ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ 47 ನೇ ಉರೂಸ್ ಮುಬಾರಕ್

0

ಮರಣದೊಂದಿಗೆ ಮರಣವಿಲ್ಲದ ಜೀವನ ಆರಂಭ- ನಾವು ಸಜ್ಜನರಾಗ ಬೇಕಿದೆ: ಕಬೀರ್‌ಹಿಮಮಿ ಸಖಾಫಿ

ಪುತ್ತೂರು: ಲೌಕಿಕ ಜೀವನ ಎಂಬುದು ಶಾಶ್ವತವಲ್ಲ, ಮರಣದೊಂದಿಗೆ ನಮಗೆ ಮರಣವಿಲ್ಲದ ಜೀವನ ಆರಂಭವಾಗಲಿದ್ದು ಇದಕ್ಕಾಗಿ ನಾವು ಲೌಕಿಕ ಜೀವನದಲ್ಲಿ ಸಜ್ಜನರಾಗಿರಬೇಕು ಎಂದು ಕಬೀರ್‌ಹಿಮಮಿ ಸಖಾಫಿ ಬದಿಯಡ್ಕ ಹೇಳಿದರು.

ಅವರು ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 47ನೇ ಉರೂಸ್ ಮುಬಾರಕ್ ಕಾರ್ಯಕ್ರಮದ ನಾಲ್ಕನೇ ದಿನದಲ್ಲಿ ಧಾರ್ಮಿಕ ಪ್ರವಚನ ನೀಡಿದರು.
ಈ ಭೂಮಿಯ ಮೇಲೆ ಜೀವಿಸುವ ಪ್ರತೀಯೊಂದು ಜೀವಿಗೂ ಮರಣ ಸಂಭವಿಸಲಿದೆ. ಇಲ್ಲಿ ಬದುಕಿ ಉಳಿಯುವವರು ಯಾರೂ ಇಲ್ಲ ಎಂಬುದನ್ನು ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹನು ಸ್ಪಷ್ಟವಾಗಿ ತಿಳಿಸಿದ್ದಾನೆ. ಸಾವು ನಮ್ಮ ನೆರಳಿನಂತೆಯೇ ನಮ್ಮ ಹಿಂದೆಯೇ ಇರುತ್ತದೆ, ಯಾವಾಗ, ಯಾವ ಸಂದರ್ಭದಲ್ಲಿ ಬೇಕಾದರೂ ಮರಣ ಸಂಭವಿಸಬಹುದು. ಮರಣಾ ನಂತರದ ಜೀವನಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಚಿಂತಿಸಬೇಕಿದೆ. ಸಜ್ಜನರು ನಶ್ವರ ಲೋಕಕ್ಕೆ ಬೆಲೆ ಕೊಟ್ಟವರಲ್ಲ, ಪರಲೋಕದ ಉತ್ತಮ ಜೀವನಕ್ಕಾಗಿ ಸಜ್ಜನರಾಗಿ ಬದುಕಿದರು ಅವರೆಲ್ಲರೂ ನಮಗೆ ಮಾರ್ಗದರ್ಶಕರಾಗಿದ್ದಾರೆ. ಅಲ್ಲಾಹನ ಇಷ್ಟದಾಸರನ್ನು ನಾವು ಗೌರವಿಸಬೇಕು ಅವರ ಜೀವನ ಶೈಲಿ ನಮಗೆ ಮಾದರಿಯಾಗಬೇಕು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಮರಣದ ಸಂಖ್ಯೆ ಅಧಿಕವಾಗುತ್ತಲೇ ಇದ್ದು ಇದು ಅಂತ್ಯ ದಿನದ ಲಕ್ಷಣವಾಗಿದೆ. ಮರಣಕ್ಕೆ ರೋಗ ಬರಬೇಕಾಗಿಲ್ಲ ಎಂಬುದನ್ನು ಪ್ರತಿಯೊಬ್ಬ ಆರೋಗ್ಯವಂತನೂ ಆಲೋಚಿಸಬೇಕು. ಭೂಮಿ ಮೇಲೆ ಬದುಕಿರುವಷ್ಟು ದಿನ ನಾವು ಸಜ್ಜನರಾಗಿ ಬದುಕಬೇಕು. ಸತ್ಯವಂತರಾಗಿ, ಯಾರಿಗೂ ನೋವು ಕೊಡದೆ, ಅನ್ಯಾಯಕ್ಕೆ ಮಾರು ಹೋಗದೆ, ಅಶ್ಲೀಲತೆಯಲ್ಲಿ ತೊಡಗಿಸಿಕೊಳ್ಳದೆ, ಎಲ್ಲರನ್ನೂ ಪರಸ್ಪರ ಪ್ರೀತಿ ಗೌರವದಿಂದ ಕಾಣುವ ಮೂಲಕ ನಾವು ಸಮಾಜದಲ್ಲಿ, ಸಮುದಾಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಪೇರಲ್ತಡ್ಕ ಖತೀಬ್ ಇಬ್ರಾಹಿಂ ಮದನಿಯವರು ಮಾತನಾಡಿ ನಾವು ಪ್ರವಾದಿಯವರನ್ನು ಮನಸಾರೆ ಪ್ರೀತಿಸುವ ಮನಸ್ಥಿತಿಯುಳ್ಳವರಾಗಬೇಕು. ಪ್ರವಾದಿಯವರು ನಮಗೆ ಕಲಿಸಿದ ಜೀವನ ಶೈಲಿ ನಮ್ಮದಾಗಬೇಕು. ಇಹ-ಪರಗಳಲ್ಲಿ ವಿಜಯಿಯಾಗಲು ನಾವು ಅಲ್ಲಾಹನಿಗೆ ಹತ್ತಿರವಾಗಬೇಕು. ಅಲ್ಲಾಹನು ಕರುಣಾಮಯಿಯಾಗಿದ್ದು ಅವನ ಇಚ್ಚೆಯಂತೆ ನಾವು ಬದುಕು ಸಾಗಿಸಬೇಕು ಎಂದು ಹೇಳಿದರು.

ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕೊರಿಂಗಿಲ ಇಮಾಂ ಜಿ ಎಚ್ ಅಯ್ಯೂಬ್ ವಹಬಿ, ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ, ಪೇರಲ್ತಡ್ಕ ಜಮಾತ್ ಕಮಿಟಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ನವಾಝ್, ರೆಂಜ ಫಾರೂಕ್ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಹಾಜಿ ಅಜ್ಜಿಕಲ್ಲು, ತಂಬುತ್ತಡ್ಕ ಜುಮಾ ಮಸೀದಿ ಅಧ್ಯಕ್ಷರಾದ ರಫೀಕ್ ಎನ್ ಆರ್ ಕೆ ನಾಕಪ್ಪಾಡಿ, ಉದ್ಯಮಿ ಮನ್ಸೂರ್ ಜೆ ಎಸ್ ಆರ್ಲಪದವು , ಕೊರಿಂಗಿಲ ಜಮಾತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಖಾಸಿಂ ಕೇಕನಾಜೆ, ಮಾಜಿ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಉರೂಸ್ ಕಮಿಟಿ ಅಧ್ಯಕ್ಷರಾದ ಅಲಿ ಶಾಲಾ ಬಳಿ, ಉರೂಸ್ ಕಮಿಟಿ ಕಾರ್ಯರ್ಶಿಗಳಾದ ಅಶ್ರಫ್ ಕುಕ್ಕುಪುಣಿ, ಕೊರಿಂಗಿಲ ಜಮಾತ್ ಕಮಿಟಿ ಉಪಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಏಂಪೆಕಲ್ಲು, ಇಂಜಿನಿಯರ್ ಆಲಿಕುಂಞಿ ಕೊರಿಂಗಿಲ, ಮಹಮ್ಮದ್ ಹಾಜಿ ಶಾಲಾ ಬಳಿ ಸೇರಿದಂತೆ ಹಲವು ಮಂದಿ ಗಣ್ಯರು ಉಪಸ್ಥಿತರಿದ್ದರು. ಅಬ್ದುಲ್ಲ ಮೌಲವಿ ಬೇಂಗತ್ತಡ್ಕ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here