ಸುಳ್ಯ: ಕೆಲಸಕ್ಕೆ ಬಂದವರಿಂದ ಕೊಲೆ ಯತ್ನ- ಆರೋಪಿಗಳ ಬಂಧನ

0

ಪುತ್ತೂರು: ಹೊರರಾಜ್ಯದಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕರು ಮನೆ ಮಾಲೀಕರನ್ನು ಹತ್ಯೆಗೈಯ್ಯಲು ಯತ್ನಿಸಿದ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ ನಡೆದಿದೆ. ಕರಿಕ್ಕಳ ವಿಶ್ವನಾಥ ಮತ್ತು ಗಾಯತ್ರಿ ದಂಪತಿಗಳ ಮನೆಗೆ 4 ತಿಂಗಳ ಹಿಂದೆ ಬಂದು ತೋಟದ ಕೆಲಸಕ್ಕೆ ಸೇರಿಕೊಂಡ ವರದರಾಜ್‌ ಮತ್ತು ಸೈಜಾನ್‌ ಎಂಬವರು ಮನೆಯೊಡತಿ ಗಾಯತ್ರಿ ಎಂಬವರ ಮೇಲೆ ಆಕ್ರಮಣ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಗಾಯತ್ರಿಯವರು ನೀಡಿದ ದೂರಿನಂತೆ ಕ್ರಮ ಸಂಖ್ಯೆ 11/2023 ಕಲಂ 448,307, 511, 393, 394, 34 ಐಪಿಸಿ ಸೆಕ್ಷನ್‌ ಪ್ರಕಾರ ದೂರು ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ವರದರಾಜ್‌ ಮತ್ತು ಸೈಜಾನ್‌ ಎಂಬವರು ಕಳೆದ 4 ತಿಂಗಳಿನಿಂದ ಗಾಯತ್ರಿಯವರ ತೋಟದ ಕೆಲಸಕ್ಕಾಗಿ ಸೇರಿಕೊಂಡಿದ್ದು ಮಾಲೀಕರ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ವಾಸವಾಗಿದ್ದರು. ಮಾ.2 ರಂದು ಸಂಜೆ ಈ ಇಬ್ಬರು ಆರೋಪಿಗಳು ರಾತ್ರಿ 9.30 ರ ವೇಳೆ ಊಟ ಮುಗಿಸಿ ಮಲಗಿಕೊಳ್ಳುವಂತೆ ಮನೆ ಮಾಲಕಿ ನೀಡಿದ ಸೂಚನೆಯ ಹೊರತಾಗಿಯೂ ಮನೆಯಲ್ಲಿ ಹಣ ಇಟ್ಟಿರುವ ವಿಚಾರ ತಿಳಿದ ಆರೋಪಿಗಳು ಮನೆಯವರ ಕತೆ ಮುಗಿಸಿ ಹಣದೊಂದಿಗೆ ಪರಾರಿಯಾಗುವ ಯೋಜನೆ ರೂಪಿಸಿದ್ದ ಹಿನ್ನಲೆಯಲ್ಲಿ ಮನೆಯ ಮಹಡಿಯೇರಿ ಆರೋಪಿಗಳ ಪೈಕಿ ವರದರಾಜ ಎಂಬಾತನು ಗಾಯತ್ರಿಯವರ ಕುತ್ತಿಗೆಯನ್ನು ಎರಡೂ ಕೈಗಳಿಂದ ಅದುಮಿ ಹಿಡಿದು ಚಿನ್ನ ಮತ್ತು ಹಣ ಎಲ್ಲಿದೆ ಎಂದು ಕೇಳಿದ್ದಾನೆ. ಹೇಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದಾನೆ. ಇದೇ ವೇಳೆ ಸೈಜಾನ್‌ ಹೊರಳಾಡದಂತೆ ಗಾಯತ್ರಿಯವರ ಕಾಲನ್ನು ಗಟ್ಟಿಯಾಗಿ ಹಿಡಿದಿದ್ದ. ಆತನಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಜೋರಾಗಿ ಕಿರುಚಿದ್ದು ಪಕ್ಕದ ಮನೆಯ ಸುರೇಶ್‌ ಮತ್ತು ಅವರ ಕೆಲಸದಾಳು ಪ್ರೇಮ ಎಂಬವರು ಓಡಿ ಬಂದು ಅವರಿಬ್ಬರನ್ನು ಪಕ್ಕಕ್ಕೆ ತಳ್ಳಿದ್ದಾರೆ. ಇದರಿಂದ ನಡೆಯ ಬಹುದಾಗಿದ್ದ ಅನಾಹುತವೊಂದು ತಪ್ಪದೆಯಾದರೂ ವರದರಾಜನ ಕೈಯಲ್ಲಿದ್ದ ಆಯುಧದಿಂದ ಗಾಯತ್ರಿಯವರ ಕುತ್ತಿಗೆಗೆ 2 ಕಡೆ ಗಾಯವಾಗಿದ್ದು ಕಡಬ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತು ನನ್ನ ಯಜಮಾನರು ನಡೆದಾಡುವ ಸ್ಥಿತಿಯಲ್ಲಿ ಇಲ್ಲದೇ ಇರುವುದನ್ನು ಮನಗಂಡು ಇವರಿಬ್ಬರು ಆರೋಪಿಗಳು ಹಣ ಮತ್ತು ಚಿನ್ನಾಭರಣ ದೋಚುವ ಉದ್ದೇಶದಿಂದ ನನ್ನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲಡಮಾಡಲು ಯತ್ನಿಸಿರುವುದಾಗಿ ಗಾಯತ್ರಿಯವರು ಸುಬ್ರಹ್ಮಣ್ಯ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗಾಯತ್ರಿಯವರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಬಂಧಿತರ ಪೈಕಿ ಸೈಜಾನ್‌ ಧರ್ಮಸ್ಥಳ ಹೊಸಬಸ್‌ ನಿಲ್ದಾಣದ ಬಳಿಯ ನಿವಾಸಿಯಾಗಿದ್ದು‌, ವರದರಾಜ್ ಚಿತ್ರದುರ್ಗದ ಹಿರಿಯೂರು ನಿವಾಸಿಯಾಗಿದ್ದಾನೆ.

ಯಾವುದೇ ಅಪರಿಚಿತರನ್ನು ಕೆಲಸಕ್ಕೆ ನೇಮಿಸುವ ಮೊದಲು ಅವರ ಪೂರ್ವಾಪರಗಳನ್ನು ತಿಳಿದು ಆಧಾರ್‌ ಕಾರ್ಡ್‌ ಪಡೆದು ಕೆಲಸಕ್ಕೆ ನೇಮಿಸುವಂತೆ ಪದೇ ಪದೇ ಪೊಲೀಸ್‌ ಇಲಾಖೆ ವಿಜ್ಞಾಪಿಸಿರುವುದನ್ನು ನಾವು ನೆನಪಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here