ಮಹಿಳೆಯರು ಸ್ವ-ಉದ್ಯೋಗದತ್ತಲೂ ಚಿತ್ತ ಹರಿಸಬೇಕು ; ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕೋತ್ಸವದಲ್ಲಿ ಭಾರತಿ ಎಂ.ಎಲ್.

0

ಪುತ್ತೂರು: ಸಮಾಜದಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನ ಪ್ರಾಶಸ್ತ್ಯ ಪಡೆದುಕೊಂಡಿದ್ದು, ಉದ್ಯೋಗದ ಜೊತೆಗೆ ಸ್ವ-ಉದ್ಯೋಗ ನಡೆಸುವತ್ತಲೂ ಗಮನ ಕೊಡಬೇಕು ಎಂದು ಅಳದಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಎಂ.ಎಲ್. ಹೇಳಿದರು.

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಮಾ. 4ರಂದು ನಡೆದ ವಿಶ್ವಕರ್ಮ ಮಹಿಳಾ ಮಂಡಳಿಯ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯಅತಿಥಿಯಾಗಿ ಮಾತನಾಡಿದರು.

ಸ್ತ್ರೀಯರನ್ನು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ. ಶಿಕ್ಷಣವೇ ಇಂದು ಎಲ್ಲಾ ಕ್ಷೇತ್ರಗಳ ಅಡಿಪಾಯ. ಶಿಕ್ಷಣ ಪಡೆದವರು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ಸಾಧ್ಯ. ವ್ಯಕ್ತಿತ್ವ ವಿಕಸನವೂ ಆಗುತ್ತದೆ ಎಂದರು.

ವಿಶ್ವಬ್ರಾಹ್ಮಣ ಸೇವಾ ಸಮಾಜದ ಅಧ್ಯಕ್ಷ ಜಗದೀಶ್ ಎಸ್.ಎನ್. ಮಾತನಾಡಿ, ಮಹಿಳೆಯರು ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾಲ ಬದಲಾದಂತೆ, ನಾವು ಅದಕ್ಕೆ ತಕ್ಕನಾಗಿ ಒಗ್ಗಿಕೊಳ್ಳುತ್ತಿದ್ದೇವೆ. ಕ್ರಮೇಣ ನಾವು ಮಹಿಳಾ ಸಶಕ್ತೀಕರಣದತ್ತ ಸಾಗುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಇಂದಿರಾ ಪುರುಷೋತ್ತಮ್ ಮಾತನಾಡಿ, ವಿಶ್ವಕರ್ಮ ಮಹಿಳಾ ಮಂಡಳಿಯ ಮೂಲಕ ನಾವು ಸಮಾಜಕ್ಕೆ ಪರಿಚಯವಾದೆವು. ಬಳಿಕ ನಾವು ಕಲಾವಿದರಾಗಿ, ರಾಜಕೀಯವಾಗಿಯೂ ಗುರುತಿಸಿಕೊಂಡೆವು. ಇದರ ಜೊತೆ ಮನೆಯವರ ಸಹಕಾರ ಸಿಕ್ಕಿದ ಕಾರಣ, ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು ಎಂದರು. ವಿಶ್ವಕರ್ಮ ಯುವ ಸಮಾಜದ ಅಧ್ಯಕ್ಷ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.

ಶೋಭಾ ನಿತ್ಯಾನಂದ ಪ್ರಾರ್ಥಿಸಿದರು. ಸುಧಾ ಸುರೇಂದ್ರ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಭವ್ಯ ವಾದಿರಾಜ್ ವರದಿ ವಾಚಿಸಿದರು. ಆಡಳಿತ ಸಮಿತಿಯ ಸದಸ್ಯರ ಪಟ್ಟಿಯನ್ನು ಉಪಾಧ್ಯಕ್ಷೆ ಜಯಶ್ರೀ ಪ್ರಭಾಕರ್ ವಾಚಿಸಿದರು. ಹೊಸ ಸದಸ್ಯರ ಪಟ್ಟಿಯನ್ನು ಜತೆ ಕಾರ್ಯದರ್ಶಿ ಪ್ರಭಾ ಹರೀಶ್ ಆಚಾರ್ಯ ಓದಿದರು. ಸ್ಪರ್ಧಾ ವಿಜೇತರ ಪಟ್ಟಿಯನ್ನು ಮಾಜಿ ಅಧ್ಯಕ್ಷೆ ವಾಣಿ ನವೀನ್ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಗೀತಾ ಗಂಗಾಧರ್ ವಂದಿಸಿದರು. ಕೋಶಾಧಿಕಾರಿ ಶಾಂತಿ ಸತೀಶ್, ಸ್ಥಾಪಕಾಧ್ಯಕ್ಷೆ ಉಷಾ ಸದಾನಂದ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಹಿಳಾ ಮಂಡಳಿ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here