ವಾರಿಸುದಾರರಿಲ್ಲದ ವ್ಯಕ್ತಿಗೆ 108 ಸಕಾಲದ ಸ್ಪಂದನೆ; ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸಿದ ಸಿಬ್ಬಂದಿ

0

ಉಪ್ಪಿನಂಗಡಿ: ಸುಡು ಬಿಸಿಲಿನ ಝಲಕ್ಕೆ ಕುಸಿದು ಬಿದ್ದು ಒದ್ದಾಡುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವನನ್ನು ನೋಡಿ ಅಲ್ಲಿದ್ದವರೋರ್ವರು 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದು, ಅದಕ್ಕೆ ತಕ್ಷಣ ಸ್ಪಂದಿಸಿದ 108 ಆಂಬುಲೆನ್ಸ್‌ನವರು ಆ ವ್ಯಕ್ತಿಯನ್ನು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಇಲ್ಲಿನ ಬಸ್ ನಿಲ್ದಾಣದಲ್ಲಿ ವಾಹನ ಸಂಚರಿಸುವ ಸ್ಥಳದಲ್ಲೇ ಮಧ್ಯ ವಯಸ್ಕ ವ್ಯಕ್ತಿಯೋರ್ವರು ಬಿಸಿಲ ಝಲಕ್ಕೆ ಕುಸಿದು ಬಿದ್ದಿದ್ದರು. ಪರಿಸರದಲ್ಲಿ ಕೆಲ ಸಮಯದಿಂದ ಭಿಕ್ಷಾಟನೆ ಮಾಡುತ್ತಿದ್ದ ಇವರು ಮದ್ಯ ಸೇವಿಸಿ ಬಿದ್ದಿರಬೇಕೆಂದು ಒಂದಷ್ಟು ಜನ ಭಾವಿಸಿ ಸುಮ್ಮನಾಗಿದ್ದರೆ, ತನ್ನೆರಡೂ ಕೈಗಳಿಗೂ ಬಲವಿಲ್ಲದೆ, ಅನ್ಯರ ಸಹಾಯದಿಂದಲೇ ಎಲ್ಲವನ್ನೂ ಮಾಡಬೇಕಾಗಿದ್ದ ಈತ ಬಿಸಿಲ ಝಲಕ್ಕೆ ಸಿಲುಕಿ ಕುಸಿದು ಬಿದ್ದಿರುವ ಸಾಧ್ಯತೆಯನ್ನು ಅಂದಾಜಿಸಿದ ಅಲ್ಲಿದ್ದವರೋರ್ವರು ಸಹಾಯಕ್ಕಾಗಿ 108 ಆಂಬುಲೆನ್ಸ್‌ನ ಮೊರೆ ಹೋಗುತ್ತಾರೆ. ಕರೆ ಸ್ವೀಕರಿಸಿದ ಉಪ್ಪಿನಂಗಡಿ 108 ರ ಸಿಬ್ಬಂದಿಗಳಾದ ರುಬ್ಬೆನ್ ಹಾಗೂ ಚಾಲಕ ರಸೂಲ್ ಸಾಬ್ ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಸ್ವಸ್ಥ ವ್ಯಕ್ತಿ ಆರೋಗ್ಯ ಸಮಸ್ಯೆಯಿಂದ ಕುಸಿದು ಬಿದ್ದಿರುವುದನ್ನು ದೃಢಪಡಿಸಿ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿದರು.

ತನ್ಮೂಲಕ ವಾರಸುದಾರರಿಲ್ಲದ ಅನಾಥರನ್ನು ಆಸ್ಪತ್ರೆಗೆ ದಾಖಲಿಸಲು 108 ಅಂಬುಲೆನ್ಸ್ ಸಿಬ್ಬಂದಿ ನಿರಾಕರಿಸುತ್ತಾರೆ ಎಂಬ ಅಪವಾದವನ್ನು ತೊಡೆದು ಹಾಕಿದರು. ಇನ್ನೊಂದೆಡೆ ಎಲ್ಲರ ನಿರ್ಲಕ್ಷ್ಯಕ್ಕೆ ತುತ್ತಾದ ವ್ಯಕ್ತಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ದೊರೆಯುವಂತಾಗಲು ಪತ್ರಕರ್ತರೋರ್ವರ ಮಾನವೀಯ ಸ್ಪಂದನವೂ ಗಮನ ಸೆಳೆಯಿತು.

LEAVE A REPLY

Please enter your comment!
Please enter your name here