‘ಸಹಕಾರ ರತ್ನ’ ಡಾ|ಎಂ.ಎನ್.ರಾಜೇಂದ್ರ ಕುಮಾರ್‌ರವರ 74ನೇ ಹುಟ್ಟುಹಬ್ಬ-ಅಭಿವಂದನೆ

0

ಸಹಕಾರಿ ರಂಗಕ್ಕೆ ಶಕ್ತಿ ತುಂಬಿದ ‘ಪವರ್ ಸ್ಟಾರ್’ ಡಾ.ಎಂ.ಎನ್.ಆರ್-ಒಡಿಯೂರು ಶ್ರೀ

ಮಂಗಳೂರು:ಡಾ|ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರಿ ರಂಗಕ್ಕೆ, ಜನ ಸಾಮಾನ್ಯರಿಗೆ ಶಕ್ತಿ ನೀಡಿದ ‘ಪವರ್ ಸ್ಟಾರ್’ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ||ಎಂ.ಎನ್.ರಾಜೇಂದ್ರ ಕುಮಾರ್ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅಭಿವಂದನಾ ಕಾರ್ಯಕ್ರಮ ಹಾಗೂ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು. ದೇಶದ ಮೌಲ್ಯ ಎಂದರೆ ತ್ಯಾಗ ಮತ್ತು ಸಮರ್ಪಣೆ. ಈ ನಿಟ್ಟಿನಲ್ಲಿ ರಾಜೇಂದ್ರ ಕುಮಾರ್ ಸಹಕಾರಿ ರಂಗದಲ್ಲಿ ಕಾರ್ಯ ನಿರ್ವಹಿಸಿದವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಬೆಳೆಯಬೇಕು ಅವರಿಗೆ ಸೌಲಭ್ಯ ತಲುಪಿಸಲು ಯತ್ನಿಸಿದವರು. ಸಹಕಾರಿ ರಂಗದಲ್ಲಿ ಪರಸ್ಪರ ಸಹಕಾರದೊಂದಿಗೆ ಬೆಳೆಯಬೇಕು ಎನ್ನುವ ಆದರ್ಶದೊಂದಿಗೆ ರಾಜೇಂದ್ರ ಕುಮಾರ್ ಸಾಧನೆ ಮಾಡಿದ್ದಾರೆ. ಅವರಿಂದ ಸಮಾಜಕ್ಕೆ ಇನ್ನಷ್ಟು ಕೊಡುಗೆ ನೀಡುವಂತೆ ಆಗಲಿ ಎಂದು ಒಡಿಯೂರುಶ್ರೀ ಹಾರೈಸಿದರು.

ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ|ಪಿ.ಎಸ್.ಯಡಪಡಿತ್ತಾಯರವರು ಅಭಿನಂದಿಸಿ ಮಾತನಾಡಿ, ಡಾ|ಎಂ.ಎನ್.ರಾಜೇಂದ್ರ ಕುಮಾರ್ ಓರ್ವ ವ್ಯಕ್ತಿಯಲ್ಲ, ಅವರೊಂದು ಶಕ್ತಿ. ಸಮಾಜದ ಎಲ್ಲಾ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಸಹಕಾರಿ ರಂಗದಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಆಭಿವಂದನಾ ಭಾಷಣ ಮಾಡಿ ಸಮಾಜಮುಖಿ ಕೆಲಸಗಳ ಮೂಲಕ ಸಹಕಾರಿ ಭೀಷ್ಮ ಮೊಳಹಳ್ಳಿ ಶಿವರಾಯರ ಸಹಕಾರಿ ಚಳವಳಿಯನ್ನು ಜನ ಸಾಮಾನ್ಯರ ಬಳಿ ಕೊಂಡೊಯ್ದು ಸಹಕಾರಿ ಸಂಸ್ಥೆಗಳಿಗೆ ಶಕ್ತಿ ತುಂಬಿದ್ದಾರೆ.ಸಹಕಾರಿ ಸಂಸ್ಥೆಯೊಂದು ಬಹುರಾಷ್ಟ್ರೀಯ ಸಂಸ್ಥೆಗೂ ಕಡಿಮೆ ಇಲ್ಲದ ರೀತಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಬಹುದು ಎನ್ನುವುದನ್ನು ರಾಜೇಂದ್ರ ಕುಮಾರ್ ತೋರಿಸಿಕೊಟ್ಟಿದ್ದಾರೆ ಎಂದು ಶುಭ ಹಾರೈಸಿದರು.

74ನೇ ಹುಟ್ಟುಹಬ್ಬಕ್ಕೆ 74 ಫಲಾನುಭವಿಗಳಿಗೆ ಸವಲತ್ತು ವಿತರಣೆ: ಡಾ|ಎಂ.ಎನ್.ರಾಜೇಂದ್ರ ಕುಮಾರ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ 74 ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಜಿಲ್ಲಾಧಿಕಾರಿ ಎಂ.ಆರ್.ರವಿ ಕುಮಾರ್ ಅವರು ಸವಲತ್ತು ವಿತರಣೆ ನೆರವೇರಿಸಿ ಮಾತನಾಡುತ್ತಾ, ಉತ್ತಮ ನಾಯಕತ್ವದ ಮೂಲಕ ಸಹಕಾರಿ ರಂಗದಲ್ಲಿ ರಾಜೇಂದ್ರ ಕುಮಾರ್ ಅವರ ಸಾಧನೆ ರಾಜ್ಯದ ಇನ್ನಷ್ಟು ಜನರಿಗೆ ಸ್ಪೂರ್ತಿ ದೊರೆಯುವಂತಾಗಲಿ ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಡಾ|ರಾಜೇಂದ್ರ ಕುಮಾರ್ ಸಮಾಜದಲ್ಲಿ ಅಶಕ್ತರ ಪಾಲಿಗೆ ದೇವರಂತೆ ಸ್ಥೈರ್ಯ ನೀಡಿ ಸಹಕಾರಿ ರಂಗದಲ್ಲಿ ಸಾಧನೆ ಮಾಡಿದ್ದಾರೆ. ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ದೊರೆಯುವಂತಾಗಲಿ ಎಂದರು. ಅದಾನಿ ಸಮೂಹ ಸಂಸ್ಥೆಗಳ ದಕ್ಷಿಣ ಭಾರತದ ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡುತ್ತಾ, ರಾಜೇಂದ್ರ ಕುಮಾರ್ ಸಹಕಾರಿ ರಂಗ ಮಾತ್ರವಲ್ಲ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಮುಲ್ಕಿ ಸುಂದರರಾಮ ಶೆಟ್ಟಿಯವರಂತಹ ಸಾಧಕರಾಗಿದ್ದಾರೆ ಎಂದು ಶುಭ ಹಾರೈಸಿದರು.

ಜನರ ಪ್ರೀತಿ, ವಿಶ್ವಾಸದಿಂದ ಸಹಕಾರಿ ರಂಗದಲ್ಲಿ ಸಾಧನೆ-ಡಾ|ಎಂ.ಎನ್.ಆರ್: ಸನ್ಮಾನ ಸ್ವೀಕರಿಸಿದ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ ಜನರ ಪ್ರೀತಿ ವಿಶ್ವಾಸ ಸಹಕಾರಿ ರಂಗದಲ್ಲಿ ನನ್ನ ಸಾಧನೆಗೆ ಕಾರಣವಾಗಿದೆ.ಅದಕ್ಕಾಗಿ ಆ ಜನರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯ ಎನ್ನುವ ನೆಲೆಯಲ್ಲಿ ನಾನು ಕಾರ್ಯ ನಿರ್ವಹಿಸಿದ್ದೇನೆ. ನಾನು ಒಂದು ಜಮೀನ್ದಾರಿ ಕುಟುಂಬದಿಂದ ಬಂದು ಉದ್ಯೋಗದ ನಿಮಿತ್ತ ಮುಂಬೈಗೆ ತೆರಳಿ ಮರಳಿ ಸಹಕಾರಿ ರಂಗದಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಿತು. ಹುಟ್ಟು ಸಾವು ನಡುವೆ ನಾಲ್ಕು ಜನರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದ ನನಗೆ ಸಹಕಾರಿ ರಂಗದಲ್ಲಿ ಇದಕ್ಕೆ ಸಾಕಷ್ಟು ಅವಕಾಶ ದೊರೆಯಿತು. ಜನರಿಗೆ ಸಹಾಯ ಮಾಡಲು ಅಽಕಾರ, ಹುದ್ದೆಗಳ ಅಗತ್ಯವಿಲ್ಲ. ನಮ್ಮ ಸಂಸ್ಥೆಗಳ ಮೂಲಕ ಕರ್ನಾಟಕದ ಬಹುತೇಕ ಜಿಲ್ಲೆಯ ಜನರಿಗೆ ಸೇವೆ ನೀಡಲು ಸಾಧ್ಯವಾಗಿದೆ.ಜನರ ಕಷ್ಟಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ.ನಾನು ಜಾತಿಯ ಆಧಾರದಲ್ಲಿ ಕಾರ್ಯ ನಿರ್ವಹಿಸದೆ,ಎಲ್ಲಾ ಜಾತಿ,ಧರ್ಮದವರ ಬಗ್ಗೆ ಗೌರವದ ಭಾವನೆ ಹೊಂದಿದ್ದೇನೆ.ಯಾವುದೇ ಜಾತಿ,ಧರ್ಮ, ನೋಡದೆ ಸಮಾಜದ ಎಲ್ಲಾ ಮಹಿಳೆಯರು, ರೈತರಿಗೆ ಸಹಕಾರಿ ರಂಗದ ಮೂಲಕ ಪಕ್ಷಾತೀತವಾಗಿ, ಅವರಾಗಿಯೇ ಬೆಳೆಯಲು ಸಹಾಯ ಮಾಡಿದ ತೃಪ್ತಿಯಿದೆ ಎಂದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಅಭಿವಂದನಾ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು.ರಾಜ್ಯ ಸಹಕಾರಿ ಮಹಾ ಮಂಡಳದ ಆಡಳಿತ ನಿರ್ದೇಶಕ ಬಾಲಶೇಖರ ಕೆ, ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಎಸ್.ಕೋಟ್ಯಾನ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್‌ನ ನಿರ್ದೇಶಕರುಗಳಾದ ಎಸ್.ಬಿ.ಜಯರಾಮ ರೈ, ಬಿ.ನಿರಂಜನ್, ಟಿ.ಜಿ. ರಾಜಾರಾಮ ಭಟ್, ಎಂ.ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ,ಮೋನಪ್ಪ ಶೆಟ್ಟಿ,ಹರಿಶ್ಚಂದ್ರ,ಕೆ.ಜೈರಾಜ್ ಬಿ ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ದ.ಕ.ಉಪ ನಿಬಂಧಕರಾದ ರಮೇಶ್ ಎಚ್.ಎನ್, ಉಡುಪಿ ಜಿಲ್ಲೆಯ ಉಪನಿಬಂಧಕ ಲಕ್ಷ್ಮೀನಾರಾಯಣ, ಮುಖ್ಯ ಕಾರ್ಯನಿರ್ವಹಣಾಽಕಾರಿ ಗೋಪಾಲಕೃಷ್ಣ ಭಟ್, ಮಹಾಪ್ರಬಂಧಕ ಅಶೋಕ್ ಕುಮಾರ್, ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.ನಿತೀಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here