ಪೆರ್ನೆ ಮಾಡತ್ತಾರು ಸಪರಿವಾರ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಅಭಿನಂದನಾ ಸಭೆ

0

ಪುತ್ತೂರು: ಪೆರ್ನೆ ಗ್ರಾಮದ ಕೊರತಿಕಟ್ಟೆ ಮಾಡತ್ತಾರು ಸಪರಿವಾರ ಶ್ರೀ ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರಿಗೆ, ವಿವಿದ ಉಪ ಸಮಿತಿಗಳಿಗೆ, ಸ್ವಯಂ ಸೇವಕರಿಗೆ ಅಭಿನಂದನಾ ಸಭೆಯು ಫೆ.25ರಂದು ಸಂಜೆ ದೈವಸ್ಥಾನದ ಆವರಣದಲ್ಲಿ ನಡೆಯಿತು.

ದೈವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಕಿರಣ್ ಶೆಟ್ಟಿ ಮುಂಡೋವಿನಕೋಡಿ ಮಾತನಾಡಿ, ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ತಮ್ಮ ಮನೆಯ ಕಾರ್ಯಕ್ರಮದಂತೆ ಪ್ರತಿಯೊಬ್ಬರೂ ತೊಡಗಿಸಿಕೊಂಡಿದ್ದು ಎಲ್ಲಾ ಕಾರ್ಯಕ್ರಮಗಳು ಬಹಳಷ್ಟು ಯಶಸ್ವಿ ಹಾಗೂ ಸಂಭ್ರಮದಲ್ಲಿ ನೆರವೇರುವಲ್ಲಿ ಸಹಕಾರಿಯಾಗಿದೆ. ಇದರ ಪರಿಣಾಮ ಮಾಡತ್ತಾರು ದೈವಸ್ಥಾನದ ಬ್ರಹ್ಮಕಲಶೋತ್ಸವ ಮಾದರಿಯಾಗಿ ಜಿಲ್ಲೆಯಲ್ಲಿಯೇ ಗುರುತಿಸಲ್ಪಡುವಂತಾಗಿದೆ. ಎಲ್ಲಾ ಸಮಿತಿಗಳಿಗೆ ಹಂಚಲಾದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದು ಎಲ್ಲಾ ರೀತಿಯಲ್ಲಿಯೂ ಅಚ್ಚುಕಟ್ಟಾಗಿ ಮೂಡಿಬಂದು ಎಲ್ಲರ ಹೆಗ್ಗಳಿಕೆಗೆ ಪಾತ್ರವಾಗಿದೆ. ಅವಿರತವಾಗಿ ಶ್ರಮವಹಿಸಿ ದುಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದ ಅವರು ದೈವಸ್ಥಾನದಲ್ಲಿ ಮುಂದೆ ನಡೆಯುವ ತಿಂಗಳ ಸಂಕ್ರಮಣ ತಂಬಿಲ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುವಂತೆ ಅವರು ಮನವಿ ಮಾಡಿದರು.

ಗೌರವಾಧ್ಯಕ್ಷ ಈಶ್ವರಪ್ರಸನ್ನ ಪೆರ್ನೆಕೋಡಿ ಮಾತನಾಡಿ, ಎಲ್ಲವೂ ದೈವೀ ಇಚ್ಚೆಯಂತೆ ನಡೆದಿದೆ. ದೈವಸ್ಥಾನದ ನಿರ್ಮಾಣದಲ್ಲಿ ಮೂರು ವರ್ಷಗಳ ಕಾಲ ಪಾಲ್ಗೊಳ್ಳುವ ಅವಕಾಶ ನಮಗೆಲ್ಲರಿಗೂ ದೊರೆತಿದೆ. ಕಷ್ಟಕಾಲದಲ್ಲಿ ಪ್ರಾರ್ಥಿಸಲು ದೈವೀ ಸಾನಿಧ್ಯವೊಂದು ದೊರೆತಿದೆ. ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರತಿಯೊಬ್ಬರೂ ಉತ್ತಮ ಸಹಕಾರ ನೀಡಿದ್ದು ಕೆಲಸ ಕಾರ್ಯಗಳಲ್ಲಿ ಯಾವುದೇ ರೀತಿಯಲ್ಲಿಯೂ ದೂರು ಬಂದಿಲ್ಲ. ಎಲ್ಲಾ ವಿಭಾಗಗಳಲ್ಲೂ ಅಚ್ಚುಕಟ್ಟಾಗಿ ನಡೆದಿದೆ. ದುಂದು ವೆಚ್ಚ ಆಗದಂತೆ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಗಳನ್ನು ನಿರ್ವಹಿಸಲಾಗಿದೆ. ಈ ಎಲ್ಲಾ ಕಾರ್ಯಗಳಲ್ಲಿಯೂ ಸಮಿತಿಯ ಜೊತೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅವರು ಅಭಿನಂದನೆ ಸಲ್ಲಿಸಿದರು. ಪ್ರತಿ ತಿಂಗಳ ಸಂಕ್ರಮಣ, ನವರಾತ್ರಿ, ಚೌತಿ ಹಾಗೂ ವಾರ್ಷಿಕ ನೇಮೋತ್ಸವ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಕರಿಸುವಂತೆ ಅವರು ವಿನಂತಿಸಿದರು.

ಅಭಿನಂದನೆ:
ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ವಿವಿಧ ಉಪ ಸಮಿತಿಗಳ ಸಂಚಾಲಕರನ್ನು ಹಾಗೂ ಸಹಕರಿಸಿದ ಪ್ರತಿಯೊಬ್ಬರನ್ನು ಶಾಲು, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಟ್ರಸ್ಟ್‌ನ ಕಾರ್ಯದರ್ಶಿ ಶಿವಪ್ಪ ನಾಯ್ಕ ಕಾರ್ಲ ಸ್ವಾಗತಿಸಿ, ವಂದಿಸಿದರು. ವಿವಿಧ ಸಮಿತಿಗಳ ಸಂಚಾಲಕರು, ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here