ದಾಸರಬೆಟ್ಟು: ಆಸ್ತಿ ವಿಚಾರ ನಡೆದ ಹಲ್ಲೆ ಪ್ರಕರಣ – ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

0

ವಿಟ್ಲ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಭೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವಿಟ್ಲ ಕಸಬ ಗ್ರಾಮದ ದಾಸರಬೆಟ್ಟು ಎಂಬಲ್ಲಿ ನಡೆದಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ದಾಸರಬೆಟ್ಟು ನಿವಾಸಿ ಇಬ್ರಾಹಿಂ ( 88 ವ.) ಮೃತಪಟ್ಟವರಾಗಿದ್ದಾರೆ. ಸುಲೈಮಾನ್, ಅಬೂಬಕ್ಕರ್, ಹಸೈನಾರ್, ನಾಸೀರ್ ಪ್ರಕರಣದ ಆರೋಪಿಗಳಾಗಿದ್ದಾರೆ. ಆರೋಪಿಗಳ ಪೈಕಿ ಸುಲೈಮಾನ್ ಮತ್ತು ನಾಸೀರ್ ಎಂಬವರನ್ನು ಈ ಹಿಂದೆಯೇ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಘಟನೆಯ ವಿವರ: ದಾಸರಬೆಟ್ಟು ನಿವಾಸಿ ಇಬ್ರಾಹಿಂ ಮತ್ತು ಅವರ ಅಣ್ಣ ದಿ. ಮಮ್ಮದೆ ಬ್ಯಾರಿರವರ ಮಕ್ಕಳಾದ ಸುಲೈಮಾನ್, ಅಬೂಬಕ್ಕರ್ ಹಾಗೂ ಹಸೈನಾರ್ ರವರಿಗೆ ಜಮೀನಿಗೆ ಸಂಬಂಧಿಸಿದಂತೆ ಗಲಾಟೆ ನಡೆಯುತ್ತಿದ್ದು, ಬಳಿಕ ರಾಜಿ ಸಂಧಾನದಲ್ಲಿ ಮುಕ್ತಾಯಗೊಂಡಿತ್ತು. ಮಮ್ಮದೆ ಬ್ಯಾರಿರವರ ಜಮೀನು ನೋಂದಣಿಗೆ ಬಾಕಿ ಇದ್ದು, ಅವರ ಮಕ್ಕಳು ಈ ಬಗ್ಗೆ ತಕರಾರು ಮಾಡುತ್ತಿದ್ದು ಫೆ. 21ರಂದು ಇಬ್ರಾಹಿಂರವರು ಬೆಳಿಗ್ಗೆ ತೋಟಕ್ಕೆ ಹೋದ ಸಮಯ ಆರೋಪಿಗಳಾದ ಸುಲೈಮಾನ್, ಅಬೂಬಕ್ಕರ್ ಹಸೈನಾರ್ ಹಾಗೂ ನೆರೆಯ ನಾಸೀರ್ ಅವರು ಜಮೀನು ವಿಚಾರದಲ್ಲಿ ಗಲಾಟೆ ನಡೆಸಿದ್ದರು.

ಈ ಸಂದರ್ಭ ಆರೋಪಿಗಳು ತೋಟದಲ್ಲಿದ್ದ ಕಲ್ಲುಗಳನ್ನು ಹಾಗೂ ಮರದ ತುಂಡೊಂದನ್ನು ಹೆಕ್ಕಿಕೊಂಡು ಇಬ್ರಾಹಿಂ ಅವರ ಕಡೆ ಎಸೆದಿದ್ದರು. ಈ ವೇಳೆ ಮರದ ತುಂಡುಗಳು ಇಬ್ರಾಹಿಂರವರ ತಲೆಯ ಬಲಭಾಗಕ್ಕೆ ತಾಗಿ ತಲೆಯ ಒಳಭಾಗಕ್ಕೆ ಗಂಭೀರ ಗಾಯವಾಗಿ ಕುಸಿದು ಬಿದ್ದಿದ್ದರು. ಇದನ್ನು ಗಮನಿಸಿದ ಇಬ್ರಾಹಿಂ ಅವರ ಪುತ್ರ ಅಬ್ದುಲ್ ಲತೀಫ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದರು.

ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ರಾಹಿಂ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಇದೀಗ ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here