ನಂದನ ಪುತ್ತೂರು ಚಿಟ್ಸ್‌ನ ಮಂಗಳೂರು ಶಾಖೆ ಉದ್ಘಾಟನೆ

0

ಮಂಗಳೂರು: ನಂದನ ಪುತ್ತೂರು ಚಿಟ್ಸ್ ಪ್ರೈವೇಟ್ ಲಿ.ನ ಮಂಗಳೂರು ಶಾಖೆಯ ನೂತನ ಕಚೇರಿ ಮಂಗಳೂರು ನಗರದ ಕರಂಗಲ್ಪಾಡಿಯ ಲೋಟಸ್ ಪ್ಯಾರಡೈಸ್ ಸೆಂಟರ್‌ನಲ್ಲಿ ಫೆ.18ರಂದು ಉದ್ಘಾಟನೆಗೊಂಡಿತು.

ಮಾಜಿ ಮೇಯರ್ ಜೆಸಿಂತಾ ವಿಜಯ ಆಬ್ರೆಡ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಸೌಲಭ್ಯದ ಅಗತ್ಯ ಇರುವವರಿಗೆ ನೆರವು ಒದಗಿಸುವ ಮೂಲಕ ನಂದನ ಪುತ್ತೂರು ಚಿಟ್ಸ್ ಗುಣಮಟ್ಟದ ಸೇವೆ ನೀಡುತ್ತಿದೆ. ನೂತನ ಶಾಖೆಯಿಂದ ಮಂಗಳೂರು ನಗರದ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಲಭ್ಯವಾಗಲಿ ಎಂದು ಶುಭ ಹಾರೈಸಿದರು.

ದೀಪ ಪ್ರಜ್ವಲನೆಗೊಳಿಸಿದ ಲೋಟಸ್ ಪ್ಯಾರಡೈಸ್ ಸೆಂಟರ್‌ನ ಆಡಳಿತ ಪಾಲುದಾರ ಜಿತೇಂದ್ರ ಕೊಟ್ಟಾರಿ ಮಾತನಾಡಿ, ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದ ತವರೂರು ಎಂದೇ ಪ್ರಸಿದ್ಧಿಯಾಗಿರುವ ಮಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ಇಲ್ಲಿನ ಆರ್ಥಿಕ ಸಂಸ್ಥೆಗಳು ಬದ್ಧತೆ ಹಾಗೂ ಪ್ರಾಮಾಣಿಕ ಸೇವೆ ನೀಡುವ ಮೂಲಕ ನಾಡಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿವೆ.

ನಂದನ ಪುತ್ತೂರು ಚಿಟ್ಸ್ ಗ್ರಾಹಕ ಸ್ನೇಹಿ ಸೇವೆ ನೀಡುವ ಮೂಲಕ ಭವಿಷ್ಯದಲ್ಲಿ ಆರ್ಥಿಕ ಕ್ಷೇತ್ರದ ಮುಂಚೂಣಿಯ ಸಂಸ್ಥೆಯಾಗಿ ಬೆಳೆಯಲಿ ಎಂದು ಶುಭ ಕೋರಿದರು. ನಂದನ ಪುತ್ತೂರು ಚಿಟ್ಸ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಅಧ್ಯಕ್ಷತೆ ವಹಿಸಿದ್ದರು.

ಔರಾ ಕನಸ್ಟಕ್ಷನ್ಸ್ ಆಡಳಿತ ಪಾಲುದಾರ ಸುಕುಮಾರ್, ದ.ಕ.ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ರಾಮ ಮುಗೋಡಿ ಮುಖ್ಯ ಅತಿಥಿಯಾಗಿದ್ದರು. ನಂದನ ಪುತ್ತೂರು ಚಿಟ್‌ನ ಉಪಾಧ್ಯಕ್ಷ ದಾಮೋದರ ಪಾಟಾಳಿ ಸ್ವಾಗತಿಸಿದರು. ನಿರ್ದೇಶಕ ಉಪೇಂದ್ರ ಬಲ್ಯಾಯ ವಂದಿಸಿದರು. ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here