ಪುತ್ತೂರು:ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಮಂದಿ ತಂಬಾಕು ಉತ್ಪನ್ನಗಳ ಚಟಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಜಿಲ್ಲೆಯಾದ್ಯಂತ ಪೊಲೀಸರು ಸಾರ್ವಜನಿಕ ಸ್ಥಳಗಳಿಗೆ ತೆರಳಿ ತಂಬಾಕು ಸೇವನೆ ಮಾಡುತ್ತಿರುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದೀಗ ಪುತ್ತೂರಿನಲ್ಲೂ ಫೆ.22ರಂದು ಪೇಟೆಯಲ್ಲಿ ಪೊಲೀಸರು ಕಾರ್ಯಾಚರಣೆಯನ್ನು ಬಿರುಸುಗೊಳಿಸಿದ್ದಾರೆ.
ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮತ್ತು ಸುತ್ತಮುತ್ತ ಪೊಲೀಸರು ಬೇರೆ ಬೇರೆ ತಂಡವಾಗಿ ನಡೆದುಕೊಂಡು ಹೋಗಿ, ತಂಬಾಕು ಸೇವನೆ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸುತ್ತಿದ್ದಾರೆ. ಇದರ ಜೊತೆಗೆ ವಾಹನ ತಪಾಸಣೆಯನ್ನೂ ಚುರಕುಗೊಳಿಸಿದ್ದು, ವಾಹನ ಚಾಲನೆ ಮಾತ್ರವಲ್ಲದೆ ರಸ್ತೆ ಬದಿ ನಿಂತ ವಾಹನದಿಂದಲೂ ದಾಖಲೆ ಪತ್ರ ಪರಿಶೀಲನೆ ಮಾಡುತ್ತಿದ್ದಾರೆ. ಮುಂದೆ ಚುನಾವಣೆ ಹಿತದೃಷ್ಟಿಯಿಂದ ಪೊಲೀಸರು ಈಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸೂಕ್ಷ್ಮ ಮತ್ತು ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗುತ್ತಿದೆ. ಶಾಲೆಗಳಲ್ಲಿ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಅಗುವ ಕೆಟ್ಟ ಪರಿಣಾಮಗಳು ಮತ್ತು ಸಾಮಾಜಿಕ ತಾಣ ಬಳಸುವಾಗ ತೆಗೆದು ಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳು, ಸಂಚಾರಿ ನಿಯಮಗಳ ಮತ್ತು ಪೊಕ್ಸೋ ಕಾಯ್ದೆ, ಮಹಿಳೆಯರಿಗೆ ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಸಭೆ ನಡೆಸಲಾಗುತ್ತಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಿಂದ ಅಪಘಾತ ಸ್ಥಳಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಎಚ್ಚರಿಕೆ ನಾಮಫಲಕ ಅಳವಡಿಸಲಾಗುತ್ತಿದೆ.
ಪುತ್ತೂರು ಪೊಲೀಸ್ ಉಪವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ ಸೂಕ್ಷ್ಮ ಹಾಗೂ ಪ್ರಮುಖ ಸ್ಥಳಗಳಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ, ತಾತ್ಕಾಲಿಕ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಅನುಮಾನಾಸ್ಪದ ವಾಹನ ತಪಾಸಣೆಯಲ್ಲಿ 56 ಪ್ರಕರಣ, ಕೆಪಿ ಆಕ್ಟ್‌ನಲ್ಲಿ 36 ಪ್ರಕರಣ, ಕೋಟ್ಪಾ ಕಾಯ್ದೆಯಲ್ಲಿ 27 ಪ್ರಕರಣ, 70 ಮಂದಿಯ ಸ್ಕ್ಯಾನರ್ ತಪಾಸಣೆ, 14 ಮಂದಿ ರೌಡಿ ಶೀಟರ್ ಆರೋಪಿಗಳ ತಪಾಸಣೆ ನಡೆಸಲಾಗಿದೆ ಎಂದು ಎಸ್ಪಿ ಅಮ್ಟೆ ವಿಕ್ರಂ ತಿಳಿಸಿದ್ದಾರೆ.