ಪಹಣಿ ಪತ್ರ ಪಡೆಯಲು ಜನ ಹೈರಾಣ :ಕಡಬ ಭೂಮಿ ಕೇಂದ್ರದಲ್ಲಿ ಪಹಣಿ ಪತ್ರಕ್ಕಾಗಿ ಜನವೋ ಜನ!

0

ಕಡಬ: ರೈತರ ಕೃಷಿ ಭೂಮಿಗೆ ಸಹಕಾರಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಪಹಣಿ ಪತ್ರ ಮತ್ತು ಇತರ ದಾಖಲೆಗಳನ್ನು ಕಡ್ಡಾಯವಾಗಿ ಫೆಬ್ರವರಿ .28 ಒಳಗೆ ನೀಡಲು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಕಡಬ ಭೂಮಿ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರು ಪಹಣಿ ಪತ್ರಕ್ಕಾಗಿ ದಿನವಿಡಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ಕೆಲವೊಂದು ಸಹಕಾರಿ ಸಂಸ್ಥೆಗಳಿಗೆ ಭೂಮಿ ಕೇಂದ್ರದಲ್ಲಿ ಪಡೆದ ಪಹಣಿ ಪತ್ರವೇ ಬೇಕಾಗಿದ್ದು ಇದರಿಂದ ರೈತರು ಪಹಣಿ ಪತ್ರ ಪಡೆಯಲು ಭೂಮಿ ಕೇಂದ್ರದಲ್ಲಿ ದಿನವಿಡಿ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ. ಕಡಬ ಭೂಮಿ ಕೇಂದ್ರಕ್ಕೆ ದೂರದ ಬೆಳಂದೂರು, ಸವಣೂರು, ನೆಲ್ಯಾಡಿ, ಸುಬ್ರಹ್ಮಣ್ಯ, ಗುಂಡ್ಯ ಗೋಳಿತೊಟ್ಟು, ಶಿರಾಡಿ ಕಡೆಯಿಂದ ರೈತರು ಬಂದು ಬೆಳಗ್ಗಿನಿಂದ ಕಾದು ಕಾದು ಸುಸ್ತಾಗಿ ಹಿಂದಕ್ಕೆ ಹೋದ ಘಟನೆಗಳು ನಡೆದಿದೆ. ಈಗಾಗಲೇ ಕಡಬ ಪಂಚಮುಖಿ ಶಾಮಿಯಾನ ಸರ್ವಿಸ್ ನವರು ಉಚಿತವಾಗಿ ಶಾಮಿಯಾನ ಹಾಕಿ ಕೊಟ್ಟಿದ್ದು ಇದರಿಂದ ರೈತರಿಗೆ ಸ್ವಲ್ಪ ಮಟ್ಟಿನ ಬಿಸಿಲಿನ ಬೇಗೆ ತಪ್ಪಿದೆ.

ಹೆಚ್ಚುವರಿ ಕೇಂದ್ರ ತೆರೆಯಲು ಆಗ್ರಹ:


ಕಡಬ ತಾಲೂಕು ಕೇಂದ್ರದಲ್ಲಿ ಹೆಚ್ಚುವರಿ ಪಹಣಿ ಪತ್ರ ಕೇಂದ್ರಗಳನ್ನು ಸ್ಥಾಪಿಸುವಂತೆ ಆಗ್ರಹ ವ್ಯಕ್ತವಾಗಿದೆ.

ಗ್ರಾಮ ಒನ್ ಕೇಂದ್ರಗಳು ನಿಷ್ಪ್ರಯೋಜಕವೇ?


ಈಗಾಗಲೇ ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದ್ದು ಗ್ರಾಮೀಣ ಜನರಿಗೆ ಸರ್ಕಾರದ ಎಲ್ಲಾ ಕೆಲಸಗಳು ಗ್ರಾಮಮಟ್ಟದಲ್ಲಿಯೇ ದೊರೆಯುವಂತಾಗಲು ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆ ಏನೋ ಉತ್ತಮವಾಗಿದ್ದರೂ ಜನರಿಗೆ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ, ಸರ್ವರ್ ಸಮಸ್ಯೆಗಳು ದಿನ ನಿತ್ಯ ಕಾಡಿದರೆ, ಇತ್ತ ಗ್ರಾಮ ಒನ್ ಕೇಂದ್ರದಲ್ಲಿ ಪಡೆದ ಪಹಣಿ ಪತ್ರವೂ ಸಹಕಾರಿ ಸಂಘಗಳಿಗೆ ಆಗುತ್ತಿಲ್ಲ ಎಂಬುದಾಗಿ ತಿಳಿದು ಬಂದಿದೆ, ಇದರಿಂದ ಜನರು ಗ್ರಾಮದಿಂದ ತಾಲೂಕು ಕೇಂದ್ರಕ್ಕೂ ಬರುವಂತಾಗಿದೆ. ಕನಿಷ್ಠ ಪಕ್ಷ ಗ್ರಾಮ ಒನ್ ಕೇಂದ್ರದಲ್ಲಿ ಎಲ್ಲಾ ಬೆಳೆ ವಿವರಗಳು ದಾಖಲಾಗಿರುವ ಪಹಣಿ ಪತ್ರವಾದರೂ ಸಿಗುವಂತಾದರೆ ಜನರಿಗೆ ಗ್ರಾಮ ಒನ್ ಕೇಂದ್ರದ ಪ್ರಯೋಜನ ಸಿಗುವಂತಾಗುತ್ತದೆ, ಇದರಿಂದ ಸರಕಾರದ ಮಹಾತ್ಕಾಂಕ್ಷೆ ಯೋಜನೆಯೂ ಯಶಸ್ವಿಯಾಗಬಹುದು.

ಅಧಿಕಾರಿಗಳ ನಿರ್ಲಕ್ಷವೇ ಕಾರಣ-ಬಾಲಕೃಷ್ಣ ಶೆಟ್ಟಿ ನೆಲ್ಯಾಡಿ

ಈ ಬಗ್ಗೆ ನೊಂದ ರೈತ ಬಾಲಕೃಷ್ಣ ಶೆಟ್ಟಿ ಎಂಬವರು ಹೇಳಿಕೆ ನೀಡಿದ್ದು, ರೈತರ ಅಮೂಲ್ಯವಾದ ಸಮಯವನ್ನು ಈ ರೀತಿ ವ್ಯರ್ಥ ಮಾಡಿಸುವ ಅಧಿಕಾರಿಗಳ ನಿರ್ಲಕ್ಷತನಕ್ಕೆ ಯಾರು ಕಾರಣ? ಇದರ ಬಗ್ಗೆ ರಾಜಕಾರಣಿಗಳು ಕೂಡ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಉದಾಹರಣೆಗೆ ಗೋಳಿತೊಟ್ಟು ನೆಲ್ಯಾಡಿ ಈ ಕಡೆಯಿಂದ ಬರುವವರಿಗೆ ಬಸ್ಸಿನ ವಾಹನದ ವ್ಯವಸ್ಥೆ ಇಲ್ಲ. ಯಾವುದೇ ವಾಹನ ಬಾಡಿಗೆ ಮಾಡಿಕೊಂಡು ಬರಬೇಕಾಗುತ್ತದೆ, ಅಥವಾ ಐವತ್ತು ಕಿಲೋಮೀಟರ್ ಸುತ್ತು ಬಳಸಿಕೊಂಡು ಬರಬೇಕಾಗ್ತದೆ,. ಬಂದು ಹೋಗುವುದಕ್ಕೆ ಯಾವುದೇ ವ್ಯವಸ್ಥೆ ಇರುವುದಿಲ್ಲ .ಇಂತಹ ಭೌಗೋಳಿಕ ಹಿನ್ನೆಲೆ ಇರುವ ತಾಲೂಕು ಕೇಂದ್ರ ಯಾವ ಪುರುಷಾರ್ಥಕ್ಕೆ? ಈಗ ರೈತರು ತೋಟಗಳಿಗೆ ನೀರು ಹಾಯಿಸುವ ಸಮಯ .ಈ ಸಮಯದಲ್ಲಿ ರೈತರು ಪಹಣಿ ಪತ್ರಕ್ಕಾಗಿ ಇಲ್ಲಿ ಕಾದು ಕುಳಿತರೆ ಆ ತೋಟದ ಸ್ಥಿತಿ ಏನಾಗಬೇಕು ಇದರ ಬಗ್ಗೆ ಯೋಚನೆ ಮಾಡುವರೇ?ಇಂಥ ಸರಕಾರಿ ಕೆಲಸಗಳಿಗೆ ಜನರ ಸಮಯ ವ್ಯರ್ಥ ಆಗೋದೆಂದರೆ ಇದು ದೇಶಕ್ಕೆ ಆದ ನಷ್ಟವೇ ಆಗಿದೆ ಇದರ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಂಡು ರೈತರ ಸಮಯವನ್ನು ಸದುಪಯೋಗ ಮಾಡಿ ಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here