ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ವಯೋ ನಿವೃತ್ತಿ ಪಡೆದ ದೇವಕಿಯವರಿಗೆ ಬೀಳ್ಕೊಡುಗೆ ಸಮಾರಂಭವು ಫೆ.28ರಂದು ಆಸ್ಪತ್ರೆಯಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿದ ದೇವಕಿಯವರು ಮಾತನಾಡಿ, ಸುಧೀರ್ಘ ವರ್ಷಗಳ ತನ್ನ ಸೇವೆಯಲ್ಲಿ ಆತ್ಮತೃಪ್ತಿ ನೀಡಿದೆ. ಸರಕಾರಿ ಸೇವೆಯಲ್ಲಿ ಮೇಲಾಧಿಕಾರಿಗಳಿಗೆ ಬದ್ದರಾಗಿ ಕೆಲಸ ಮಾಡಬೇಕು. ನಮಗೆ ಸೇವೆಯ ಬಗ್ಗೆ ಗೌರವವಿರಬೇಕು. ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕು. ಬದಲಾದ ವ್ಯವಸ್ಥೆಗಳಿಗೆ ಪೂರಕವಾಗಿ ಕೆಲಸ ಮಾಡಬೇಕು. ಅನ್ನ ನೀಡಿದ ಸಂಸ್ಥೆ, ವ್ಯವಸ್ಥೆಗೆ ಬದ್ದರಾಗಿ ಕರ್ತವ್ಯ ನಿರ್ವಹಿಸಬೇಕು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ನಿವೃತ್ತರನ್ನು ಸನ್ಮಾನಿಸಿದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಜ್ಯೋತಿ ಮಾತನಾಡಿ, ಶುಶ್ರೂಷಕಿಯಾಗಿ ದೇವಕಿಯವರು ಬಹಳಷ್ಟು ನಿಷ್ಟಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್‌ನಂತ ಕ್ಲಿಷ್ಟಕರ ಸಂದರ್ಭದಲ್ಲಿ ಉತ್ತಮ ಸಹಕಾರ ನೀಡಿದ್ದಾರೆ. ಉನ್ನತ ಹುದ್ದೆಗಳ ಬಗ್ಗೆ ಅರಿವಾಗುವುದು ಅದರ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಎಂದರು.
ಶುಶ್ರೂಷಾ ಅಧಿಕಾರಿ ಸಂತೋಷ್ ಸಬಾಸ್ಟೀನ್, ಗೀತಾ ಕುಮಾರಿ, ಮಾಂಗಣ್ಣ ಗೌಡ, ಎಲ್ಸಮ್ಮ ಹಾಗೂ ಡಾ.ಯಧುರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ಹಿರಿಯ ಸರ್ಜನ್ ವಿಶ್ವನಾಥ ಸಿಂಪಿ, ದಂತ ವೈದ್ಯಾಧಿಕಾರಿ ಡಾ.ಜಯದೀಪ್, ನಿವೃತ್ತ ದೇವಕಿಯವರ ಪತಿ ಚೆನ್ನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶುಶ್ರೂಷಾಧಿಕಾರಿ ಚಂದ್ರಿಕಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಆಸ್ಪತ್ರೆ ಡಾ. ರಾಧಿಕಾ, ಸಿಬಂದಿಗಳಾದ ಸುಶ್ಮಿತಾ, ರಮ್ಯ, ಸುಜಾತರವರಿಗೆ ಕಾರ್ಯಕ್ರಮದಲ್ಲಿ ಸಾಮೂಹಿಕ ಸೀಮಂತ ನಡೆಸಲಾಯಿತು.