ಎಲ್ಲಾ ಕ್ಷೇತ್ರಕ್ಕೂ ಬೇಕಾದ ಟೈಲರ್‌ಗಳು ತುಳಿತಕ್ಕೊಳಗಾಗಿದ್ದಾರೆ !
ಸ್ಪಂದಿಸದ ಸರಕಾರದ ಮೇಲೆ ಬೇಸರ ವ್ಯಕ್ತಪಡಿಸಿದ ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್

0

ಪುತ್ತೂರು: ರಾಜಕೀಯವಾಗಿರಲಿ, ಧಾರ್ಮಿಕ, ಸಾಮಾಜಿಕ, ವೈದ್ಯರು, ಪೊಲೀಸರನ್ನು ಗುರುತಿಸುವಂತೆ ಮಾಡುವ ಟೈಲರ‍್ಸ್‌ಗಳು ಎಲ್ಲಾ ಕ್ಷೇತ್ರಗಳಿಗೂ ಬೇಕಾದ ವ್ಯಕ್ತಿ. ಆದರೆ ಎಲ್ಲಾ ವಿಧದಲ್ಲೂ ತುಳಿತಕ್ಕೊಳಗಾದವರೂ ಕೂಟಾ ಟೈಲರ್‌ಗಳೇ ಆಗಿದ್ದಾರೆ. ನಮ್ಮ ಬೇಡಿಕೆಗಳಿಗೆ ಸರಕಾರ ಯಾವುದೇ ರೀತಿಯಲ್ಲಿ ಸ್ಪಂದಿಸದಿರುವುದು ನಮಗೆ ಬೇಸರ ಆಗಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್‌ನ ರಾಜ್ಯ ಅಧ್ಯಕ್ಷ ಪುತ್ತೂರಿನ ಜಯಂತ್ ಉರ್ಲಾಂಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಾ.7ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್ ಇದರ 24ನೇ ವರ್ಷದ ಸಂಸ್ಥಾಪನಾ ದಿನಾಚರಣೆ (ಟೈಲರ‍್ಸ್ ಡೇ) ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಟೈಲರ‍್ಸ್‌ಗಳ ಮನಸ್ಸಿನ ನೋವನ್ನು ಬಿಚ್ಚಿಟ್ಟರು. ಕಳೆದ ಹಲವಾರು ಸಮಯದಿಂದ ಮುಖ್ಯಮಂತ್ರಿ, ಕಾರ್ಮಿಕ ಸಚಿವರನ್ನು ಭೇಟಿ ಮಾಡಿದ್ದೇವೆ. ಅವರು ಟೈಲರ‍್ಸ್ ಸಭೆಯನ್ನೂ ಕರೆಯುತ್ತೇವೆ ಎಂದು ಹೇಳಿದ್ದರು. ಬಜೆಟ್ ಮಂಡನೆಯಾಗುವ ಕೊನೆಯ ದಿನದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕರೆದು ಮಾತನಾಡಿಸಿದರು. ಆ ಸಂದರ್ಭ ವಿಮಾ ಯೋಜನೆ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಅದನ್ನು ಘೋಷಣೆ ಮಾಡಿಲ್ಲ. ಹಿಂದೆ ಟೈಲರ್‌ಗಳಿಗೆ ಯೋಜನೆಯೊಂದನ್ನು ತಂದರೂ ಅದನ್ನು ನಿಲ್ಲಿಸಿದರು. ಒಟ್ಟಿನಲ್ಲಿ ಪ್ರತಿಯೊಂದು ವಿಚಾರದಲ್ಲೂ ನಾವು ತುಳಿತಕ್ಕೊಳಗಾಗಿದ್ದೇವೆ. ಆದರೆ ಇದ್ದವರು ಇಲ್ಲದವರಿಗೆ ಕೊಡುವ ಮೂಲಕ ನಮ್ಮ ಟೈಲರ‍್ಸ್‌ಗಳು ಬಿಟ್ಟು ಕೊಡಲಿಲ್ಲ. ಕೋವಿಡ್ ಸಂದರ್ಭದಲ್ಲಿ ದಾನಿಗಳ ನೆರವಿನಿಂದ ಕಿಟ್ ಸೌಲಭ್ಯ ಸೇರಿದಂತೆ ಹಲವು ಸಹಕಾರ ಮಾಡಿದ್ದೆವು. ನಮ್ಮನ್ನು ಅಸಂಘಟಿತ ಕಾರ್ಮಿಕರ ಪಟ್ಟಿಗಾದರೂ ಸೇರಿಸುವಂತೆ ನಮ್ಮ ಮನವಿ ಇದೆ. ಮುಂದೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಕಾರ್ಯಕ್ರಮಕ್ಕೆ ಮೂರು ಸಾವಿರ ಮಂದಿ ಸೇರುವ ನಿರೀಕ್ಷೆ:
ಮಂಗಳೂರಿನ ಪುರಭವನದಲ್ಲಿ ಮಾ.7ರಂದು ನಡೆಯಲಿರುವ ಟೈಲರ‍್ಸ್ ಡೇ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಸೇರಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರತಿ ತಾಲೂಕಿನ ತೀರಾ ಹಿಂದುಳಿದ ಒಟ್ಟು 21 ಮಂದಿ ಟೈಲರ‍್ಸ್‌ಗಳಿಗೆ ತಲಾ ರೂ.10ಸಾವಿರ ಸಹಾಯಧನ ವಿತರಣೆ, ಪ್ರತಿ ತಾಲೂಕಿನ ಒಬ್ಬರಿಗೆ ನಗದು ಸಹಿತ ಸನ್ಮಾನಿಸಲಿದ್ದೇವೆ ಎಂದು ಅವರು ಹೇಳಿದರು. ಅಪರಾಧ ಮತ್ತು ಸಂಚಾರದ ಉ ಆಯುಕ್ತ ಡಿ.ಪಿ. ದಿನೇಶ್ ಕುಮಾರ್ ಕಾರ್ಯಕ್ರಮದಲ್ಲಿ ದೀಪ್ರಜ್ವಲನೆ ಮಾಡಲಿದ್ದಾರೆ ಎಂದು ಜಯಂತ್ ಉರ್ಲಾಂಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಭು ಬಲ್ಯಾಯ, ರಾಜ್ಯ ಸಮಿತಿ ಲೆಕ್ಕಪರಿಶೋಧಕ ರಘುನಾಥ್, ನಗರ ವಲಯ ಅಧ್ಯಕ್ಷ ಯಶೋಧರಾ ಜೈನ್, ತಾಲೂಕು ಅಧ್ಯಕ್ಷ ಜಯರಾಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here