ಆದಿ ಸುಬ್ರಹ್ಮಣ್ಯನಂತೆ ಹುತ್ತಕ್ಕೆ ಪೂಜೆ ಸಲ್ಲುವ ಪುತ್ತೂರು ತಾಲೂಕಿನ ಏಕೈಕ ಕ್ಷೇತ್ರ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

0

ಫೆ.23, 24ರಂದು ಜಾತ್ರಾ ಮಹೋತ್ಸವ

ಸವಣೂರು : ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ಪೂಜೆ ಸಲ್ಲುವುದು ಎಲ್ಲರಿಗೂ ತಿಳಿದ ಸಂಗತಿ. ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ದೇವಳವೊಂದಿದೆ. ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಆದಿ ಕುಕ್ಕೆಯ ಮಾದರಿಯಲ್ಲಿ ಆರಾಧನೆ ನಡೆಯುತ್ತದೆ. ಹಾಗಾಗಿ ಭಕ್ತರ ಪಾಲಿಗೆ ಇದು ಎರಡನೆಯ ಸುಬ್ರಹ್ಮಣ್ಯ. ಕೊಳ್ತಿಗೆ ಗ್ರಾಮದ ನೆಟ್ಟಾರಿನಿಂದ ಬಾಯಂಬಾಡಿ ಪಾಲ್ತಾಡಿ ತನಕ ಹಬ್ಬಿರುವ ಪರ್ವತ ಪಂಕ್ತಿಯ ಮಧ್ಯ ಭಾಗ ನಳೀಲು. ನಾಲ್-ಇಲ್ ಸೇರಿ ನಳೀಲು ಆಗಿದೆ.

ತುಳುವಿನಲ್ಲಿ ನಾಲ್ ಎಂದರೆ ನಾಲ್ಕು, ಇಲ್ಲ್ ಎಂದರೆ ಮನೆ ಎಂದರ್ಥ. ಪಾಕೃತಿಕ ಸೊಬಗಿನ ಊರಿದು. ಇಲ್ಲಿ ನಾಗರೂಪೀ ಸುಬ್ರಹ್ಮಣ್ಯ ಹತ್ತೂರಿನ ಭಕ್ತರ ಆರಾಧ್ಯ ದೇವರು. ಇತಿಹಾಸದ ಪ್ರಕಾರ ನಳೀಲಿನ ಸುಬ್ರಹ್ಮಣ್ಯ ಗುಡಿ ಮೂಲತಃ ಜೈನರಸರ ಆಳ್ವಿಕೆ ಕಾಲದಲ್ಲಿ ನಿರ್ಮಾಣಗೊಂಡಿರಬೇಕು. 300 ವರ್ಷಗಳಿಗೂ ಹೆಚ್ಚಿನ ಇತಿಹಾಸ ಇದೆ. ಗುಡಿಯು ಪಾಳು ಬಿದ್ದಾಗ ಮೂರ್ತಿಯ ಸುತ್ತ ಹುತ್ತ ಬೆಳೆದು, ಬಳಿಕ ಅದಕ್ಕೆ ಆರಾಧನೆ ಸಲ್ಲುತ್ತದೆ ಎಂಬ ಐತಿಹ್ಯ ಇದೆ.

ಹುತ್ತರೂಪದಲ್ಲಿ ನೆಲೆ ನಿಂತ ಸುಬ್ರಹ್ಮಣ್ಯನಿಗೆ ಬಗೆ-ಬಗೆಯ ಸೇವೆಗಳು ಅರ್ಪಣೆಯಾಗುತ್ತಿದೆ. ದಿನನಿತ್ಯ ಅರ್ಚಕರು ನಾಗನಿಗೆ ಪೂಜೆ ಸಲ್ಲಿಸುತ್ತಾರೆ. ಹುತ್ತರೂಪದ ಗುಡಿಗೆ ಆರಾಧನೆ ನಡೆಯುತ್ತದೆ. ಪೂಜೆಯ ಬಳಿಕ ಬಟ್ಟಲಲ್ಲಿ ಹಾಲು-ನೀರಿಟ್ಟು ಬರುತ್ತಾರೆ. ಈ ಹಾಲನ್ನು ನಾಗ ಕುಡಿಯುತ್ತಾನೆ ಎಂಬ ನಂಬಿಕೆ ಇದರ ಹಿಂದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಆಗಾಗ ನಾಗ ಪ್ರತ್ಯಕ್ಷನಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾನೆ. ಆಳೆತ್ತರಕ್ಕೆ ನಿಂತ ವಲ್ಮೀಕ ಕೆಲವೊಮ್ಮೆ ಪವಾಡದಂತೆ ಕುಬ್ಬಗೊಳ್ಳುವುದು ಇದೆ. ದೇವಳ ಪಕ್ಕದಲ್ಲಿನ ಸಣ್ಣ ಕುಂಡಿಕೆಯೊಂದರಲ್ಲಿ ನೀರು ಮೇಲೇಳುತ್ತಿರುವುದು ವಿಶೇಷ.

ಬಿರು ಬೇಸಿಗೆಯಲ್ಲೂ ನೀರು ಬತ್ತುವುದಿಲ್ಲ. ಇಲ್ಲಿ ಆಶ್ಲೇಷ ಬಲಿ, ಸರ್ಪ ಸೇವೆ ನಡೆಯುತ್ತದೆ. ಅದರ ಜತೆಗೆ ರಂಗಪೂಜೆ, ಹೂವಿನಪೂಜೆ, ನಾಗತಂಬಿಲ ಮೊದಲಾದ ಸೇವೆಗಳಿವೆ. ಎರಡು ದಿನಗಳ ಕಾಲ ಚಂಪಾ ಷಷ್ಟಿ ಮಹೋತ್ಸವ ಕೂಡ ವಿಜೃಂಭಣೆಯಿಂದ ಜರಗುತ್ತದೆ. ವಿಶೇಷ ಕಾರ್ತಿಕ ಪೂಜೆಯು ನಡೆಯುತ್ತದೆ

ಬ್ರಹ್ಮಕಲಶೋತ್ಸವದ ಬಳಿಕ ದೇವಸ್ಥಾನವು ವೇಗದಲ್ಲಿ ಅಭಿವೃದ್ಧಿಯನ್ನು ಕಂಡಿದೆ.ದೇವಸ್ಥಾನದಲ್ಲಿ ಅತಿಥಿ ಗೃಹ,ಅರ್ಚಕರ ಮನೆ,ದೇವಸ್ಥಾನದ ಸುತ್ತ ಇಂಟರ್‌ಲಾಕ್ ಅಳವಡಿಕೆ,ದೇವಸ್ಥಾನದ ಸುತ್ತ ಶೀಟ್ ಅಳವಡಿಕೆ ಮೊದಲಾದ ಕಾರ್ಯಗಳು ನಡೆದಿವೆ.

ಫೆ.23, 24ರಂದು ಜಾತ್ರಾ ಮಹೋತ್ಸವ

ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.23,24ರಂದು ನಡೆಯಲಿದೆ.

ಫೆ.23ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆಯಲಿದೆ. ಸಂಜೆ 7ರಿಂದ ಕಡಬ ನೃತ್ಯ ನಿನಾದ ತಂಡದಿಂದ ನೃತ್ಯ ವೈಭವ  ನಡೆಯಲಿದೆ.

ಫೆ.24ರಂದು ಪ್ರಾತಃಕಾಲ ವ್ಯಾಘ್ರ ಚಾಮುಂಡಿಯ ನೇಮೋತ್ಸವ, ಬೆಳಿಗ್ಗೆ ರುದ್ರ ಚಾಮುಂಡಿಯ ನೇಮೋತ್ಸವ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ ಎಂದು ದೇವಸ್ಥಾನದ ಅಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ತಿಳಿಸಿದ್ದಾರೆ.

ಸಂತೋಷ್ ಕುಮಾರ್ ರೈ ನಳೀಲು ಅವರು 20 ವರ್ಷಗಳಿಂದ ದೇವಸ್ಥಾನ ಆಡಳಿತ ಮೊಕ್ತೇಸರರಾಗಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ.ಸುಬ್ರಹ್ಮಣ್ಯ ನಂಬಿದವರನ್ನು ಕೈ ಬಿಡಲ್ಲ ಎನ್ನುವ ಸಂತೋಷ್ ಕುಮಾರ್ ರೈ ಅವರು ದೇವಸ್ಥಾನಕ್ಕೆ ತನ್ನದೇ ವಿಶೇಷ ಕಾರಣಿಕತೆ ಇದೆ.ಸಂತಾನ ಭಾಗ್ಯ ವಿಲ್ಲದವರಿಗೆ ಸಂತಾನ ಭಾಗ್ಯ,ವಿವಾಹವಾಗದವರಿಗೆ ಕಂಕಣ ಭಾಗ್ಯ ,ಶನಿ ದೋಷ ನಿವಾರಣೆಗೆ ,ಸರ್ಪದೋಷ ನಿವಾರಣೆಗಾಗಿ ಅಧಿಕ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಪ್ರಾರ್ಥಿಸಿ ಪೂಜೆ ಮಾಡಿಸಿಕೊಂಡು ದೇವರ ಅನುಗ್ರಹ ಪಡೆದವರು ಹಲವರು ಇದ್ದಾರೆ ಎನ್ನುತ್ತಾರೆ.

LEAVE A REPLY

Please enter your comment!
Please enter your name here