ಪೆರ್ನೆ ಮಾಡತ್ತಾರು ಸಪರಿವಾರ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ತೆರೆ

0

ನೂನಾರು ವರ್ಷಗಳ ಬಳಿಕ ದೈವಗಳ ನೇಮೋತ್ಸವದ ವೈಭವವನ್ನು ಕಣ್ತುಂಬಿಕೊಂಡ ಭಕ್ತರು

ಪುತ್ತೂರು:ಸುಮಾರು 500 ವರ್ಷಗಳ ಇತಿಹಾಸವಿರುವ ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಲ್ಲಿ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವಗಳು ಫೆ.23ರಂದು ರಾತ್ರಿ ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊಂಡಿತು.

ಆ ಮೂಲಕ ಸುಮಾರು ನೂರಾರು ವರ್ಷಗಳಿಂದ ನಿಂತು ಹೋಗಿದ್ದ ದೈವಗಳ ವೈಭವದ ನೇಮೋತ್ಸವದ ಗತ ವೈಭವ ಮತ್ತೆ ಕಣ್ತುಂಬಿಸಿಕೊಂಡರು.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಫೆ.21 ರಂದು ಬೆಳಿಗ್ಗೆ ಗೊನೆ ಮುಹೂರ್ತ ನಡೆದ ಬಳಿಕ ಉಗ್ರಾಣ ಮುಹೂರ್ತ ಹಾಗೂ ದೈವಸ್ಥಾನದ ಕಾರ್ಯಾಲಯದ ಉದ್ಘಾಟನೆಯೊಂದಿಗೆ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಚಾಲನೆ ದೊರೆತಿದೆ. ಬಳಿಕ ನಡೆದ ಹೊರೆಕಾಣಿಕೆ ಸಮರ್ಪಣೆಯಲ್ಲಿ ಊರ, ಪರವೂರ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆಯ ಮಹಾಪೂರವೇ ಹರಿದುಬಂದಿತ್ತು. ಗ್ರಾಮದ ವಿವಿಧ ಮೂಲೆಗಳಿಂದ ಸಂಗ್ರಹಣೆಗೊಂಡ ಹೊರೆಕಾಣಿಕೆ ಪೆರ್ನೆ, ಕಡಂಬು ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ದೈವಸ್ಥಾನಕ್ಕೆ ಆಗಮಿಸಿತ್ತು.


ಸಂಜೆ ಕ್ಷೇತ್ರದ ತಂತ್ರಿಗಳ ಮತ್ತು ಋತ್ವಿಜರಿಗೆ ಸ್ವಾಗತ, ಭಂಡಾರದ ಮನೆ ಅತ್ತೆಜಾಲುವಿನಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಸಂಜೆ ಧಾರ್ಮಿಕ ಸಭೆ ಬಳಿಕ ಅನ್ನಸಂತರ್ಪಣೆ ಸಾಂಸ್ಕೃತಿಕ ಕಾರ್ಯಕ್ರಮ, ಎರಡನೇ ದಿನವಾದ ಫೆ.22 ರಂದು ಅತ್ತೆಜಾಲು ಕ್ಷೇತ್ರದ ಭಂಡಾರದ ಮನೆಯಲ್ಲಿ ಮಹಾಗಣಪತಿ ಹೋಮ, ಬ್ರಹ್ಮಕಲಶಪೂಜೆ, ವ್ಯಾಘ್ರಚಾಮುಂಡಿ, ಉಳ್ಳಾಕುಲು, ಕೊರತಿ, ಗುಳಿಗ ಹಾಗೂ ಸಪರಿವಾರ ದೈವಗಳ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ನಾಗದೇವರಿಗೆ ತಂಬಿಲ, ಅತ್ತೆಜಾಲುವಿನಲ್ಲಿರುವ ಪರಿಚಾರಕರ ಮನೆ ಗೃಹಪ್ರವೇಶ, ಸಂಜೆ ಮಾಡತ್ತಾರು ದೈವಸ್ಥಾನದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ಧಾರ್ಮಿಕ ಸಭಾ ಕಾರ್ಯಕ್ರಮ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ಮೂರನೇ ದಿನವಾದ ಫೆ.23 ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಶ್ರೀ ವ್ಯಾಘ್ರ ಚಾಮುಂಡಿ, ಉಳ್ಳಾಕ್ಲು, ಕೊರತಿ ಮತ್ತು ಗುಳಿಗ ದೈವದ ಮಂಚ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ನೇಮಸ್ತಿಕ ನಿಯಮಗಳ ನಿರ್ಣಯ, ಪ್ರಸಾದ ವಿತರಣೆ, ಧರ್ಮಸಭೆ, ಅನ್ನಸಂತರ್ಪಣೆ ನೆರವೇರಿತು. ಸಂಜೆ ಅತ್ತೆಜಾಲು ಭಂಡಾರದ ಮನೆಯಿಂದ ದೈವಗಳ ಭಂಡಾರ ತೆಗೆದು, ಆಗಮನ, ಮಾಡತ್ತಾರು ಕ್ಷೇತ್ರದಲ್ಲಿ ತಂಬಿಲ ಸೇವೆ, ಎಣ್ಣೆ ಬೂಳ್ಯ, ಅನ್ನಸಂತರ್ಪಣೆ, ರಾತ್ರಿ ಸಪರಿವಾರ ದೈವಗಳ ನರ್ತನ ಸೇವೆ, ನೇಮೋತ್ಸವ ನಡೆಯಿತು.


ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮಿತಿ ಹಾಗೂ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಆಶೀರ್ವಚನ ನೀಡಿದ್ದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳ ಮುಖಂಡರು ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವದ ವೈಭವವನ್ನು ಕಂಡು ಪುನೀತರಾದರು.


ಆಕರ್ಷಕ ಆಮಂತ್ರಣ:
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಮುಖ ಪುಟದ ವಿನ್ಯಾಸವು ಭಕ್ತಿ, ಭಾವದ ಸಂದೇಶ ಸಾರುವಂತೆ ವಿಭಿನ್ನ ಶೈಲಿಯಲ್ಲಿ ಮುದ್ರಣಗೊಂಡಿದ್ದು ಸ್ವಾಮೀಜಿಯವರು ಸಹಿತ ಅತಿಥಿ ಅಭ್ಯಾಗತರು ಹಾಗೂ ಸಾರ್ವಜನಿಕರಿಂದ ಬಹಳಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಆಮಂತ್ರಣ ಪತ್ರಿಕೆಯಲ್ಲಿಯೇ ಮಾಡತ್ತಾರು ಕ್ಷೇತ್ರದ ಹಿನ್ನೆಲೆ, ಕಾರಣಿಕದ ಸಂದೇಶ ನೀಡಲಾಗಿದೆ ಎಂದು ಧಾರ್ಮಿಕ ಸಭೆಯ ಮಠಾಧೀಶರುಗಳು ಹಾಗೂ ಅತಿಥಿಗಳು ಆಮಂತ್ರಣ ಪತ್ರಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಶಿಸ್ತು ಬದ್ದವಾಗಿ ನಡೆದ ಬ್ರಹ್ಮಕಲಶೋತ್ಸವ:
ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸದಲ್ಲಿ ಹೊರೆ ಕಾಣಿಕೆ ಸಮರ್ಪಣೆ, ಧರ್ಮಚಾವಡಿಯಲ್ಲಿ ನಡೆದ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನಪೂರ್ಣ ಭೋಜನ ಶಾಲೆಯಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ, ಬೆಳಿಗ್ಗೆ ಹಾಗೂ ಸಂಜೆಯ ಉಪಾಹಾರಗಳು, ವಾಹನ ನಿಲುಗಡೆ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ವಿವಿಧ ಉಪ ಸಮಿತಿಗಳ ನೇತೃತ್ವದಲ್ಲಿ ಬಹಳಷ್ಟು ವ್ಯವಸ್ಥಿತ ಹಾಗೂ ಶಿಸ್ತು ಬದ್ದವಾಗಿ ನಡೆದಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಶುಚಿತ್ವಕ್ಕೆ ಬಹಳಷ್ಟು ಆದ್ಯತೆ ನೀಡಲಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.


25,೦೦೦ ಮಂದಿಗೆ ಅನ್ನದಾನ:
ಮೂರು ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವದಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ಭೋಜನ ಹಾಗೂ ಉಪಾಹಾರದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು ಸುಮಾರು 25,೦೦೦ ಮಂದಿ ಭಕ್ತಾದಿಗಳು ಅನ್ನಪ್ರಸಾದವನ್ನು ಸ್ವೀಕರಿಸಿದ್ದರು.


ಎಲ್ಲವೂ ಪುರಾತನ ಶೈಲಿಯಲ್ಲಿ:
ದೈವಸ್ಥಾನದಲ್ಲಿ ವಿಶೇಷವಾಗಿ ಗುಡಿ, ಮಾಡಗಳ ನಿರ್ಮಾಣ ಹಾಗೂ ನೇಮೋತ್ಸವಗಳೆಲ್ಲವೂ ಪುರಾತನ ಶೈಲಿಯಲ್ಲಿ ನೆರವೇರಿದೆ. ದೈವಸ್ಥಾನದ ಸುತ್ತ ತೆಂಗಿನಗರಿಯ ತಟ್ಟಿಯ ವಿಶಾಲವಾದ ಚಪ್ಪರ ಅಳವಡಿಸಲಾಗಿತ್ತು. ಅತ್ತೆಜಾಲು ಭಂಡಾರದ ಮನೆಯಿಂದ ಮಾಡತ್ತಾರಿಗೆ ದೈವಗಳ ಭಂಡಾರವು ದೊಂದಿ ಬೆಳಕಿನಲ್ಲಿ ಆಗಮಿಸಿದೆ. ಅಲ್ಲದೆ ನೇಮೋತ್ಸವ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ನಿಷೇಧಿಸಲಾಗಿತ್ತು.

ನೇಮೋತ್ಸವ ಪೂರ್ಣಗೊಳ್ಳುವ ತನಕ ಎಲ್ಲಾ ಕಾರ್ಯಕ್ರಮಗಳು ನಮ್ಮ ನಿರೀಕ್ಷೆಗಿಂತ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ನೆರವೇರಿದೆ. ಇದು ಕೇವಲ ಸಮಿತಿಯಿಂದಾಗಿ ಅಲ್ಲ. ಸ್ವಯಂ ಸೇವಕರ ಅವಿರತ ಶ್ರಮ, ಊರ, ಪರವೂರ ಭಕ್ತಾದಿಗಳ ಸಹಕಾರ, ಪ್ರೋತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದೆ. ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಸಹಕಾರ, ಪ್ರೋತ್ಸಾಹ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
-ಕಿರಣ್ ಶೆಟ್ಟಿ ಮುಂಡೋವಿಕೋಡಿ,
ಅಧ್ಯಕ್ಷರು ದೈವಸ್ಥಾನ ಟ್ರಸ್ಟ್


ಊರ, ಪರವೂರ ಭಕ್ತರು, ದಾನಿಗಳ ಸಹಕಾರ ಕಾರ್ಯಕರ್ತರ ಉತ್ಸಾಹದ ಶ್ರಮದ ಫಲವಾಗಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಗಳು ಅತ್ಯಂತ ವಿಜ್ರಂಭಣೆಯಿಂದ ನಡೆದುಬಂದಿದೆ. ಈ ಎಲ್ಲಾ ಕಾರ್ಯದಲ್ಲಿ ತನು, ಮನ, ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.
-ಈಶ್ವರಪ್ರಸನ್ನ, ಗೌರವಾಧ್ಯಕ್ಷರು ದೈವಸ್ಥಾನ ಟ್ರಸ್ಟ್

LEAVE A REPLY

Please enter your comment!
Please enter your name here