ಪುತ್ತೂರು: ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ, ಕೆದಂಬಾಡಿ ಗ್ರಾಮದ ಮುಂಡಾಳಗುತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ತಿಮ್ಮಪ್ಪ ರೈ ಬೆಂಗಳೂರು (92 ವ.) ರವರು ವಯೋಸಹಜವಾಗಿ ಫೆ. 21 ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಮುಂಡಾಳಗುತ್ತು ಕುಟುಂಬಕ್ಕೆ ಮುಕುಟಪ್ರಾಯವಾಗಿದ್ದ ಡಾ. ತಿಮ್ಮಪ್ಪ ರೈಯವರು ಹತ್ತು ಹಲವು ಕ್ಷೇತ್ರಗಳಲ್ಲಿ ಕೀರ್ತಿವಂತರಾದವರು. 07-01- 1931 ರಲ್ಲಿ ಕೆದಂಬಾಡಿ ಗ್ರಾಮದ ಮುಂಡಾಳಗುತ್ತು ಪರಮೇಶ್ವರಿ ರೈ ಹಾಗೂ ಕೆಯ್ಯೂರು ಇಳಂತಾಜೆ ಸುಬ್ಬಣ್ಣ ರೈರವರ ಮಗನಾಗಿ ಜನಿಸಿದ ತಿಮ್ಮಪ್ಪ ರೈಯವರು. ಆರಂಭಿಕ ಶಿಕ್ಷಣದ ಬಳಿಕ 1952-56 ರಲ್ಲಿ ಮದರಾಸ್ ವೆಟರ್ನರಿ ಕಾಲೇಜಿನಲ್ಲಿ ಪಶುವೈದ್ಯ ವಿಜ್ಞಾನದಲ್ಲಿ ಬಿವಿಎಸ್‌ಸಿ ಸ್ನಾತಕ ಪದವಿಯನ್ನು ಪಡೆದರು. 1956 ರಲ್ಲಿ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಅಸಿಸ್ಟೆಂಟ್ ಸರ್ಜನ್‌ರಾಗಿ ಆರಂಭದಲ್ಲಿ ಕುಂದಾಪುರ ಬಳಿಕ ಉಡುಪಿ, ಮಂಗಳೂರು, ಸುಳ್ಯ, ಪುತ್ತೂರುನಲ್ಲಿ ಸೇವೆ ಸಲ್ಲಿಸಿದ್ದಾರೆ.1964 ರಲ್ಲಿ ಯುಎಸ್‌ಎಯ್ಡ್ ಯೋಜನೆಯನ್ವಯ ಅಮೆರಿಕದ ಟೆನೆಸ್ಸಿ ಯುನಿವರ್ಸಿಟಿಯಲ್ಲಿ ಎಂ.ಎಸ್. ಸ್ನಾತಕೋತ್ತರ ಪದವಿ ಪಡೆದರು. 1966 ರಲ್ಲಿ ಬೆಂಗಳೂರಿನ ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನಲ್ಲಿ ಪಶುವೈದ್ಯ ಸಹಾಯಕ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿಯೂ ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಬೆಂಗಳೂರಿನ ಬಂಟರ ಸಂಘದಲ್ಲಿ ಅಧ್ಯಕ್ಷರಾಗಿ ಮತ್ತು ವಿವಿಧ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಮುಂಡಾಳಗುತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ, ಮುಂಡಾಳಗುತ್ತು ತರವಾಡು ದೈವಸ್ಥಾನದ ಅಧ್ಯಕ್ಷರಾಗಿ, ಕೆದಂಬಾಡಿ ಗ್ರಾಮ ದೈವ ಶಿರಾಡಿ ದೈವಸ್ಥಾನ, ಇದ್ಪಾಡಿ ಮಂಜಕೊಟ್ಯ ಇದರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಶ್ರೀರಾಮ ಮಂದಿರ ಕೆದಂಬಾಡಿ -ಶ್ರೀಕ್ಷೇತ್ರ ಸನ್ಯಾಸಿಗುಡ್ಡೆಯ ಪೋಷಕರಾಗಿ ಸೇವೆ ಹೀಗೆ ಹತ್ತು ಹಲವು ವಿಧದಲ್ಲಿ ಕುಟುಂಬದ ಹಿರಿಮೆ-ಗರಿಮೆಯನ್ನು ಹೆಚ್ಚಿಸಿದ್ದಾರೆ.
ಮೃತರು ಪತ್ನಿ ಅರಿಯಡ್ಕ ಜಯಂತಿ ಟಿ. ರೈ, ಪುತ್ರರಾದ ಉದಯಶಂಕರ ರೈ, ಮನೋಜ್ ಕುಮಾರ್ ರೈ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪುತ್ರಿಯರಾದ ಸೌಮ್ಯ ಜಯರಾಮ ರೈ, ಮಂಜುಳಾ ಸಂತೋಷ್ ಶೆಟ್ಟಿ, ಸೊಸೆಯಂದಿರಾದ ಹನಿ ಯು. ರೈ, ಸಂಧ್ಯಾ ಎಂ. ರೈ, ವಜ್ರ ಡಿ. ರೈ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿರುತ್ತಾರೆ.
ಇಂದು ಅಂತ್ಯಕ್ರಿಯೆ: ಮೃತರ ಅಂತ್ಯಕ್ರಿಯೆಯು ಫೆ. 22 ರಂದು ಮಧ್ಯಾಹ್ನ ಬೆಂಗಳೂರಿನ ರಾಜಾಜಿನಗರದ ಅವರ ನಿವಾಸದಲ್ಲಿ ನಡೆಯಲಿದೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.