ಕಸ್ತೂರಿರಂಗನ್ ವರದಿಯಲ್ಲಿ ಸೇರಿದ್ದರೆ ದೋಳ್ಪಾಡಿ ಗ್ರಾಮ ಕೈಬಿಡಲು ತಕ್ಷಣವೇ ಸರಕಾರಕ್ಕೆ ಶಿಫಾರಸ್ಸು

0

ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಭರವಸೆ
115ಕ್ಕೂ ಮಿಕ್ಕಿ ಅರ್ಜಿಗಳು ವಿಲೇವಾರಿ
ಜನರನ್ನು ಸತಾಯಿಸದೆ ಸೇವೆ ನೀಡಿ- ಅಧಿಕಾರಿಗಳಿಗೆ ಜಿಲ್ಲಾಧಿಕಾರಿ

ಕಾಣಿಯೂರು:ಉದ್ದೇಶಿತ ಕಸ್ತೂರಿರಂಗನ್ ವರದಿಯಲ್ಲಿ ದೋಳ್ಪಾಡಿ ಗ್ರಾಮದ ಹೆಸರು ಉಲ್ಲೇಖವಾಗಿದ್ದರೆ ದೋಳ್ಪಾಡಿ ಗ್ರಾಮವನ್ನು ಕಸ್ತೂರಿರಂಗನ್ ವರದಿಯಿಂದ ಕೈಬಿಡುವಂತೆ ತಕ್ಷಣ ಸರಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್.ಅವರು ಫೆ.20ರಂದು ದೋಳ್ಪಾಡಿ ಸರಕಾರಿ ಶಾಲೆಯಲ್ಲಿ ನಡೆದ `ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.


ತಮ್ಮ ಕೆಲಸ ಕಾರ್ಯಗಳಿಗಾಗಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸುವ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಜನರು ಸದುಪಯೋಗಪಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಕರೆ ನೀಡಿದರು.ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತ್ಯವ್ಯ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯವರು ಉದ್ಘಾಟಿಸಿದರು.


ಕಸ್ತೂರಿರಂಗನ್ ವರದಿಯಿಂದ ದೋಳ್ಪಾಡಿ ಗ್ರಾಮವನ್ನು ಕೈಬಿಡುವಂತೆ ಗ್ರಾ.ಪಂ.ಸದಸ್ಯ ಲೋಕಯ್ಯ ಪರವ ಒತ್ತಾಯಿಸಿದರಲ್ಲದೆ, ಒಂದು ವೇಳೆ ಕಸ್ತೂರಿರಂಗನ್ ವರದಿಯಲ್ಲಿ ದೋಳ್ಪಾಡಿಯನ್ನು ಸೇರಿಸಿದ್ದರೆ ಇಲ್ಲಿನ ಜನಸಾಮಾನ್ಯರು ಕಷ್ಠಪಡಬೇಕಾದ ಸನ್ನಿವೇಶ ಎದುರಾಗಲಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಪಶ್ಮಿಮ ಘಟ್ಟ ಮತ್ತು ಸೂಕ್ಷ್ಮ ಪರಿಸರ ವಲಯವೆಂದು ಘೋಷಣೆ ಮಾಡಲಾಗುವ ಕಸ್ತೂರಿರಂಗನ್ ವರದಿಯಲ್ಲಿ ದೋಳ್ಪಾಡಿಯನ್ನು ಉಲ್ಲೇಖಿಸಲಾಗಿದೆ ಎಂದಾದರೆ ದೋಳ್ಪಾಡಿ ಗ್ರಾಮವನ್ನು ವರದಿಯಿಂದ ಕೈಬಿಡುವಂತೆ ನಾನು ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದರು.


ಜಟಿಲ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಸಿಗದಿದ್ದರೂ ಸೀಮಿತ ಕಾಲಾವಕಾಶದೊಳಗೆ ಪರಿಹಾರ ನೀಡಲಾಗುವುದು.ಅಧಿಕಾರಿಗಳು ಜನರನ್ನು ಸತಾಯಿಸದೆ ಕಾನೂನಿನಡಿಯಲ್ಲಿ ಜನರಿಗೆ ಸೇವೆ ನೀಡಲು ಬದ್ದರಾಗಬೇಕು.ಆ ಮೂಲಕ ಜನರಿಗೆ ಇಲಾಖೆ ಮೇಲೆ ವಿಶ್ವಾಸ ಮೂಡಿಸುವಂತೆ ಮಾಡಬೇಕು ಎಂದು ಜಿಲ್ಲಾಧಿಕಾರಿ ರವಿ ಕುಮಾರ್ ಹೇಳಿದರು.


ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸರ್ವೆ ಇಲಾಖಾ ಅಧಿಕಾರಿ ನಿರಂಜನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಪುತ್ತೂರು ಉಪವಿಭಾಗಾಧಿಕಾರಿ ಗಿರೀಶ್‌ನಂದನ್, ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಕಡಬ ತಹಶೀಲ್ದಾರ್ ರಮೇಶ್ ಬಾಬು ಉಪಸ್ಥಿತರಿದ್ದರು.ಕಡಬ ತಾಲೂಕು ಕಚೇರಿ ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಸ್ವಾಗತಿಸಿದರು.ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.


ಹೊಸ ಭರವಸೆ ಮೂಡಿಸಿದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ:


ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಅವರ, ಅರ್ಜಿ ವಿಲೇವಾರಿ ಕ್ರಮ ಗ್ರಾಮ ವಾಸ್ತವ್ಯದ ಕುರಿತು ಭರವಸೆ ಮೂಡಿಸಿದರೆ ಸವಣೂರು ಗ್ರಾಮದ ಕಂಚಿಕಾರ ಕೆರೆಯ ಸುತ್ತಲಿನ ಸರಕಾರಿ ಜಾಗವನ್ನು ಒತ್ತುವರಿ ಮಾಡಿರುವ ವಿಚಾರದ ಕುರಿತು ಜಿಲ್ಲಾಧಿಕಾರಿಯವರ ಉತ್ತರದಿಂದ ಅಸಮಾಧಾನಗೊಂಡು ಸವಣೂರು ಗ್ರಾ.ಪಂ.ನ 21 ಮಂದಿ ಸದಸ್ಯರೂ ಸ್ಥಳದಲ್ಲೇ ರಾಜೀನಾಮೆ ಸಲ್ಲಿಸಿದ ಘಟನೆಯೂ ನಡೆದಿದೆ.


ಇಲಾಖಾಧಿಕಾರಿಯಾಗಿದ್ದವರಿಗೇ ಕಾನೂನಿನ ಅರಿವು ಇಲ್ಲದ್ದು ದುರಂತ..:

94ಸಿ ಯೋಜನೆಯನ್ವಯ ಕಾಣಿಯೂರಿನ ಧರ್ಮೇಂದ್ರ ಗೌಡ ಕಟ್ಟತ್ತಾರು ಮತ್ತು ಕಮಲಾಕ್ಷೀ ಎಂಬವರಿಗೆ ಜಾಗ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದ, ರುಕ್ಮಯ್ಯ ಗೌಡ ಮಲೆಕೆರ್ಚಿ ಎಂಬವರ ಅರ್ಜಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ವೈಯಕ್ತಿಕ ವೈಮನಸ್ಸಿನಿಂದ ಇಂತಹ ಅರ್ಜಿ ನೀಡುವುದು ಸರಿಯಲ್ಲ ಹಾಗೂ ಸಮಯ ವ್ಯರ್ಥ ಮಾಡಬಾರದು.ಒಬ್ಬ ಇಲಾಖಾಧಿಕಾರಿಯಾಗಿದ್ದ ನಿಮಗೇ ಕಾನೂನಿನ ಅರಿವು ಇಲ್ಲದ್ದು ದುರಂತ ಎಂದು ಅರ್ಜಿದಾರರನ್ನುದ್ದೇಶಿಸಿ ಹೇಳಿದರು.


ಗಂಗಾಕಲ್ಯಾಣಕ್ಕೆ ಅರ್ಹನಾಗಿದ್ದರೂ ಮಂಜೂರಾತಿಗೆ ವಿಳಂಬ:

ವೆಂಕಪ್ಪ ಪರವ ಅವರು, ತಾನು ಗಂಗಾ ಕಲ್ಯಾಣ ಯೋಜನೆಗೆ ಅರ್ಹನಾಗಿದ್ದರೂ ಯೋಜನೆ ಮಂಜೂರಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದಾಗ ಯೋಜನೆಯ ಅಧಿಕಾರಿಗಳನ್ನು ಕರೆಸಿ ಕೂಡಲೇ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.


ಈ ವರ್ಷವೇ ಕಿಂಡಿ ಅಣೆಕಟ್ಟು ನಿರ್ಮಿಸಿ:

ಪಾಲ್ತಾಡಿ ಗ್ರಾಮಸ್ಥರು ಅಂಗಡಿಹಿತ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂದು ನೀಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಲಾನಯನ ಇಲಾಖೆಯ ಅಧಿಕಾರಿಗಳಿಗೆ ಈ ವರ್ಷದಲ್ಲೇ ಕಿಂಡಿ ಅಣೆಕಟ್ಟು ನಿರ್ಮಾಣ ಕುರಿತಂತೆ ಕ್ರಮ ವಹಿಸಬೇಕು ಎಂದು ಹೇಳಿ, ಪ್ರಗತಿಯ ವರದಿ ನೀಡಲು ಸೂಚಿಸಿದರು.


ಪಾಲ್ತಾಡಿಗೆ ಪ್ರತ್ಯೇಕ ಗ್ರಾ.ಪಂ. ಸರಕಾರಕ್ಕೆ ಪ್ರಸ್ತಾವನೆ:

ಪಾಲ್ತಾಡಿ ಗ್ರಾಮವನ್ನು ಪುತ್ತೂರು ತಾಲೂಕಿಗೆ ಸೇರ್ಪಡೆ ಮಾಡಬೇಕು ಹಾಗೂ ಪಾಲ್ತಾಡಿ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ್ ಮಾಡಬೇಕೆಂಬ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ತಾಲೂಕು ಸೇರ್ಪಡೆ ವಿಚಾರ ಇನ್ನು ಅಸಾಧ್ಯ.ಈ ಕುರಿತ ಎಲ್ಲಾ ಪ್ರಕ್ರಿಯೆ ಮುಗಿದಿದೆ.ಪಾಲ್ತಾಡಿಗೆ ಪ್ರತ್ಯೇಕ ಗ್ರಾ.ಪಂ.ಮಾಡುವ ನಿಟ್ಟಿನಲ್ಲಿ ವರದಿ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.


ದೋಳ್ಪಾಡಿಗೆ ಬಸ್ಸಿನ ವ್ಯವಸ್ಥೆಗೆ ಆದೇಶ:

ದೋಳ್ಪಾಡಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿ ಕೊಡಬೇಕೆಂದು ಉಷಾ ಅವರು ಹೇಳಿದರು.ಧರ್ಮಪಾಲ ರೈ ಪಿಜಕ್ಕಳ ಮಾತನಾಡಿ, 1994 ರಿಂದ ದೋಳ್ಪಾಡಿಗೆ ಒಂದೇ ಬಸ್ಸು ಬರುತ್ತಾ ಇದೆ.ಸುಡು ಬಿಸಿಲಿಗೆ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ.ಮುಂದೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.ಅದೂ ದೂರದ ಶಾಲೆಗಳಲ್ಲಿ ನಡೆಯಲಿರುವುದರಿಂದ ಅಗತ್ಯ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದರು.ದೋಳ್ಪಾಡಿ ಗ್ರಾಮಕ್ಕೆ ಬಸ್ ಸಂಚಾರ ಕುರಿತಂತೆ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಾಳೆಯಿಂದಲೇ ದಿನಕ್ಕೆ 4 ಟ್ರಿಪ್ ಬಸ್ ಓಡಿಸಲು ಕ್ರಮಕೈಗೊಳ್ಳುವಂತೆ ಕೆಎಸ್‌ಅರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.


ಮೊದಲಿನಂತೆಯೇ ರಸ್ತೆ ನಿರ್ಮಾಣಕ್ಕೆ ಕ್ರಮ:

ಅಜ್ಜಿನಡ್ಕ ಕಾಲನಿಗೆ ಈ ಹಿಂದೆ 60 ವರ್ಷಗಳಿಂದಲೂ ಇದ್ದ ರಸ್ತೆಯನ್ನು ಸ್ಥಳೀಯರು ವರ್ಗಜಾಗವೆಂದು ಹೇಳಿಕೊಂಡು ಕಿರಿದು ಮಾಡಿದ್ದಾರೆ.ರಸ್ತೆಯಿಲ್ಲದೆ ಹಲವು ಸಮಸ್ಯೆಗಳಾಗುತ್ತಿವೆ ಎಂದು ಗ್ರಾಮಸ್ಥರು ಮಾಡಿದ ಮನವಿಗೆ ಸ್ಪಂದಿಸಿ,ಈ ಹಿಂದಿನಂತೆಯೇ ರಸ್ತೆ ನಿರ್ಮಾಣಕ್ಕೆ ಕ್ರಮ ಜರಗಿಸುವಂತೆ ಕಾಣಿಯೂರು ಗ್ರಾ.ಪಂ. ಹಾಗೂ ಕಡಬ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.ವಿವಿಧ ಭಾಗದ ರಸ್ತೆಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಜಿಲ್ಲಾಧಿಕಾರಿಯವರು,ಎಲ್ಲಾ ರಸ್ತೆಗಳನ್ನೂ ಉದ್ಯೋಗ ಖಾತರಿ ಯೋಜನೆಯ ಮೂಲಕ ಮಾಡಿಸುವಂತೆ ತಾ.ಪಂ.ಇಓ ಅವರಿಗೆ ನಿರ್ದೇಶನ ನೀಡಿದರು.


ಯಶಸ್ವಿನಿ ಸದಸ್ಯರಿಗೆ ಪುತ್ತೂರಿನ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಕ್ರಮಕೈಗೊಂಡು ವರದಿ ಸಲ್ಲಿಸಲು ಡಿಎಚ್‌ಒಗೆ ಸೂಚನೆ:

ಸರಕಾರದ ಯಶಸ್ವಿನಿ ಯೋಜನೆಯಡಿ ಸದಸ್ಯರಿಗೆ ಚಿಕಿತ್ಸೆ ನೀಡಲಾಗುವ ಎಲ್ಲಾ ಆಸ್ಪತ್ರೆಗಳು ಮಂಗಳೂರು ನಗರ ವ್ಯಾಪ್ತಿಯಲ್ಲಿವೆ.ಇದರಿಂದಾಗಿ ಈ ಭಾಗದ ಜನರಿಗೆ ಸಮಸ್ಯೆಯಾಗಲಿರುವುದರಿಂದ ಪುತ್ತೂರಿನ ಆಸ್ಪತ್ರೆಗಳಲ್ಲೂ ಯಶಸ್ವಿನಿ ಯೋಜನೆಯಡಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಅವರು ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು, ಈ ಕುರಿತು ಕ್ರಮ ಜರುಗಿಸಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸೂಚಿಸಿದರು.ಯಶಸ್ವಿನಿ ಚಿಕಿತ್ಸೆಗೆ ಪುತ್ತೂರು ತಾಲೂಕಿನ ಯಾವುದೇ ಆಸ್ಪತ್ರೆಗಳನ್ನು ಆಯ್ಕೆ ಮಾಡದೇ ಇರುವುದರಿಂದ, ಯೋಜನೆಗೆ ಗರಿಷ್ಠ ಸಂಖ್ಯೆಯ ಸದಸ್ಯರನ್ನು ಸೇರ್ಪಡೆ ಮಾಡಿದ್ದ ಪುತ್ತೂರು ತಾಲೂಕಿನವರಿಗೆ ಈ ಯೋಜನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿರುವ ಕುರಿತು ಕೆಲವು ದಿನಗಳ ಹಿಂದೆ ಸುದ್ದಿಯಲ್ಲಿ ಸಮಗ್ರ ವರದಿ ಪ್ರಕಟವಾಗಿತ್ತು.


ವೇದಿಕೆಗಳಲ್ಲಿ ದೈವಾರಾಧನೆ ವೇಷ ನಿರ್ಬಂಧಿಸಿ:

ದೈವಾರಾಧನೆಗೆ ಸಂಬಂಧಪಟ್ಟ ಕೆಲವೊಂದು ನೃತ್ಯವನ್ನು ಶಾಲಾ ಸಮಾರಂಭ, ಇನ್ನಿತರ ವೇದಿಕೆಗಳಲ್ಲಿ ಪ್ರದರ್ಶಿಸುವುದರಿಂದ ನಮ್ಮ ತುಳುನಾಡಿನ ಸಂಸ್ಕೃತಿ ನಾಶ ಮಾಡಿದಂತಾಗುತ್ತದೆ.ಆದ್ದರಿಂದ ಇದಕ್ಕೆ ಅವಕಾಶ ನೀಡದೆ ನಿರ್ಬಂಧಿಸಬೇಕು ಎಂದು ಲೋಕಯ್ಯ ಪರವ ಮನವಿ ಮಾಡಿದರು.ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರಿಂದ ಅಭಿಪ್ರಾಯವನ್ನು ಪಡೆದುಕೊಂಡು ಮುಂದಿನ ಕ್ರಮಕೈಗೊಳ್ಳಲು ಕಾರ್ಯಪ್ರವೃತ್ತರಾಗುತ್ತೇವೆ ಎಂದರು.


ಕಡಬ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಪಡಿಸಿ:

ಕಡಬ ತಾಲೂಕಿಗೆ ಸಂಪರ್ಕಿಸುವ ಕೊಜಂಬೇಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಅತೀ ಹತ್ತಿರ ರಸ್ತೆಯನ್ನು ಸರ್ವಋತು ರಸ್ತೆಯನ್ನಾಗಿ ಮಾಡಬೇಕು ಎಂದು ಪುರುಷೋತ್ತಮ ಕೆ.ಆರ್ ಮನವಿ ಮಾಡಿದರು.ಈ ಬಗ್ಗೆ ಶಾಸಕರ ಅನುದಾನ ಮಂಜೂರು ಮಾಡಲು ಬರೆಯುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.


ರೈಲು ಓಡಾಟಕ್ಕೆ ಇಲಾಖೆಗೆ ಸೂಚಿಸುವೆ:

ಬೆಳಿಗ್ಗೆ ಹೊತ್ತಿನಲ್ಲಿ ಸುಬ್ರಹ್ಮಣ್ಯದಿಂದ ಲೋಕಲ್ ರೈಲು ಸಂಚಾರ ಮತ್ತು ಜನತೆಯ ಅನುಕೂಲ ಸಮಯಕ್ಕೆ ಸರಿಯಾಗಿ ರೈಲಿನ ಓಡಾಟ ಆರಂಭಿಸುವಂತೆ ಎಂ.ಎನ್.ಗೌಡ ಮನವಿ ಮಾಡಿದರು.ಈ ಕುರಿತು ರೈಲ್ವೇ ಇಲಾಖೆಗೆ ಸೂಚನೆ ನೀಡುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದರು.


ಪುಣ್ಚಪ್ಪಾಡಿ ಗ್ರಾಮಕ್ಕೆ ಬ್ಯಾಂಕ್ ಬೇಕು:

ಪುಣ್ಚಪ್ಪಾಡಿ ಗ್ರಾಮಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಬೇಕೆಂಬ ಗಿರಿಶಂಕರ ಸುಲಾಯ ಅವರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು,ಲೀಡ್ ಬ್ಯಾಂಕ್ ಅಧಿಕಾರಿಯನ್ನು ಕರೆಸಿ ಈ ಕುರಿತು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.ಮುಂದಿನ ಬಾರಿ ಪುಣ್ಚಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಗಿರಿಶಂಕರ್ ಮನವಿ ಮಾಡಿದರು.ಕಡಬ ತಾಲೂಕಿಗೆ ಸಂಬಂಧಿಸಿ ಮುಂದಿನ ಗ್ರಾಮ ವಾಸ್ತವ್ಯದ ಗ್ರಾಮ ಆಯ್ಕೆ ಮಾಡುವಾಗ ಪರಿಗಣಿಸುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.


ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ:

ಯಾವುದೇ ಗ್ರಾಮದಲ್ಲೂ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.


ತಹಸಿಲ್ದಾರ್ ಕಚೇರಿಯಲ್ಲಿ ವಿಳಂಬವಾದರೆ ಗಮನಕ್ಕೆ ತನ್ನಿ:

ಗ್ರಾಮ ವಾಸ್ತವ್ಯದಲ್ಲಿ, ಹಲವು ಅರ್ಜಿಗಳು 94 ಸಿ ಮಂಜೂರಾತಿ ಕುರಿತು ಇದ್ದದ್ದನ್ನು ಗಮನಿಸಿದ ಜಿಲ್ಲಾಧಿಕಾರಿಯವರು ಇಂತಹ ವಿಚಾರಗಳು ಇಲ್ಲಿಯವರೆಗೂ ಬರುವಂತಹ ಅವಶ್ಯಕತೆ ಏನು ಎಂದು ತಹಶೀಲ್ದಾರ್ ಅವರಲ್ಲಿ ಪ್ರಶ್ನಿಸಿದರಲ್ಲದೆ,94 ಸಿ ಕುರಿತಂತೆ ವರದಿ ನೋಡಿ ಮಂಜೂರು ಮಾಡುವಂತೆ ಸೂಚನೆ ನೀಡಿದರು. ತಹಶೀಲ್ದಾರ್ ಕಛೇರಿಯಲ್ಲಿ ವಿಳಂಬ ಮಾಡಿದರೆ ನನ್ನ ಗಮನಕ್ಕೆ ತನ್ನಿ ಎಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಹೇಳಿದರು.2018-19ರಲ್ಲಿ 94ಸಿ ಅಡಿಯಲ್ಲಿ ಮಂಜೂರಾತಿ ಆಗಿದೆ.ಆದರೆ ಅದರ ಶುಲ್ಕ ಪಾವತಿಸಲು ಹೋದಾಗ ದಾಖಲೆಯೇ ಇಲ್ಲ ಎಂದು ಉಮೇಶ್ ರೈ ಪಿಜಕ್ಕಳ ಹೇಳಿದರು.


ಕಾಣಿಯೂರು ಶಾಲೆಯನ್ನು ಕೆಪಿಎಸ್ ಆಗಿ ಮೇಲ್ದರ್ಜೆಗೇರಿಸಬೇಕು:

ಕಾಣಿಯೂರು ಸ.ಹಿ.ಪ್ರಾ.ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮೇಲ್ದರ್ಜೆಗೇರಿಸಬೇಕು ಎಂದು ಕಾಣಿಯೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಅನಿಲ ಹೇಳಿದರು. ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸಿಬ್ಬಂದಿಗಳ ನೇಮಕ ಮಾಡುವಂತೆ ಸುರೇಶ್ ಓಡಬಾಯಿ ಹೇಳಿದರು.ಸಿಬ್ಬಂದಿ ನೇಮಕಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.


ಕೆಲಸ ಮಾಡಿಲ್ಲ ಎಂದಾದರೆ ನಾವು ಕ್ರಮಕೈಗೊಳ್ಳುತ್ತೇವೆ:

ದೋಳ್ಪಾಡಿ ಗ್ರಾಮಸಹಾಯಕ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಶಿವಪ್ಪ ಮುಗೇರ ಎಂಬವರು ದೂರು ಸಲ್ಲಿಸಿದರು.ಕುಂದು ಕೊರತೆಗಳ ಬಗ್ಗೆ ನೀವು ಅರ್ಜಿ ಸಲ್ಲಿಸಿ, ಕೆಲಸ ಮಾಡಿಲ್ಲ ಎಂದಾದರೆ ಅದರ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ.ಅದು ಬಿಟ್ಟು ಫೋನ್ ರಿಸೀವ್ ಮಾಡಿಲ್ಲ, ವಾಟ್ಸಾಪ್ ನೋಡಿಲ್ಲ ಎಂದಾದರೆ ಅದರ ದೂರು ಇಟ್ಕೊಂಡು ಬರಬೇಡಿ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.


ಶತಮಾನ ಕಂಡ ಶಾಲೆಗಳ ರಕ್ಷಣೆಗೆ ಕ್ರಮ:

ಬೊಬ್ಬೆಕೇರಿ ಶಾಲೆ ಶತಮಾನ ಕಂಡ ಶಾಲೆ.ಇದರ ಕಟ್ಟಡಗಳು ಕುಸಿಯುವ ಸ್ಥಿತಿಯಲ್ಲಿದೆ.ತಕ್ಷಣ ಅನುದಾನ ಒದಗಿಸುವ ಕೆಲಸ ಆಗಬೇಕು ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ತೀರ್ಥಕುಮಾರ್ ಪೈಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ವಿಶೇಷವಾಗಿ ಶತಮಾನ ಕಂಡಂತಹ ಪ್ರತಿ ತಾಲೂಕಿನಲ್ಲಿ ಶಾಲೆಗಳ ಬಗ್ಗೆ ಪಟ್ಟಿ ತಯಾರಿಸಿ ಅವುಗಳ ಸಂರಕ್ಷಣೆಗಾಗಿ ವಿಶೇಷ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಡಿಡಿಪಿಐಯವರಿಗೆ ಸೂಚಿಸಿದರು.ಕಾಣಿಯೂರು ಅಂಗನವಾಡಿ ಕೇಂದ್ರಕ್ಕೆ ಆಟದ ಮೈದಾನ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.


ಅಪಾಯದಲ್ಲಿರುವ ವಿದ್ಯುತ್ ಪರಿವರ್ತಕ ಶಿಫ್ಟ್ ಮಾಡಿ:

ಕಾಣಿಯೂರು ಪೇಟೆಯಲ್ಲಿ ವಿದ್ಯುತ್ ಪರಿವರ್ತಕ ಕೆಳಭಾಗದಲ್ಲಿದ್ದು ಅಪಾಯದ ಸ್ಥಿತಿಯಲ್ಲಿದೆ.ತೆರವುಗೊಳಿಸುವ ಕಾರ್ಯ ಆಗಬೇಕಿದೆ ಎಂದು ಗ್ರಾ.ಪಂ.ಸದಸ್ಯ ವಸಂತ ಪೆರ್ಲೊಡಿ ಹೇಳಿದರು.ಮೊದಲಿಗೆ ಆ ವಿದ್ಯುತ್ ಪರಿವರ್ತಕ ಕೆಳಭಾಗದಲ್ಲಿರಲಿಲ್ಲ ದೇವಸ್ಥಾನ ನಿರ್ಮಾಣ ಸಂದರ್ಭದಲ್ಲಿ ಮಣ್ಣು ಹಾಕಿದ ಬಳಿಕ ಕೆಳಭಾಗದಲ್ಲಿದೆ ಎಂದು ಮೆಸ್ಕಾಂ ಇಂಜಿನಿಯರ್ ನಾಗರಾಜ್ ಹೇಳಿದಾಗ, ಅಪಾಯಕಾರಿ ಇದೆ ಎಂದಾದರೆ ತಕ್ಷಣ ಶಿಫ್ಟ್ ಮಾಡುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ಸೂಚಿಸಿದರು.ದೋಳ್ಪಾಡಿಯಲ್ಲಿ ವಿದ್ಯುತ್ ತಂತಿ ಬಹಳ ಹಳೆಯದಾಗಿದ್ದು, ಬದಲಾಯಿಸಿ ಹೊಸ ವಿದ್ಯುತ್ ತಂತಿ ಅಳವಡಿಸುವಂತೆ ವೆಂಕಟ್ರಮಣರವರು ಹೇಳಿದರು.ತಕ್ಷಣ ಬದಲಾಯಿಸಲು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.


ಸರ್ಕಲ್ ನಿರ್ಮಿಸಿ:

ರಾಜ್ಯ ಹೆದ್ದಾರಿ ರಸ್ತೆಯ ಪುಣ್ಚತ್ತಾರು ಮತ್ತು ಕೂಡುರಸ್ತೆ ಎಂಬಲ್ಲಿ ಅನೇಕ ಅಪಘಾತಗಳು ನಡೆದಿದ್ದು, ಇಲ್ಲಿಗೆ ಸರ್ಕಲ್ ನಿರ್ಮಾಣ ಮಾಡಬೇಕು ಎಂದು ಗೋಪಾಲಕೃಷ್ಣ ಪಟೇಲ್ ಚಾರ್ವಾಕ ಹೇಳಿದರು.ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಡಿಸಿ ಹೇಳಿದರು.ದೋಳ್ಪಾಡಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ಲೋಕಯ್ಯ ಪರವ ಹೇಳಿದರು.


ಜಲಾನಯನ ಇಲಾಖೆಗೆ ಸೂಚನೆ:

ಬಿರೋಳಿಗೆ ನೀಟಡ್ಕ ಸಂಪರ್ಕ ರಸ್ತೆಯಲ್ಲಿ ಕಿಂಡಿಅಣೆಕಟ್ಟು ಇದ್ದು,ಮಳೆಯ ಅತಿವೃಷ್ಠಿಯಿಂದ ಶಾಲೆಯ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಹೋಗಲು ತೊಂದರೆಯಾಗುತ್ತಿದ್ದು, ಪರಿಹಾರ ಒದಗಿಸಿಕೊಡಬೇಕೆಂದು ಹರಿಶ್ಚಂದ್ರ ನೀಟಡ್ಕ ಹೇಳಿದರು.ಈ ಬಗ್ಗೆ ಜಲಾನಯನ ಇಲಾಖೆಯಿಂದ ಕಿಂಡಿಅಣೆಕಟ್ಟು ನಿರ್ಮಾಣವಾದ್ದರಿಂದ ಮುಂದಿನ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗೆ ಡಿಸಿ ಸೂಚಿಸಿದರು.


ಪೊಲೀಸರಿಗೆ ದೂರು ನೀಡಿ:

ಚಾರ್ವಾಕ ಪ್ರಾ.ಕೃ.ಪ.ಸ.ಸಂಘದಲ್ಲಿ ಸಾಲವನ್ನು ಪಡೆದಿದ್ದು ಪಾವತಿಸಿದ್ದರೂ ಸಾಲ ಬಾಕಿಯಿರುತ್ತದೆ ಎಂದು ಸಂಘದಿಂದ ನೋಟೀಸ್ ನೀಡಿರುತ್ತಾರೆ ಎಂದು ವೆಂಕಪ್ಪ ಪರವ ಹೇಳಿದರು.ನೀವು ವೈಯುಕ್ತಿಕ ಸಾಲವನ್ನು ಪಡೆದಿದ್ದೀರಿ, ಅನ್ಯಾಯವಾಗಿದೆ, ಮೋಸವಾಗಿದೆ ಎಂದಾದರೆ ಪೊಲೀಸರಿಗೆ ದೂರು ನೀಡಿ, ಅವರು ಕ್ರಮಕೈಗೊಳ್ಳುತ್ತಾರೆ ಎಂದು ಡಿಸಿ ಹೇಳಿದರು.


ರೈತ ಉತ್ಪಾದನಾ ಕಂಪೆನಿಗೆ ನಿವೇಶನ ಒದಗಿಸಿ:

ರೈತ ಉತ್ಪಾದನಾ ಕಂಪೆನಿ ಈಗಾಗಲೇ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕಾಣಿಯೂರು, ಬೆಳಂದೂರು, ಸವಣೂರು ಪರಿಸರದಲ್ಲಿ ನಿವೇಶನವನ್ನು ಒದಗಿಸುವಂತೆ ಗಿರಿಶಂಕರ ಸುಲಾಯ ಹೇಳಿದರು.ಗೋಪಾಲಕೃಷ್ಣ ಭಟ್ ದೋಳ್ಪಾಡಿಯವರು, ನಾನು ದೋಳ್ಪಾಡಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 3 ಸೆಂಟ್ಸ್ ಜಾಗವನ್ನು ದಾನ ಮಾಡಲು ಸಿದ್ದನಿದ್ದೆನೆ ಎಂದಾಗ, ಮುಂದಿನ ಕಾರ್ಯ ಯೋಜನೆಗಳ ಉದ್ದೇಶವನ್ನು ಇಟ್ಟುಕೊಂಡು ಕಟ್ಟಡ ನಿರ್ಮಾಣ ಮಾಡಬೇಕು, ಕೇವಲ 3 ಸೆಂಟ್ಸ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕಿಂತ ನಿಮ್ಮಲ್ಲಿದ್ದ ೮ ಸೆಂಟ್ಸ್ ಜಾಗವನ್ನು ಸಂಘಕ್ಕೆ ಬಿಟ್ಟುಕೊಡಿ, ನಿಮಗೆ ಬೇರೆ ಜಾಗವನ್ನು ಮಾಡಿಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.


ಕಳಪೆ ಕಾಮಗಾರಿ:

ಕಾಣಿಯೂರು ಭಜನಾ ಮಂದಿರದ ಬಳಿ ಹಾದು ಹೋಗುವ ರಸ್ತೆ ಇತ್ತೀಚೆಗೆ ಕಾಂಕ್ರಿಟೀಕರಣಗೊಂಡಿದ್ದು, ಕಾಮಗಾರಿಯು ಕಳಪೆಯಾಗಿದೆ ಎಂದು ಎಂ.ಎನ್.ಗೌಡ ಅವರು ಗಮನ ಸೆಳೆದರು.ಇದನ್ನು ಸರಿಪಡಿಸಲು ಅಗತ್ಯವಾಗಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಬೇಕು ಎಂದು ಇಂಜಿನಿಯರ್ ಅವರಿಗೆ ಜಿಲ್ಲಾಧಿಕಾರಿ ಆದೇಶಿಸಿದರು.


ಸಿಸಿ ಕ್ಯಾಮರಾ ಅಳವಡಿಸಿ:

ದೋಳ್ಪಾಡಿ ಗ್ರಾಮದಲ್ಲಿ ಕಳ್ಳತನದಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ದೋಳ್ಪಾಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಪುರುಷೋತ್ತಮ ಕೆ.ಆರ್ ಮನವಿ ಮಾಡಿದರು.


ಕಾಡಾನೆ ದಾಳಿ ಸ್ಥಳಕ್ಕೆ ಡಿಸಿ ಭೇಟಿ ತಡವಾಗಿ ಆರಂಭಗೊಂಡ ಕಾರ್ಯಕ್ರಮ:

ಕಡಬ ತಾಲೂಕು ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ರಂಜಿತಾ ರೈ ಮತ್ತು ರಮೇಶ್ ರೈ ಎಂಬವರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ನೇರವಾಗಿ ಘಟನಾ ಸ್ಥಳಕ್ಕೇ ಹೋಗಿದ್ದರು.ಇದರಿಂದಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆ ಬದಲು ಮಧ್ಯಾಹ್ನ 1.20 ಕ್ಕೆ ಆರಂಭಗೊಂಡು ರಾತ್ರಿ 7.15 ರ ತನಕವೂ ಮುಂದುವರಿಯಿತು.ಜನರು ಸಮಸ್ಯೆಗಳ ಅರ್ಜಿ ಹಿಡಿದುಕೊಂಡು ಕಾದು ಕುಳಿತ್ತಿದ್ದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಯವರು ತಡವಾದುದಕ್ಕೆ ಆರಂಭದಲ್ಲಿಯೇ ಕ್ಷಮೆ ಯಾಚಿಸಿ ಮಾತು ಮುಂದುವರಿಸಿದರು.ಮೂರು ಗಂಟೆ ಸುಮಾರಿಗೆ ಊಟದ ವಿರಾಮ ನೀಡಲಾಯಿತು.ಬಳಿಕ ಅರ್ಜಿ ವಿಲೇವಾರಿ ಮುಂದುವರಿಯಿತು.ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡಲಾಯಿತು.ಅರ್ಜಿಗಳು ಕಾನೂನಿನಡಿಯಲ್ಲಿದ್ದರೂ ವಿಲೇವಾರಿಗೆ ವಿಳಂಬ ಧೋರಣೆ ಅನುಸರಿಸಿದ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.ಒಟ್ಟು 115 ಕ್ಕೂ ಮಿಕ್ಕಿ ಅರ್ಜಿಗಳು ವಿಲೇವಾರಿಯಾದವರು.

ಕಂಚಿಕಾರ ಕೆರೆ ಸುತ್ತಲಿನ ಜಾಗ ಒತ್ತುವರಿ ವಿಚಾರ -ಸವಣೂರು ಗ್ರಾ.ಪಂ. ಸದಸ್ಯರ ಸಾಮೂಹಿಕ ರಾಜಿನಾಮೆ

ಸವಣೂರು ಗ್ರಾಮದ ಕಂಚಿಕಾರ ಕೆರೆ ಸುತ್ತಲಿನ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿ, ಕೆರೆಗೆ ಹೋಗುವ ದಾರಿಯನ್ನೂ ಬಂದ್ ಮಾಡಿ ಅತಿಕ್ರಮಿತ ಜಾಗದಲ್ಲಿ ಕೃತಾವಳಿ ಮಾಡಿಕೊಂಡಿದ್ದು ಈ ಜಾಗವನ್ನು ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗಾಗಿ ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸುವಂತೆ ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಮಾಡಿದ ಮನವಿಗೆ ಜಿಲ್ಲಾಧಿಕಾರಿಯವರು ನಿರಾಕರಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಸ್ಥಳದಲ್ಲೇ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು.
ಸವಣೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಂಚಿಕಾರ ಕೆರೆಯ ಜಾಗ 1.30 ಎಕ್ರೆ ಗ್ರಾಮ ಪಂಚಾಯತ್‌ಗೆ ನೀಡಲಾಗಿದ್ದು ಅದರ ಸುತ್ತ ಇರುವ 2.24 ಎಕ್ರೆ ಜಾಗವನ್ನು ಖಾಸಗಿ ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡು ಕೃತಾವಳಿ ಮಾಡಿದ್ದಾರೆ.ಕೆರೆಗೆ ಹೋಗುವ ದಾರಿಯನ್ನೂ ಅವರು ಬಂದ್ ಮಾಡಿದ್ದಾರೆ. ಕೆರೆಯ ಸುತ್ತ ಇರುವ 2.24 ಎಕ್ರೆ ಜಾಗದ ಒತ್ತುವರಿ ತೆರವು ಮಾಡಿ ಅದನ್ನು ಗ್ರಾಮ ಪಂಚಾಯತ್‌ಗೆ ಹಸ್ತಾಂತರಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷ ಹಾಗೂ ಸದಸ್ಯರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ಕೆರಯ ಜಾಗ ಒತ್ತುವರಿಯಾಗಿಲ್ಲ.1.30 ಎಕ್ರೆ ಕೆರೆಯ ಜಾಗ ಎಲ್ಲೂ ಒತ್ತುವರಿಯಾಗಿಲ್ಲ.ಈ ವಿಚಾರದಲ್ಲಿ ಈಗಾಗಲೇ ಹಲವು ದೂರುಗಳು, ಮನವಿಗಳು ಬಂದಿದ್ದು ನೀವೂ ನನ್ನ ಜೊತೆ ಮಾತನಾಡಿ ಗಮನಕ್ಕೆ ತಂದಿದ್ದೀರಿ.ಈ ವಿಚಾರ ಈಗಾಗಲೇ ಪರಿಶೀಲನೆ ನಡೆದಿದ್ದು ಸರ್ವೆ ಇಲಾಖೆಯವರು ಸರ್ವೆ ಮಾಡಿ ಸ್ಕೆಚ್ ಆಗಿದೆ.ಕೆರೆಯ ಜಾಗ ಒತ್ತುವರಿ ಆಗಿಲ್ಲ ಎಂದು ಅವರು ಈಗಾಗಲೇ ವರದಿ ನೀಡಿದ್ದು ಗ್ರಾಮ ಪಂಚಾಯತ್‌ನವರಿಗೂ ಈ ವಿಚಾರ ಗೊತ್ತಿದೆ ಎಂದಾಗ, ಕೆರೆಯ ಜಾಗ ಒತ್ತುವರಿಯಾಗಿಲ್ಲ.ಅದರ ಸುತ್ತ್ತಲಿನ ಜಾಗದ ಒತ್ತುವರಿ ತೆರವು ಮಾಡಿ ಗ್ರಾಮ ಪಂಚಾಯತ್‌ಗೆ ನೀಡಬೇಕು ಎಂದು ಗ್ರಾಮ ಪಂಚಾಯತ್‌ನವರು ಹೇಳಿದರು.ಕೆರೆಯ ಜಾಗ ಒತ್ತುವರಿಯಾಗಿಲ್ಲ ಎಂದು ನೀವೇ ಮಾಧ್ಯಮದವರ ಮುಂದೆ ಒಪ್ಪಿಕೊಂಡಿದ್ದೀರಿ.ಕೆರೆಯ ಸುತ್ತಲಿನ ಜಾಗ ಅದು ಕಂದಾಯ ಇಲಾಖೆಗೆ ಸೇರಿದ್ದು.ಅದನ್ನು ಸಂರಕ್ಷಣೆ ಮಾಡುವುದು ನಮ್ಮ ಕೆಲಸ,ಆದರೆ ಅದು ಗ್ರಾಮ ಪಂಚಾಯತ್ ಜಾಗ ಅಲ್ಲ.ಅದನ್ನು ನಿಮಗೆ ಕೊಡಬೇಕೆಂದೇನೂ ಇಲ್ಲ.ಗ್ರಾಮ ಪಂಚಾಯತ್‌ಗೆ ಹೊರತಾದ ಜಾಗ ನಿಮ್ಮದಲ್ಲ.ಅದು ಕಂದಾಯ ಇಲಾಖೆಯದ್ದು, ಅದರ ಸಂರಕ್ಷಣೆ ಮಾಡಿ ಕಂದಾಯ ಇಲಾಖೆಯಲ್ಲಿ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ ಜಿಲ್ಲಾಧಿಕಾರಿಯವರು, ಅಷ್ಟಕ್ಕೂ ಇದು ನಿಮ್ಮ ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದ ಗ್ರಾಮ ವಾಸ್ತವ್ಯವೂ ಅಲ್ಲ.ಆದರೂ ನೀವು ಬಂದಿದ್ದೀರಿ, ಮನವಿ ಕೊಟ್ಟಿದ್ದೀರಿ ಎಂದ ಕಾರಣಕ್ಕೆ ಇಲ್ಲಿ ಅವಕಾಶ ನೀಡಲಾಗಿದೆ.ಗ್ರಾಮ ಪಂಚಾಯತ್‌ಗೆ ನೀಡಲಾಗಿರುವ ಕೆರೆಯ ಜಾಗ ಸಂರಕ್ಷಣೆ ನಿಮ್ಮ ಕರ್ತವ್ಯ,ಅದರ ಹೊರತಾಗಿ ಕಂದಾಯ ಇಲಾಖೆಗೆ ಸೇರಿದ್ದ ಜಾಗದ ವಿಚಾರ ನಿಮಗೆ ಬೇಡ.ಅದು ನಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

ನಾವು ಸಾರ್ವಜನಿಕ ಉದ್ದೇಶಕ್ಕಾಗಿ ಈ ಜಾಗವನ್ನು ಕೇಳುತ್ತಿದ್ದೆವೆ ಮಾತ್ರವಲ್ಲದೆ ಗ್ರಾಮ ಪಂಚಾಯತ್ ಕೆರೆಗೆ ಹೋಗಲು ದಾರಿಯೂ ಇಲ್ಲದಾಗಿದೆ ಎಂದು ಪಂಚಾಯತ್‌ನವರು ಮತ್ತೆ ಹೇಳಿದಾಗ, ಕೆರೆಯ ಸುತ್ತಲಿನ ಜಾಗ ಕಂದಾಯ ಇಲಾಖೆಗೆ ಸೇರಿದ್ದುದನ್ನು, ಸಂರಕ್ಷಣೆ ಮಾಡಿ ಕಂದಾಯ ಇಲಾಖೆಯಲ್ಲಿ ಉಳಿಸಿಕೊಳ್ಳಲು ಕ್ರಮಕ್ಕಾಗಿ ಇಲಾಖೆಗೆ ಸೂಚನೆ ನೀಡುತ್ತೇನೆ, ನೀವು ಈ ವಿಚಾರದಲ್ಲಿ ಮಾತನಾಡುವುದು ಬೇಡ.ಇಷ್ಟಕ್ಕೂ ಈ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯ ಸ್ಟೆಟಸ್ ಕೋ ಆದೇಶ ನೀಡಿದೆ.ಈ ಬಗ್ಗೆ ನೀವು ನ್ಯಾಯಾಲಯದಲ್ಲಿ ಏನು ಕ್ರಮಕೈಗೊಂಡಿದ್ದೀರಿ ಎಂದು ಪಂಚಾಯತ್‌ನವರನ್ನು ಪ್ರಶ್ನಿಸಿದರು.ಜಿಲ್ಲಾಧಿಕಾರಿಯವರ ಉತ್ತರದಿಂದ ಸಮಾಧಾನಗೊಳ್ಳದ ಗ್ರಾಮ ಪಂಚಾಯತ್‌ನವರು ಸ್ಥಳದಲ್ಲೇ ಸಾಮೂಹಿಕ ರಾಜೀನಾಮೆ ಸಲ್ಲಿಸಿದರು. ಅಧ್ಯಕ್ಷ, ಉಪಾಧ್ಯಕ್ಷರ ಸಹಿತ 21 ಸದಸ್ಯರೂ ಪ್ರತ್ಯೇಕವಾಗಿ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಇದನ್ನು ಪಡೆದುಕೊಂಡ ಜಿಲ್ಲಾಧಿಕಾರಿಯವರು ತಾ.ಪಂ. ಕಾರ್‍ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿಯವರಿಗೆ ಹಸ್ತಾಂತರಿಸಿದರು.

ಶಾಲೆಯಲ್ಲಿ ಮೂಲಭೂತ ಸೌಕರ್‍ಯ ಸಮಸ್ಯೆ-ಡಿಡಿಪಿಐಗೆ ತರಾಟೆ:
ದೋಳ್ಪಾಡಿ ಶಾಲೆಗೆ ಸಂಬಂಧಿಸಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಸಮಸ್ಯೆ ಇರುವ ವಿಚಾರ ತಿಳಿದು ಆಕ್ರೋಶಗೊಂಡ ಜಿಲ್ಲಾಧಿಕಾರಿಯವರು ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು.ಮುಂದಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಮುಂಚೆ ಜಿಲ್ಲೆಯ ಎಲ್ಲಾ ಶಾಲೆಗಳ ಜಾಗದ ಗಡಿ ಗುರುತು ಮಾಡಬೇಕು. ಮತ್ತು ದೋಳ್ಪಾಡಿ ಶಾಲೆಯ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಯವರು, ಕ್ರಮಕೈಗೊಳ್ಳದೇ ಇದ್ದಲ್ಲಿ ಡಿಡಿಪಿಐಯವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here