ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ರಂಗಮಂಟಪ ಉದ್ಘಾಟನೆ, ಜಾತ್ರೋತ್ಸವ

0

ಭಕ್ತರ ಆಗಮನದಿಂದ ದೇವಳಕ್ಕೆ ಜೀವ ಕಳೆ ತುಂಬುತ್ತದೆ; ವಿದ್ಯಾಪ್ರಸನ್ನ ಸ್ವಾಮೀಜಿ

ಪುತ್ತೂರು: ಗ್ರಾಮದಲ್ಲಿರುವ ದೇವಾಲಯಗಳಿಗೆ ಭಕ್ತರು ನಿತ್ಯವೂ ಬರುವಂತಾಗಬೇಕು, ಭಕ್ತರ ಆಗಮನದಿಂದ ಮಾತ್ರ ದೇವಳಕ್ಕೆ ಜೀವ ಕಳೆ ತುಂಬುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದರು.

ಅವರು ಮಾ.2ರಂದು ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ರಂಗಮಂಟಪವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ದೇವಾಲಯದಲ್ಲಿ ಕಾಲಕಾಲಕ್ಕೆ ಪೂಜೆಗಳು ನಡೆಯುಬೇಕು, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಭಕ್ತರು ದೇವಾಲಯಕ್ಕೆ ಬರುವ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು. ಗ್ರಾಮದಲ್ಲಿರುವ ದೇವಸ್ಥಾನ ಹಿಂದೂ ಭಕ್ತಾದಿಗಳ ಶ್ರದ್ಧಾಕೇಂದ್ರ ಮಾತ್ರವಲ್ಲದೆ ಸಂಸ್ಕಾರ ಕೇಂದ್ರವೂ ಆಗುತ್ತದೆ ಎಂದು ಹೇಳಿದರು. ದೇವಳದಲ್ಲಿ ಬ್ರಹ್ಮಕಲಶ ನಡೆದು ಸುಂದರ ದೇವಾಲಯ ನಿರ್ಮಾಣವಾಗಿದೆ, ರಂಗಮಂಟಪವೂ ಸುಂದರವಾಗಿ ಮೂಡಿಬಂದಿದ್ದು, ದೇವಳದಲ್ಲಿ ಅನೇಕ ಅಭಿವೃದ್ದಿ ಕೆಲಸಗಳು ನಡೆದಿರುವುದು ಇಲ್ಲಿನ ಭಕ್ತಾದಿಗಳ ಭಕ್ತಿಯ ಕಾರಣದಿಂದಾಗಿದೆ. ನೂತನ ರಂಗಮಂಟಪದಲ್ಲಿ ನಿತ್ಯವೂ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ಭಕ್ತರ ಒಗ್ಗೂಡುವಿಕೆಗೆ ಜಾತ್ರೆಗಳು ಸಹಕಾರಿಯಾಗುತ್ತದೆ: ಮಠಂದೂರು
ಕಾರ್ಯಕ್ರಮವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳುನಾಡಿನಲ್ಲಿ ಅಪಾರ ಸಂಖ್ಯೆಯ ದೈವಭಕ್ತರಿದ್ದಾರೆ. ಇದೇ ಕಾರಣಕ್ಕೆ ಜಿಲ್ಲೆಯ ಗಲ್ಲಿಗಲ್ಲಿಗಳಲ್ಲಿ ದೇವಸ್ಥಾನ, ದೈವಸ್ಥಾನಗಳು ಕಂಗೊಳಿಸುತ್ತಿದೆ. ಜಾತ್ರೆಗಳು ಭಕ್ತರನ್ನು ಒಗ್ಗೂಡಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ದೇಶದಲ್ಲಿ ಹಿಂದೂ ಆರಾಧನಾ ಕೇಂದ್ರಗಳ ಪುನರುಜ್ಜೀವನ ಕಾರ್ಯಗಳು ನಡೆದಿದೆ. ದೇಶದಲ್ಲಿ ರಾಮಮಂದಿರ ತಲೆ ಎತ್ತಿ ನಿಂತಿದೆ. ಪಾಳು ಬಿದ್ದ ಅಥವಾ ಹಿಂದೂ ಧರ್ಮಿಯರ ಶ್ರದ್ದಾ ಕೇಂದ್ರಗಳು ಇಂದು ವೈಭವದಿಂಧ ಮೆರೆಯುವಂತಾಗಿದೆ. ಐತಿಹಾಸಿಕ ದೇವಳಗಳ ಅಭಿವೃದ್ದಿ ಕಾರ್ಯಗಳು ವೇಗದಿಂದ ನಡೆಯುತ್ತಿದೆ. ಯುವಕ, ಯುವತಿಯರು ದೇವಸ್ಥಾನದ ಜೊತೆ ನಿಕಟ ಸಂಪರ್ಕವನ್ನು ಇರಿಸಿಕೊಳ್ಳಬೇಕು. ದೇವಳ ಭೇಟಿಯಿಂದ ದೈವ ಭಕ್ತಿಯ ಜೊತೆ ಮಾನವೀಯ ಗುಣಗಳು ನಮ್ಮನ್ನು ಸೇರಿಕೊಳ್ಳುತ್ತದೆ. ದೇವರ ಮೇಲಿನ ಪ್ರೀತಿ ನಮಗೆ ಉತ್ತಮ ಬದುಕನ್ನು ಕೊಡುತ್ತದೆ. ಗ್ರಾಮದ ದೇವಸ್ಥಾನಕ್ಕೆ ಗ್ರಾಮದ ಜನರು ನಿತ್ಯ ಸಂಪರ್ಕವನ್ನಿಟ್ಟುಕೊಳ್ಳಬೇಕು ಎಂದು ಹೇಳಿದರು.

ಹಿಂದೂ ಧಾರ್ಮಿಕ ಶಿಕ್ಷಣ ಆರಂಭಿಸಿ: ಮುಳಿಯ ಕೇಶವ ಪ್ರಸಾದ್
ಆಲಡ್ಕದಲ್ಲಿ ಸುಂದರ ದೇವಾಲಯ ನಿರ್ಮಾಣವಾಗಿದೆ, ಅತ್ಯಂತ ಸುಂದರವಾದ ರಂಗ ಮಂಟಪವೂ ನಿರ್ಮಾಣವಾಗಿದೆ. ಈ ಭಾಗದಲ್ಲಿ ಅಪಾರ ಸಂಖ್ಯೆಯ ಭಕ್ತರೂ ಇದ್ದಾರೆ, ಮಕ್ಕಳೂ ಇದ್ದಾರೆ. ದೇವಳದ ವತಿಯಿಂದ ಪುಟ್ಟ ಮಕ್ಕಳಿಗೆ ಧಾರ್ಮಿಕ ಶಿಕ್ಷಣವನ್ನು ಕಲಿಸುವ ಕೇಂದ್ರವನ್ನು ಪ್ರಾರಂಭಿಸಿ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್‌ರವರು ಹೇಳಿದರು. ದೇವಾಲಯಗಳು ನಮ್ಮ ಸಂಸ್ಕಾರವನ್ನು ಕಲಿಸುವ ಕೇಂದ್ರವಾಗಿ ಮಾರ್ಪಾಡಾಗಬೇಕು, ಆಧ್ಯಾತ್ಮಕತೆಯ ಅರಿವು ಮೂಡಿಸುವ ಕೇಂದ್ರಗಳಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇಂದಿನ ಕಾಲದ ಬೇಡಿಕೆಯಾಗಿದೆ. ಎಲ್ಲರೂ ಕೈ ಜೋಡಿಸಿದರೆ ಆಗದ ಕೆಲಸ ಯಾವುದೂ ಇಲ್ಲ ಎಂದು ಹೇಳಿದರು.

ನುಡಿದಂತೆ ನಡೆದ ಶಾಸಕರು: ಹೇಮನಾಥ ಶೆಟ್ಟಿ
ಪಾಳು ಬಿದ್ದಿದ್ದ ಆಲಡ್ಕ ಶ್ರೀ ಸದಾಶಿವ ದೇವಾಲಯದಲ್ಲಿ ಜೀರ್ಣೋದ್ದಾರ ಕೆಲಸಗಳು ನಡೆದು ಬಳಿಕ ಬ್ರಹ್ಮಕಲಶೋತ್ಸವ ಕಾರ್ಯ ಅದ್ದೂರಿಯಿಂದ ನಡೆದಿದೆ. ದೇವಳದಲ್ಲಿ ಅಭಿವೃದ್ದಿ ಕಾರ್ಯಗಳು ನಿರೀಕ್ಷೆಗೂ ಮೀರಿ ನಡೆದಿದೆ. ದೇವಾಲಯಕ್ಕೆ ಸರಕಾರದಿಂದ ಅನುದಾನ ಒದಗಿಸಿಕೊಡುವುದಾಗಿ ಹೇಳಿದ್ದ ಶಾಸಕ ಸಂಜೀವ ಮಠಂದೂರುರವರು ನುಡಿದಂತೆ ನಡೆದುಕೊಳ್ಳುವ ಮೂಲಕ ದೇವಳಕ್ಕೆ 70 ಲಕ್ಷ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು. ಒಳ್ಳೆಯ ಕೆಲಸಕ್ಕೆ ದೇವರ ಅನುಗ್ರಹ ಇದೆ ಎಂಬುದು ಆಲಡ್ಕದಲ್ಲಿ ಸಾಬೀತಾಗಿದೆ. ದೇವಳಕ್ಕೆ ಆರ್ಥಿಕ ನೆರವು ಭಕ್ತರಿಂದ ಹರಿದು ಬಂದಿದೆ ಇದರ ಪರಿಣಾಮವಾಗಿ ಸುಂದರವಾದ ರಂಗಮಂಟಪ ತಲೆ ಎತ್ತಿ ನಿಂತಿದೆ. ಎಲ್ಲಾ ಭಕ್ತಾದಿಗಳ, ದಾನಿಗಳ ನೆರವಿನಿಂದ ಇಲ್ಲಿ ಕೋಟ್ಯಂತರ ರೂ. ಅಭಿವೃದ್ದಿ ಕೆಲಸಗಳು ನಡೆದಿದೆ. ಆಲಡ್ಕ ಜನತೆಯ ಪ್ರೀತಿ ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ರಾಜಕೀಯವನ್ನು ಬದಿಗಿಟ್ಟು ಕೇವಲ ದೇವರ ಸೇವೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದರಿಂದ ಇಂದು ಆಲಡ್ಕ ಸದಾಶಿವ ದೇವಸ್ಥಾನ ಜಿಲ್ಲೆಯಲ್ಲೇ ಗುರುತಿಸುವಂತೆ ಆಗಿದೆ ಎಂದು ಹೇಳಿದರು.

ಎಲ್ಲರ ಸಹಕಾರದಿಂದ ಅಭಿವೃದ್ದಿ: ಕಾರ್ತಿಕ್ ತಂತ್ರಿ
ದೇವಳದ ಅಭಿವೃದ್ದಿಯಾಗುವಲ್ಲಿ ಎಲ್ಲರ ಸಹಕಾರವೂ ಇರುತ್ತದೆ. ಎಲ್ಲರ ಸಹಕಾರ ಇದ್ದಲ್ಲಿ ಮಾತ್ರ ದೇವಳ ಅಭಿವೃದ್ದಿಯಾಗಲು ಸಾಧ್ಯ. ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಇಷ್ಟೊಂದು ಸುಂದರವಾಗಿ ಮೂಡಿಬರಲು ಇಲ್ಲಿನ ಭಕ್ತರ ಶ್ರಮ ಅಪಾರವಾಗಿದೆ. ದೇವಳದ ಸೊಬಗನ್ನು ಉಳಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೂ ಅನುಭವಿಸುವ ಹಾಗೆ ಮಾಡಬೇಕಾದ ಜವಾಬ್ದರಿಯೂ ನಮ್ಮ ಮೇಲಿದೆ ಎಂದು ಹೇಳಿ ಶುಭ ಹಾರೈಸಿದರು.

ಪಾಳುಬಿದ್ದ ದೇವಳಕ್ಕೆ ಚೈತನ್ಯ ನೀಡಿದವರು ಬೋಳೋಡಿ ಚಂದ್ರಹಾಸ ರೈ
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ಸವ ಸಮಿತಿ ಅಧ್ಯಕ್ಷರಾದ ರಾಘವ ಗೌಡ ಕೆರೆಮೂಲೆಯವರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಅನೇಕ ವರ್ಷಗಳ ಕಾಲ ಪಾಳು ಬಿದ್ದಿತ್ತು, ಭಕ್ತರು ಅಪರೂಪಕ್ಕೊಮ್ಮೆ ಇಲ್ಲಿ ಬರುತ್ತಿದ್ದರು. ಇಂಥಹ ದೇವಳವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಿ ಅಭಿವೃದ್ದಿಗೆ ಮುನ್ನುಡಿ ಬರೆದವರು ದೆವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಹಾಸ ರೈ ಬೋಳೋಡಿಯವರಾಗಿದ್ದಾರೆ. ಇವರ ಶ್ರಮವನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು. ಆ ಬಳಿಕ ಎಲ್ಲರ ಪರಿಶ್ರಮದಿಂದ ಇಂದು ದೇವಳ ಕಂಗೊಳಿಸುತ್ತಿದೆ, ಭಕ್ತರನ್ನು ಕೈ ಬೀಸಿ ಕರೆಯುವಂತಾಗಿದೆ. 9೦೦ ವರ್ಷಗಳ ಐತಿಹ್ಯ ಹೊಂದಿರುವ ಈ ದೇವಳ ಮುಂಡೂರು ಮತ್ತು ಕೆದಂಬಾಡಿ ಗ್ರಾಮದ ಗ್ರಾಮ ದೇವರಾಗಿದ್ದಾರೆ. ಭಕ್ತರು ನಿರಂತವಾಗಿ ದೇವಳದ ಜೊತೆ ಸಂಪರ್ಕ ಇರಿಸುವ ಮೂಲಕ ಇಲ್ಲಿ ಇನ್ನಷ್ಟು ಅಭಿವೃದ್ದಿ ಕೆಲಸಗಳು ನಡೆಯುವಂತಾಗಬೇಕು ಇದಕ್ಕಾಗಿ ಎಲ್ಲರ ಸಹಕಾರವನ್ನು ಕೋರಿದರು.

ಪ್ರತೀಯೊಬ್ಬರೂ ದೇವರ ಸೇವಕರಾಗಬೇಕು;ಮಿತ್ರಂಪಾಡಿ ಜಯರಾಮ ರೈ
ಅಧ್ಯಕ್ಷೀಯ ಭಾಷಣ ಮಾಡಿದ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಬುದಾಬಿಯವರು ಪ್ರತೀಯೊಬ್ಬರೂ ದೇವರ ಸೇವಕರಾಗಬೇಕು. ನಾವಿಲ್ಲಿ ನಿಮಿತ್ತ ಮಾತ್ರ ಎಲ್ಲವೂ ದೇವರ ಇಚ್ಚೆಯಂತೆ ನಡೆಯುತ್ತದೆ. ಆಲಡ್ಕ ಇಂದಿನ ಹಿಂದಿನ ಆಲಡ್ಕವಲ್ಲ. ಸುಂದರವಾದ ದೇವಳ ನಿರ್ಮಾಣವಾಗಿದೆ. 100 ವರ್ಷಗಳ ಬಳಿಕ ಊರಿನಲ್ಲಿ ಮೊದಲ ಬಾರಿಗೆ ಜಾತ್ರೋತ್ಸವ ನಡೆಯುತ್ತಿದೆ. ಗ್ರಾಮದ ಜನತೆಗೆ ಇದೊಂದು ಹಬ್ಬದಂತಾಗಿದೆ. ನಾವು ದೇವರಿಗೆ ಹತ್ತಿರವಾದರೆ ದೇವರು ನಮಗೆ ಹತ್ತಿರವಾಗುತ್ತಾನೆ. ಎಲ್ಲರೂ ಒಟ್ಟಾಗಿ ಕ್ಷೇತ್ರದ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸಿಕೊಂಡ ಪರಿಣಾಮ ನಾವೆಲ್ಲರೂ ದೇವರ ಪ್ರೀತಿಗೆ ಪಾತ್ರರಾಗಿದ್ದೇವೆ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದರಿಯೂ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ವಾಸ್ತು ತಜ್ಞ ಜಗನ್ನಿವಾಸ್ ರಾವ್ ಪಿ ಬಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ವೆಂಕಟೇಶ್ವರ ಸ್ವಾಮಿಲ್ ಮಾಲಕ ವಿಶ್ವನಾಥ ನಾಯಕ್, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಆಲಡ್ಕ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್ ಆಳ್ವ ಬೋಳೋಡಿ ಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶೀನಪ್ಪ ರೈ ಕೊಡೆಂಕಿರಿ, ಇಂಜಿನಿಯರ್ ಈಶ್ವರ ಕುಲಾಲ್ ಉಪಸ್ಥಿತರಿದ್ದರು. ಧನಂಜಯ ಕುಲಾಲ್ ವಂದಿಸಿದರು. ಮೋಹನ್ ಆಳ್ವ ಮುಂಡಾಲ ಮತ್ತು ಸಂತೋಷ್‌ ಕುಮಾರ್ ರೈ ಕೋರಂಗ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಮತ್ತು ಇಂಜಿನಿಯರ್ ಈಶ್ವರ್‌ ಕುಲಾಲ್ ರವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು.

ಜಾತ್ರೋತ್ಸವದ ಪ್ರಯುಕ್ತ ದೇವಳಕ್ಕೆ ಹೊರೆ ಕಾಣಿಕೆ ಸಮರ್ಪಿಸಲಾಯಿತು. ಬೆಳಿಗ್ಗೆ ನೂತನ ರಂಗಮಂಟಪದಲ್ಲಿ ಭಜನೆ, ಗಣಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ರಾತ್ರಿ ಅನ್ನಸಂಪತರ್ಪಣೆ ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಕಲ್ಜಿಗದ ಕಾಳಿ ಮಂತ್ರದೇವತೆ ತುಳು ನಾಟಕ ಪ್ರದರ್ಶನ ನಡೆಯಿತು. ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here