ಕೆದಂಬಾಡಿಯಲ್ಲಿ ತಹಶೀಲ್ದಾರ್ ಗ್ರಾಮವಾಸ್ತವ್ಯ:ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಸಭೆ ನಡೆಸಿಕೊಟ್ಟ ಗ್ರೇಡ್ 2 ತಹಶೀಲ್ದಾರ್

0

ಪ್ಲಾಟಿಂಗ್ ಸಮಸ್ಯೆ ಬಗೆಹರಿಸಿಕೊಡಲು ಗ್ರಾಮಸ್ಥರ ಆಗ್ರಹ

ಪುತ್ತೂರು: ತಹಶೀಲ್ದಾರ್ ನಡೆ, ಹಳ್ಳಿಯ ಕಡೆ ಎಂಬ ಧ್ಯೇಯದೊಂದಿಗೆ ತಿಂಗಳ ಪ್ರತಿ ಮೂರನೇ ಶನಿವಾರ ನಡೆಯುವ ತಹಶೀಲ್ದಾರ್ ಗ್ರಾಮವಾಸ್ತವ್ಯ ಕಾರ್ಯಕ್ರಮ ಫೆ.20 ರಂದು ಕೆದಂಬಾಡಿ ಗ್ರಾಪಂ ಕಟ್ಟಡದ ಸಭಾಭವನದಲ್ಲಿ ನಡೆಯಿತು.

ತಹಶೀಲ್ದಾರ್‌ರವರು ಜಿಲ್ಲಾಧಿಕಾರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿರುವುದರಿಂದ ಗ್ರೇಡ್2 ತಹಶೀಲ್ದಾರ್‌ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ತಿಂಗಳ ಮೂರನೇ ಶನಿವಾರ ಸರಕಾರಿ ರಜಾ ದಿನವಾಗಿರುವುದರಿಂದ ಕಾರ್ಯಕ್ರಮಕ್ಕೆ ಸೋಮವಾರಕ್ಕೆ ಮುಂದೂಡಿದ್ದರು. ಸೋಮವಾರ ಅಂದರೆ ಫೆ.20 ರಂದು ಜಿಲ್ಲಾಧಿಕಾರಿಯವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಚಾರ್ವಾಕ ಗ್ರಾಮದ ದೋಳ್ಪಾಡಿಯಲ್ಲಿ ನಿಗದಿಯಾಗಿತ್ತು. ಕಡಬ ತಹಶೀಲ್ದಾರ್ ರಮೇಶ್ ಬಾಬುರವರು ಪುತ್ತೂರು ತಾಲೂಕಿಗೆ ಪ್ರಭಾರ ತಹಶೀಲ್ದಾರ್ ಆಗಿದ್ದು ಇವರು ಕಡಬ ತಾಲೂಕಿನಲ್ಲಿ ನಡೆಯುವ ಜಿಲ್ಲಾಧಿಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿರುವುದರಿಂದ ಪುತ್ತೂರು ತಾಲೂಕಿನ ಗ್ರೇಡ್ 2 ತಹಶೀಲ್ದಾರ್ ಲೋಕೇಶ್‌ರವರು ಸಭೆ ನಡೆಸಿಕೊಟ್ಟು ಗ್ರಾಮಸ್ಥರ ಅರ್ಜಿಗಳನ್ನು ಪರಿಶೀಲನೆ ನಡೆಸಿ ಸ್ಥಳದಲ್ಲೇ ಮಾಹಿತಿ ನೀಡಿದರು.


ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಗ್ರೇಡ್2 ತಹಶೀಲ್ದಾರ್ ಲೋಕೇಶ್‌ರವರು ಮಾತನಾಡಿ, ಅಧಿಕಾರಿಗಳೇ ಗ್ರಾಮಸ್ಥರ ಬಳಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಸೂಕ್ತ ಮಾಹಿತಿ ಮತ್ತು ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು. ತಹಶೀಲ್ದಾರ್‌ರವರು ಜಿಲ್ಲಾಧಿಕಾರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿರುವುದರಿಂದ ನಾನು ಕಾರ್ಯಕ್ರಮ ನಡೆಸಿಕೊಡುತ್ತಿದ್ದೇನೆ ಎಂದು ಸಭೆಗೆ ತಿಳಿಸಿ, ಕಂದಾಯ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.


ತಾಪಂ ನರೇಗಾದ ಸಹಾಯಕ ನಿರ್ದೇಶಕರಾಗಿರುವ ಶೈಲಜಾ ಭಟ್‌ರವರು ಮಾತನಾಡಿ, ತಹಶೀಲ್ದಾರ್ ನಡೆ ಹಳ್ಳಿಯ ಕಡೆ ಎಂಬ ಧ್ಯೇಯದೊಂದಿಗೆ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ಗ್ರಾಮವಾಸ್ತವ್ಯ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ. ಅಧಿಕಾರಿಗಳೇ ನೇರವಾಗಿ ಗ್ರಾಮಸ್ಥರ ಬಳಿಗೆ ಬಂದು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಸರಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವ ಒಂದು ಉತ್ತಮ ಕಾರ್ಯಕ್ರಮ ಇದಾಗಿದೆ ಎಂದರು.

ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರು ಮಾತನಾಡಿ, ಅಧಿಕಾರಿಗಳೇ ಗ್ರಾಮಸ್ಥರ ಬಳಿಗೆ ಬಂದು ಅವರ ಕುಂದುಕೊರತೆಗಳನ್ನು ಆಲಿಸಿ ಅದಕ್ಕೆ ಬೇಕಾದ ಮಾಹಿತಿ ಮತ್ತು ಸಲಹೆ ಸೂಚನೆಗಳನ್ನು ಕೊಡುವ ಒಂದು ಉತ್ತಮ ಕಾರ್ಯಕ್ರಮ ಇದಾಗಿದೆ ಎಂದರು. ಭೂ ಸಹಾಯಕ ನಿರ್ದೇಶಕರ ಕಛೇರಿಯ ತಪಾಸಕರಾದ ಮಹೇಶ್ ಕುಮಾರ್‌ರವರು ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ ಉಪಸ್ಥಿತರಿದ್ದರು. ಕೆದಂಬಾಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿದರು. ಕೆದಂಬಾಡಿ ಗ್ರಾಮ ಆಡಳಿತ ಅಧಿಕಾರಿ ಸುಜಾತರವರು ಗ್ರಾಮದ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಪುತ್ತೂರು ಕಸಬಾದ ಮಹೇಶ್, ತಾ.ಕಛೇರಿಯ ಕನಕರಾಜ್, ಕೆಂಪರಾಜು, ಕೆದಂಬಾಡಿಯ ಸುಜಾತ, ಒಳಮೊಗ್ರುನ ರಾಧಾಕೃಷ್ಣ, ಗ್ರಾಮ ಸಹಾಯಕರಾದ ಕೆದಂಬಾಡಿಯ ಶ್ರೀಧರ್, ಕೆಯ್ಯೂರಿನ ನಾರಾಯಣ ಪಾಟಾಳಿ, ಆರ್ಯಾಪುನ ಉಮೇಶ್, ಕೆಮ್ಮಿಂಜೆಯ ಕೃಷ್ಣಪ್ಪ ಸಹಕರಿಸಿದ್ದರು. ಕಂದಾಯ ನಿರೀಕ್ಷಕ ಗೋಪಾಲ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆದಂಬಾಡಿ ಗ್ರಾಪಂ ಗ್ರೇಡ್1 ಕಾರ್ಯದರ್ಶಿ ಸುನಂದ ರೈ, ಸಿಬ್ಬಂದಿಗಳು, ಸದಸ್ಯರುಗಳು ಉಪಸ್ಥಿತರಿದ್ದರು.


18 ಅರ್ಜಿಗಳು
ಕೆದಂಬಾಡಿ ಗ್ರಾಮದಿಂದ ಒಟ್ಟು 18 ಅರ್ಜಿಗಳು ಸಭೆಗೆ ಬಂದಿದ್ದವು. ಇವುಗಳನ್ನು ಗ್ರೇಡ್2 ತಹಶೀಲ್ದಾರ್‌ರವರು ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಅವರಿಗೆ ಮಾಹಿತಿ ನೀಡಿ ಅವುಗಳನ್ನು ಆಯಾ ಇಲಾಖೆಗೆ ಕಳುಹಿಸಿಕೊಟ್ಟರು.


ಪ್ಲಾಟಿಂಗ್ ಸಮಸ್ಯೆ ಬಗೆಹರಿಸಿ
ಸಭೆಯಲ್ಲಿ ಮುಖ್ಯವಾಗಿ ಪ್ಲಾಟಿಂಗ್ ಸಮಸ್ಯೆಯ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೃಷಿಕರಾದ ಕಡಮಜಲು ಸುಭಾಷ್ ರೈಯವರು ಪ್ಲಾಟಿಂಗ್ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಿದರು. ಹಲವು ಕಾರಣಗಳಿಂದ ಪ್ಲಾಟಿಂಗ್ ಆಗುತ್ತಿಲ್ಲ. ಬಹಳಷ್ಟು ಮಂದಿ ಪ್ಲಾಟಿಂಗ್ ಆಗದೆ ಕನ್ವರ್ಷನ್ ಆಗುತ್ತಿಲ್ಲ. ಇದರಿಂದ ಹಲವು ಸಮಸ್ಯೆಗಳು ಆಗುತ್ತಿದೆ. ಆದ್ದರಿಂದ ಪ್ಲಾಟಿಂಗ್ ಅನ್ನು ಸರಲೀಕರಣಗೊಳಿಸಬೇಕು ಎಂದು ಹೇಳಿದರು.


ರೇಕಾರ್ಡ್ ರೂಮ್‌ನಲ್ಲಿ ದಾಖಲೆಗಳು ಸಿಗುತ್ತಿಲ್ಲ
ತಾಲೂಕು ಕಛೇರಿಯ ರೇಕಾರ್ಡ್ ರೂಮ್‌ನಲ್ಲಿ ದಾಖಲೆಗಳೇ ಸಿಗುತ್ತಿಲ್ಲ, ಅರ್ಜಿ ಕೊಟ್ಟರೂ ಹಣ ಕೇಳ್ತಾರೆ ಎಂದು ಕಿರಣ್ ರೈಯವರು ಗಂಭೀರ ಆರೋಪ ಮಾಡಿದರು. ನಾನು ನನ್ನ ಜಾಗದ ದಾಖಲೆಯನ್ನು ಕೇಳಿ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದ್ದೆ ಆದರೆ ನನಗೆ ಅಲ್ಲಿಂದ ಬೇರೆಯೇ ದಾಖಲೆಗಳು ಬಂದಿದೆ. ರೇಕಾರ್ಡ್ ರೂಮ್‌ನಲ್ಲಿ ಸರಿಯಾದ ದಾಖಲೆ ಕೇಳಿ ಅರ್ಜಿ ಕೊಟ್ಟರೂ ಅಲ್ಲಿ ಹಣ ಕೇಳ್ತಾರೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಗ್ರೇಡ್2 ತಹಶೀಲ್ದಾರ್‌ರವರು ನೀವು ನಿಮ್ಮ ದಾಖಲೆಗಳನ್ನು ಹಿಡಿದುಕೊಂಡು ಬನ್ನಿ ಸರಿ ಮಾಡಿಕೊಡುವ. ದಾಖಲೆ ಕೇಳಿದ್ದಕ್ಕೆ ಹಣ ಕೇಳಿದರೆ ಕೂಡಲೇ ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.


ನರೇಗಾದಲ್ಲಿ ಎಲ್ಲರಿಗೂ ಅವಕಾಶ ಕೊಡಿ
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ನರೇಗಾದಲ್ಲಿ ಕೆಲಸ ಮಾಡಲು ಬೇರೆ ಯಾವುದೇ ಸರ್ಟೀಫೀಕೆಟ್‌ನ ಅಗತ್ಯವಿಲ್ಲ. 7 ಎಕರೆ ಒಣಭೂಮಿ ಇದ್ದವರಿಗೆ ಬಿಪಿಎಲ್ ಕಾರ್ಡ್ ಆಗುತ್ತದೆ. ಆದರೆ 5 ಎಕರೆ ಭೂಮಿ ಇದ್ದು ಆತನ ಆದಾಯ ಮಿತಿ ಜಾಸ್ತಿ ಇದ್ದರೆ ಆತನಿಗೆ ನರೇಗಾದಲ್ಲಿ ಕೆಲಸ ಮಾಡಲು ಸಣ್ಣ ರೈತ ಸರ್ಟಿಫಿಕೇಟ್ ಕೇಳಲಾಗುತ್ತಿದೆ. ಸಣ್ಣ ರೈತ ಸರ್ಟೀಫಿಕೇಟ್ ಸಿಗಬೇಕಾದರೆ 5 ಎಕರೆಯ ಒಳಗೆ ಜಾಗ ಬೇಕಾಗುತ್ತದೆ. 5 ಎಕರೆ ಒಣಭೂಮಿ ಇದ್ದವ ಬಿಪಿಎಲ್ ಕಾರ್ಡ್ ಹೊಂದಿದ್ದು ನರೇಗಾದಲ್ಲಿ ಕೃಷಿ ಮಾಡುತ್ತಾನೆ. ಅದೇ 5 ಎಕರೆ ಜಾಗ ಇದ್ದವರಿಗೆ ಸಣ್ಣ ರೈತ ಸರ್ಟಿಫೀಕೇಟ್ ಕೇಳಲಾಗುತ್ತಿದೆ. ಈ ರೀತಿಯ ತಾರತಮ್ಯ ಸರಿಯಲ್ಲ, ನರೇಗಾದಲ್ಲಿ ವೈಯುಕ್ತಿಕವಾಗಿ ಕೆಲಸ ಮಾಡಲು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಸಭೆಗೆ ತಿಳಿಸಿದರು.

LEAVE A REPLY

Please enter your comment!
Please enter your name here