ಉಪ್ಪಿನಂಗಡಿ: ಶಂಕು ಸ್ಥಾಪನೆಗೊಂಡು ವರ್ಷವಾದ ಬಳಿಕ ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿರುವ ರಿಕ್ಷಾ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ಚಾಲನೆ ದೊರಕಿದೆ.
ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣದ ರಿಕ್ಷಾ ನಿಲ್ದಾಣದಲ್ಲಿ ಇಂಟರ್‌ಲಾಕ್ ಅಳವಡಿಕೆಗೆ ಶಾಸಕ ಸಂಜೀವ ಮಠಂದೂರು ಅವರು 10 ಲಕ್ಷ ರೂ. ಅನುದಾನವಿಟ್ಟಿದ್ದರು. ಅದರ ಶಂಕುಸ್ಥಾಪನೆಯನ್ನು 2022 ರ ಫೆಬ್ರವರಿ ತಿಂಗಳಲ್ಲಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಉತ್ಸವದಂಗವಾಗಿ ನಡೆದ ದೇವರ ಕಟ್ಟೆಪೂಜೆಯ ಸಂದರ್ಭ ಹಳೆ ಬಸ್ ನಿಲ್ದಾಣದಲ್ಲಿ ಗೆಳೆಯರು 94 ಸಂಘಟನೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ `ಸಂಗೀತ ಗಾನ ಸಂಭ್ರಮ’ ಕಾರ್ಯಕ್ರಮದಲ್ಲಿ ನೆರವೇರಿಸಿದ್ದರು.
ಶಂಕು ಸ್ಥಾಪನೆ ನೆರವೇರಿ ವರ್ಷ ಕಳೆದರೂ, ಕಾಮಗಾರಿ ಮಾತ್ರ ಇಲ್ಲಿ ನಡೆದಿರಲಿಲ್ಲ. ಇದನ್ನು ಗುತ್ತಿಗೆ ವಹಿಸಿಕೊಂಡಿದ್ದ ಗುತ್ತಿಗೆದಾರರನ್ನು ತರಾಟೆಗೂ ತೆಗೆದುಕೊಂಡಿದ್ದ ಶಾಸಕರು, ಬಳಿಕ ಬದಲಿ ಗುತ್ತಿಗೆದಾರರಿಗೆ ಈ ಕಾಮಗಾರಿಯನ್ನು ವಹಿಸಿ ಈ ಬಾರಿಯ ಶ್ರೀ ಸಹಸ್ರಲಿಂಗೇಶ್ವರ ಆರಾಟ ಉತ್ಸವದ ಮುನ್ನ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದರು. ಇದೀಗ ಉಪ್ಪಿನಂಗಡಿ ಗ್ರಾ.ಪಂ. ಹೆಚ್ಚುವರಿ ಅನುದಾನದಲ್ಲಿ ಚರಂಡಿಗೆಂದೂ ನೀಡಿದೆ. ಈ ಅನುದಾನವನ್ನೆಲ್ಲವನ್ನೂ ಸೇರಿಸಿಕೊಂಡು ಇದೀಗ ಕಾಮಗಾರಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಧನಂಜಯ ನಟ್ಟಿಬೈಲು, ಲೋಕೇಶ್ ಬೆತ್ತೋಡಿ ಗೆಳೆಯರ ಬಳಗ- 94 ರ ಪದಾಧಿಕಾರಿಗಳಾದ ಜಗದೀಶ ಶೆಟ್ಟಿ, ಯು.ಜಿ ರಾಧಾ, ಕೈಲಾರ್ ರಾಜಗೋಪಾಲ ಭಟ್, ಗುಣಾಕರ ಅಗ್ನಾಡಿ ಉಪಸ್ಥಿತರಿದ್ದರು.