ಕಡಬ ಕಾಡಾನೆ ದಾಳಿಗೆ ಅಮಾಯಕರಿಬ್ಬರ ಬಲಿ ಪ್ರಕರಣ

0

ಮೃತರ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ, ಯುವತಿಯ ರಕ್ಷಣೆಗೆ ತೆರಳಿದ್ದ
ರಮೇಶ್ ರೈಯವರಿಗೆ `ಮರಣೋತ್ತರ ಶೌರ್ಯ ಪ್ರಶಸ್ತಿ’ಗೆ ಯು.ಟಿ.ಖಾದರ್ ಆಗ್ರಹ

ಬೆಂಗಳೂರು:ಕಡಬ ತಾಲೂಕಿನ ಕುಟ್ರುಪಾಡಿ ಮೀನಾಡಿ ಸಮೀಪದ ನೈಲ ಎಂಬಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ನೀಡುವುದರ ಜೊತೆಗೆ ಯುವತಿಯ ರಕ್ಷಣೆಗೆ ತೆರಳಿ ಸಾವನ್ನಪ್ಪಿದ ರಮೇಶ್ ರೈ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ' ನೀಡಬೇಕು' ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದ್ದಾರೆ.

ವಿಧಾನಸಭೆ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕಾಡಾನೆ ದಾಳಿಯಿಂದ ಯುವತಿ ರಂಜಿತಾ ರೈ ಹಾಗೂ ಆಕೆಯನ್ನು ರಕ್ಷಿಸಲೆಂದು ತೆರಳಿದ್ದ ರಮೇಶ್ ರೈ ಎಂಬವರು ಮೃತಪಟ್ಟಿದ್ದಾರೆ.ವನ್ಯಜೀವಿ ದಾಳಿ ಸಂದರ್ಭದಲ್ಲಿ ಕೂಡಲೇ ಅವುಗಳನ್ನು ಹಿಡಿಯಲು ಸರಕಾರ ಕ್ರಮ ವಹಿಸಬೇಕು.ಜೊತೆಗೆ ಮೃತರ ಕುಟುಂಬಕ್ಕೆ ಈಗಾಗಲೇ ಸರಕಾರ 15 ಲಕ್ಷ ರೂ.ಪರಿಹಾರ ಪ್ರಕಟಿಸಿದ್ದು, ಅದನ್ನು 25 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಆನೆ ದಾಳಿ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಯುವತಿ ರಂಜಿತಾ ಅವರ ರಕ್ಷಣೆಗೆ ತೆರಳಿ ಮೃತಪಟ್ಟ ರಮೇಶ್ ರೈ ಅವರಿಗೆ ಶೌರ್ಯ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು.ಇದರಿಂದ, ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕೆಂಬ ಸಂದೇಶ ನೀಡುವ ಮೂಲಕ ಬೇರೆಯವರಿಗೂ ಸ್ಫೂರ್ತಿ ಆಗುವಂತೆ ಕ್ರಮ ವಹಿಸಬೇಕೆಂದು ಯು.ಟಿ. ಖಾದರ್ ಸಲಹೆ ನೀಡಿದರು.

ಸರಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ,ಇಂತಹ ಘಟನೆಗಳು ಮರುಕಳಿಸಬಾರದು.ವಿಪಕ್ಷ ಉಪನಾಯಕರು ಪ್ರಸ್ತಾಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವರಿಂದ ಫೆ.22ರಂದು ಉತ್ತರ ಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

LEAVE A REPLY

Please enter your comment!
Please enter your name here