಿತು ಆರಾಧಿಸಿದರೆ ಅದರಿಂದ ನಮಗೆ ಪ್ರತಿಫಲ ದೊರೆಯುತ್ತದೆ, ಕೈ ಚಾಚಿದವರನ್ನು ಅಲ್ಲಾಹನು ಎಂದಿಗೂ ಕೈ ಬಿಡುವುದಿಲ್ಲ ಎಂದು ಹೇಳಿದರು.
ಪಳ್ಳಿತ್ತಡ್ಕ ದರ್ಗಾ ಶರೀಫ್ ಈ ಊರಿನ ಸೌಹಾರ್ದ ಕೇಂದ್ರವಾಗಿದೆ. ಇಲ್ಲಿಗೆ ಜಾತಿ, ಮತ ಧರ್ಮ ವ್ಯತ್ಯಾಸವಿಲ್ಲದೆ ಎಲ್ಲರೂ ಬರುತ್ತಾರೆ. ಪ್ರಾರ್ಥನೆ ಮಾಡುತ್ತಾರೆ. ಇದು ಈ ಊರಿನ ಸೌಭಾಗ್ಯವಾಗಿದೆ ಎಂದು ಹೇಳಿದ ಅವರು ಅಜ್ಮೀರ್ ಖ್ವಾಜಾ ಭಾರತದ ಸುಲ್ತಾನ್ ಆಗಿದ್ದಾರೆ. ಯಾರೇ ಅಧಿಕಾರದಲ್ಲಿರಲಿ ಅಜ್ಮೀರ್ ಖ್ವಾಜಾ ಬಳಿ ಹೋಗಲೇಬೇಕು ಅವರ ಆಶೀರ್ವಾದ ಪಡೆದೇ ಅಧಿಕಾರ ಸ್ವೀಕರಿಸಬೇಕು, ಅಜ್ಮೀರ್ ಖ್ವಾಜಾ ಪ್ರವಾದಿಯವರು ಭಾರತಕ್ಕೆ ನೇಮಿಸಿದ್ದ ಅಢಳಿತಾಧಿಕಾರಿಯಾಗಿದ್ದರು ಎಂದು ಹೇಳಿದರು. ಅಲ್ಲಾಹನ ಇಷ್ಟದಾಸರು ಎಂದಿಗೂ ಕೋಮುವಾದಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಯುವತ್ವತದಲ್ಲಿ ನಾವು ಸಜ್ಜನರಾಗಿದ್ದಾರೆ, ವೃದ್ದಾಪ್ಯದಲ್ಲಿ ನಾವು ಅದರ ಪುಣ್ಯವನ್ನು ಪಡೆಯಲಿದ್ದೇವೆ ಎಂದು ಹೇಳಿದರು.
ಅಲ್ಲಾಹನ ಇಷ್ಟದಾಸರನ್ನು ಎಲ್ಲರೂ ಗೌರವಿಸುತ್ತಾರೆ: ಅಯ್ಯೂಬ್ ವಹಬಿ
ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊರಿಂಗಿಲ ಇಮಾಂ ಜಿ ಎಚ್ ಅಯ್ಯೂಬ್ ವಹಬಿ ಉಸ್ತಾದರು ಮಾತನಾಡಿ ಅಲ್ಲಾಹನ ಇಷ್ಟದಾಸರು ಎಲ್ಲೇ ಇರಲಿ ಅವರನ್ನು ಎಲ್ಲರೂ ಗೌರವಿಸುತ್ತಾರೆ ಎಂಬುದಕ್ಕೆ ಇರ್ದೆ -ಪಳ್ಳಿತ್ತಡ್ಕ ದರ್ಗಾ ಸಾಕ್ಷಿಯಾಗಿದೆ. ಇಲ್ಲಿ ಮರಣ ಹೊಂದಿರುವ ಅಲ್ಲಾಹನ ಔಲಿಯಾ ಆಗಿರುವ ಈ ವ್ಯಕ್ತಿಯ ಚರಿತ್ರೆ ಯಾರಿಗೂ ಗೊತ್ತಿಲ್ಲ , ಹೆಸರೂ ಗೊತ್ತಿಲ್ಲ ಆದರೂ ಇಲ್ಲಿ ಸರ್ವ ಧರ್ಮಿಯರೂ ಆಗಮಿಸುತ್ತಾರೆ, ಎಲ್ಲರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರವೂ ದೊರಕುತ್ತದೆ ಎಂದು ಹೇಳಿದ ಅವರು ಅಲ್ಲಾಹನ ಔಲಿಯಾಗಲು ಕೇವಲ ಮುಸ್ಲಿಮರಿಗೆ ಮಾತ್ರ ಸಾಂತ್ವನ ಹೇಳುವುದಲ್ಲ ಎಲ್ಲಾ ಮನುಷ್ಯರಿಗೆ ಅವರು ಪ್ರಿಯರಾಗಿರುತ್ತಾರೆ ಎಂದು ಹೇಳಿದರು. ಅಲ್ಲಾಹನು ಗೌರವಿಸಿದ ವ್ಯಕ್ತಿಗಳನ್ನು ನಾವು ಗೌರವಿಸುವುದು ಕಡ್ಡಾಯವಾಗಿದೆ. ಅದು ವ್ಯಕ್ತಿಯಾಗಿರಲೇಬೇಕೆಂದಿಲ್ಲ ಅಲ್ಲಾಹನು ಯಾವುದನ್ನು ಗೌರವಿಸುತ್ತಾನೋ ಅದೆಲ್ಲವನ್ನೂ ನಾವು ಗೌರವಿಸಬೇಕು. ಸಾಮರಸ್ಯದ ಬದುಕು ಕಟ್ಟುವ ಮೂಲಕ ನಾವು ಸಮಾಜದಲ್ಲಿ ಸಜ್ಜನರಾಗಿ ಬಾಳಿ ಬದುಕಬೇಕಿದೆ ಎಂದು ಹೇಳಿದರು.
ಡೆಮ್ಮಂಗರ ಮುದರ್ರಿಸ್ ಅಬ್ಬಾಸ್ ಸಅದಿ ಮಾತನಾಡಿ ನಾವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಭಕ್ತಿ ಇರಬೇಕು, ಭಕ್ತಿ ಇಲ್ಲದ ಆರಾಧನೆ ವ್ಯರ್ಥವಾಗಬಹುದು. ಅಲ್ಲಾಹನ ಬಗ್ಗೆ ನಮಗೆ ಭಯ ಇರಬೇಕು ಆಗಿದ್ದಲ್ಲಿ ಮಾತ್ರ ನಮಗೆ ಭಕ್ತಿ ಕಾಣಲು ಸಾಧ್ಯವಾಗುತ್ತದೆ. ಸಾಧಾರಣ ವ್ಯಕ್ತಿಗೆ ಅಲ್ಲಾಹನ ಇಷ್ಟದಾಸನಾಗಲು ಸಾಧ್ಯವಿಲ್ಲ ಆತನಲ್ಲಿ ಇಲ್ಮ್ ಇರಬೇಕಾಗುತ್ತದೆ. ಅಪಾರವಾದ ಇಲ್ಮ್ (ಜ್ಞಾನ) ಇದ್ದವರಲ್ಲಿ ಮಾತ್ರ ಅಲ್ಲಾಹನ ಭಯ ಹೃದಯದಲ್ಲಿ ತುಂಬಿರುತ್ತದೆ ಎಂದು ಹೇಳಿದರು.
ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಕೊರಿಂಗಿಲ ಸಅ ಅಧ್ಯಾಪಕರ ಉಮರುಲ್‌ಫಾರೂಕ್ ಮುಸ್ಲಿಯಾರ್, ಏಂಪೆಕಲ್ಲು ತ್ವಾಹಾ ಮಸ್ಜಿದ್ ಇಮಾಂ ಫಾರೂಕ್ ಹಿಮಮಿ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಸಾರ್ಯ ಮಸ್ಜಿದ್ ಅಧ್ಯಕ್ಷ ಯೂಸುಫ್ ಗೌಸಿಯಾ, ಉದ್ಯಮಿ ಅಬ್ಬಾಸ್ ಹಾಜಿ ಮಣ್ಣಾಪು, ಕಾಂಗ್ರೆಸ್ ಕಿಸಾನ್ ಘಟಕದ ಪಾಣಾಜೆ ವಲಯ ಅಧ್ಯಕ್ಷರಾದ ಅಬ್ದುಲ್ ಕುಂಞಿ ಹಾಜಿ ಕೆ ಪಿ, ಉರೂಸ್ ಕಮಿಟಿ ಅಧ್ಯಕ್ಷ ಅಲಿ ಶಾಲಾ ಬಳಿ, ಕೊರಿಂಗಿಲ ಜಮಾತ್ ಕಮಿಟಿ ಕಾರ್ಯದರ್ಶಿ ಖಾಸಿಂ ಕೇಕನಾಜೆ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಉರೂಸ್ ಪ್ರಯುಕ್ತ ಬೆಳಿಗ್ಗೆಯಿಂದಲೇ ಬೆಲ್ಲದ ಗಂಜಿ ವಿತರಣೆ ನಡೆಯಿತು. ಮೂಸಾ ಮದನಿ ಬೀಂತಡ್ಕ ಸ್ವಾಗತಿಸಿದರು. ಅಬ್ದುಲ್ಲ ಮೌಲವಿ ಬೇಂಗತ್ತಡ್ಕ ವಂದಿಸಿದರು.