ಹಾರಾಡಿ, ರೈಲ್ವೇ ನಿಲ್ದಾಣದ ರಸ್ತೆ ಕಾಮಗಾರಿ ವೇಳೆ ಮೋರಿಗೆ ಮಣ್ಣು ಕುಸಿತ

0

ಪುತ್ತೂರು ಪೇಟೆ ಪಕ್ಕದ ಪಾರಂಪರಿಕ ಭತ್ತ ಬೇಸಾಯಕ್ಕೆ ಅಡ್ಡಿ-ಕೃಷಿಕರು ಸಂಕಷ್ಟದಲ್ಲಿ

ಪುತ್ತೂರು:ಹಾರಾಡಿಯಿಂದ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಸಂದರ್ಭ ಭಾರತ್ ಅಟೋಕಾರ‍್ಸ್ ಸಂಸ್ಥೆಯ ಬಳಿ ಇರುವ ಮೋರಿಗೆ ಮಣ್ಣು ಕುಸಿತವಾದ್ದರಿಂದ ರಸ್ತೆಯ ಪಕ್ಕದಲ್ಲಿರುವ ಚಿಕ್ಕಪುತ್ತೂರಿನ ಭತ್ತದ ಗದ್ದೆಗೆ ಕೃಷಿ ಚಟುವಟಿಕೆಗೆ ಹೋಗುವ ಪಾರಂಪರಿಕ ನೀರು ಹೋಗದೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ.

ಇದೀಗ ಮೋರಿ ಅಳವಡಿಸದೇ ಇದ್ದಲ್ಲಿ ಪುತ್ತೂರು ಪೇಟೆಗೆ ಹತ್ತಿರ ಇರುವ ಭತ್ತದ ಕೃಷಿ ಚಟುವಟಿಕೆಯೂ ನಿಂತು ಹೋಗುವ ಸಾಧ್ಯತೆ ಇದೆ.
ಚಿಕ್ಕಪುತ್ತೂರಿನ ಸುದೇಶ್ ನಾಯ್ಕ್, ಅಬಕಾರಿ ನಿವೃತ್ತ ಎಸ್.ಐ ಅಂಗಾರ ಪಿ ಸಹಿತ ಇನ್ನೆರಡು ಕುಟುಂಬಗಳು ಚಿಕ್ಕಪುತ್ತೂರಿನಲ್ಲಿ ಭತ್ತದ ಕೃಷಿ ಬೇಸಾಯ ಮಾಡುತ್ತಿದ್ದಾರೆ.‌ ಪುತ್ತೂರಿನ ಪೇಟೆಯಲ್ಲಿ ಎಲ್ಲವೂ ಕಮರ್ಷಿಯಲ್, ಸೈಟ್‌ಗಳು ಆದಾಗಲೂ ಕೃಷಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ವರ್ಷಗಳಿಂದ ಭತ್ತದ ಕೃಷಿ ಚಟುವಟಿಕೆಯಲ್ಲಿರುವ ಈ ಕುಟುಂಬಗಳಿಗೆ ಮಳೆಗಾಲದಲ್ಲಿ ಮಳೆ ನೀರು, ಬೇಸಿಗೆ ಕಾಲದಲ್ಲಿ ತೋಡಿನ ಪಾರಂಪರಿಕ (ಉಜಿರುಕಣಿ)ನೀರು ಬೇಸಾಯಕ್ಕೆ ಲಭ್ಯವಾಗುತ್ತಿತ್ತು.ಹೀಗೆ ವರ್ಷದಲ್ಲಿ ಒಟ್ಟು ಮೂರು ಬೇಸಾಯ ಮಾಡುತ್ತಾ ಬಂದಿರುವ ಈ ಕುಟುಂಬಗಳಿಗೆ ಇದೀಗ ನೀರಿನ ಸಮಸ್ಯೆ ಎದುರಾಗಿದೆ.

ಹಾರಾಡಿಯಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ರೂ.1.7 ಕೋಟಿ ವೆಚ್ಚದಲ್ಲಿ ನೂತನ ಕಾಂಕ್ರಿಟೀಕೃತ ರಸ್ತೆ ನಿರ್ಮಾಣ ಕಾಮಗಾರಿಯ ಸಂದರ್ಭ ಜೆಲ್ಲಿ ಹಾಕಿ ವೈಬ್ರೇಷನ್ ಹಾಕಿದಾಗ ಭಾರತ್ ಅಟೋ ಕಾರ‍್ಸ್ ಸಮೀಪದ ಮೋರಿಗೆ ಹಾನಿಯಾಗಿದೆ. ಮೋರಿಯ ಅಡಿ ಭಾಗದಲ್ಲಿ ಮಣ್ಣು ಕುಸಿದು ಮೋರಿ ಸಂಪೂರ್ಣ ಮುಚ್ಚಿದೆ.ಇದರಿಂದಾಗಿ ಆ ಮೋರಿಯ ಮೂಲಕ ಗದ್ದೆಗೆ ಬರುತ್ತಿದ್ದ ಸಾಂಪ್ರದಾಯಿಕ ನೀರಿನ ಹರಿವಿಗೆ ಅಡ್ಡಿಯುಂಟಾಗಿದ್ದು, ಭತ್ತದ ಕೃಷಿಗೆ ಸಾಕಷ್ಟು ನೀರು ಸಿಗದೆ ಕೃಷಿಗೆ ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಲ್ಲಿರುವ ಕುಟುಂಬಕ್ಕೆ ಪೂರಕವಾಗಿ ಸಹಕಾರ ನೀಡುವಂತೆ ಕೃಷಿಕರು ವಿನಂತಿಸಿದ್ದಾರೆ.

ಸ್ಥಳ ಪರಿಶೀಲನೆ ಮಾಡುತ್ತೇನೆ

ಚಿಕ್ಕಪುತ್ತೂರಿನ ಕೃಷಿ ಚಟುವಟಿಕೆ ಕುರಿತಂತೆ ನೀರಿನ ಸಮಸ್ಯೆ ಕುರಿತು ಈಗಾಗಲೇ ಮಾಹಿತಿ ಲಭ್ಯವಾಗಿದೆ. ಈ ಕುರಿತು ರಸ್ತೆ ಕಾಮಗಾರಿಯ ಗುತ್ತಿಗೆದಾರರನ್ನು, ಹಾನಿಗೊಂಡಿರುವ ಮೋರಿ ಇರುವ ಸ್ಥಳಕ್ಕೆ ಕರೆಸಿ ಸ್ಥಳ ಪರಿಶೀಲನೆ ಮಾಡುತ್ತೇನೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here