- ಕ್ರೀಯಾಶೀಲ ವ್ಯಕ್ತಿ – ಶೇಷಪ್ಪ ರೈ
- ಸೈಲೆಂಟ್ ವರ್ಕರ್ – ಸುಂದರ್ ನಾಯ್ಕ್
- ಸರಕಾರಿ ಕರ್ತವ್ಯದಲ್ಲಿ ಪ್ರಮಾಣಿಕತೆ – ಕೆ.ಸೀತಾರಾಮ ರೈ ಸವಣೂರು
- ತನ್ನ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿದವರು – ರಾಮಚಂದ್ರ ನಾಯ್ಕ
- ಸಂಘದ ಬಗ್ಗೆ ಕಾಳಜಿಯಿದ್ದ ವ್ಯಕ್ತಿ – ಶೀನಪ್ಪ ನಾಯ್ಕ
- ಭಜನಾ ಸಂಘವನ್ನು ಮುನ್ನಡೆಸಿದವರು – ಗಿರೀಶ್ ನಾಯ್ಕ್
- ಸ್ವಯಂ ಸೇವಕರೊಂದಿಗೆ ಕೆಲಸ ಮಾಡಿದ ಕೀರ್ತಿ – ಕೃಷ್ಣ ರೈ
- ಸರಕಾರಿ ಕರ್ತವ್ಯದಲ್ಲಿ ಮಾರ್ಗದರ್ಶನ ನೀಡಿದವರು – ಮಹಾಲಿಂಗ ನಾಯ್ಕ್
- ನ್ಯೂನ್ಯತೆ ಎಂಬುದು ಕಂಡಿಲ್ಲ – ಬಿ.ನಾರಾಯಣ ನಾಯ್ಕ
ಪುತ್ತೂರು: ಮರಾಟಿ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿ, ಖಜಾಂಚಿಯಾಗಿ, ಮಹಮ್ಮಾಯಿ ಸೌಹಾರ್ದ ಸಹಕಾರಿ ಸಂಘದ ನಿಯೋಜಿತ ಪ್ರವರ್ತಕರಾಗಿ, ನಿರ್ದೆಶಕರಾಗಿ, ಕಡಬ ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರಾಗಿ, ಕರ್ನಾಟಕ ನಿವೃತ್ತ ನೌಕರರ ಸಂಘದ ಕೋಶಾಧಿಕಾರಿಯಾಗಿ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅಬಕಾರಿ ನಿವೃತ್ತ ಇನ್‌ಸ್ಪೆಕ್ಟರ್ ಎನ್ ನಾರ್ಣಪ್ಪ ನಾಯ್ಕ ಜರಿನಾರು ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಮಾ.3ರಂದು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆಯಿತು.
ಕ್ರೀಯಾಶೀಲ ವ್ಯಕ್ತಿ:
ಕಡಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಷಪ್ಪ ರೈ ಅವರು ಮಾತನಾಡಿ ನಾರ್ಣಪ್ಪ ನಾಯ್ಕ ಅವರು ಸಂಘದಲ್ಲಿ ಕ್ರೀಯಾಶೀಲ ವ್ಯಕ್ತಿತ್ವ ಹೊಂದಿದ್ದರು. ಅವರ ಅವಧಿಯಲ್ಲಿ ಮೂರು ಕನ್ನಡ ಸಾಹಿತ್ಯ ಸಮ್ಮೇಳ ಯಶಸ್ವಿಯಾಗಿ ನಡೆದಿದೆ ಎಂದರು.
ಸೈಲೆಂಟ್ ವರ್ಕರ್:
ಜಿ.ಪಂ ನಿವೃತ್ತ ಸಿಇಒ ಸುಂದರ ನಾಯ್ಕ್ ಅವರು ಮಾತನಾಡಿ ಎಲೆಮರೆಯ ಕಾಯಿಯಂತೆ ತನ್ನ ಜವಾಬ್ದಾರಿಯನ್ನು ಪೂರ್ಣವಾಗಿ ನಿರ್ವಹಿಸುತಿದ್ದ ನಾರ್ಣಪ್ಪ ನಾಯ್ಕ್ ಅವರು ನಿವೃತ್ತ ನೌಕರರ ಸಂಘದ 50ನೇ ವಾರ್ಷಿಕೋತ್ಸವದಲ್ಲಿ ಸಕ್ರೀಯರಾಗಿ ಸೇವೆ ನೀಡಿದವರು. ಅವರೊಬ್ಬ ಸೈಲೆಂಟ್ ವರ್ಕರ್ ಎಂದರು.
ಸರಕಾರಿ ಕರ್ತವ್ಯದಲ್ಲಿ ಪ್ರಮಾಣಿಕತೆ:
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅವರು ಮಾತನಾಡಿ ನಾರ್ಣಪ್ಪ ನಾಯ್ಕ್ ಮತ್ತು ನನ್ನ ಸಂಬಂಧ ಸುಮಾರು 45 ವರ್ಷದ್ದು. ಅವರು ಸರಕಾರಿ ಕರ್ತವ್ಯದಲ್ಲಿದ್ದಾಗ ಉತ್ತಮ ದಕ್ಷ ಪ್ರಾಮಾಣಿಕತೆಯಲ್ಲಿದ್ದವರು. ನಿವೃತ್ತಿಯ ಬಳಿಕವೂ ಸದಾ ಸಮಾಜ ಸೇವೆಯ ಚಟುವಟಿಕೆಯಲ್ಲಿದ್ದ ಅವರು ನನ್ನೊಂದಿಗೆ ಹಲವು ಕಾರ್ಯಕ್ರಮಕ್ಕೆ ಜೊತೆಯಾಗಿ ಬರುತ್ತಿದ್ದರು. ಅವರ ನಿಧನದ ವಿಚಾರ ಸುದ್ದಿಪತ್ರಿಕೆಯಲ್ಲಿ ಪೊಟೋ ನೋಡಿದಾಗ ತಿಳಿದು ಬೇಸರ ವ್ಯಕ್ತಪಡಿಸಿದ್ದೆ. ಅವರ ಅತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದರು.
ತನ್ನ ಜೀವನವನ್ನು ಸಮಾಜಕ್ಕೆ ಅರ್ಪಣೆ ಮಾಡಿದವರು:
ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ನಾಯ್ಕ ಅವರು ಮಾತನಾಡಿ ಕೊಂಬೆಟ್ಟಿನ ಮರಾಟಿ ಸಮಾಜ ಸಂಘದ ಕಟ್ಟಡ ಕಟ್ಟುವ ಸಂದರ್ಭ ಕಾರ್ಯದರ್ಶಿಯಾಗಿ ರಾತ್ರಿ ಹಗಲು ತನ್ನ ಸೇವೆ ನೀಡಿದ್ದಾರೆ. ತನ್ನ ಜೀವನದಲ್ಲಿ ಸಮಾಜಕ್ಕೆ ಅರ್ಪಣೆ ಮಾಡುವ ವಿಚಾರದಲ್ಲಿ ನಾರ್ಣಪ್ಪ ನಾಯ್ಕರು ನಮಗೆಲ್ಲ ಮಾದರಿ. ಮರಾಟಿ ಸಮಾಜದ ಸಮೀಕ್ಷೆ ಮಾಡುವ ಅವರ ಕನಸ್ಸನ್ನು ಮುಂದಿನ ದಿನಲ್ಲಾದರೂ ನಾವು ಮಾಡೋಣ ಎಂದರು.
ಸಂಘದ ಬಗ್ಗೆ ಕಾಳಜಿಯಿದ್ದ ವ್ಯಕ್ತಿ:
ಮಹಾಮ್ಮಾಯಿ ಸೌಹಾರ್ದ ಸಂಘದ ಅಧ್ಯಕ್ಷ ಶೀನಪ್ಪ ನಾಯ್ಕ ಅವರು ಮಾತನಾಡಿ ಸಾಮೂಹಿಕ ಗೊಂದೋಲು ಪೂಜೆಯ ವಿಧಿ ವಿಧಾನದಲ್ಲಿ ನಾರ್ಣಪ್ಪ ನಾಯ್ಕ ಮುಂಚೂಣಿಯಲ್ಲಿದ್ದವರು. ತನ್ನ ಅಂತಿಮ ದಿನದಲ್ಲೂ ಸಂಘದ ಕುರಿತು ಕಾಳಜಿ ವ್ಯಕ್ತಪಡಿಸುತ್ತಿದ್ದರು. ಅವರ ತಾಳ್ಮೆ, ಸಹನೆ, ಸ್ನೇಹಮಯಿ, ಸ್ವಧರ್ಮ ಪಾಲನೆ, ಜೀವನ ಶೈಲಿ ಎಲ್ಲರಿಗೂ ಮಾದರಿ ಎಂದರು.
ಭಜನಾ ಸಂಘವನ್ನು ಮುನ್ನಡೆಸಿದವರು:
ಯುವ ವೇದಿಕೆ ಮಾಜಿ ಅಧ್ಯಕ್ಷ ಗಿರೀಶ್ ನಾಯ್ಕ್ ಸೊರಕೆ ಅವರು ಮಾತನಾಡಿ ಯುವಕರ ಜೊತೆ ಅತ್ಯಂತ ಸ್ನೇಹಮಯಿಯಾಗಿದ್ದ ನಾರ್ಣಪ್ಪ ನಾಯ್ಕ ಅವರು ಯುವ ವೇದಿಕೆಯ ಯಾವುದೇ ಕಾರ್ಯಕ್ರಮದಲ್ಲಿ ಕೂಡಾ ಭಾಗಿಯಾಗಿ ನಮ್ಮನ್ನು ಮುನ್ನಡೆಸಿದ್ದರು. ಅವರ ಅವಧಿಯಲ್ಲೇ ಭಜನಾ ಸಂಘ ಮುನ್ನಡೆಯಿತು ಎಂದರು.
ಸ್ವಯಂ ಸೇವಕರೊಂದಿಗೆ ಕೆಲಸ ಮಾಡಿದ ಕೀರ್ತಿ:
ನಾರ್ಣಪ್ಪ ನಾಯ್ಕ ಅವರ ನೆರೆಮನೆಯವರಾದ ಪುಣ್ಚಪ್ಪಾಡಿಯ ಕೃಷ್ಣ ರೈ ಅವರು ಮಾತನಾಡಿ ನಮ್ಮ ಪುಣ್ಚಪ್ಪಾಡಿ ಗ್ರಾಮದ ಉಳ್ಳಾಕುಲು ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸ್ವಯಂ ಸೇವಕರ ಜೊತೆ ಅವರು ಮಾಡಿದ ಕಾರ್ಯ ಮಹತ್ವ ಪಡೆದಿದೆ. ಆದರೆ ಅವರನ್ನು ದೇವರು ಕರೆಸಿಕೊಂಡಿದ್ದಾನೆ. ಅವರ ಆದರ್ಶ ನಮಗೆ ದಾರಿದೀಪವಾಗಲಿ ಎಂದರು.
ಸರಕಾರಿ ಕರ್ತವ್ಯದಲ್ಲಿ ಮಾರ್ಗದರ್ಶನ ನೀಡಿದವರು:
ನಿವೃತ್ತ ಅಬಕಾರಿ ಇನ್‌ಸ್ಪೆಕ್ಟರ್ ಮಹಾಲಿಂಗ ನಾಯ್ಕ್ ಅವರು ಮಾತನಾಡಿ ನಾನು ಸರಕಾರಿ ಸೇವೆಯಲ್ಲಿ ಅವರ ಕೈಕೆಳಗೆ ಕೆಲಸ ಮಾಡಿದವ. ನಾವು ತಪ್ಪಿದಾಗ ನಮಗೆ ಇಲಾಖೆಯಿಂದ ಮಾರ್ಗದರ್ಶನ ನೀಡುತ್ತಿದ್ದರು. ಅವರ ಮಾರ್ಗದರ್ಶನ ಇವತ್ತು ನಮಗೆ ಉತ್ತಮ ಸ್ಥಾನ ಮಾನ ನೀಡಿದೆ ಎಂದರು.
ನ್ಯೂನ್ಯತೆ ಎಂಬುದು ಕಂಡಿಲ್ಲ:
ನಾರ್ಣಪ್ಪ ನಾಯ್ಕ್ ಅವರ ಬಾವ ಬಿ ನಾರಾಯಣ ನಾಯ್ಕ ಅವರು ಮಾತನಾಡಿ ನನ್ನ ತಂಗಿಯ ಗಂಡ ನಾರ್ಣಪ್ಪ ನಾಯ್ಕ್ ಅವರು ಸಂಘದ ಕಟ್ಟಡ ನಿರ್ಮಾಣದ ಸಂದರ್ಭ ತುಂಬಾ ಶ್ರಮ ಪಟ್ಟಿದ್ದಾರೆ. ಅವರ ಕೆಲಸ ಕಾರ್ಯದಲ್ಲಿ ಎಲ್ಲೂ ನ್ಯೂನ್ಯತೆ ಇರಲಿಲ್ಲ. ಇನ್ನೊಬ್ಬರಿಗೆ ಕೇಡು ಬಯಸಿದವರಲ್ಲ. ಜನಸ್ನೇಹಿಯಾಗಿ ತನ್ನ ಕಾರ್ಯ ಮಾಡುತ್ತಿದ್ದರು ಎಂದರು.
ಸುಳ್ಯದ ಗೋಪಾಲ ನಾಯ್ಕ ದುಡ್ಡೇರಿ, ಮಂಗಳೂರು ದ.ಕ.ಜಿಲ್ಲಾ ಮರಾಟಿ ಸಂಘ ಮಾಜಿ ಅಧ್ಯಕ್ಷ ನಟ್ಟಿ ರಾಮ ನಾಯ್ಕ, ದ.ಕ.ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶ್ರೀಧರ್ ನುಡಿನಮನ ಸಲ್ಲಿಸಿದರು. ಮರಾಟಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಎನ್.ಎಸ್.ಮಂಜುನಾಥ್ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.
ಕುಟುಂಬದ ಹತ್ತಿರ ಸಂಬಂಧಿ ವಾಮನ್ ನಾಯ್ಕ್ ಅವರು ಆರಂಭದಲ್ಲಿ ನುಡಿಮನದ ಮೂಲಕ ನಾರ್ಣಪ್ಪ ನಾಯ್ಕ ಅವರ ಹುಟ್ಟು ಮತ್ತು ಅವರ ಸಾಧಿಸಿದ ಕ್ಷೇತ್ರಗಳ ಕುರಿತು ಮಾಹಿತಿ ನೀಡಿದರು. ಮಹೇಶ್ ಪ್ರಸಾದ್ ಅವರು ತಂದೆ ನಾರ್ಣಪ್ಪ ನಾಯ್ಕ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ನುಡಿನಮನ ಕಾರ್ಯಕ್ರಮ ಆರಂಭಗೊಂಡಿತ್ತು.
ನಾರ್ಣಪ್ ನಾಯ್ಕ ಅವರ ಪತ್ನಿ ನಿವೃತ್ತ ಶಿಕ್ಷಕಿ ರಾಧಾ, ಪುತ್ತೂರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಪುತ್ರಿ ಕವಿತಾ, ಹಿರಿಯರಾದ ವೆಂಕಪ್ಪ ನಾಯ್ಕ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ ಐತ್ತಪ್ಪ ನಾಯ್ಕ, ರವೀಂದ್ರನಾಥ ರೈ ಬಳ್ಳಮಜಲು, ಸಂಬಂಧಿಕರು, ಬಂಧು ಮಿತ್ರರು ಈ ಸಂದಭದಲ್ಲಿ ಪುಷ್ಪಾರ್ಚಣೆ ಮಾಡಿದರು. ನುಡಿನಮನದಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.