ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹಸಂಗಮ, ಸಂಚಾಲಕ ಅಬ್ರಹಾಂ ವರ್ಗೀಸ್‌ರವರ 75ನೇ ಹುಟ್ಟುಹಬ್ಬದ ಸಂಭ್ರಮ

0ನೆಲ್ಯಾಡಿ: ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಂಗಮ ಹಾಗೂ ಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್‌ರವರ ೭೫ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾ.೪ರಂದು ಸಂಜೆ ಕಾಲೇಜಿನ ನ್ಯೂ ಮಿಲೇನಿಯಂ ಸಭಾಂಗಣದಲ್ಲಿ ನಡೆಯಿತು.


ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕೊಣಾಲು ಸೈಂಟ್ ತೋಮಸ್ ಸಿರಿಯನ್ ಚರ್ಚ್‌ನ ಧರ್ಮಗುರು ಪಿ.ಕೆ.ಅಬ್ರಹಾಂ ಕೋರ್ ಎಪಿಸ್ಕೋಪಾರವರು ಮಾತನಾಡಿ, ಸಂಸ್ಥೆಯ ಸ್ಥಾಪಕರು, ಪ್ರಸ್ತುತ ಸಂಚಾಲಕರಾಗಿರುವ ಅಬ್ರಹಾಂ ವರ್ಗೀಸ್‌ರವರು ಕುಗ್ರಾಮವಾಗಿರುವ ನೆಲ್ಯಾಡಿಯಲ್ಲಿ ವಿದ್ಯಾಸಂಸ್ಥೆ ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಇಲ್ಲಿ ಶಿಸ್ತು ಕಲಿಸಿಕೊಟ್ಟು ಮಕ್ಕಳ ಜೀವನ ರೂಪಿಸಿದ್ದಾರೆ. ಮುಂದೆಯೂ ಅವರು ಈ ಸಂಸ್ಥೆಯ ಸಂಚಾಲಕರಾಗಿ ಮುನ್ನಡೆಯಬೇಕು. ಇದೇ ವೇದಿಕೆಯಲ್ಲಿ ಅವರು ಹುಟ್ಟುಹಬ್ಬದ ಶತಮಾನೋತ್ಸವ ಆಚರಿಸಬೇಕು ಎಂದರು. ಅಬ್ರಹಾಂ ವರ್ಗೀಸ್‌ರವರು ಪ್ರತಿ ವರ್ಷವೂ ಈ ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಹೆಸರು ಬರೆದು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹೇಳುತ್ತಾರೆ. ಈ ಸಂಸ್ಥೆಗೆ, ಸಂಸ್ಥೆಯ ವಿದ್ಯಾರ್ಥಿಗಳ ಏಳಿಗೆಗಾಗಿ ಅವರು ಜೀವನವನ್ನೇ ಮುಡಿಪಾಗಿಟಿದ್ದಾರೆ. ದೇವರು ಅವರಿಗೆ ಇನ್ನಷ್ಟೂ ಆರೋಗ್ಯ ಕರುಣಿಸಬೇಕು ಎಂದರು.


ಪೂರ್ವ ವಿದ್ಯಾರ್ಥಿ, ಮಂಗಳೂರಿನ ಬೆಸೆಂಟ್ ಕಾಲೇಜಿನ ಚೀಫ್ ಲೈಬ್ರೇರಿಯನ್ ಡಾ.ವಾಸಪ್ಪ ಗೌಡರವರು ಮಾತನಾಡಿ, ಅಬ್ರಹಾಂ ವರ್ಗೀಸ್‌ರವರು ಸಂತಜಾರ್ಜ್ ವಿದ್ಯಾಸಂಸ್ಥೆಯ ಮೂಲಕ ನೆಲ್ಯಾಡಿಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ತಿದ್ದಿ ಅವರಿಗೆ ಭವಿಷ್ಯ ರೂಪಿಸಿದ್ದಾರೆ. ಅವರೊಬ್ಬ ನಮ್ಮೆಲ್ಲಾ ಜೀವನದ ಶಿಲ್ಪಿಯಾಗಿದ್ದಾರೆ. ಇಂತಹ ಮೇರು ವ್ಯಕ್ತಿತ್ವದ ಅಬ್ರಹಾಂ ವರ್ಗೀಸ್‌ರವರ ಹುಟ್ಟುಹಬ್ಬದ ಶತಮಾನೋತ್ಸವ ಅಚರಿಸುವ ಭಾಗ್ಯ ಎಲ್ಲಾ ಹಳೆ ವಿದ್ಯಾರ್ಥಿಗಳಿಗೆ ಸಿಗಲಿ. ಅವರ ನೇತೃತ್ವದಲ್ಲಿ ಸಂಸ್ಥೆ ಇನ್ನಷ್ಟೂ ಎತ್ತರಕ್ಕೆ ಬೆಳೆಯಲಿ ಎಂದರು. ಇನ್ನೋರ್ವ ಹಳೆವಿದ್ಯಾರ್ಥಿನಿ, ಬಜಗೋಳಿ ಪಿ.ಯು.ಕಾಲೇಜಿನ ಉಪನ್ಯಾಸಕಿ ಮರ್ಸಿ ಪಿ.ವಿ.ಮಾತನಾಡಿ, ಇಲ್ಲಿನ ಸಾವಿರಾರು ಹಳೆವಿದ್ಯಾರ್ಥಿಗಳ ದೇಶ, ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಇಲ್ಲಿ ಉತ್ತಮ ಶಿಕ್ಷಕರ ತಂಡವಿದೆ. ‘ಪ್ರಾರ್ಥಿಸು, ಪ್ರಯತ್ನಿಸು, ಪ್ರಕಾಶಿಸುವ ‘ ಎಂಬ ಧ್ಯೇಯವಾಕ್ಯವನ್ನು ಇಂದಿಗೂ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದರು.


ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸ್ಥಾಪನೆಯಾಗಿ ೪೫ ವರ್ಷ ಆಗಿದೆ. ೪೫ ವರ್ಷದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ. ಸಂಸ್ಥೆಯ ಸ್ಥಾಪಕರಾಗಿ, ಮುಖ್ಯಶಿಕ್ಷಕರಾಗಿ, ಪ್ರಾಂಶುಪಾಲರಾಗಿ, ಸಂಚಾಲಕರಾಗಿ ಅಬ್ರಹಾಂ ವರ್ಗೀಸ್‌ರವರು ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಈ ವಿದ್ಯಾಸಂಸ್ಥೆ ಅವರಿಗೆ ೩ನೇ ಮಗನಿದ್ದಂತೆ. ತನ್ನಿಬ್ಬರು ಮಕ್ಕಳಿಗೆ ತೋರುತ್ತಿದ್ದ ಪ್ರೀತಿಗಿಂತ ಹೆಚ್ಚಾಗಿ ಶಾಲೆಯ ಮೇಲೆ ಪ್ರೀತಿ ತೋರಿ ಬೆಳೆಸಿದ್ದಾರೆ. ಇದರಿಂದಾಗಿ ಈ ಪರಿಸರದ ನೂರಾರು ವಿದ್ಯಾರ್ಥಿಗಳ ಮನೆ ಬೆಳಕಾಗಿದೆ. ಅಬ್ರಹಾಂ ವರ್ಗೀಸ್‌ರವರ ೧೦೦ನೇ ವರ್ಷಾಚರಣೆಯೂ ಇದೇ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಬೇಕೆಂದು ಹೇಳಿದರು. ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಸಂಚಾಲಕ ರೆ.ಫಾ.ಹನಿ ಜೇಕಬ್, ಶಾಜಿ ವರ್ಗೀಸ್, ಉಡುಪಿಯಲ್ಲಿ ನ್ಯಾಯವಾದಿಯಾಗಿರುವ ಪ್ರದೀಪ್, ಶರೀಫ್ ಕೋಲ್ಪೆ, ಉದಯಕುಮಾರ್, ಚಂದ್ರಶೇಖರ ಪೆರಾಲು ಮತ್ತಿತರರು ಶುಭಹಾರೈಸಿದರು. ಆನಿ ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಮಂಜೇಶ್ವರ ತಾ.ಪಂ.ಸದಸ್ಯ ಅಬ್ದುಲ್ ಹಮೀದ್, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಯಾಕೂಬ್ ಯಾನೆ ಸಲಾಂ ಪಡುಬೆಟ್ಟು, ಕೌಕ್ರಾಡಿ ಗ್ರಾ.ಪಂ.ಸದಸ್ಯ ಲೋಕೇಶ್ ಬಾಣಜಾಲು, ನಿವೃತ್ತ ಮುಖ್ಯಶಿಕ್ಷಕರಾದ ವೆಂಕಟ್ರಮಣ ಆರ್, ರವೀಂದ್ರ ಟಿ., ಸರೋಜಕುಮಾರಿ, ನಿವೃತ್ತ ಶಿಕ್ಷಕರಾದ ಪೌಲೋಸ್, ವಿ.ಆರ್.ಹೆಗಡೆ, ಸುಲೋಚನಾ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್, ನಿವೃತ್ತ ಸಿಬ್ಬಂದಿಗಳಾದ ಕೆ.ಸಿ,ಮ್ಯಾಥ್ಯು, ಬೆಳಿಯಪ್ಪ, ಜೋಸೆಫ್, ಮಾಧವ, ಸಂಸ್ಥೆಯ ಪ್ರಾಂಶುಪಾಲ ಏಲಿಯಸ್, ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಎಂ.ಐ.ತೋಮಸ್, ಆಂಗ್ಲಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಹರಿಪ್ರಸಾದ್, ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪೂರ್ವ ವಿದ್ಯಾರ್ಥಿಗಳು ಅಬ್ರಹಾಂ ವರ್ಗೀಸ್ ಹಾಗೂ ಆನಿ ವರ್ಗೀಸ್‌ರವರಿಗೆ ಶುಭಹಾರೈಸಿದರು. ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯ ಶಿಕ್ಷಕ ವಿಮಲ್ ನೆಲ್ಯಾಡಿ ಹಾಗೂ ಗೋಳಿತ್ತೊಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.ಹುಟ್ಟುಹಬ್ಬ ಆಚರಣೆ, ಸನ್ಮಾನ:

ಅಬ್ರಹಾಂ ವರ್ಗೀಸ್‌ರವರು ತನ್ನ ೭೫ನೇ ಹುಟ್ಟುಹಬ್ಬವನ್ನು ಪತ್ನಿ ನಿವೃತ್ತ ಮುಖ್ಯಶಿಕ್ಷಕಿಯೂ ಆಗಿರುವ ಆನಿ ವರ್ಗೀಸ್‌ರವರ ಜೊತೆ ಕೇಕ್ ಕಟ್ ಮಾಡಿ ಆಚರಿಸಿದರು. ವಿವಿಧ ಬ್ಯಾಚ್‌ನ ಪೂರ್ವ ವಿದ್ಯಾರ್ಥಿಗಳು ಅಬ್ರಹಾಂ ವರ್ಗೀಸ್‌ರವರಿಗೆ ಪೇಟ, ಶಾಲು,ಹಾರಾರ್ಪಣೆ, ಫಲತಾಂಬೂಲ ನೀಡಿ ಗೌರವಿಸಿದರು. ಅಬ್ರಹಾಂ ವರ್ಗೀಸ್‌ರವರು ಪೂರ್ವ ವಿದ್ಯಾರ್ಥಿಗಳನ್ನು ನೆನಪಿಸಿಕೊಂಡು ಸನ್ಮಾನಕ್ಕೆ ಕೃತಜ್ಞತೆ ಸೂಚಿಸಿದರು. ಅಬ್ರಹಾಂ ವರ್ಗೀಸ್‌ರವರ ಕುರಿತು ಉಪನ್ಯಾಸಕ ವಿಶ್ವನಾಥ ಶೆಟ್ಟಿಯವರು ರಚಿಸಿದ ಕವನವನ್ನು ಪೂರ್ವವಿದ್ಯಾರ್ಥಿ ಮನೋಜ್ ರೈಯವರು ಹಾಡಿದರು. ಪ್ರಕಾಶ್‌ರವರು ತಾವು ರಚಿಸಿದ ಅಬ್ರಹಾಂ ವರ್ಗೀಸ್‌ರವರ ಪೆನ್ಸಿಲ್ ಆರ್ಟ್ ಚಿತ್ರವನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ಶಿಕ್ಷಕಿ ಪ್ರಸನ್ನ, ಮೆರ್ಲಿನ್‌ರವರು ಹಾಡು ಹಾಡಿ ರಂಜಿಸಿದರು. ವಿವಿಧ ಚಟುವಟಿಕೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

(ಫೋಠೋ ಇದೆ)

LEAVE A REPLY

Please enter your comment!
Please enter your name here