ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ 47ನೇ ಉರೂಸ್ ಸಮಾರೋಪ, ಸೌಹಾರ್ಧ ಸಂಗಮ

0

ಜಾತ್ಯಾತೀತತೆ, ಕೋಮು ಸೌಹಾರ್ದತೆಯಿಂದ ಭಾರತ ನೆಲೆ ನಿಂತಿದೆ: ಬಾಅಲವಿ ತಂಙಳ್


ಪುತ್ತೂರು:ಭಾರತ ಬಲು ದೊಡ್ಡ ಜಾತ್ಯಾತೀತ ರಾಷ್ಟ್ರವಾಗಿದೆ, ಇಲ್ಲಿನ ಸಂವಿಧಾನವೇ ಶ್ರೇಷ್ಟವಾಗಿದೆ, ಭಾರತ ಇಂದು ಸುಂದರವಾಗಿ ಕಂಗೊಳಿಸುತ್ತಿದ್ದರೆ ಅದಕ್ಕೆ ಜಾತ್ಯಾತೀತತೆ ಮತ್ತು ಕೋಮು ಸೌಹಾರ್ದತೆ ಕಾರಣವಾಗಿದ್ದು ಈ ತತ್ವದಡಿ ಇಂದು ದೇಶ ನೆಲೆ ನಿಂತಿದೆ ಅದು ಎಂದೆಂದಿಗೂ ಶಾಸ್ವತವಾಗಿ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಪ್ರತೀಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ಹೇಳಿದರು.


ಅವರು ಫೆ. 25 ರಂದು ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 47 ನೇ ಉರೂಸ್ ಮುಬಾರಕ್ ಪ್ರಯುಕ್ತ ನಡೆದ ಸೌಹಾರ್ದ ಸಂಗಮವನ್ನು ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ವಾಸಿಸುತ್ತಿರುವ ಎಲ್ಲಾ ಧರ್ಮಿಯರೂ ಪರಸ್ಪರ ಸೌಹಾರ್ದತೆಯಿಂದ ಬಾಳಬೇಕಿದೆ. ಸೌಹಾರ್ಧತೆ ಇದ್ದರೆ ಮಾತ್ರ ಯಾವುದೇ ದೇಶ ಅಭಿವೃದ್ದಿಯಾಗಲು ಸಾಧ್ಯವಿದೆ, ಗಲಭೆ, ದೊಂಬಿಗಳು ನಾಡನ್ನು ವಿನಾಶಗೊಳಿಸುತ್ತದೆ .ಇಸ್ಲಾಂ ಕೋಮು ಸೌಹಾರ್ದತೆಗೆ ಹೆಚ್ಚಿನ ಮಹತ್ವವನ್ನು ಕೊಡುತ್ತದೆ.ಕೋಮುವಾದವನ್ನು ಇಸ್ಲಾಂ ವಿರೋಧಿಸುತ್ತದೆ. ತನ್ನ ಧರ್ಮವನ್ನು ಪಾಲನೆ ಮಾಡುವುದರ ಜೊತೆಗೆ ಸಹೋದರ ಧರ್ಮ, ಧರ್ಮಿಯರನ್ನು ಗೌರವಿಸುವ ಪೃವೃತ್ತಿ ಎಲ್ಲೆಡೆ ಮುಂದುವರೆದರೆ ಇಲ್ಲಿ ಸಂಘರ್ಷ ಎಂಬುದೇ ಇಲ್ಲ. ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್‌ಗೆ ಭೂಮಿಯನ್ನು ಆನಾಜೆ ಗಣೇಶ್‌ರೈ ನೀಡುವ ಮೂಲಕ ಈ ಊರಿನ ಸೌಹಾರ್ದತೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.ಧರ್ಮಗಳ ಹೆಸರಿನಲ್ಲಿ ಕಚ್ಚಾಡುವುದನ್ನು ಬಿಟ್ಟು ನಾವೆಲ್ಲರೂ ಭಾರತೀಯರು ಎಂಬ ಮನೋಭಾವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.ಅಸ್ಸಯ್ಯಿದ್ ಹಾಶಿಂ ಬಾಅಲವಿ ತಂಙಳ್ ದುವಾ ನೆರವೇರಿಸಿದರು.

30 ವರ್ಷಗಳಿಂದ ಕಾರ್ಯಕ್ರಮದಲ್ಲಿ ಬಾಗಿ: ಆಳ್ವ


ಕೆಡಿಪಿ ಮಾಜಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಇರ್ದೆ-ಪಳ್ಳಿತ್ತಡ್ಕ ಸಾಮರಸ್ಯ ಕೇಂದ್ರವಾಗಿದೆ, ಇಲ್ಲಿನ ಸೌಹಾರ್ದ ಕಾರ್ಯಕ್ರಮಕ್ಕೆ 30 ವರ್ಷಗಳಿಂದ ಬಾಗವಹಿಸುತ್ತಿದ್ದೇನೆ. ಸೌಹಾರ್ದ ಸಮ್ಮೇಳನಗಳು ಶಾಂತಿಗೆ ಸಾಕ್ಷಿಯಾಗುತ್ತದೆ.ಹಿಂದೂ- ಮುಸ್ಲಿಂ ಬಂಧುಗಳು ಅಣ್ಣ ತಮ್ಮಂದಿರಂತೆ ಬಾಳಬೇಕಿದೆ ಅದು ಇಂದಿನ ಅನಿವಾರ್ಯತೆಯೂ ಆಗಿದೆ.ಇಂದು ನಡೆಯುವ ಸೌಹಾರ್ದ ಸಮ್ಮೇಳನ ಊರಿನ ಶಾಂತಿಗೆ ಕಾರಣವಾಗಲಿ ಎಂದು ಹೇಳಿದರು.

ಎಲ್ಲರೂ ಜೊತೆ ಸೇರಿದರೆ ಮಾತ್ರ ಭಾರತ: ಇಕ್ಬಾಲ್ ಬಾಳಿಲ


ಭಾರತ ಜಾತ್ಯಾತೀತ ದೇಶವಾಗಿದೆ. ಇಲ್ಲಿ ಹಿಂದೂ-ಮುಸ್ಲಿಂ ಬಂಧುಗಳು ಜೊತೆಯಾಗಿರಬೇಕು.ಭಾರತದ ಇತಿಹಾಸದಲ್ಲಿ ಎಲ್ಲೂ ಕೋಮು ಸಂಘರ್ಷ ನಡೆದ ಇತಿಹಾಸವಿಲ್ಲ. ಹಿಂದೂಗಳು ಎಂದಿಗೂ ಮುಸಲ್ಮಾನರ ವಿರುದ್ದ ಯುದ್ದ ಮಾಡಿಲ್ಲ , ರಾಕ್ಷಸರ ವಿರುದ್ದ ಹಿಂದೂ ಗಳು ಯುದ್ದ ನಡೆಸಿದ್ದರು.ದೇಶದ ಜಾತ್ಯಾತೀತ ವ್ಯವಸ್ಥೆಯನ್ನು ಹಾಳು ಮಾಡಿದವರು ಬ್ರಿಟೀಷರು. ಭಾರತವನ್ನು ಆದ:ಪತನಕ್ಕೆ ತಳ್ಳಬೇಕು ಎಂಬ ಉದ್ದೇಶದಿಂದ ಇಲ್ಲಿ ಕೋಮು ವಿಷ ಬೀಜವನ್ನು ಬಿತ್ತಿದ್ದಾರೆ. ಬ್ರಿಟೀಷರ ತುಂಡು ರೊಟ್ಟಿ ತಂದವರು ಇಂದಿಗೂ ನಮ್ಮ ದೇಶದಲ್ಲಿ ಇದ್ದು ಅವರಿಂದ ಕೋಮು ಸಂಘರ್ಷ ನಡೆಯುತ್ತಿದೆ ಎಂದು ಹೇಳಿದರು. ಶೇ. 90 ಮಂದಿ ಭಾರತೀಯರು ಕೋಮು ಸೌಹಾರ್ದವನ್ನು ಇಷ್ಟಪಡುವ ಮಂದಿಯಾಗಿದ್ದಾರೆ ಎಂದು ಹೇಳಿದರು.

ಓಟಿಗಾಗಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ; ಎಂ ಬಿ ವಿಶ್ವನಾಥ ರೈ


ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ವಿಷ ಬೀಜವನ್ನು ಬಿತ್ತಿ ಕೆಲವರು ಸಮಾಜವನ್ನು ಹಾಳು ಮಾಡುತ್ತಿದ್ದಾರೆ.ಯುವಕರು ಇಂಥವರ ಬಗ್ಗೆ ಎಚ್ಚರದಿಂದ ಇರಬೇಕು. ಅನ್ಯಾಯವಾಗಿ ಪಡೆದ ಯಾವುದೇ ಸಂಪತ್ತು ಅದು ಹೆಚ್ಚು ಬಾಳಿಕೆ ಬರುವುದಿಲ್ಲ. ನಾವು ಯಾರಿಗೂ ಅನ್ಯಾಯ ಮಾಡಬಾರದು ಯಾರ ಮನಸ್ಸಿಗೂ ನೋವು ಕೊಡದೆ ಸೌಹಾರ್ದತೆಯಿಂದ ಬದುಕಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಹೇಳಿದರು.

ಸೌಹಾರ್ದತೆಗೆ ಕೆಡುಕು ಬರುವ ಸನ್ನಿವೇಶಗಳು ನಡೆಯುತ್ತಿದೆ: ಕಾವು ಹೇಮನಾಥ ಶೆಟ್ಟಿ


ದೇಶದಲ್ಲಿ ಕಳೆದ ಹಲವು ಸಮಯಗಳಿಂದ ಸೌಹಾರ್ದತೆಯನ್ನು ಕೆಡಿಸುವ ಕೆಲಸಗಳು ನಿರಂತರವಾಗಿ ನಡೆಯುತ್ತಿದೆ.ಸೌಹಾರ್ದತೆಯ ಸಂಕೇತವಾದ ಆನಾಜೆ ಗಣೇಶ್ ರೈಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.ಜಿಲ್ಲೆಯಲ್ಲಿ ಅಂದಿನಿಂದ ಇಂದಿನ ತನಕ ಹಿಂದು- ಮುಸ್ಲಿಂ ಪರಸ್ಪರ ಸೌರ್ಹಾರ್ಧತೆಯಿಂದಲೇ ಜೀವನ ನಡೆಸುತ್ತಿದ್ದರು. ಪ್ರಸಕ್ತ ಸಮಾಜದಲ್ಲಿ ಸೌಹಾರ್ದತೆ ದೂರವಾಗುತ್ತಿದೆ. ಪರಸ್ಪರ ಮಾತನಾಡಲು ಭಯಪಡುವ ಸನ್ನಿವೇಶ ಉಂಟಾಗಿದೆ.ಇರ್ದೆಯಲ್ಲಿ ಉರೂಸ್ ಪ್ರಯುಕ್ತ ಸೌಹಾರ್ದತೆಗೂ ಒತ್ತು ನೀಡುತ್ತಿರುವುದು ಶ್ಲಾಘನೀಯವಾಗಿದೆ.ಸೌಹಾರ್ದತೆಗೆ ಧಕ್ಕೆಯಾದರೆ ದೇಶದಲ್ಲಿ ಅಭಿವೃದ್ದಿಗೆ ಧಕ್ಕೆಯಾಗುತ್ತದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

ಸೌಹಾರ್ದತೆಯ ಅಗತ್ಯತೆ ಇದೆ: ಹರಿಪ್ರಕಾಶ್ ಬೈಲಾಡಿ


ದೇಶದಲ್ಲಿ ಸೌಹಾರ್ದತೆಯ ಅಗತ್ಯತೆ ಇದೆ.ನಾನು ಎಂಬುದನ್ನು ಮರೆತು ನಾವು ಎಂಬುದನ್ನು ರೂಢಿಸಿಕೊಳ್ಳಬೇಕು, ನಾವೆಲ್ಲರೂ ಭರತೀಯರೇ ವಿನ ಧರ್ಮದ ಆಧಾರದಲ್ಲಿ ಯಾರನ್ನೂ ಆಳೆಯಬಾರದು ಪರಸ್ಪರ ಸಂಶಯಿತ ವಿಚಾರಗಳ ಬಗ್ಗೆ ಚರ್ಚೆ ನಡೆದು ಪರಿಹರಿಸಿಕೊಳ್ಳಬೇಕು. ಒಂದಾಗಿ ಬಾಳುವ ಮೂಲಕ ದೇಶಕ್ಕೆ ಶಕ್ತಿ ನೀಡುವ ಎಂದು ಬೆಳಿಯೂರುಕಟ್ಟೆ ಸಪಪೂ ಕಾಲೇಜಿನ ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿ ಹೇಳಿದರು.

ನಾನು ಯಾವತ್ತೂ ಬೇದಭಾವ ಮಾಡಿಲ್ಲ; ಅಶೋಕ್ ರೈ


ಕಷ್ಟ ಬಂದಾಗ ಸಹಾಯ ಮಾಡುವವನೇ ನಿಜವಾದ ಬಂಧು,ನಾನು ಧರ್ಮ ನೋಡಿ, ಜಾತಿ ನೋಡಿ ಯಾರಿಗೂ ಸಹಾಯ ಮಾಡಿಲ್ಲ. ಪ್ರೀತಿಗೆ ಎಂದಿಗೂ ಜಾತಿಮತ ಬೇಧವಿಲ್ಲ.ರಾಜಕೀಯ ಉದ್ದೇಶಕ್ಕೋಸ್ಕರ ಸಮಾಜದಲ್ಲಿ ಕಚ್ಚಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆಟ್ಟ ಭಾವನೆಗಳನ್ನು ಯುವಕರಲ್ಲಿ ತುಂಬಿಸುತ್ತಿದ್ದಾರೆ ಇದು ಒಳ್ಳೆಯದಲ್ಲ.ತನ್ನ ಧರ್ಮವನ್ನು ಪ್ರೀತಿಸುವ ಮೂಲಕ ಮತ್ತೊಂದು ಧರ್ಮವನ್ನು ಗೌರವಿಸಿದರೆ ದೇಶದಲ್ಲಿ ಸೌಹಾರ್ಧತೆಯ ವಾತಾವರಣ ಸೃಷ್ಟಿಯಾಗುತ್ತದೆ.ನಾನು ಯಾವುದೇ ಧಮವನ್ನು ಇದುವರೆಗೆ ದೂರಿಲ್ಲ ಎಂದುಹೇಳಿದ ಅವರು ಎಲ್ಲರೂ ನನಗೆ ಆಶೀರ್ವಾದ ಮಾಡಿದರೆ ಭೃಷ್ಟಾಚಾರಕ್ಕೆ ಕಡಿವಾಣ ಹಾಕುವುದಾಗಿ ಕೋಡಿಂಬಡಿ ರೈ ಎಸ್ಟೇಟ್ ಮಾಲಿಕ ಅಶೋಕ್ ರೈ ಕೋಡಿಂಬಾಡಿ ಹೇಳಿದರು.

ನೋವು ಎಲ್ಲರಿಗೂ ಒಂದೇ ರೀತಿಯಾಗಿರುತ್ತದೆ: ಹಾರಿಸ್ ಕೌಸರಿ


ನಾವು ಮಾನವರಾಗಬೇಕು, ಮಾನವೀಯತೆ ಉಳ್ಳವರಿಗೆ ಮಾತ್ರ ಮಾನವನಾಗಲು ಸಾಧ್ಯವಿದೆ. ಯಾರ ಮನಸ್ಸಿಗೂ ನೋವು ಕೆಲಸ ಆಗಬರದು, ನೋವು ಎಲ್ಲರಿಗೂ ಒಂದೇ ಆಗಿದೆ. ಯವುದೇ ಧರ್ಮವು ಕೋಮುವಾದಕ್ಕೆ ಬೆಂಬಲ ನೀಡಿಲ್ಲ ಆದರೆ ದೇಶದಲ್ಲಿ ಯಾವ ಕಾರಣಕ್ಕೆ ಕೋಮುವಾದ ಹುಟ್ಟಿಕೊಳ್ಳುತ್ತಿದೆಯೋ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೋಮುವಾದಿಯಾದವ ಪರಿಪೂರ್ಣ ಮುಸ್ಲಿಮನಾಗಲು ಸಾಧ್ಯವಿಲ್ಲ. ಸಾಮರಸ್ಯವನ್ನು ನಾವು ಮೈಗೂಡಿಸಿಕೊಳ್ಳಬೇಕು ನಾನು ಎಂಬುದನ್ನು ಮರೆತು ನಾವು ಎಂಬುದನ್ನು ರೂಢಿಸಿಕೊಂಡು ಭಾರತೀಯನಾಗಿ ಬಾಳಬೇಕು ಎಂದು ದಿಕ್ಸೂಚಿ ಭಾಷಣ ಮಾಡಿದ ಹಾರಿಸ್ ಕೌಸರಿ ಹೇಳಿದರು.


ಬೆಟ್ಟಂಪಾಡಿ ಗ್ರಾಪಂ ಸದಸ್ಯರಾದ ನವೀನ್ ರೈ ಚೆಲ್ಯಡ್ಕ, ಮಾಜಿ ತಾಪಂ ಅಧ್ಯಕ್ಷ ಮಹಮ್ಮದ್ ಬಡಗನ್ನೂರು,ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಬಿ ಆರ್ ದೇವಪ್ಪ ಗೌಡ ಸಂದರ್ಭೋಚಿತವಾಗಿ ಮಾತನಾಡಿದರು.ವೇದಿಕೆಯಲ್ಲಿ ಎಪಿಎಂಸಿ ಮಾಜಿ ಸದಸ್ಯರಾದ ಶಕೂರ್ ಹಾಜಿ, ಉದ್ಯಮಿ ಯೂಸುಫ್ ಹಾಜಿ ಕೈಕಾರ, ಮೊಯಿದು ಕುಂಞಿ ಕೋನಡ್ಕ,ಮಹಮ್ಮದ್ ಹಾಜಿ ಕುಕ್ಕುವರ್ಳಳಿ,ಶಾಕಿರ್ ಹಾಜಿ ಮಿತ್ತೂರು,ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್ಷದ್ ದರ್ಬೆ, ಖಲಂದರ್ ಪುತ್ತೂರು,ಅಶ್ರಫ್ ಕೆ ಬಿ ಬುಳೇರಿಕಟ್ಟೆ, ಕೊರಿಂಗಿಲ ಜಮಾತ್ ಕಮಿಟಿ ಉಪಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಏಂಪೆಕಲ್ಲು,ಮಹಮ್ಮದ್ ಹಾಜಿ ಶಾಲಾ ಬಳಿ,ಕೊರಿಂಗಿಲ ಜಮಾತ್ ಪ್ರ. ಕಾರ್ಯದರ್ಶಿ ಕಾಸಿಂ ಕೇಕನಾಜೆ, ಉರೂಸ್ ಕಮಿಟಿ ಅಧ್ಯಕ್ಷರಾದ ಅಲಿ ಶಾಲಾ ಬಳಿ,ಕೊರಿಂಗಿಲ ಜಮಾತ್ ಮಾಜಿ ಕಾರ್ಯದರ್ಶಿ ಶಾಹುಲ್ ಹಮೀದ್,ಉರೂಸ್ ಕಮಿಟಿ ಕಾರ್ಯದರ್ಶಿ ಅಶ್ರಫ್ ಕುಕ್ಕುಪುನಿ,ಕೆ ಎಂ ಹನೀಫ್ ಮಾಡಾವುಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಿವಿಲ್ ಇಂಜನಿಯರ್ ಆಲಿಕುಂಞಿ ಕೊರಿಂಗಿಲ ಸ್ವಾಗತಿಸಿದರು. ಅಬ್ದುಲ್ಲ ಮೌಲವಿ ಬೇಂಗತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

ಉರೂಸ್ ಸಮಾರೋಪ, ಮೌಲೀದ್ ಪಾರಾಯಣ
ಪ್ರವಾದಿ ಪ್ರೇಮವು ಆಧ್ಯಾತ್ಮವನ್ನು ಗಟ್ಟಿಗೊಳಿಸುತ್ತದೆ: ಆಶಿಕ್‌ದಾರಿಮಿ
ಪುತ್ತೂರು: ಉರೂಸ್‌ಗ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದ ಆಶಿಕ್‌ದಾರಿಮಿ ಆಲಪ್ಪುಝ ರವರು ಪ್ರವಾದಿ ಪ್ರೇಮವು ನಮ್ಮ ಆಧ್ಯಾತ್ಮವನ್ನು ಗಟ್ಟಿಗೊಳಿಸುತ್ತದೆ. ಸ್ವಲಾತ್ ಹೇಳುವ ಮೂಲಕ ನಾವು ಪ್ರವಾದಿಯವರನ್ನು ನಮ್ಮ ಮನಸ್ಸಿನಲ್ಲಿ ಸ್ಥರಿಗೊಳಿಸಬೇಕು. ನಾವು ನಿತ್ಯವೂ ಸ್ವಲಾತ್ ಅಧಿಕಗೊಳಿಸಿದರೆ ನಾವು ಮರಣಕ್ಕೆ ಮುನ್ನ ಪುಣ್ಯ ಮದೀನಾ ಕಣುವ ಭಾಗ್ಯವನ್ನು ಅಲ್ಲಾಹನು ಕರುಣಿಸಲಿದ್ದಾನೆ. ಪ್ರವಾದಿಯವರನ್ನು ಪ್ರೀತಿಸುವವರು ಅವರ ಚರ್ಯೆಯನ್ನು ಪಾಲನೆ ಮಾಡಬೇಕು. ಪ್ರವಾದಿ ಚರ್ಯೆಯನ್ನು ನಾವು ಪಾಲಿಸಿಕೊಂಡು ಬಂದಲ್ಲಿ ಮಾತ್ರ ನಾವು ಪರಿಪೂರ್ಣ ಮುಸ್ಲಿಮನಾಗಲು ಸಾಧ್ಯವಿದೆ ಎಂದು ಹೇಳಿದರು.ಪ್ರವಾದಿ ಸ್ನೇಹವು ನಮ್ಮನ್ನು ಸಜ್ಜನರನ್ನಾಗಿಸುತ್ತದೆ. ಲೌಕಿಕ ಮತ್ತು ಪಾರತ್ರಿಕ ಜೀವನದಲ್ಲಿ ನಾವು ಸಂತೋಷದಿಂದಇರಬೇಕಾದಲ್ಲಿ ನಾವು ಪ್ರವಾದಿಯವರನ್ನು ಪ್ರೀತಿಸುವ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಸಂಜೆ ಕೊರಿಂಗಿಲ ಇಮಾಂ ಜಿ ಎಚ್ ಅಯ್ಯೂಬ್ ವಹಬಿ ನೇತೃತ್ವದಲ್ಲಿ ಮೌಲೀದ್ ಪಾರಾಯಣ ನಡೆಯಿತು.

70 ಸಾವಿರ ಮಂದಿಗೆ ಬೆಲ್ಲದ ಗಂಜಿ
8000 ಮಂದಿ ಅನ್ನದಾನದಲ್ಲಿ ಭಾಗಿ
ಉರೂಸ್‌ಪ್ರಯುಕ್ತ ಏಳು ದಿನಗಳ ಕಾಲ ದರ್ಗಾ ವಠಾರದಲ್ಲಿ ಬೆಲ್ಲದ ಗಂಜಿಯನ್ನು ಪ್ರಸಾದ(ಸೀರಣಿ) ಯಾಗಿ ನೀಡಲಾಗಿದ್ದು ಪ್ರತೀ ದಿನ ಹಗಲು ಮತ್ತು ರಾತ್ರಿ ವೇಳೆ ಬೆಲ್ಲದ ಗಂಜಿ ವಿತರಣೆ ನಡೆಯಿತು. ಸುಮಾರು 70 ಸಾವಿರ ಮಂದಿ ಬೆಲ್ಲದಗಂಜಿ ಸೀರಣಿ ಸ್ವೀಕರಿಸಿದರು. ಉರೂಸ್ ದಿನದಂದು 8000 ಮಂದಿ ಅನ್ನದಾನ ಸ್ವೀಕರಿಸಿದ್ದಾರೆ. ಉರೂಸ್ ಸಮರೋಪದಂದು ಸಾವಿರಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here