ನೆಲ್ಯಾಡಿ: ನೇರೆಂಕಿ ಅರಸರ ಅಧೀನದಲ್ಲಿದ್ದ ಬಜತ್ತೂರು ಗ್ರಾಮದ ಮಣಿಕ್ಕಳ ಮೂವರು ದೈವಗಳ ಕ್ಷೇತ್ರದಲ್ಲಿ ಫೆ.23 ಮತ್ತು 24 ರಂದು ಪ್ರತಿಷ್ಠಾ ಬ್ರಹ್ಮಕಲಶ ನಡೆಯಲಿದೆ.
ಪಾಂಡ್ಯತ್ತಾಯ, ಪಂಬೆತ್ತಾಯ ಹಾಗೂ ಸ್ಥಾನಬಿರ್ಮೆರ್ ಈ ಮೂರು ದೈವಗಳು ಇಲ್ಲಿನ ಜನರ ಆರಾಧ್ಯ ದೈವಗಳು. ಈ ದೈವಗಳಿಗೆ ಪ್ರತೀ ವರ್ಷ ಫೆ.28-ಮಾ.1ರಂದು ವಾರ್ಷಿಕ ನೇಮೋತ್ಸವ ನಡೆಯುತ್ತದೆ. ಇದರೊಂದಿಗೆ 22 ದೈವಗಳಿಗೂ ಇಲ್ಲಿ ನೇಮನೆರಿ ಜರಗುತ್ತದೆ. ಇದರೊಂದಿಗೆ ಇಲ್ಲಿನ ಗುತ್ತಿಮಾರು ಗದ್ದೆ ಕೋರಿ, ದೊಂಪದಬಳಿ ನೇಮೋತ್ಸವ, ನಾಗತಂಬಿಲಗಳು ಜರಗುತ್ತವೆ. ಈ ಮೂವರು ದೈವಗಳು ಮಣಿಕ್ಕಳ ಬೈಲಿನಲ್ಲಿ ಮೊತ್ತ ಮೊದಲು ಉದ್ಭವವಾದ ಜಾಗ ಮರೋಜಿಕಾನ. ಇಲ್ಲಿನ ಜನತೆ ಇದನ್ನು ಬನ ಎಂದೇ ಕರೆಯುತ್ತಾರೆ. ಇಲ್ಲಿ ಈಗಲೂ ಬಿಸು ಸಂಕ್ರಮಣದಂದು ತಂಬಿಲ ನಡೆಯುತ್ತದೆ. ಇಲ್ಲಿಂದ ನಂತರ ದೈವಗಳು ತಂಪು ಜಾಗವಾಗಿರುವ ಕಂರ್ಬಿತ್ತಿಲು ಎಂಬ ತಾಣದಲ್ಲಿ ನೆಲೆ ನಿಂತವು. ಅಲ್ಲಿ ಹುತ್ತದ ನಡುವೆಯೇ ಈ ದೈವಗಳ ಮೂರ್ತಿಗಳನ್ನು ನಾವು ಕಾಣಬಹುದು. ಬಹುಶ: ಈ ರೀತಿ ಹುತ್ತಗಳ ನಡುವೆ ಇರುವ ದೈವಗಳ ತಾಣ ಅತ್ಯಂತ ವಿರಳವಾಗಿದ್ದು, ದ.ಕ ಜಿಲ್ಲೆಯಲ್ಲಿಯೇ ವಿಶಿಷ್ಠಸ್ಥಾನ ಎಂಬ ಖ್ಯಾತಿ ಇದೆ. ಈ ದೈವಗಳ ತಾಣಕ್ಕೆ ಹಿಂದೆ ಸ್ಥಳೀಯರು ಮುಳಿ ಹುಳ್ಳಿನ ಮಾಡ ಕಟ್ಟಿದ್ದರಂತೆ. ನಂತರದ ದಿನಗಳಲ್ಲಿ ಕಾಂಚನ ಮನೆತನದವರು 1954 ರಲ್ಲಿ ಬಲಿಷ್ಠವಾದ ಮಾಡ' ನಿರ್ಮಾಣ ಮಾಡಿದ್ದರು. ಈ ಕಟ್ಟಡ ಶಿಥಿಲಗೊಂಡ ಹಿನ್ನಲೆಯಲ್ಲಿ ಶಿಲ್ಪಿ ರಮೇಶ್ ಕಾರಂತ್ ಅವರ ಸಲಹೆಯಂತೆ ಇದೀಗ ಸಂಪೂರ್ಣ ಶಿಲಾಮಯವಾದ ಸುಂದರ
ಮಾಡ’ ಮಣಿಕ್ಕಳ ಮೂವರು ದೈವಗಳ ಆಡಳಿತ ಸಮಿತಿ ಮೂಲಕ ನಿರ್ಮಾಣಗೊಂಡಿದೆ.
ಈ ಮಣಿಕ್ಕಳ ಬೈಲನ್ನು 1864 ರಲ್ಲಿ `ದಕ್ಷಿಣ ಭಾರತದ ಸಂಗೀತ ಕಾಶಿ’ ಎಂದು ಹೆಸರಾದ ಕಾಂಚನ ಮನೆತನದವರು ಪಡೆದುಕೊಂಡಿದ್ದರು. ಕಾಂಚನ ವೆಂಕಟರಮಣಯ್ಯನವರಿಗೆ ಈ ಭೂಮಿ ಕ್ರಯಚೀಟು ಆಗಿತ್ತು. ಈ ಮನೆತನದ ನೇತೃತ್ವದಲ್ಲಿಯೇ ಇಲ್ಲಿನ ದೈವಗಳ ನೇಮೋತ್ಸವ ನಡೆಯುತ್ತಿದ್ದವು. ಕಾಲಕ್ರಮೇಣ ಇಲ್ಲಿನ ಸಮಿತಿ ಈ ನೇಮೋತ್ಸವದ ಜವಾಬ್ದಾರಿ ಪಡೆದುಕೊಂಡು ಕಾಂಚನ ತಲೆಮನೆ, ಗುತ್ತು, ಬಾರಿಕೆ ಹಾಗೂ ಸಮಸ್ತ ದೈವಗಳ ಸೇವಾ ಸಮಿತಿ ಪದಾಧಿಕಾರಿಗಳು, ಊರಿನ ಜನತೆಯ ಸಹಕಾರದೊಂದಿಗೆ ನೇಮೋತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಫೆ.23,24 : ಪ್ರತಿಷ್ಠೆ :
ಫೆ.23 ಹಾಗೂ ಫೆ.24 ರಂದು ಈ ನೂತನ ಶಿಲಾಮಯ ಮಾಡದ ಪ್ರತಿಷ್ಠಾ ಕಾರ್ಯ ನಡೆಯಲಿದ್ದು, ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿ ಹಾಗೂ ಕಾಂಚನ ತಲೆಮನೆಯ ರೋಹಿಣಿ ಸುಬ್ಬರತ್ನಂ ಅವರ ಮುಂದಾಳುತನದಲ್ಲಿ ಸಕಲ ಕಾರ್ಯಗಳು ನಡೆಯುತ್ತಿವೆ. ಫೆ.23 ರಂದು ಬೆಳಿಗ್ಗೆ 10.50ಕ್ಕೆ ತೋರಣ ಮುಹೂರ್ತ, 11.05 ಕ್ಕೆ ಉಗ್ರಾಣ ಮುಹೂರ್ತ, ಸಾಯಂಕಾಲ ಗಂಟೆ 6 ರಿಂದ ದೇವತಾ ಪ್ರಾರ್ಥನೆ, ಆಚಾರ್ಯಾ ಋತ್ವಿಗ್ವರಣ, ಸ್ವಸ್ತಿಪುಣ್ಯಾಹ ವಾಚನ, ಸಪ್ತಶುದ್ಧಿ, ಪ್ರಸಾದಶುದ್ದಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ,ಬಿಂಬಾಧಿವಾಸ ನಡೆದು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.
ಫೆ.24 ರಂದು ಬೆಳಿಗ್ಗೆ ಗಂಟೆ 7 ರಿಂದ ಗಣಪತಿ ಹೋಮ, ಪ್ರತಿಷ್ಠಾಹೋಮ, ಕಲಶಾರಾಧನೆ ಹಾಗೂ ನಾಗತಂಬಿಲ, ಉದ್ಭವತಾಣವಾದ ಮರೋಜಿಕಾನದಲ್ಲಿ ತಂಬಿಲ, ಸ್ಥಾನಚಾವಡಿಯಲ್ಲಿ ತಂಬಿಲ, ಪವಮಾನ ಹೋಮ, ಗಂಟೆ 11.24 ಕ್ಕೆ ದೈವತಾ ಪ್ರತಿಷ್ಠೆ, ಕಲಶಾಭಿಷೇಕ, ಆಶ್ಲೇಷಾಬಲಿ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ಈ ಧಾರ್ಮಿಕ ವಿಧಿವಿಧಾನಗಳು ನೀಲೇಶ್ವರ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಬಡೆಕ್ಕಿಲ್ಲಾಯ ಅವರ ನೇತೃತ್ವದಲ್ಲಿ ನಡೆಯಲಿದೆ. ಫೆ.28 ರಂದು ಮೂವರುದೈವಗಳಿಗೆ ವಾರ್ಷಿಕ ನೇಮೋತ್ಸವ ಜರಗಲಿದೆ.
ಪ್ರಸ್ತುತ ಮಣಿಕ್ಕಳ ಸಮಸ್ತ ದೈವಗಳ ಸೇವಾ ಸಮಿತಿಯ ಜಗದೀಶರಾವ್, ಮುರಳೀಧರ ರಾವ್, ಹೊನ್ನಪ್ಪ ಗೌಡ ಕುದುರು, ರಾಮಣ್ಣ ಗೌಡ ಮೇಲಿನ ಮನೆ, ದೇರಣ್ಣ ಗೌಡ ಓಮಂದೂರು, ಲಿಂಗಪ್ಪ ಗೌಡ ಆರಕರೆ, ಸುಧಾಕರ ನಾತೊಟ್ಟು, ರಮೇಶ್ ಬರೆಮೇಲು, ಯೋಗೀಶ್ ಗೌಡ ಹೊಸಮನೆ, ಚೇತನ್ ಕುದುರು, ಲೋಕೇಶ್ ಗೌಡ ಓಲೆಬಳ್ಳಿ, ಮಾಜಿ ಯೋಧ ವಿಶ್ವನಾಥ ಗೌಡ ಮಾಯಿತಾಲ್, ಮೋನಪ್ಪ ಗೌಡ ನಾಗೋಜಿ, ಸದಾಶಿವ ಗೌಡ ನಾಗೋಜಿ, ಉಮೇಶ್ ಮಾಯಿತಾಲು, ಧನಂಜಯ ಗೌಡ ಪಾಲೆತ್ತಾಡಿ, ಉಮೇಶ್ ಓಮಂದೂರು, ದಿನೇಶ್ ಓಮಂದೂರು, ಯಶೋಧರ ಗೌಡ ಬೈರುಮಾರು, ಧನಂಜಯ ಗೌಡ ಗುತ್ತಿಮಾರು, ಉದಯ ರಾವ್, ರುಕ್ಮಯ ಗೌಡ, ವಸಂತ ಬರಮೇಲು ಮತ್ತಿತರರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಪುಂಚೋಟು ಸರ್ಪೆ.. ಸ್ಥಾನೋಡ್ ಬ್ರಮ್ಮೆ
ಹುತ್ತದಲ್ಲಿ ಸರ್ಪ.. ಸ್ಥಾನದಲ್ಲಿ ಬ್ರಹ್ಮ ಎಂದು ವಾಕ್ಕು ನುಡಿಯುವ ಈ ಮೂವರು ದೈವಗಳ ಕ್ಷೇತ್ರದಲ್ಲಿ ಅಲೆಚಾಮುಂಡಿ, ಪೋರೋಳಿತ್ತಾಯ, ಪೊಟ್ಟಭೂತ, ಹೊಸದೇವತೆ,ಬ್ರಾಣಕೋಲ(ಬ್ರಾಹಣಮಾಣಿ), ಗುತ್ತು ಪಂಜುರ್ಲಿ, ಕಲ್ಲುರ್ಟಿ, ಗುಳಿಗ, ಬಸ್ತಿನಾಯ್ಕ, ಗುತ್ತು ಧೂಮಾವತಿ ಮತ್ತಿತರ ದೈವಗಳಿಗೂ ನೇಮನೆರಿ ನಡೆಯುತ್ತದೆ. ಈ ಕ್ಷೇತ್ರದ ಮತ್ತೊಂದು ಹಿರಿಮೆ ಎಂದರೆ ಇಲ್ಲಿ ಪೂಜಾರ್ಮೆ ಮತ್ತು ದೈವನರ್ತನಕ್ಕೆ ಬೂಳ್ಯ ಪಡೆದವರು ಯಾವ ಕಡೆಯಲ್ಲೂ ಪೂಜಾರ್ಮೆ ಮತ್ತು ದೈವನರ್ತನ ಸೇವೆ ಮಾಡಬಹುದಾಗಿದೆ.