ನಮ್ಮ ದೇಶ ಪುರಾತನ, ನಿತ್ಯ ನೂತನ ; ಬಜರಂಗದಳ ಶೌರ್ಯ ಯಾತ್ರೆ ಕಾರ್ಯಕ್ರಮದಲ್ಲಿ ಡಾ.ಪ್ರಭಾಕರ ಭಟ್ ಕಲ್ಲಡ್ಕ

0

ಪುತ್ತೂರು: ಜಗತ್ತಿನಲ್ಲಿ ಬೇರೆ ಬೇರೆ ದೇಶಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಆಕ್ರಮಣ ನಡೆದಿದೆ. ಈ ಆಕ್ರಮಣದಿಂದ ಆ ದೇಶಗಳು ತತ್ತರಿಸಿ ಹೋಗಿ ಬೇರೆ ಧರ್ಮವಾಗಿ ಪರಿವರ್ತನೆಗೊಂಡಿವೆ. ಆದರೆ ಭಾರತದ ಮೇಲೆ ಸಾವಿರಾರು ದೊಡ್ಡ ಪ್ರಮಾಣದ ಆಕ್ರಮಣ ನಡೆದರೂ ನಮ್ಮ ಮೂಲ ಚಿಂತನೆಯನ್ನು ಎಂದಿಗೂ ಬಿಟ್ಟು ಕೊಡಲಿಲ್ಲ. ಹಾಗಾಗಿ ನಮ್ಮ ದೇಶ ಪುರಾತನ ಮತ್ತು ನಿತ್ಯ ನೂತನ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದರು.

ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ 2 ದಿನ ನಡೆದ ಪ್ರಾಂತ ಬೈಠಕ್ ಹಿನ್ನೆಲೆಯಲ್ಲಿ ಮಾ.5ರಂದು ಸಂಜೆ ನಡೆದ ಶೌರ್ಯ ಯಾತ್ರೆಯ ಮೆರವಣಿಗೆ ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ನಡೆದ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ದೇಶದ ಜನರಲ್ಲಿ ರಾಷ್ಟ್ರೀಯತೆ ತುಂಬ ಬಾರದು ಎಂದು ಬ್ರಿಟೀಷರು ಮೆಕಾಲೆ ಶಿಕ್ಷಣ ಪದ್ಧತಿ ಜಾರಿಗೆ ತಂದರು. ನಾವು ಅದನ್ನೇ ಇವತ್ತು ಸಹ ನಮ್ಮ ಮಕ್ಕಳಿಗೆ ಹೇಳುತ್ತಿದ್ದೇವೆ. ದೇಶದ ಪೌರುಷದ ಸಂಕೇತವಾದ ಶಿವಾಜಿ, ರಾಣಾಪ್ರತಾಪ್, ವಿನಾಯಕ ಸಾರ್ವಕರ್ ಅವರ ವಿಚಾರ ತಿಳಿಸದೇ ತಪ್ಪಾದ ಚರಿತ್ರೆಯನ್ನು ಮಕ್ಕಳಿಗೆ ಹೇಳಿ ಕೊಡುತ್ತಿದ್ದೇವೆ. ಧರ್ಮದ ಆಧಾರದಲ್ಲಿ ಬದುಕುತ್ತಿದ್ದ ದೇಶದ ಜನರನ್ನು ಮೆಕಾಲೆ ಶಿಕ್ಷಣದ ಮೂಲಕ ವಿಮುಖ ಮಾಡಲಾಯಿತು. ಆದರೆ ಇವತ್ತು ಮತ್ತೊಮ್ಮೆ ನಾವು ಜಾಗೃತರಾಗಬೇಕು ಎಂದು ಹೇಳಿದರು.

ಬಜರಂಗದಳ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸಶಕ್ತ ಭಾರತ ಕಟ್ಟಲು ಯುವಕರನ್ನು ಜಾಗೃತಗೊಳಿಸುವ ಮೂಲಕ ಭಾರತಕ್ಕೆ ಬರುವ ತೊಂದರೆಗಳನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಭಾರತ ಮಾತೆಗೆ ಸಂಕಲ್ಪ ಮಾಡುವ ಕಾರ್ಯಕ್ರಮವಾಗಿ ಇಂದಿನ ಕಾರ್ಯಕ್ರಮ ಮೂಡಿ ಬಂದಿದೆ. ಇವತ್ತು ಶೌರ್ಯ ಯಾತ್ರೆ ಮಾಡಿದ್ದೇವೆ. ಮುಂದಿನ ದಿನ ಶೌರ್ಯ ಜಾಗೃತ ರಥಯಾತ್ರೆ ನಡೆಯಲಿದೆ ಎಂದರು.

ವಿಶ್ವ ಹಿಂದು ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಶ್ವ ಹಿಂದು ಪರಿಷದ್ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ, ಬಜರಂಗದಳ ಪ್ರಾಂತ ಸಂಯೋಜಕ್ ಸುನೀಲ್ ಕೆ.ಅರ್, ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ್ ಭುಜಂಗ ಕುಲಾಲ್ ಉಪಸ್ಥಿತರಿದ್ದರು. ಗಾನಸಿರಿ ಕಿರಣ್ ಕುಮಾರ್ ಅವರ ಸಂಯೋಜನೆಯ ಗಾಯನವನ್ನು ಗಾನಸಿರಿ ಕಲಾ ಕೇಂದ್ರದ ಶ್ರೀಲಕ್ಷ್ಮೀ ಹಾಡಿದರು. ಬಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕರಾದ ಭರತ್ ಕುಮ್ಡೇಲ್ ಸ್ವಾಗತಿಸಿದರು. ರೂಪೇಶ್ ಬಲ್ನಾಡು ಅತಿಥಿಗಳನ್ನು ಗೌರವಿಸಿದರು. ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಡಾ.ಎಂಕೆ.ಪ್ರಸಾದ್, ಆರ್.ಎಸ್‌ಎಸ್ ಗ್ರಾಮಾಂತರ ಸಂಘ ಚಾಲಕ ಸುಧಾಕರ್, ಪೂರ್ಣಜೀತ್ ರೈ, ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ದರ್ಬೆ ವೃತ್ತದಿಂದ ಆರಂಭಗೊಂಡ ಶೌರ್ಯ ಯಾತ್ರೆಯು ಮುಖ್ಯ ರಸ್ತೆಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಸಮಾವೇಶಗೊಂಡಿತು. ದರ್ಬೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಶಾಸಕ ಸಂಜೀವ ಮಠಂದೂರು ಪುಷ್ಪಾರ್ಚಣೆ ಮಾಡಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಪುಷ್ಪಾರ್ಚಣೆ ಮಾಡಿದರು.

LEAVE A REPLY

Please enter your comment!
Please enter your name here