ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ

0

ಪುತ್ತೂರು: ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಸ್ಟೆಲ್‌ಗಳಲ್ಲಿ ವಾಸಿಸುವ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.

ಬೇಸಿಗೆ ಕಾಲ ಆರಂಭವಾಗಿದ್ದು, ತಾಪಮಾನ ಏರಿಕೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಅಧೀನಕ್ಕೊಳಪಟ್ಟ ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ರಕ್ಷಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಎಲ್ಲಾ ವಿದ್ಯಾರ್ಥಿಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು. ಆದಷ್ಟು ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ತಿಳಿಸುವುದು, ವಿದ್ಯಾರ್ಥಿನಿಲಯಗಳ ಅಡಿಗೆ ಕೋಣೆಯನ್ನು ಮತ್ತು ಅಡುಗೆಗೆ ಬಳಸುವ ಪಾತ್ರೆ, ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಂಡಿರತಕ್ಕದ್ದು. ಅಡುಗೆ ತಯಾರಿಸುವವರು ಮತ್ತು ಆಹಾರ ಬಡಿಸುವವರು ಕೈಗಳ ಶುಚಿತ್ವ ಸೇರಿದಂತೆ ವೈಯಕ್ತಿಕ ಶುಚಿತ್ವವನ್ನು ಕಾಪಾಡಿಕೊಳ್ಳುವುದು, ಪ್ರತಿ 6 ತಿಂಗಳಿಗೊಮ್ಮೆ ಅಡುಗೆ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮತ್ತು ಆಹಾರ ತಯಾರಕರ ಆರೋಗ್ಯ ತಪಾಸಣೆಯನ್ನು ನಡೆಸುವುದು, ವಿದ್ಯಾರ್ಥಿ ನಿಲಯಗಳಿಗೆ ವಿವಿಧ ಮೂಲಗಳಿಂದ ಸರಬರಾಜು ಆಗುವ ನೀರಿನ ಮಾದರಿಯನ್ನು ಪ್ರತೀ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ, ಕುಡಿಯಲು ಮತ್ತು ಅಡುಗೆ ತಯಾರಿಕೆಗೆ ಸುರಕ್ಷಿತ ನೀರನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳುವುದು, ವಿದ್ಯಾರ್ಥಿ ನಿಲಯಗಳ ಶೌಚಾಲಯ, ಸ್ನಾನದಕೋಣೆಯನ್ನು ಸ್ವಚ್ಚವಾಗಿಡುವುದು, ಬೇಸಿಗೆ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಬೇಗನೆ ಕೆಡುವ ಸಾಧ್ಯತೆ ಇರುವುದರಿಂದ, ಇದರ ಬಗ್ಗೆ ಗಮನಹರಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಬಿಸಿಯಾದ ಸುರಕ್ಷಿತ ಆಹಾರವನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದು, ಬೇಸಿಗೆ ಸಂದರ್ಭದಲ್ಲಿ ನಿರ್ಜಲೀಕರಣ ಆಗುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಿ ಎಲ್ಲರೂ ಶುದ್ಧ ನೀರು, ದ್ರವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಜಾಗೃತಿ ವಹಿಸುವುದು, ಅಡುಗೆ ಕೋಣೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತಿದಿನ ಸೂಕ್ತ ರೀತಿಯಲ್ಲಿ ವಿಲೇವಾರಿ ನಡೆಸುವುದು, ಯಾವುದಾದರೂ ವಿದ್ಯಾರ್ಥಿಗೆ ಆನಾರೋಗ್ಯ ಕಂಡುಬಂದಲ್ಲಿ ಕೂಡಲೇ ವೈದ್ಯಾಧಿಕಾರಿ/ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವುದು. ಈ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು, ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗದಂತೆ ಮುನ್ನೆಚ್ಚರಿಕೆಯನ್ನು ವಹಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here