ಕಾರಣಿಕ ಮಹಿಮೆಯ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರ
ಮಾ. 5-9: ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

0

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು, ವಿಟ್ಲ ಸೀಮೆಗೊಳಪಟ್ಟ ಅನೇಕ ಪ್ರದೇಶಗಳು ದೈವ ದೇವರುಗಳು ನೆಲೆಯೂರಿರುವ ಪಾವನ ಪುಣ್ಯ ಕ್ಷೇತ್ರಗಳಾಗಿವೆ. ಮಾಣಿಲ ಗ್ರಾಮದ ಕುಕ್ಕಾಜೆ ಆಡಳಿತಾತ್ಮಕವಾಗಿ ವಿಟ್ಲ ಸೀಮೆಗೊಳಪಟ್ಟಿದೆ. ತುಳು ನಾಡಿನ ಪರಂಪರೆಯ ದೈವ ದೇವರ ಕಾರ್ಯದಲ್ಲಿ ಕುಂಬ್ಳೆ ಸೀಮೆಗೂ ಸಂಬಂಧವಿದೆ. ಹೀಗೆ ಕುಕ್ಕಾಜೆ ಎರಡೂ ಸೀಮೆಗಳ ಸಂಬಂಧವನ್ನು ಹೊಂದಿಕೊಂಡಿದೆ. ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರ ಪರಂಪರಾಗತ ಸಿದ್ದಿ ಮತ್ತು ಭೂಗರ್ಭದೊಳಗಿನ ಕಾರಣಿಕ ಶಕ್ತಿಯ ಅವತರಣದಿಂದಾಗಿ ಭಕ್ತಿಯ ತಾಣವಾಗಿ ಲೋಕ ಪ್ರಸಿದ್ದಿ ಎನಿಸಿದೆ. ಕ್ಷೇತ್ರದಲ್ಲಿ ಅನೇಕ ಜೀರ್ಣೋದ್ದಾರ ಕಾರ್ಯಗಳು ನಡೆದು ನವೀಕರಣ ಪುನಃ ಪ್ರತಿಷ್ಟಾ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ದಿನಗಣನೆ ಆರಂಭಗೊಂಡಿದೆ.

ತಪಸ್ವಿಯೊಬ್ಬರ ಜ್ಞಾನಾನುಗ್ರಹ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಸಂಸ್ಥಾಪಕ, ಆರಾಧಕರೂ ಆಗಿದ್ದ ಧರ್ಮದರ್ಶಿ ದಿ. ತನಿಯಪ್ಪ ಪೂಜಾರಿಯವರು ಪರಂಪರಾಗತ ಆರಾಧನಾ, ಮಂತ್ರ ತಂತ್ರ ವಿದ್ಯೆ ಮತ್ತು ನಾಟಿ ವೈದ್ಯ ಹಿನ್ನಲೆಯಿರುವ ಕುಟುಂಬದವರಾಗಿದ್ದರು. ದೂಮಾವತಿ ದೈವದ ವರಪ್ರಸಾದದಲ್ಲಿ ಜನ್ಮತಾಳಿದ್ದ ತನಿಯಪ್ಪರವರು ಬಾಲ್ಯದಿಂದಲೇ ಜಪತಪ, ಧ್ಯಾನದಲ್ಲಿ ಆಸಕ್ತರಾಗಿದ್ದರು. ಹಿರಿಯರಿಂದ ಅನೇಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಪರಮ ಶಕ್ತಿ ಕ್ಷೇತ್ರವಾದ ಕೊಲ್ಲೂರಿನ ಕೊಡಚಾದ್ರಿಗೆ ಹೋದ ಸಮಯದಲ್ಲಿ ವಿಶ್ವಕರ್ಮ ಗೋತ್ರದ ಮಹಾ ತಪಸ್ವಿಯೋರ್ವರು ಕೊಡಚಾದ್ರಿ ಯಲ್ಲಿ ಮೋಕ್ಷ ಪ್ರಾಪ್ತಿಗಾಗಿ ತನ್ನ ಧರ್ಮ ಉದ್ದೀಪನದ ಕಾರ್ಯಕ್ಕೆ ತನಿಯಪ್ಪ ಪೂಜಾರಿಯವರು ಸೂಕ್ತ ವ್ಯಕ್ತಿಯೆಂದು ಪರಿಗಣಿಸಿ ಇವರಿಗೆ ಜ್ಞಾನಾನುಗ್ರಹ ಮಾಡಿದರು. ಬಳಿಕ ಮನೆಯಲ್ಲಿಯೇ ದೇವಿಯ ಆರಾಧನೆ ಆರಂಭಿಸುತ್ತಾರೆ. ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ತನಿಯಪ್ಪ ಪೂಜಾರಿಯವರ ಜೀವನದಲ್ಲಿ ನಡೆದ ಘಟನೆಗಳು ದೇವೀ ಶಕ್ತಿಯಿಂದ ಪ್ರಭಾವಿತವಾದುದು ಎಂದು ಕಂಡುಬಂದಿದೆ. 2009 ರಲ್ಲಿ ಕ್ಷೇತ್ರದ ಪುನರ್ ನವೀಕರಣ ಪ್ರತಿಷ್ಠೆ ನಡೆದು ಸರಿಯಾಗಿ ಒಂದು ವರ್ಷದ ಬಳಿಕ ಪ್ರತಿಷ್ಠಾ ದಿನದಂದೇ ತನಿಯಪ್ಪ ಧರ್ಮದರ್ಶಿಗಳು ಇಚ್ಛಾ ಮರಣಿಯಾಗಿ ದೈವೈಕ್ಯರಾದುದು ಇಲ್ಲಿನ ಶಕ್ತಿಯ ಮಹಿಮೆ ಎಂದೇ ಹೇಳಲಾಗಿದೆ. ಧರ್ಮದರ್ಶಿ ತನಿಯಪ್ಪ ಪೂಜಾರಿಯವರ ಕಾಲಾನಂತರ ಅವರ ಹಿರಿಯ ಪುತ್ರ ಡಾ.ವಿಶ್ವನಾಥ ಕುಕ್ಕಾಜೆಯವರು ಕ್ಷೇತ್ರದ ಧರ್ಮದರ್ಶಿಗಳಾಗಿದ್ದರು. ಅವರ ಕಾಲಾನಂತರ ತನಿಯಪ್ಪ ಪುಜಾರಿಯವರ ಕಿರಿಯ ಪುತ್ರ ಧರ್ಮದರ್ಶಿ ಶ್ರೀ
ಶ್ರೀಕೃಷ್ಣ ಗುರೂಜಿಯವರು ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಸರ್ವಾಭಿವೃದ್ಧಿಯ ರೂವಾರಿಯಾಗಿ, ಕ್ಷೇತ್ರದ ಭಕ್ತರಿಗೆ ದೇವಿಯ ದರ್ಶನ ಭಾಗ್ಯ, ಪ್ರಸಾದವನ್ನು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕ್ಷೇತ್ರದ ಪರಿಚಯ ಮತ್ತು ಹಿನ್ನಲೆ : ಈಗ ದೇವಸ್ಥಾನವಿರುವ ಸ್ಥಳವು ನಾಲ್ಕು ದಶಕಗಳ ಹಿಂದೆ ಬಿದಿರ ಮೆಳೆಗಳಿಂದಲೂ, ಮುಳ್ಳು ಗಂಟೆಗಳಿಂದಲೂ ಕೂಡಿದ, ಜನ ಸಂಚಾರಕ್ಕೆ ಅಸಾಧ್ಯವಾದ ಇಳಿಜಾರು ಕಾಡು ಪ್ರದೇಶವಾಗಿತ್ತು. ಅದನ್ನು ಸಮತಟ್ಟುಗೊಳಿಸುವಾಗ ಅಲ್ಲಿದ್ದ ಹುತ್ತವನ್ನು ಅಗೆಯಬೇಕಾಯಿತು. ಆ ಹುತ್ತದ ಒಳಗೆ ಮಾವಿನ (ಆಕಾರ ಮತ್ತು ಗಾತ್ರದಲ್ಲಿ ಮಾವಿನಂತೆ ಕಾಣುವ) ಗೊಂಚಲುಗಳಿತ್ತು. ಅದರಡಿಯಲ್ಲಿ ಅಗೆಯುವಾಗ ಪಿಕ್ಕಾಸಿನ ಹೊಡೆತಕ್ಕೆ ಸಿಕ್ಕು ಪೂಜೆಗೆ ಉಪಯೋಗಿಸುವ ಒಂದು ಶಂಖ ಛಿದ್ರವಾಯಿತು. ನಂತರ ಸ್ಪಟಿಕದಂತೆ ತೋರುವ ಒಂದು ಸಣ್ಣ ಗಣಪತಿ ವಿಗ್ರಹ ಮತ್ತು ಪದ್ಮರೇಖೆಯಿರುವ ಅಡಿಗಾತ್ರದ ಶಿಲೆಯೊಂದು ಕಂಡು ಬಂತು. ಬಳಿಕ ಕೆಂಪು ಕಲ್ಲಿನ ಗೋಡೆ ಮತ್ತು ಹಂಚು ಛಾವಣಿಯಲ್ಲಿ ದೇವಸ್ಥಾನ ನಿರ್ಮಾಣ ಕಾರ್ಯ ನಡೆಯಿತು. ದೇವಳದ ಗರ್ಭಗುಡಿಯ ಮಧ್ಯ ಪೀಠದಲ್ಲಿ ಆದಿ ಪರಾಶಕ್ತಿಯಾದ ಭದ್ರಕಾಳಿ, ಬಲ ಬದಿಯ ಪ್ರತ್ಯೇಕ ಪೀಠದಲ್ಲಿ ಆಂಜನೇಯ, ಎಡಬದಿಯ ಪೀಠದಲ್ಲಿ ಗಣಪತಿ, ಸಿರಿಕುಮಾರ ಸಾನ್ನಿಧ್ಯ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಆಗ್ನೇಯ ಭಾಗದ ತಗ್ಗು ಪ್ರದೇಶದ ದಿಣ್ಣೆಯಂತಿದ್ದ ಸ್ಥಳವನ್ನು 1974ರಲ್ಲಿ ಕಟ್ಟಡ ಕಟ್ಟುವ ಉದ್ದೇಶದಿಂದ ಅಗೆಯುವಾಗ ಸುಮಾರು ಮುಕ್ಕಾಲು ಕೋಲು ಚೌಕದ ಮುರ ಕಲ್ಲಿನಿಂದ ಕಟ್ಟಿದ ಅಡಿಪಾಯ ಕಂಡು ಬಂತು ದೈವಜ್ಞರ ಚಿಂತನೆ ಪ್ರಕಾರ ಅದು ಅನಾದಿ ಕಾಲದಲ್ಲಿದ್ದ ರಕ್ತೇಶ್ವರಿ ಸಾನಿಧ್ಯವೆಂದು ಅಮ್ನಾರು, ಕಾಲಭೈರವ, ಮಹಾಕಾಳಿ, ಕುಟ್ಟಿಚಾತ ಮುಂತಾದ ಭಗವದ್ ಶಕ್ತಿಗಳ ಆವಾಸ ಸ್ಥಾನವಾಗಿತ್ತೆಂದೂ ಕಂಡುಬಂತು. ದೇವಸ್ಥಾನದ ಎದುರು ಪೂರ್ವ ಭಾಗದಲ್ಲಿ ಗದ್ದೆ ನಿರ್ಮಿಸಿದಾಗ ಸುಮಾರು ಐದು ಕೋಲು ಆಳದ ಮುರ ಮಣ್ಣಿನೊಳಗೆ ಪಂಚಲೋಹದ ಒಂದುವರೆ ಅಂಗುಲ ವ್ಯಾಸದ ಬಳೆಗಳು ಕಂಡು ಬಂದಿರುವುದು ಕ್ಷೇತ್ರದ ಪುರಾತನ ಸಾನ್ನಿಧ್ಯ ಶಕ್ತಿಗಳ ಚೈತನ್ಯದ ಕಳೆಯನ್ನು ಪುನರ್‌ನಿರ್ಮಿಸಿದೆ.

ಗಣಪತಿ, ಶಿವ ಸಿರಿ ಕುಮಾರ ಹಾಗೂ ಆಂಜನೇಯ ಸಾನಿಧ್ಯ: ಹಿಂದಿನಿಂದಲೇ ದೇವಾಲಯದ ಗರ್ಭಗುಡಿಯಲ್ಲಿ ಪೂಜಿಸಲ್ಪಡುತ್ತಿದ್ದ ಗಣಪತಿ ಹಾಗೂ ಶಿವ ಸಿರಿಕುಮಾರ ದೇವರ ವಿಗ್ರಹಗಳಿಗೆ ಕೆಲ ವರ್ಷಗಳ ಹಿಂದೆ ಪ್ರತ್ಯೇಕ ಗರ್ಭಗುಡಿ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ದೇವಾಲಯದ ಬಲಭಾಗದಲ್ಲಿ ಪೂಜಿಸಲ್ಪಡುತ್ತಿದ್ದ ಆಂಜನೇಯ ಸ್ವಾಮಿಗೆ ದೇವಾಲಯದ ವಾಯುವ್ಯ ಭಾಗದಲ್ಲಿ ಗರ್ಭಗುಡಿ ನಿರ್ಮಿಸಲಾಗಿದ್ದು, ಇದೀಗ ಅಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಕ್ಷೇತ್ರದಲ್ಲಿ ಪ್ರಧಾನವಾಗಿ ಕಾಳಿಕಾಂಬ, ಆಂಜನೇಯ ಪರಿವಾರ ಸಾನ್ನಿಧ್ಯಗಳಾಗಿ ನಾಗ, ಸಿರಿಕುಮಾರ, ಅಮ್ಮನೂರು, ಭೈರವ, ಪಂಜುರ್ಲಿ, ಕಲ್ಲುರ್ಟಿ, ರಕ್ತೇಶ್ವರಿ, ಧೂಮಾವತಿ, ಕೊರಗಜ್ಜ, ಕೊರತಿ, ನರಸಿಂಹ ಮತ್ತು ಮಂತ್ರ ಗುಳಿಗ ಸಾನ್ನಿಧ್ಯಗಳಿವೆ.

ಭದ್ರಕಾಳಿ ಕಾಳಿಕಾಂಬ ಹೇಗಾಯಿತು? : ವಿಶ್ವಕರ್ಮ ಸಮುದಾಯದ ತಪಸ್ವಿಯಿಂದ ದೀಕ್ಷೆಯಾದುದರಿಂದ ಇಲ್ಲಿನ ಭದ್ರಕಾಳಿ ದೇವಿಯನ್ನು ಕಾಳಿಕಾಂಬ ಎಂಬ ಹೆಸರಿನಿಂದಲೇ ಆರಾಧಿಸಲಾಗುತ್ತಿದೆ. ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿದಿನ ತ್ರಿಕಾಲ ಪೂಜೆ, ಭಕ್ತಾದಿಗಳಿಗೆ ಅನ್ನದಾನ, ಉಪಾಹಾರ ಸೇವೆ ನಡೆಯುತ್ತದೆ.

ತಾಯಿಯ ಅನುಗ್ರಹ ಪ್ರಸಾದ: ಸಂತಾನಪ್ರಾಪ್ತಿಗಾಗಿ, ವಿವಾಹಕ್ಕೆ ಸಂಬಂಽಸಿ, ಚರ್ಮವ್ಯಾಧಿ, ಕ್ಯಾನ್ಸರ್ ನಂತಹ ಭಯಾನಕ ರೋಗಗಳ ಶಮನಕ್ಕಾಗಿ ತಾಯಿಯ ನಡೆಯಲ್ಲಿ ನಿಂತು ಪ್ರಾರ್ಥಿಸಿ ತುಲಾಭಾರ ಸೇವೆ ನೀಡಿದಲ್ಲಿ ತಾಯಿ ಅನುಗ್ರಹ ನೀಡಿ ಸರಿಪಡಿಸಿದ ಹಲವಾರು ನಿದರ್ಶನಗಳಿವೆ. ಇಲ್ಲಿನ ಮೂಲ ಜಾಗದಲ್ಲಿನ ಮೃತ್ತಿಕಾ ಪ್ರಸಾದ ಅನೇಕ ಚರ್ಮರೋಗಗಳನ್ನು ವಾಸಿ ಮಾಡುವ ಗುಣ ಹೊಂದಿದೆ. ಅದೇ ರೀತಿ ಹೊಟ್ಟೆಯ ಒಳಗಿನ ರೋಗಗಳಿಗೆ ಕ್ಷೇತ್ರದಲ್ಲಿ ಕುಂಕುಮಾರ್ಚನೆ ಮಾಡಿಸಿ ತಾಯಿಯ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡಿದರೆ ಅದು ಶಮನವಾದ ಹಲವಾರು ನಿದರ್ಶನಗಳಿವೆ. ತಾಯಿಯ ಲೀಲೆಯಿಂದ ಫಲಕಂಡುಕೊಂಡ ಊರ ಪರವೂರ ಸಹಿತ ಹೊರ ರಾಜ್ಯದ ಹಲವಾರು ಭಕ್ತಾದಿಗಳು ಕ್ಷೇತ್ರಕ್ಕೆ ಬಂದು ತಾಯಿಯ ದರುಶನ ಪಡೆದುಕೊಳ್ಳುತ್ತಿದ್ದಾರೆ.

ತಂತ್ರ ಕಾರ್ಯಕ್ಕೆ ಪ್ರಸಿದ್ದಿ: ಇಲ್ಲಿನ ಧರ್ಮದರ್ಶಿಗಳು ಕ್ಷೇತ್ರದ ತಂತ್ರಿಗಳೂ ಆಗಿದ್ದಾರೆ. ಪರಂಪರಾಗತವಾಗಿ ತಾಂತ್ರಿಕ ವಿದ್ಯೆಗಳನ್ನು ಕರಗತ ಮಾಡಿಕೊಂಡಿರುವ ಇವರ ನೇತೃತ್ವದಲ್ಲಿ ಪ್ರಸ್ತುತ 5-6 ದೇವಸ್ಥಾನಗಳ ಪ್ರತಿಷ್ಠೆ, ಜಾತ್ರೋತ್ಸವ ನಡೆಯುತ್ತಿದೆ.

ತೆಂಗಿನಕಾಯಿ ವಿಶೇಷತೆ : ಕೌಟುಂಬಿಕ, ಆರೋಗ್ಯ ಇನ್ನಿತರ ಯಾವುದೇ ಸಮಸ್ಯೆ ತಲೆದೋರಿದಾಗ ಇಲ್ಲಿನ ಹೆಸರು ಹೇಳಿ ತೆಂಗಿನಕಾಯಿ ತೊಳಸಿ ಈಡು ಕಟ್ಟಿಟ್ಟರೆ ಯಾವುದೇ ಸಮಸ್ಯೆಯು ಕ್ಷಣಿಕವಾಗಿ ಪರಿಹಾರಗೊಂಡು ತಾತ್ಕಾಲಿಕ ಪರಿಹಾರ ಕೊಡುತ್ತದೆ. ಬಳಿಕ ಕ್ಷೇತ್ರಕ್ಕೆ ಬಂದು ಅದರ ಪರಿಹಾರ ಕಾರ್ಯ ಮಾಡಿದಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿದೆ. ಹಿಂದಿನ ಧರ್ಮದರ್ಶಿಗಳು ಕೊಲ್ಲೂರು ಕ್ಷೇತ್ರಕ್ಕೆ ಹೋಗಿದ್ದ ಸಮಯದಲ್ಲಿ ಅವರ ಮನೆಗೆ ಮಹಿಳೆಯೊಬ್ಬರು ಬಂದು ಅಕ್ಕಿ ಮತ್ತು ತೆಂಗಿನಕಾಯಿ ಕೊಟ್ಟು ’ಇದನ್ನು ಮನೆಯೊಳಗೆ ಇಟ್ಟುಕೊಳ್ಳಿ’ ಎಂದು ಹೇಳಿ ಮಾಯವಾಗಿರುವ ಘಟನೆಯೂ ನಡೆದಿತ್ತು. ಅದರ ಬಳಿಕ ಒಂದೇ ವಾರದಲ್ಲಿ ಧರ್ಮದರ್ಶಿಗಳು ಹಿಂತಿರುಗಿ ಬಂದು ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಗೋಚರಿಸಲಾರಂಭಿಸಿ ಪೂಜೆ, ಅನ್ನದಾನ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಆರಂಭಗೊಂಡಿದ್ದವು. ಅದಕ್ಕಾಗಿ ಕ್ಷೇತ್ರದಲ್ಲಿ ಧರ್ಮದರ್ಶಿ ಪ್ರಶ್ನಾಚಿಂತನೆ ನಡೆಸುವಾಗಲೂ ಕವಡೆ ಬದಲು ತೆಂಗಿನಕಾಯಿ ತಿರುಗಿಸಿ -ಲ ಹೇಳುತ್ತಿರುವುದು ವಿಶೇಷವಾಗಿದೆ.

ಜೀರ್ಣೋದ್ದಾರ ಕಾರ್ಯ: ಪ್ರಸ್ತುತ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಗರ್ಭಗುಡಿ ನವೀಕರಣ, ಇಂಟರ್‌ಲಾಕ್ ಅಳವಡಿಕೆ, ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ರಥೋತ್ಸವಕ್ಕಾಗಿ ರಥ ನಿರ್ಮಾಣ ಕಾರ್ಯಗಳು ನಡೆದಿವೆ. ಶಿಲಾಮಯವಾಗಿರುವ ಗರ್ಭಗುಡಿಯಲ್ಲಿ ದಾರು ಕೆತ್ತನೆಗಳು ಆಕರ್ಷಕವಾಗಿ ಮೂಡಿಬಂದಿವೆ. 3 ಅಡಿ ಎತ್ತರದ ಪಂಚಲೋಹದ ಕಾಳಿಕಾಂಬ ವಿಗ್ರಹ, ಉತ್ಸವ ಮೂರ್ತಿ ಗಳನ್ನು ನವೀಕರಣಗೊಳಿಸಲಾಗಿದೆ.

ಪ್ರಥಮ ರಥೋತ್ಸವ: ಈ ಬಾರಿ ಪ್ರಥಮ ರಥೋತ್ಸವ ನಡೆಯಲಿದೆ. ಒಟ್ಟು 24 ಅಡಿ ಎತ್ತರದ ರಥ ಮಾಡಲಾಗಿದೆ. ಮಾಯಿ ಹುಣ್ಣಿಮೆಯ ದಿನ ಆರಂಭಗೊಳ್ಳುವ ವಾರ್ಷಿಕ ಜಾತ್ರೆಯು ಮರುದಿನ ದೇವರ ಉತ್ಸವ ಬಲಿ, ರಕ್ತೇಶ್ವರಿ ಸಿರಿಕುಮಾರ ಭೇಟಿ, ದೇವಿ ಸಿದ್ದಿಯಾದ ಜಾಗ ನಾಗಬನದಲ್ಲಿಗೆ ಹೋಗಿ ಬಂದು ರಥೋತ್ಸವ ನಡೆಯುತ್ತದೆ. ಮೂರನೇ ದಿನ ಸಮಾಪ್ತಿಗೊಳ್ಳುತ್ತದೆ. ಜಾತ್ರೆ ಕಳೆದು 8 ದಿನಗಳಲ್ಲಿ ಕ್ಷೇತ್ರ ಪರಿವಾರ ಸಾನ್ನಿಧ್ಯಗಳ ನೇಮ ನಡಾವಳಿ ನಡೆಯುತ್ತದೆ. ಪತ್ತನಾಜೆಯ ದಿನ ಇತರ ದೈವಗಳಿಗೆ ನೇಮ ನಡೆಯುತ್ತದೆ.

ಊರ ಪರವೂರ ಭಕ್ತರ ಸಹಕಾರ
-ಶ್ರೀ ಶ್ರೀಕೃಷ್ಣ ಗುರೂಜಿ ಕ್ಷೇತ್ರದ ಧರ್ಮದರ್ಶಿಗಳು

ಕ್ಷೇತ್ರದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದ ಕೆಲಸ ಕಾರ್ಯಗಳಲ್ಲಿ ಊರ ಪರವೂರ ಭಕ್ತರ ದೇಣಿಗೆ, ಸಹಕಾರ, ನೂರಾರು ಮಂದಿಯಿಂದ ನಿರಂತರ ಶ್ರಮಸೇವೆ ಸಾಕಾರಗೊಂಡಿದೆ. ಹೊರರಾಜ್ಯ, ಹೊರದೇಶಗಳಲ್ಲಿಯೂ ಕ್ಷೇತ್ರದ ಆರಾಧಕರೂ ಇದ್ದಾರೆ ಎಂದು ಹೇಳುವ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ಅವರ ಸಹಕಾರವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ ಸರ್ವ ಭಕ್ತರೂ ಆಗಮಿಸಿ ತಾಯಿ ದುರ್ಗೆಯ ಪರಮ ಅನುಗ್ರಹಕ್ಕೆ ಪಾತ್ರರಾಗುವಂತೆ ಧರ್ಮದರ್ಶಿಯವರು ವಿನಂತಿಸಿಕೊಂಡಿದ್ದಾರೆ.

ಸಾಮಾಜಿಕ ಚಿಂತನೆಯುಳ್ಳ ಕ್ಷೇತ್ರ
ದೇವಿಯ ಅನ್ನಪ್ರಸಾದ ಇಲ್ಲಿ ವಿಶೇಷ. ಪ್ರತಿದಿನ ಅನ್ನದಾನ, ಜಾತ್ರಾ ಸಂದರ್ಭದಲ್ಲಿ ಭಕ್ತಾದಿಗಳಿಗೆ ವಸದಾನ, ಬಡವರ ವಿವಾಹ ಕಾರ್ಯಕ್ರಮಕ್ಕೆ ಉಚಿತ ಕಲ್ಯಾಣ ಮಂಟಪ ನೀಡಲಾಗುತ್ತಿದೆ. ತೀರಾ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಈಗಾಗಲೇ 5 ಮನೆ ನಿರ್ಮಿಸಿ ಕೊಡುವ ಕಾರ್ಯ ನಡೆದಿದೆ. 3 ಶಾಲೆಗಳ ಗೌರವ ಶಿಕ್ಷಕಿಯರಿಗೆ ತಿಂಗಳ ವೇತನ, ಮಕ್ಕಳಿಗೆ ಪುಸ್ತಕ ಪರಿಕರಗಳನ್ನು ನೀಡಲಾಗುತ್ತಿದೆ. ಧರ್ಮದರ್ಶಿಗಳ ಶಿಷ್ಯತ್ವ ಪಡೆದ ಯಾವುದೇ ವ್ಯಕ್ತಿಯೂ ಇಲ್ಲಿ ಪೂಜೆ ಮಾಡಬಹುದಾಗಿದ್ದು, ಜಾತಿ ಭೇದಗಳಿಂದ ಹೊರತಾಗಿದೆ.

ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ದತೆ
ಮಾ. 5 ರಿಂದ 9 ರವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ವಿವಿಧ ವ್ಯವಸ್ಥೆಗಳಿಗಾಗಿ ಗುರೂಜಿಯವರ ಮಾರ್ಗದರ್ಶನದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ವಿವಿಧ ಸಮಿತಿಗಳನ್ನು ರಚಿಸಿ ಅದರ ಮೂಲಕ ವ್ಯವಸ್ಥೆಗಳ ಕಾರ್ಯಜೋಡಣೆ ವಿಂಗಡಿಸಲಾಗಿದೆ. ಮಾ. 6 ರಂದು ಬೆಳಿಗ್ಗೆ ಮಘನಕ್ಷತ್ರದ 2 ನೇ ಪಾದದ ಮೀನ ಲಗ್ನ ಶುಭಮುಹೂರ್ತದಲ್ಲಿ ಶ್ರೀದೇವಿಯ ವಿಗ್ರಹ ಪ್ರತಿಷ್ಟೆ, ಮಾ. 8 ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಪ್ರತ್ಯೇಕವಾದ ಸ್ಥಳದಲ್ಲಿ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವಿಶಾಲ ಸಭಾಂಗಣ, ಅನ್ನಪ್ರಸಾದ, ಉಪಾಹಾರ ವಿತರಣೆಗೆ ತೆಂಗಿನಗರಿಯ ’ತಟ್ಟಿ’ ಯ ಚಪ್ಪರ, ಹಸಿರುವಾಣಿ ಉಗ್ರಾಣ, ಸುಸೂತ್ರ ವಾಹನ ಪಾರ್ಕಿಂಗ್, ವೈದಿಕ ಕಾರ್ಯಕ್ರಮಗಳ ವ್ಯವಸ್ಥೆಗಳನ್ನು ಉಪಸಮಿತಿಗಳ ಮೂಲಕ ಜೋಡಿಸಲಾಗುತ್ತಿದೆ. ಬ್ರಹ್ಮಕಲಶೋತ್ಸವದ ಪ್ರತಿದಿನ ವೈದಿಕ, ತಾಂತ್ರಿಕ, ಸಾಂಸ್ಕೃತಿಕ, ಭಜನೆ, ಧಾರ್ಮಿಕ ಸಭೆ, ಅನ್ನದಾನ ನಿರಂತರವಾಗಿ ನಡೆಯಲಿದೆ.

ಮಾ. 5 ರಂದು ಹಸಿರುವಾಣಿ, ನೂತನ ವಿಗ್ರಹ, ರಥ ಮೆರವಣಿಗೆ
ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರುವಾಣಿ ಮತ್ತು ಪ್ರತಿಷ್ಠೆಗೊಳ್ಳಲಿರುವ ನೂತನ ವಿಗ್ರಹ ಹಾಗೂ ದೇವರ ನೂತನ ರಥವನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಕುದ್ದುಪದವು – ಪೆರುವಾಯಿ ಮಾರ್ಗವಾಗಿ ಮೆರವಣಿಗೆ ಸಾಗಿ ಬರಲಿದೆ. ಕುಣಿತ ಭಜನೆ, ಕೀಲುಕುದುರೆ, ಸಿಂಗಾರಿ ಮೇಳ ಮೆರವಣಿಗೆಗೆ ಶೋಭೆ ನೀಡಲಿವೆ.

LEAVE A REPLY

Please enter your comment!
Please enter your name here