ಹಲವು ಅಡೆತಡೆಗಳ ಬಳಿಕ ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆ ನಿರ್ಮಾಣ ಕಾರ್ಯ ಪೂರ್ಣ:ಮಾ.7,8ರಂದು ನಾಗಪ್ರತಿಷ್ಠೆ

0

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಪತ್ರಿಕಾಗೋಷ್ಠಿ

ಪುತ್ತೂರು: ಹಲವಾರು ವಿಘ್ನ, ಅಡೆತಡೆಗಳ ಬಳಿಕ ಮುಂಡೂರು ಶ್ರೀಮೃತ್ಯುಂಜಯೇಶ್ವರ ದೇವಸ್ಥಾನದ ನಾಗನಕಟ್ಟೆ ನಿರ್ಮಾಣ ಕಾರ್ಯ ಪೂರ್ತಿಯಾಗಿದ್ದು ಮಾ.7 ಮತ್ತು 8ರಂದು ನಾಗಪ್ರತಿಷ್ಠ ಕಾರ್ಯ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾಗನಕಟ್ಟೆ ರಚನೆಯಲ್ಲಿ ಎದುರಾದ ತೊಡಕುಗಳನ್ನು ಬಿಚ್ಚಿಟ್ಟ ಲೋಕಪ್ಪ ಗೌಡರು ತಮಗಾದ ನೋವನ್ನು ಎಳೆಎಳೆಯಾಗಿ ತಿಳಿಸಿದರು.ದಿನಾಂಕ 11-04-2021ರಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ದೇವಸ್ಥಾನದ ಸಾನಿಧ್ಯ ವೃದ್ಧಿಯ ದೃಷ್ಟಿಯಿಂದ ಅಷ್ಠಮಂಗಲ ಚಿಂತನೆ ನಡೆಸುವಂತೆ ತೀರ್ಮಾನಿಸಿ ಅದರಂತೆ 2021ರ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಕುತ್ತಿಕೋಳು ಶಶೀಂದ್ರ ನಾಯರ್‌ರವರಿಂದ ಅಷ್ಠಮಂಗಲ ಪ್ರಶ್ನಾಚಿಂತನೆ ನಡೆಸಿ ದೇವಸ್ಥಾನದ ತಂತ್ರಿಗಳ ಮಾರ್ಗದರ್ಶನದಂತೆ ಮೊದಲಾಗಿ ನಾಗನಕಟ್ಟೆ ಪ್ರತಿಷ್ಠಾಪನೆ ಬಳಿಕ ಪುಷ್ಕರಿಣಿ, ದೈವಗಳ ಕಟ್ಟೆ ಮತ್ತು ಅರ್ಚಕರ ವಾಸಕ್ಕೆ ಮನೆ ಕಟ್ಟಲು ತೀರ್ಮಾನಿಸಿ 2022ರ ಮಾರ್ಚ್‌ನಲ್ಲಿ ನಿರ್ಮಾಣ ಕಾರ್ಯ ಪ್ರಾರಂಭ ಮಾಡಲಾಗಿತ್ತು. ನಿರ್ಮಾಣ ಕಾರ್ಯಕ್ಕೆ ತಗಲುವ ವೆಚ್ಚವನ್ನು ಭಕ್ತಾದಿಗಳಿಂದ ಸಂಗ್ರಹಿಸಲು ಮತ್ತು ದೇವಸ್ಥಾನದ ಹುಂಡಿಯಿಂದ ಖರ್ಚು ಮಾಡಲು ಆಡಳಿತಾತ್ಮಕ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ನಾಗನಕಟ್ಟೆ ನಿರ್ಮಾಣದ ಎಲ್ಲಾ ಖರ್ಚುವೆಚ್ಚಗಳನ್ನು ನಳಿನಿ ಲೋಕಪ್ಪ ದಂಪತಿ ಭರಿಸಿದ್ದು ಪ್ರತಿಷ್ಠಾಪನೆಗೆ 5 ದಿನಗಳು ಬಾಕಿ ಇರುವಾಗ ದೇವಸ್ಥಾನದ ಹಿಂದಿನ ವ್ಯವಸ್ಥಾಪನಾ ಸಮಿತಿ ಅದ್ಯಕ್ಷರ ನೇತೃತ್ವದಲ್ಲಿ , ದಿನಾಂಕ 30-05-2022ರಂದು ನಿರ್ಮಾಣಗೊಂಡ ನಾಗನಕಟ್ಟೆ ದೋಷಪೂರಿತವಾಗಿದೆ ಎಂದು ಸುಳ್ಳನ್ನು ಹರಡಿ ಪ್ರತಿಭಟನೆ ನಡೆಸಿ ನಾಗಪ್ರತಿಷ್ಠೆ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಇದಾದ ಬಳಿಕ ಕ್ಷೇತ್ರದ ತಂತ್ರಿವರ್ಯರಿಂದ ನಾಗೇಶ್ ತಂತ್ರಿಗಳ ಸಲಹೆಯಂತೆ ಮತ್ತು ಅಷ್ಠಮಂಗಲ ಪ್ರಶ್ನೆ ಚಿಂತನೆ ನಡೆಸಿಕೊಟ್ಟ ಕುತ್ತಿಕೋಳು ಶಶೀಂದ್ರ ನಾಯರ್ ಮತ್ತು ವಾಸ್ತುಶಿಲ್ಪಿ ಮುನಿಯಂಗಲ ಕೃಷ್ಣಪ್ರಸಾದ್‌ರವರನ್ನು ಕರೆಯಿಸಿ ಸಭೆ ನಡೆಸಿ ನಾಗನಕಟ್ಟೆಯಲ್ಲಿ ದೋಷಗಳಿದೆಯೇ ಎಂದು ದೈವಜ್ಞರು ರಾಶಿ ಪ್ರಶ್ನೆಗೆ ಮುಂದಾದಾಗ ಅದನ್ನು ಕೆಲವರು ತಡೆದು ಗಲಾಟೆ ಮಾಡಿದರು. ಕೊನೆಗೂ ನಿರ್ಮಾಣ ಹಂತದಲ್ಲಿನ ನಾಗನಕಟ್ಟೆಯನ್ನು ತೆಗೆದು ಮತ್ತೆ ನಿರ್ಮಾಣ ಮಾಡಲು ಮುಂದಾಗಬೇಕಾಯಿತು. ದೇವಸ್ಥಾನದ ಭಕ್ತಾದಿಗಳಿಂದ ಯಾವುದೇ ದೇಣಿಗೆ ಪಡೆಯದೆ ಹುಂಡಿಯ ಹಣ ಬಳಸದೆ ದಿವಂಗತ ಬಾಬು ಆಚಾರ್ಯರ ಪತ್ನಿ ವಾರಿಜ ಅವರ ಅನುಮತಿಯನ್ನು ಪಡೆದು ಮತ್ತು ಮಕ್ಕಳಿಗೆ ಸೇರಿದ ವರ್ಗಸ್ಥಳದಲ್ಲಿ ಅವರ ಒಪ್ಪಿಗೆ ಪಡೆದು ನಾಗನಕಟ್ಟೆಯನ್ನು ರಚಿಸಲಾಗಿದೆ ಎಂದರು.

ದೇವಸ್ಥಾನದ ಒಡೆತನದ ಜಾಗವಲ್ಲದ ಕಾರಣ ಇಲಾಖೆಯ ಅನುಮತಿಯನ್ನು ಪಡೆಯಲಾಗಿದೆ. ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಮಾರ್ಚ್ 7 ಮತ್ತು 8ರಂದು ನಾಗಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ ಎಂದು ಲೋಕಪ್ಪ ಗೌಡ ತಿಳಿಸಿದ್ದಾರೆ. ಇದೇ ರೀತಿ ದೇವಸ್ಥಾನದ ಮಾಲೀಕತ್ವದ ಜಮೀನಿನಲ್ಲಿರುವ ಸಭಾಭವನದ ಬಳಕೆಗೂ ನಿರಂತರವಾಗಿ ಅಡ್ಡಿಪಡಿಸಿದ್ದು ತತ್ಸಂಬಂಧ ಎಲ್ಲಾ ದಾಖಲೆಗಳು ಸರಿಯಾಗಿದೆ ಎಂದು ಇಲಾಖಾDiಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ಸಂಪೂರ್ಣವಾಗಿ ದೇವಸ್ಥಾನದ ಸುಪರ್ದಿಗೊಳಪಟ್ಟ ಸಭಾಭವನವನ್ನು ಬಳಸಿಕೊಳ್ಳಬೇಕೆಂದು ಲೋಕಪ್ಪ ಗೌಡ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಜೋಯಿಷ, ನಳಿನಿ ಲೋಕಪ್ಪ ಗೌಡ, ಪ್ರವೀಣ್ ಆಚಾರ್ಯ, ಸುಭಾಷ್‌ಚಂದ್ರ ಶೆಣೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here