ಕಾಣಿಯೂರು: ಕಡಬ ತಾಲೂಕಿನ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ಕುಟುಂಬದೊಳಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ದೂರು 1.
ಕಡಬ ತಾಲೂಕು ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ತೋಟದಲ್ಲಿ ಅಡಿಕೆ ಮರಗಳಿಗೆ ನೀರು ಹಾಕುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರ ಅಣ್ಣನ ಪತ್ನಿ ಹಾಗೂ ಮಗಳು ಹಲ್ಲೆ ಮಾಡಿದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಂದೂರು ಗ್ರಾಮದ ಅಮೈ ನಿವಾಸಿ ಧರ್ಮಪಾಲ ಎಂಬವರಿಗೆ ಅವರ ಅಣ್ಣ ಸುಂದರ ಗೌಡರ ಪತ್ನಿ ಬಾಲಕಿಯವರು ಕೈಯಲ್ಲಿ ಕತ್ತಿ ಹಾಗೂ ಮಗಳು ಯಶೋಧಾಳು ದೊಣ್ಣೆಯನ್ನು ಹಿಡಿದುಕೊಂಡು ಬಂದು ಯಶೋಧಾಳು ದೊಣ್ಣೆಯಿಂದ ತಲೆಗೆ ಹೊಡೆದು ನೋವುಂಟು ಮಾಡಿದ್ದು, ಆ ವೇಳೆ ಧರ್ಮಪಾಲ ಅವರು ಅಲ್ಲಿಂದ ಓಡಿದ್ದು, ಸ್ವಲ್ಪ ದೂರ ಹೋದ ವೇಳೆ ಬೆನ್ನಟ್ಟಿಕೊಂಡು ಬಂದ ಯಶೋಧಾ ಅವರು ಧರ್ಮಪಾಲ ಅವರನ್ನು ದೂಡಿ ಹಾಕಿ ನೆಲದಲ್ಲಿದ್ದ ಕಲ್ಲು ಮುಖಕ್ಕೆ ತಾಗಿ ಗುದ್ದಿದ ನೋವುಂಟಾಗಿದೆ.
ಗಾಯಾಳು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಈ ಕೃತ್ಯಕ್ಕೆ ಧರ್ಮಪಾಲ ಅವರ ಅಣ್ಣ ಸುಂದರ ಗೌಡರ ಮಗ ಕುಲದೀಪನಿಗೂ, 4 ಮಂದಿ ಹೆಣ್ಣು ಮಕ್ಕಳಿಗೂ ಮನೆ ಹಾಗೂ ಕೃಷಿ ಜಮೀನಿನ ಪಾಲಿನ ವಿಚಾರದಲ್ಲಿ ತಕರಾರು ಇದ್ದು, ಸುಮಾರು ಒಂದೂವರೆ ತಿಂಗಳ ಹಿಂದೆ ಕುಲದೀಪ ನು ಮರದಿಂದ ಬಿದ್ದು ಗಂಭೀರ ಗಾಯಗೊಂಡು ಮನೆಯಲ್ಲಿ ವಿಶ್ರಾಂತಿ ಚಿಕಿತ್ಸೆಯಲ್ಲಿದ್ದು, ಧರ್ಮಪಾಲ ಅವರು ಗಾಯಾಳು ಕುಲದೀಪನ ಆರೈಕೆ ಮಾಡುವರೇ ಆಗಾಗ ಮನೆಗೆ ಹೋಗುತ್ತಿದ್ದು, ಇದೇ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದೂರು ನೀಡಲಾಗಿದೆ.
ದೂರು 2
ಕಡಬ ಬೆಳಂದೂರಿನ ರಾಮಣ್ಣ ಗೌಡ ಅವರ ಪತ್ನಿ ಯಶೋದಾ ಅವರು ಬೆಳಂದೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿದ್ದು, ಫೆ. 20ರಂದು ಸಂಜೆ 5ರ ವೇಳೆಗೆ ಹೆತ್ತವರ ಯೋಗ ಕ್ಷೇಮ ವಿಚಾರಿಸಲು ಬೆಳಂದೂರಿನ ಅಮೈಯಲ್ಲಿರುವ ತವರು ಮನೆಗೆ ಬಂದಿದ್ದರು. ಆಗ ಅಲ್ಲಿಗೆ ಬಂದಿದ್ದ ಅವರ ಚಿಕ್ಕಪ್ಪ ಧರ್ಮಪಾಲ ಎಂಬಾತ ಅವಾಚ್ಯ ಶಬ್ದಗಳಿಂದ ಬೈದಾಗ, ಯಶೋದಾ ಅವರು ಯಾಕೆ ಬಯ್ಯುತ್ತೀರಿ ಎಂದು ಪ್ರಶ್ನಿಸಿದರು. ಆಗ ಧರ್ಮಪಾಲ ಅವಾಚ್ಯ ಶಬ್ದಗಳಿಂದ ಬೈದು, ಮರದ ಸಲಾಕೆಯಿಂದ ಯಶೋದಾ ಅವರ ಕೈಗೆ, ಬೆನ್ನಿನ ಹಿಂಬದಿಗೆ ಹೊಡೆದು ಗಾಯಗೊಳಿಸಿದ್ದಲ್ಲದೆ, ನಿಮ್ಮನ್ನು ಇಂದು ಕೊಲೆ ಮಾಡಿ ಹೋಗುತ್ತೇನೆಂದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ಯಶೋದಾ ತಿಳಿಸಿದ್ದಾರೆ.
ಗಾಯಗೊಂಡ ಯಶೋದಾ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆ ಮತ್ತು ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.